ಜಂಟಿ ಪರಿಶೀಲನಾ ಸಮಿತಿ ರಚನೆ

ಸೋಮವಾರ, ಮಾರ್ಚ್ 25, 2019
28 °C
ಕಸವನಹಳ್ಳಿ, ಕೈಕೊಂಡ್ರಳ್ಳಿ ಕೆರೆಗಳ ಒತ್ತುವರಿ

ಜಂಟಿ ಪರಿಶೀಲನಾ ಸಮಿತಿ ರಚನೆ

Published:
Updated:
Prajavani

ನವದೆಹಲಿ: ಬೆಂಗಳೂರಿನ ಕಸವನಹಳ್ಳಿ ಕೆರೆ ಹಾಗೂ ಕೈಕೊಂಡ್ರಳ್ಳಿ ಕೆರೆಗಳ ಬಫರ್‌ ವಲಯ ಹಾಗೂ ಕುಡಿಯುವ ನೀರು, ಗಾಳಿ ಮತ್ತು ಪರಿಸರ ಕಾಯ್ದೆಗಳ ಉಲ್ಲಂಘನೆ ಕುರಿತ ವರದಿಗಾಗಿ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ಸೋಮವಾರ ಜಂಟಿ ಪರಿಶೀಲನಾ ಸಮಿತಿ ರಚಿಸಿದೆ.

ಮಹದೇವಪುರ ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿ ಸಮಿತಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯೆಲ್‌ ನೇತೃತ್ವದ ಹಸಿರು ಪೀಠ ಮಹತ್ವದ ಆದೇಶ ನೀಡಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ಅಭಿ
ವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ಒಳಗೊಳ್ಳಲಿರುವ ಜಂಟಿ ಪರಿಶೀಲನಾ ಸಮಿತಿಯು, ಈ ಎರಡೂ ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸುವ ಮೂಲಕ ಮುಂದಿನ ಮೇ 9ರೊಳಗೆ ಸಮಗ್ರ ವರದಿ ಸಲ್ಲಿಸಬೇಕು ಎಂದು ಪೀಠ ಸೂಚಿಸಿದೆ.

ಈ ಎರಡೂ ಕೆರೆಗಳಿಗೆ ಪರಸ್ಪರ ನೀರು ಹರಿಸುವ ಸಂಪರ್ಕ ಕಾಲುವೆಗಳನ್ನು ಒತ್ತುವರಿ ಮಾಡಿ ಜಲಮೂಲವನ್ನೇ ಬಂದ್‌ ಮಾಡಲಾಗಿದೆ. ಬಫರ್‌ ವಲಯದಲ್ಲಿ ಅಕ್ರಮವಾಗಿ ವಸತಿ ಸೌಲಭ್ಯ ಕಲ್ಪಿಸಿ, ಕೊಳಚೆ ನೀರು ಹರಿಬಿಡುವ ಮೂಲಕ ಕೆರೆ ನೀರು ಕಲುಷಿತಗೊಳಿಸಲಾಗಿದೆ. ಈ ಮೂಲಕ ಬೆಳ್ಳಂದೂರು ಕೆರೆಯ ಸಂರಕ್ಷಣೆಗಾಗಿ ನೀಡಲಾದ ಆದೇಶ ಉಲ್ಲಂಘಿಸಲಾಗಿದೆ ಎಂದು ದೂರಿ ಮೇಲ್ಮನವಿ ಸಲ್ಲಿಸಲಾಗಿದೆ.

ಶ್ರೀನಿವಾಸ ರೆಡ್ಡಿ ಅವರ ಪುತ್ರ ರಮೇಶ್‌ ಕುಮಾರ್‌ ಎಂಬುವವರು ಕೆರೆಗಳಿಗೆ ನೀರು ಹರಿಸುವ ರಾಜ ಕಾಲುವೆಯನ್ನು ಒತ್ತುವರಿ
ಮಾಡಿದ್ದು, ಅಕ್ರಮ ಜನವಸತಿ ಸೌಲಭ್ಯ ಕಲ್ಪಿಸಿದ್ದಾರೆ. ನೂರಾರು ಹಂದಿಗಳನ್ನು ಸಾಕಿಕೊಂಡಿದ್ದರಿಂದ ಕೆರೆಯ ಪರಿಸರ ಹಾಳಾಗುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ. ಕೈಕೊಂಡ್ರಳ್ಳಿ ಕೆರೆಯ ಪೂರ್ವ ಭಾಗದಲ್ಲಿರುವ ಬಫರ್‌ ವಲಯದ ನಿಯಮವನ್ನು ಉಲ್ಲಂಘಿಸುವ ಮೂಲಕ ಪರಿಸರಕ್ಕೆ ತೀವ್ರ ಹಾನಿ ಉಂಟು ಮಾಡಲಾಗಿದೆ. ಕಸವನಹಳ್ಳಿ ಕೆರೆಯ ಹೆಚ್ಚುವರಿ ನೀರು ಕೈಕೊಂಡ್ರಹಳ್ಳಿ ಕೆರೆಗೆ ಸುಗಮವಾಗಿ ಹರಿದು ಹೋಗಲು ನೈಸರ್ಗಿಕವಾಗಿ ಇರುವ ಸಂಪರ್ಕ ಕಾಲುವೆಗಳಿದ್ದ ಜಾಗೆಯನ್ನೇ ಕಬಳಿಸಿ ಜನವಸತಿಗೆ ಬಳಸಲಾಗಿದೆ ಎಂದು ಸಮಿತಿ ಪರ ವಕೀಲ ಪಿ.ರಾಮ್‌ಪ್ರಸಾದ್‌ ನ್ಯಾಯಪೀಠಕ್ಕೆ ವಿವರಿಸಿದರು.

ಅಂತರ್ಜಲದ ಮೇಲೆ ಪ್ರತಿಕೂಲ ಪ್ರಭಾವ ಬೀರುವ, ಚರ್ಮ ರೋಗಕ್ಕೆ ಕಾರಣವಾಗುವ ಕಲುಷಿತ ನೀರನ್ನು ಕೆರೆಗೆ ಹರಿಸುತ್ತಿರುವ ಬಗ್ಗೆ ಕಾಲುವೆಗಳನ್ನು ಒತ್ತುವರಿ ಮಾಡಿರುವ ಬಗ್ಗೆ ಮುಂದಿನ ವಿಚಾರಣೆ ನಿಗದಿಯಾದ ಮೇ 9ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ನ್ಯಾಯಮೂರ್ತಿ ಗೋಯೆಲ್‌ ಸಮಿತಿಗೆ ಆದೇಶಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !