‘ಭಾರತದ ಚುನಾವಣಾ ಪದ್ಧತಿ ಮಾದರಿ’

ಬುಧವಾರ, ಏಪ್ರಿಲ್ 24, 2019
31 °C
Bangalore university

‘ಭಾರತದ ಚುನಾವಣಾ ಪದ್ಧತಿ ಮಾದರಿ’

Published:
Updated:
Prajavani

ಇಡೀ ವಿಶ್ವಕ್ಕೆ ಭಾರತೀಯ ಚುನಾವಣಾ ಪದ್ಧತಿ ಮಾದರಿಯಾಗಿದೆ ಎಂದು ಕೃಷಿ ಇಲಾಖೆ ಕಾರ್ಯದರ್ಶಿ ಮನೋಜ್ ರಾಜನ್ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗ ಮಂಗಳವಾರ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಅಭಿಯಾನದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತೀಯ ಚುನಾವಣಾ ಪದ್ಧತಿ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಮಾನವ ನಿರ್ಮಿತ ಚಟುವಟಿಕೆಯಾಗಿದೆ. ಈ ಚಟುವಟಿಕೆ ಯಶಸ್ವಿಯಾಗಬೇಕೆಂದರೆ ಅದಕ್ಕೆ ಸಾಕಷ್ಟು ತರಬೇತಿ ನೀಡಬೇಕಾಗುತ್ತದೆ. ಪ್ರಸ್ತುತ ಭಾರತದಲ್ಲಿ 90 ಕೋಟಿ ಮತದಾರರಿದ್ದಾರೆ. ಸುಮಾರು 10 ಲಕ್ಷ ಮತಗಟ್ಟೆಗಳಲ್ಲಿ ಒಂದು ಕೋಟಿಯಷ್ಟು ಚುನಾವಣಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 2009ರ ಚುನಾವಣೆಯಲ್ಲಿ ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ಬಳಸಲಾಯಿತು. ಆಗ ಶೇ 55ರಿಂದ 60ರಷ್ಟಿದ್ದ ಭಾವಚಿತ್ರ ಗುರುತಿನ ಚೀಟಿಗಳ ಪ್ರಮಾಣ ಇಂದು ಶೇ 99.9ರಷ್ಟಾಗಿದೆ. ಈ ಬಾರಿ ಬೂತ್‌ಮಟ್ಟದಲ್ಲೇ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರನ್ನು ಸೇರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಕುಲಸಚಿವ ಪ್ರೊ.ಬಿ.ಕೆ. ರವಿ ಮಾತನಾಡಿ, ಮತದಾನದ ಕಡೆಗೆ ಜನರ ಮನವೊಲಿಸುವ ಕಾರ್ಯ ಮಾಡಿದಾಗ ಮಾತ್ರ ಈ ಹಬ್ಬ ನೂರಕ್ಕೆ ನೂರರಷ್ಟು ಯಶಸ್ಸು ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು. ಉಪಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು.

‌ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ. ಸುದೇಶ್ ಸ್ವಾಗತಿಸಿದರು. ವಿದ್ಯುನ್ಮಾನ ಮಾಧ್ಯಮ ವಿಭಾಗದ ಸಂಯೋಜಕಿ ಡಾ.ವಾಹಿನಿ ವಂದಿಸಿದರು.

ಮತದಾನ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !