ವಿಜಯಪುರದಲ್ಲಿ ಬೆಂಗಳೂರಿನ ತೋರಣ..!

7

ವಿಜಯಪುರದಲ್ಲಿ ಬೆಂಗಳೂರಿನ ತೋರಣ..!

Published:
Updated:
Deccan Herald

ವಿಜಯಪುರ: ದೀಪಾವಳಿ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಮನೆಯ ಅಲಂಕಾರಕ್ಕೆ ಪ್ಲಾಸ್ಟಿಕ್‌, ಬಟ್ಟೆಯ ತೋರಣ ಖರೀದಿ ನಗರದಲ್ಲಿ ಬಿರುಸಿನಿಂದ ನಡೆದಿದೆ.

ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತ, ಮಹಾತ್ಮ ಗಾಂಧಿ ವೃತ್ತ, ಸಿದ್ಧೇಶ್ವರ ದೇವಸ್ಥಾನ, ಸಿಂದಗಿ ಬೈಪಾಸ್‌, ಜಲನಗರ ಸೇರಿದಂತೆ ವಿವಿಧೆಡೆ ಅಲಂಕಾರಿಕ ತೋರಣ, ಹಾರಗಳ ವ್ಯಾಪಾರ ಭರ್ಜರಿಯಾಗಿದೆ.

‘ಹತ್ತು ವರ್ಷಗಳಿಂದ ದೀಪಾವಳಿ ಸಮಯದಲ್ಲಿ ವಿಜಯಪುರ, ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ತೋರಣ ವ್ಯಾಪಾರಕ್ಕಾಗಿಯೇ 50ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿಗೆ ಬರುತ್ತೇವೆ. ಹಬ್ಬಕ್ಕೆ ದಿನಗಣನೆ ನಡೆದಿದೆ. ವ್ಯಾಪಾರವೂ ಕುದುರುತ್ತಿದೆ. ಇನ್ನೂ ಎರಡ್ಮೂರು ದಿನ ಭರ್ಜರಿ ವ್ಯಾಪಾರವಾಗಲಿದೆ. ನಿರೀಕ್ಷೆಯಂತೆ ಒಬ್ಬೊಬ್ಬರು ಕನಿಷ್ಠ ₹ 40000ದ ವಹಿವಾಟು ನಡೆಸುತ್ತೇವೆ’ ಎಂದು ಬೆಂಗಳೂರಿನ ವ್ಯಾಪಾರಿ ಜಗ್ಗೇಶ್‌ ತಿಳಿಸಿದರು.

‘ನಾಲ್ಕು ಅಡಿಯ ಬಾಗಿಲು ತೋರಣಕ್ಕೆ ₹ 100, 10 ಅಡಿಗೆ ₹ 200, ಬಾಗಿಲು ಸೆಟ್‌ ₹ 150, ಹಸಿರು ಬಳ್ಳಿ, ಬಿಳಿ ಮೊಗ್ಗು, ಸುಗಂಧರಾಜ ಮೊಗ್ಗು, ಗ್ರೀನ್‌ ಮೊಗ್ಗು, ಆರೆಂಜ್‌ ಮೊಗ್ಗು, ಮಲ್ಲಿಗೆ ಮೊಗ್ಗು ₹ 100, ಮಣಿಹಾರ ₹ 50, ಮೊಗ್ಗಿನ ತೋರಣ ₹ 100, ಎಲೆಯ ಜೋಡಿ ಎಳೆ ₹ 150, ಹಾರಗಳು ₹ 20ರಿಂದ ₹ 100ರ ದರಕ್ಕೆ ಮಾರಾಟ ಮಾಡುತ್ತಿದ್ದೇವೆ’ ಎಂದು ಅವರು ಹೇಳಿದರು.

‘ಹಬ್ಬದ ಅಲಂಕಾರಕ್ಕೆ ತೋರಣ ಖರೀದಿಸುತ್ತೇವೆ. ಹೂವಿನ ಹಾರ, ಮಾವಿನ ತೋರಣ ಒಳ್ಳೆಯದು. ಆದರೆ ದುಬಾರಿ ಆಗಿರುವುದರಿಂದ ವಿಧಿಯಿಲ್ಲದೇ ಪ್ಲಾಸ್ಟಿಕ್ ಉತ್ಪನ್ನ ಕೊಳ್ಳುತ್ತೇವೆ. ಈ ಬಾರಿ ತರಹೇವಾರಿ ವಸ್ತುಗಳು ಬಂದಿವೆ. ಹಿಂದಿನ ವರ್ಷಕ್ಕಿಂತ ಬೆಲೆ ತುಸು ಹೆಚ್ಚಿದೆ’ ಎಂದು ನಗರದ ವಿಶ್ವನಾಥ ಮುಳವಾಡ ತಿಳಿಸಿದರು.

‘ಅಲಂಕಾರಕ್ಕೆ ವಿಭಿನ್ನ ತೋರಣಗಳಿದ್ದರೇ ಚಲೋ. ನಮ್ಮ ಅಂಗಡಿಗಾಗಿ ಎರಡು ತೋರಣ, ಮನೆಗಾಗಿ ಮೂರು ತೋರಣ, ನಾಲ್ಕು ಹಾರ ಖರೀದಿ ಮಾಡಿದ್ದೇನೆ’ ಎಂದು ಅವಿನಾಶ ಬಿರಾದಾರ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !