‘ಬಂಜಾರ ಭಾಷಾ ಅಕಾಡೆಮಿ ಸ್ಥಾಪಿಸಿ’

7
ದಾದಾ-ಮೋಲ ಬಂಜಾರ ವಿಚಾರ ಸಂಕಿರಣದಲ್ಲಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಆಗ್ರಹ

‘ಬಂಜಾರ ಭಾಷಾ ಅಕಾಡೆಮಿ ಸ್ಥಾಪಿಸಿ’

Published:
Updated:
ಸಂಘದ ಅಧ್ಯಕ್ಷೆ ಡಾ.ಬಿ.ಟಿ ಲಲಿತಾ ನಾಯಕ್, ವೀರಭದ್ರ ಚನ್ನಮಲ್ಲ ಸ್ವಾಮೀಜಿ ಮತ್ತು ಹಿರಿಯ ರಾಜಕಾರಣಿ ರೇವುನಾಯಕ್ ಬೆಳಮಗಿ ಅವರಿಗೆ ಲಂಬಾಣಿ ಮಹಿಳೆಯರು ಸಾಂಪ್ರದಾಯಿಕವಾಗಿ ಅಭಿನಂದನೆ ಸಲ್ಲಿಸಿದರು--–-ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಬಂಜಾರ ಭಾಷೆಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಅದಕ್ಕಾಗಿ ಅಕಾಡೆಮಿಯೊಂದನ್ನು ಸ್ಥಾಪಿಸುವ ಅಗತ್ಯವಿದೆ’ ಎಂದು ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಒತ್ತಾಯಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕರ್ನಾಟಕ ಪ್ರದೇಶ ಬಂಜಾರ (ಲಂಬಾಣಿ) ಸೇವಾ ಸಂಘ ಭಾನುವಾರ ಹಮ್ಮಿಕೊಂಡಿದ್ದ ‘49ನೇ ವಾರ್ಷಿಕೋತ್ಸವ’, ರಾಜ್ಯಮಟ್ಟದ ‘ದಾದಾ-ಮೋಲ ಬಂಜಾರ ಕಲಾಮೇಳ’ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 

ಮೇಲುವರ್ಗದವರಿಗೆ ಅವಕಾಶಗಳನ್ನು ಕಡಿಮೆಗೊಳಿಸಿ, ದುರ್ಬಲರಿಗೆ ಸರ್ಕಾರ ಅನುಕೂಲಗಳನ್ನು ಕಲ್ಪಿಸಬೇಕು. ಅದೇ ನಿಜವಾದ ಪ್ರಜಾ
ಪ್ರಭುತ್ವ. ‘ಸ್ವಾತಂತ್ರ್ಯ ನಂತರ ನಮ್ಮ ಬದುಕು ಹಸನಾಗುತ್ತದೆ’ ಎಂದು ಎಲ್ಲಾ ಶ್ರಮಿಕ ವರ್ಗದವರು, ಬಡವರು ಕನಸು ಕಂಡಿದ್ದರು. ಆದರೆ, ಅವರ ನಿರೀಕ್ಷೆ ಈಗಲೂ ಈಡೇರಿಲ್ಲ ಎಂದು ಅಭಿಪ್ರಾಯಪಟ್ಟರು.

ಪ್ರಗತಿ ಕುಂಠಿತ ಆಗುತ್ತಿದೆ. ದುರ್ಬಲ ಸಮುದಾಯ ಮತ್ತಷ್ಟು ದುರ್ಬಲಗೊಳ್ಳುತ್ತಿದೆ. ಸ್ವಾತಂತ್ರ್ಯ ಪೂರ್ವದ ಸ್ಥಿತಿ ಮತ್ತೆ ಮರುಕಳಿಸುತ್ತಿದೆ. ಈ ವರ್ಗಗಳ ಅಭಿವೃದ್ಧಿಗೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ಅಧ್ಯಕ್ಷೆ ಬಿ.ಟಿ.ಲಲಿತಾ ನಾಯಕ್‌, ‘ಎಲ್ಲಾ ಸಮಾಜಗಳಲ್ಲಿಯೂ ಗುರುಗಳಿದ್ದಾರೆ. ನಮ್ಮ ಸಮಾಜಕ್ಕೆ ಮಾತ್ರ ಸರಿಯಾದ ಗುರುಪೀಠವಿಲ್ಲ. ಈ ಹಿಂದೆ ನಮ್ಮ ಸಮುದಾಯದ ಗುರುಗಳಿಂದ ಸಾಕಷ್ಟು ಕಹಿ ಅನುಭವಗಳಾಗಿವೆ. ಶ್ರಮಪಟ್ಟು ಕಟ್ಟಿದ ಕಾಲೇಜನ್ನು ಕಳೆದುಕೊಳ್ಳಬೇಕಾಯಿತು’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಂಜಾರ ಭವನದ ಕೆಲಸ ಶೇ 80ರಷ್ಟು ಪೂರ್ಣಗೊಂಡಿದೆ. ಹಿಂದಿನ ಸರ್ಕಾರ ₹5 ಕೋಟಿ ನೀಡಿದ್ದು, ಸಾಕಷ್ಟು ನೆರವಾಯಿತು. ಇನ್ನೂ ₹2 ಕೋಟಿಯ ಅಗತ್ಯವಿದೆ. ದಾನಿಗಳಿಂದ ಸದ್ಯ ಸಂಗ್ರಹವಾಗಿರುವ ₹40 ಲಕ್ಷದಲ್ಲಿ ಉಳಿದ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಿ, ಶೀಘ್ರ ಲೋಕಾರ್ಪಣೆಗೊಳಿಸುತ್ತೇವೆ’ ಎಂದು ಹೇಳಿದರು.

‘ನಮ್ಮ ಸಮುದಾಯದಲ್ಲಿ ಅಲಕ್ಷ್ಯಕ್ಕೆ ಒಳಗಾದ ಬಡವರ ಸಂಖ್ಯೆಯೇ ಹೆಚ್ಚಿದೆ. ಅವರಿಗೆ ದುಡಿಯಲು ಅವಕಾಶ ಕಲ್ಪಿಸಿಕೊಟ್ಟರೆ, ಸಾಕಷ್ಟು ಜನ ನೆಮ್ಮದಿಯಿಂದ ಜೀವನ ನಡೆಸುತ್ತಾರೆ. ಸರ್ಕಾರ ಜಮೀನು ನೀಡಿದರೆ ಅನುಕೂಲವಾಗುತ್ತದೆ. ಲಂಬಾಣಿ ತಾಂಡಗಳನ್ನು ಸುವರ್ಣ ಗ್ರಾಮ ಯೋಜನೆಗೆ ಸೇರಿಸುವುದಾಗಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದರು. ಈ ಚಿಂತನೆ ಜಾರಿಗೆ ಬರಲಿ’ ಎಂದು ಆಶಿಸಿದರು.

ಬಂಜಾರ ಜ್ಞಾನ ಚಿಂತಾಮಣಿ ಪ್ರಶಸ್ತಿ ಪ್ರದಾನ
ಕಳೆದ ವರ್ಷದಿಂದ ಸಂಘ ಬಂಜಾರ ಜ್ಞಾನ ಚಿಂತಾಮಣಿ ಪ್ರಶಸ್ತಿಯನ್ನು ನೀಡುತ್ತಿದ್ದು, ಈ ಬಾರಿ ಬೀದರ್‌ನ ಶಿವಾಜಿ ಜಾದವ್‌ ಹಾಘೂ ಚಂದ್ರಕಲಾ ಬಾಯಿ ದಂಪತಿ ಆಯ್ಕೆಯಾಗಿದ್ದಾರೆ. ದಂಪತಿ ಪರವಾಗಿ ಅವರ ಪುತ್ರ ಡಾ.ಮೋಹನ್‌ ಜಾಧವ್‌ ಪ್ರಶಸ್ತಿ ಸ್ವೀಕರಿಸಿದರು.

ಬಡತನದಲ್ಲಿಯೂ ಈ ದಂಪತಿ ತಮ್ಮ ಎಲ್ಲಾ 10 ಮಕ್ಕಳಿಗೆ ಉನ್ನತ ವ್ಯಾಸಂಗ ಕೊಡಿಸಿರುವುದನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿಯು ₹10 ಸಾವಿರ ನಗದು ಹಾಗೂ ಫಲಕವನ್ನು ಹೊಂದಿದೆ.

ಸ್ಮರಣ ಸಂಚಿಕೆ ಹಾಗೂ ಗ್ರಹಿಕೆ ಗೊಂಚಲು ಕೃತಿ ಬಿಡುಗಡೆ ಮಾಡಲಾಯಿತು

ಸಾಂಪ್ರದಾಯಿಕ ಕಲಾಪ್ರದರ್ಶನ
ಗದಗದ ಸಾವಿತ್ರಿಬಾಯಿ ಮಹಂತೇಶ್‌ ಮತ್ತು ತಂಡ ಪ್ರದರ್ಶಿಸಿದ ಬಂಜಾರ ನೃತ್ತ, ವಿಜಯಪುರದ ಆರ್‌.ಬಿ.ನಾಯಕ್‌ ಮತ್ತು ತಂಡ ಪ್ರದರ್ಶಿಸಿದ ಬಂಜಾರ ಗಾಯನ, ಚಿತ್ರದುರ್ಗದ ಶಂಕರ್‌ ಗುರು ಮತ್ತು ತಂಡ ಪ್ರದರ್ಶಿಸಿದ ನಗಾರಿವಾದ್ಯ, ದಾವಣಗೆರೆಯ ಅನಸೂಯಬಾಯಿ ಮತ್ತು ತಂಡ ಪ್ರದರ್ಶಿಸಿದ ಲಂಬಾಣಿ ನೃತ್ಯ, ಕಚ್ಚವಾಡಿಯ ಮುನಿಬಾಯಿ ತಂಡ ಪ್ರಸ್ತುತಪಡಿಸಿದ ಬಂಜಾರ ಸೋಬಾನೆ ಪದಗಳು ಕಲಾಮೇಳದ ಮೆರಗುಗನ್ನು ಹೆಚ್ಚಿಸಿದ್ದವು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !