‘ಬೇಕಾಬಿಟ್ಟಿ ತನಿಖೆ ನಡೆಸಿದರೆ ಹೇಗೆ?’

7
ವೇಶ್ಯಾವಾಟಿಕೆ ಆರೋಪ ಪ್ರಕರಣ: ಹೈಕೋರ್ಟ್‌ ಕಿಡಿ

‘ಬೇಕಾಬಿಟ್ಟಿ ತನಿಖೆ ನಡೆಸಿದರೆ ಹೇಗೆ?’

Published:
Updated:

ಬೆಂಗಳೂರು: ’ಬಾಡಿಗೆ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸರಿಯಾಗಿ ತನಿಖೆ ನಡೆಸಿಲ್ಲ’ ಎಂದು ದಾವಣಗೆರೆ ಮಹಿಳಾ ಪೊಲೀಸ್‌ ಠಾಣೆ ಅಧಿಕಾರಿಗಳನ್ನು ಹೈಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿದೆ.

‘ವೇಶ್ಯಾವಾಟಿಕೆ ಆರೋಪದಡಿ ಪೊಲೀಸರು ನನ್ನ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಗೊಳಿಸಬೇಕು’ ಎಂದು ಕೋರಿ ದಾವಣಗೆರೆ ಜಿಲ್ಲೆಯ ಕುಕ್ಕವಾಡ ಗ್ರಾಮದ ಕುಬೇಂದ್ರಪ್ಪ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ, ಮಹಿಳಾ ಠಾಣೆ ಪೊಲೀಸರ ಕಾರ್ಯ ವೈಖರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು, ‘ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಪ್ರಕರಣವನ್ನು ಹೇಗೆ ದಾಖಲಿಸಿದಿರಿ ಮತ್ತು ದೋಷಾರೋಪ ಪಟ್ಟಿ ಸಲ್ಲಿಸಿದಿರಿ ಎಂಬ ಬಗ್ಗೆ ವಿವರಣೆ ನೀಡಿ’ ಎಂದು ದಾವಣಗೆರೆ ಮಹಿಳಾ ಪೊಲೀಸ್‌ ಠಾಣೆ ಅಧಿಕಾರಿಗೆ ಆದೇಶಿಸಿದರು.

ಅತೃಪ್ತಿ: ‘ಇಂತಹ ಪ್ರಕರಣಗಳಲ್ಲಿ ಅನೈತಿಕ ಚಟುವಟಿಕೆಗಳ ತಡೆ ಕಾಯ್ದೆಯ ಅನುಸಾರ ತನಿಖೆ ನಡೆಸಬೇಕಾಗುತ್ತದೆ. ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಕೇಸು ದಾಖಲಿಸಿದರೆ ಸಾಲದು. ಸೂಕ್ತ ಸಾಕ್ಷ್ಯಾಧಾರ ಕಲೆ ಹಾಕಬೇಕು’ ಎಂದು ನ್ಯಾಯಮೂರ್ತಿಗಳು ಹೇಳಿದರು.

‘ತನಿಖೆ ವೇಳೆ ಪೊಲೀಸರು ಮನೆಯ ಮಾಲೀಕರು ಯಾರು, ಯಾರಿಗೆ ಬಾಡಿಗೆಗೆ ನೀಡಲಾಗಿತ್ತು, ಬಾಡಿಗೆಯ ಕರಾರು ಎಲ್ಲಿದೆ, ಅದರಲ್ಲಿರುವ ಮಾಹಿತಿ ಏನು, ವೇಶ್ಯಾವಾಟಿಕೆಯಲ್ಲಿ ಸಿಲುಕಿದ್ದ ಮಹಿಳೆಯರು ಯಾರು, ಗಿರಾಕಿಗಳು ಯಾರು ಎಂಬುದನ್ನು ಪತ್ತೆ ಹಚ್ಚಬೇಕು’ ಎಂದೂ ನ್ಯಾಯ

ಮೂರ್ತಿಗಳು ನುಡಿದರು.

‘ತನಿಖೆ ವೇಳೆ ವೇಶ್ಯಾವಾಟಿಕೆಯಲ್ಲಿ ಸಿಲುಕಿದ್ದ ಮಹಿಳೆಯರ, ವೇಶ್ಯಾವಾಟಿಕೆ ನಡೆಸುತ್ತಿದ್ದವರ, ಗಿರಾಕಿಗಳ ಮತ್ತು ಸ್ವತಂತ್ರ ಸಾಕ್ಷಿಗಳ ಹೇಳಿಕೆ ದಾಖಲಿಸಬೇಕು. ಆದರೆ, ಈ ಪ್ರಕರಣದಲ್ಲಿ ಈ ಯಾರೊಬ್ಬರ ಹೇಳಿಕೆಯನ್ನೂ ದಾಖಲಿಸಿಲ್ಲ. ಕೇವಲ ಪೊಲೀಸ್ ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದೆ’ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದರು.

ಏನಿದು ಪ್ರಕರಣ?

‘ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂದು ಮಾಹಿತಿ ಬಂದಿದೆ’ ಎಂದು ದಾವಣಗೆರೆ ಮಹಿಳಾ ಠಾಣಾ ಪೊಲೀಸರು, 2010ರ ಅಕ್ಟೋಬರ್ 26ರಂದು ಇಲ್ಲಿನ ಸ್ಪಂದನ ಹೋಟೆಲ್ ಬಳಿಯ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕುಬೇಂದ್ರಪ್ಪ ಎಂಬುವರು ಸೇರಿದಂತೆ 9 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಕುಬೇಂದ್ರಪ್ಪ ಅವರಿಂದ ₹ 200 ವಶಕ್ಕೆ ಪಡೆಯಲಾಗಿತ್ತು. ನಂತರ ಪ್ರಕರಣದ ತನಿಖೆ ನಡೆಸಿ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

‘ನಾನು ವೇಶ್ಯಾವಾಟಿಕೆ ನಡೆಸಿಲ್ಲ ಮತ್ತು ಪೊಲೀಸರು ಈ ಪ್ರಕರಣ ದಾಖಲಿಸುವ ಮುನ್ನ ಅನೈತಿಕ ಚಟುವಟಿಕೆಗಳ ನಿಯಂತ್ರಣ ಕಾಯ್ದೆ-1956ರ ಕಲಂ 13 ಅನ್ನು ಪಾಲಿಸಿಲ್ಲ. ಆದ್ದರಿಂದ ನನ್ನ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಬೇಕು’ ಎಂದು ಕುಬೇಂದ್ರಪ್ಪ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry