‘ಕಲೆಯೆಂದರೆ ಜೀವನ ಪ್ರೀತಿ, ಮತ್ತೇನೂ ಅಲ್ಲ’

7

‘ಕಲೆಯೆಂದರೆ ಜೀವನ ಪ್ರೀತಿ, ಮತ್ತೇನೂ ಅಲ್ಲ’

Published:
Updated:
ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ

ಉಡುಪಿ ಯಕ್ಷಗಾನ ಕೇಂದ್ರದ ಪ್ರಾಚಾರ್ಯರಾಗಿರುವ ಗುರು ಬನ್ನಂಜೆ ಸಂಜೀವ ಸುವರ್ಣರು ಕಲಾವಿದರಾಗಿ ಮಾತ್ರವಲ್ಲದೆ, ಆಚಾರ್ಯರಾಗಿಯೂ ಪ್ರಸಿದ್ಧರಾದವರು. ಶಿವರಾಮ ಕಾರಂತರ ವಾತ್ಸಲ್ಯದಲ್ಲಿ ಬೆಳೆದ ಅವರು, ಕಾರಂತರ ಹಲವು ಬ್ಯಾಲೆಗಳಲ್ಲಿ ಭಾಗವಹಿಸಿದವರು. ಬಡಗುತಿಟ್ಟಿನ ಹಿಮ್ಮೇಳ ಮುಮ್ಮೇಳದ ಬಗ್ಗೆ ಸುವರ್ಣರ ತಿಳಿವಳಿಕೆ ಅಪಾರವಾದುದು.

ಮಾಯಾರಾವ್‌ ನೇತೃತ್ವದ ಯಕ್ಷಗಾನ ತಂಡದಿಂದ ಹಿಡಿದು ಬಿ.ವಿ. ಕಾರಂತರ ನಾಟಕಗಳಿಗೆ ಯಕ್ಷಗಾನದ ಹೆಜ್ಜೆಗಳ ಅಳವಡಿಕೆಯವರೆಗೆ ಅವರ ಕಲಾಯಾನ ದೀರ್ಘವಾದುದು. ಜುಲೈ 15ರಂದು ಈ ಯಕ್ಷಗುರುವಿಗೆ ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ಅಭಿನಂದನೆಯ ಗೌರವ ಸಲ್ಲಲಿದೆ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ.

ಯಕ್ಷಗಾನ ಇತ್ತೀಚೆಗೆ ಹಲವು ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದೆ. ಹಣಕಾಸಿನ ವಿಷಯದಲ್ಲಿಯೂ ಹಿಂದಿನಂತೆ ಅಡಚಣೆ ಇಲ್ಲ. ಇದನ್ನು ‘ಯಕ್ಷಗಾನದ ಸುವರ್ಣ ಯುಗ’ ಎನ್ನಬಹುದೇ?

ಕಲಾವಿದರ ದೃಷ್ಟಿಯಿಂದ ನೋಡಿದರೆ ಹಣಕಾಸು ಪರಿಸ್ಥಿತಿ ತುಂಬ ಸುಧಾರಿಸಿದೆ. 60 ವರ್ಷಗಳ ಹಿಂದಿನ ಪರಿಸ್ಥಿತಿ ಇಂದಿಲ್ಲ. ಆದರೆ ಯಕ್ಷಗಾನ ಕಲೆಯ ಏಳಿಗೆಯಾಗಿಲ್ಲ. ಹಿಂದಿನ ಕಾಲದ ಕಲಾವಿದರು ದಿನದ 24 ಗಂಟೆಯೂ ಯಕ್ಷಗಾನಕ್ಕಾಗಿಯೇ ದುಡಿಯುತ್ತ, ಉಳ್ಳವರ ಮನೆಯಲ್ಲಿ ಬಿಡಾರ ಹೂಡುತ್ತ, ನಡೆದುಕೊಂಡೇ ಊರೂರು ತಿರುಗಿ ಈ ಕಲೆಯನ್ನು ಬೆಳೆಸಲು ದುಡಿದಿದ್ದಾರೆ.

ಕೋಡಂಗಿ ವೇಷದಿಂದ ಕಲಿಕೆ ಶುರುವಾಗಿ ‘ಅಡ್ಡಿಯಿಲ್ಲ’ ಎನಿಸಿಕೊಳ್ಳಲು ಹತ್ತು ಹದಿನೈದು ವರ್ಷ ಬೇಕಾಗುತ್ತಿತ್ತು. ಈ ಅವಧಿಯಲ್ಲಿ ಕಲಾವಿದ ಯಕ್ಷಗಾನದ ಎಲ್ಲ ಮಗ್ಗುಲುಗಳನ್ನು ಸಮಗ್ರವಾಗಿ ಕಲಿಯುವುದು ಸಾಧ್ಯವಿತ್ತು. ಇಂದು ಈ ಸಂವಾದ, ಕಲಿಕೆ, ವಿನಯಶೀಲತೆ ಇಲ್ಲದೇ ಇರುವುದರಿಂದ ಕಲೆ ಕ್ಷೀಣಿಸಿದೆ ಎಂದೇ ನನಗೆ ಅನಿಸುತ್ತದೆ.

ನಮ್ಮ ಪುರಾಣ ಕತೆಗಳು ಸಾವಿರಾರು ಪ್ರಸಂಗ ರೂಪದಲ್ಲಿ ನಮ್ಮ ಮುಂದಿವೆ. ಆದರೆ ಅವುಗಳನ್ನು ರಂಗಕ್ಕೆ ಅಳವಡಿಸುವ ರಂಗಕ್ರಿಯೆಗಳನ್ನು ಹಿಂದಿನ ಕಾಲದಲ್ಲಿ ಭಾಗವತರೇ ಅರಿತು ಮಾರ್ಗದರ್ಶನ ಮಾಡಿ ಮುನ್ನಡೆಸುತ್ತಿದ್ದರು. ಉದಾಹರಣೆಗೆ ಹನುಮಂತನ ಒಡ್ಡೋಲಗ ಹೇಗಿರಬೇಕು? ಕೃಷ್ಣನೋ ಅರ್ಜುನನೋ ಹೇಗೆ ರಂಗಪ್ರವೇಶ ಮಾಡಬೇಕು? ಎನ್ನುವಂಥ ಸಂದರ್ಭಗಳನ್ನು ಗುರುಮುಖೇನ ಮಾತ್ರ ಕಲಿಯುವುದು ಸಾಧ್ಯ. ಹಿರಿಯರು ಮಾಡಿದ ಅಧ್ಯಯವನ್ನು ನೋಡಿ ಅನ್ವಯಿಸಿಕೊಂಡರೂ ಈ ಕಲೆ ಎಷ್ಟೋ ಬೆಳೆದೀತು.  

ಶಿವರಾಮ ಕಾರಂತರ ಜೊತೆಗಿನ ನಿಮ್ಮ ಒಡನಾಟದ ಬಗ್ಗೆ ಹೇಳಿ.

ಓಹ್‌! ಅವರ ವ್ಯಕ್ತಿತ್ವ ಅಗಾಧವಾದುದು. ಅಂತಹ ಮತ್ತೊಂದು ವ್ಯಕ್ತಿತ್ವನ್ನು ನಾನು ಮತ್ತೆಂದೂ ಕಂಡಿಲ್ಲ. ಯಕ್ಷಗಾನದಲ್ಲಿ ಬಳಸುವ ಒಂದು ದಾರದ ಬಗ್ಗೆಯೂ ದಿನಗಟ್ಟಲೆ ಅಧ್ಯಯನ ಮಾಡಿ ಅವರು ಪ್ರದರ್ಶನವನ್ನು ಸಜ್ಜುಗೊಳಿಸುತ್ತಿದ್ದರು. ವೇಷಧಾರಿ ಕಟ್ಟುವ ಗೆಜ್ಜೆ, ಭಾಗವತರು ಬಳಸುವ ತಾಳ ಮತ್ತು ಹಿಮ್ಮೇಳದ ಹಾರ್ಮೋನಿಯಂನ ಶ್ರುತಿ ಹೊಂದಾಣಿಕೆ ಆಗಬೇಕು ಎಂದು ಪಟ್ಟುಹಿಡಿಯುತ್ತಿದ್ದರು. ಅದಕ್ಕಾಗಿ ಪ್ರತ್ಯೇಕ ಗೆಜ್ಜೆಯನ್ನು ತಯಾರಿಸಿ ಅದರ ಶ್ರುತಿ ಸರಿಯಿದೆಯೇ ಎಂದು ಹುಬ್ಬುಗಂಟಿಕ್ಕಿ ಗಮನಿಸುತ್ತಿದ್ದರು.

ಒಂದನೇ ಕ್ಲಾಸು ಓದಿದ ನನಗೆ 22 ವರ್ಷ ಮಾರ್ಗದರ್ಶನ ಮಾಡಿದ್ದಾರೆ. ಅವರೊಡನೆ ಕೆ.ಕೆ. ಹೆಬ್ಬಾರ್, ಬಿ.ವಿ. ಆಚಾರ್, ಕು.ಶಿ. ಹರಿದಾಸ ಭಟ್ಟರು ದುಡಿದಿದ್ದಾರೆ. ಅವರ ಸಾಂಗತ್ಯ ನನಗೆ ಲಭಿಸಿದೆ. ಕಾರಂತರೊಡನೆ 50ಕ್ಕೂ ಹೆಚ್ಚು ದೇಶ ಸುತ್ತಿ ಪ್ರದರ್ಶನಗಳಲ್ಲಿ ಭಾಗವಹಿಸಿದ್ದೇನೆ. ಅದೇ ಅನುಭವದ ಆಧಾರದಲ್ಲಿ ಲಂಡನ್‌ ಮುಂತಾದ ಹಲವು ದೇಶಗಳ ಅಧ್ಯಯನ ಸಂಸ್ಥೆಗಳಿಗೆ ಒಬ್ಬನೇ ತೆರಳಿ ಪಾಠ ಮಾಡಿದ್ದೇನೆ. ‘ನವರಸಗಳಷ್ಟೇ ಅಲ್ಲ, ಸಾವಿರ ರಸಗಳಿವೆ. ತಾಯಿ ಸತ್ತ ದುಃಖ, ಸ್ನೇಹಿತ ಸತ್ತ ದುಃಖ, ಪ್ರೀತಿಯಿಂದ ಸಾಕಿದ ಪ್ರಾಣಿ ಸತ್ತ ದುಃಖ ಬೇರೆ ಬೇರೆಯೇ ಆಗಿರುತ್ತದೆ. ಅದು ಹೇಗಿರುತ್ತದೆ ಎಂದು ನಿನ್ನ ಮನಸ್ಸನ್ನೇ ಕೇಳಿಕೊ’ ಎಂದು ಅವರು ಹೇಳುತ್ತಿದ್ದರು.

ಯಕ್ಷಗಾನದ ಲಕ್ಷಣ ಗ್ರಂಥದ ಅಗತ್ಯದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ದೇಶದ ಇತರ ಶಾಸ್ತ್ರೀಯ ಕಲಾ ಪ್ರಕಾರಗಳಲ್ಲಿ ಇರುವ ಹಾಗೆ ಯಕ್ಷಗಾನದಲ್ಲಿಯೂ ನಾಟ್ಯ, ಅಭಿನಯ ಸೇರಿದಂತೆ ಹಲವು ರಂಗಕ್ರಿಯೆಗಳಿವೆ. ಭರತನಾಟ್ಯದಲ್ಲಿ ಜಾರ ಅಡವು, ಆಕಾಶ ಚಾರಿ ಎಂಬೆಲ್ಲ ವಿಚಾರಗಳಿರುವಂತೆಯೇ ಯಕ್ಷಗಾನದಲ್ಲಿ ವೈವಿಧ್ಯಮಯ ವಿಷಯಗಳಿವೆ. ಅವುಗಳನ್ನು ಯಕ್ಷಗಾನದ ಶೈಲಿಯಲ್ಲಿಯೇ ದಾಖಲು ಮಾಡುವ ನಿಟ್ಟಿನಲ್ಲಿ ಕೆಲಸಗಳು ಆಗಬೇಕಾಗಿದೆ.

 ಉಡುಪಿಯ ಯಕ್ಷಗಾನ ಕೇಂದ್ರವು ಬಡಗುತಿಟ್ಟು ಯಕ್ಷಗಾನದ ಲಕ್ಷಣಗಳನ್ನು ಅನ್ವಯಿಸುವ ಕೆಲಸವನ್ನು ಮಾಡುತ್ತಿದೆ. ಗ್ರಂಥವೋ ದಾಖಲೆಯೋ ಇದ್ದರೆ ಅದನ್ನು ಯಾರಾದರೂ ಓದುತ್ತಾರೆ ಎಂಬುದಕ್ಕಿಂತ ಗೊತ್ತಿರುವ ವಿಚಾರವನ್ನು ಕಲಾವಿದರಿಗೆ ಹೇಳಿಕೊಟ್ಟರೆ ಅದು ಹೆಚ್ಚು ಉಳಿದೀತು ಎಂಬುದು ನನ್ನ ಅನಿಸಿಕೆ. ಬಡಗು, ತೆಂಕು, ಮೂಡಲಪಾಯ ಕ್ಷೇತ್ರಗಳಲ್ಲಿ ಇಂತಹ ಕೆಲಸಗಳಾದರೆ ನಿಜಕ್ಕೂ ಸಂತೋಷ. 

ಯಕ್ಷಗಾನದ ಕೆಲಸಗಳಿಗೆ ಸರ್ಕಾರದ ಅನುದಾನ ಅಥವಾ ಮನ್ನಣೆಯ ಬಗ್ಗೆ ಏನು ಹೇಳುತ್ತೀರಿ ? 

ಪ್ರೀತಿ ಇದ್ದಲ್ಲಿ ಹಣ– ಮನ್ನಣೆಯ ನಿರೀಕ್ಷೆಯೇ ಇರುವುದಿಲ್ಲ. ಶೃಂಗೇರಿ, ಬೇಲೂರು ಹಳೇಬೀಡಿನಲ್ಲಿ ಸುಂದರ ಶಿಲ್ಪಗಳು, ಬೆಳಗೊಳದಲ್ಲಿ ಗೊಮ್ಮಟೇಶ್ವರನ ಮಹಾಮೂರ್ತಿಯನ್ನು ನಿರ್ಮಿಸಿದವರು ಹಣ ಮತ್ತು ಕೀರ್ತಿಗಾಗಿ ಮಾಡಿದ್ದರೇ? ಅಪಾರವಾದ ಪ್ರೀತಿ ಮತ್ತು ಪ್ರಾಮಾಣಿಕತೆಯೇ ಎಲ್ಲ ಕೆಲಸಗಳನ್ನು ಮುನ್ನಡೆಸಬಲ್ಲದು. ಪ್ರಶಸ್ತಿ, ಪುರಸ್ಕಾರ, ಅನುದಾನಗಳಿಗಿಂತ ಕಲೆಯನ್ನು ಅಭ್ಯಾಸ ಮಾಡುವವರು ಗೌರವಯುತ ಜೀವನ ನಡೆಸಲು ಬೇಕಾದಷ್ಟು ಸರ್ಕಾರ ಶಿಷ್ಯವೇತನ ಕೊಟ್ಟರೆ ಉತ್ತಮವೆನಿಸುತ್ತದೆ.

ಯಕ್ಷಗಾನ ಗುರುಗಳಾಗಿದ್ದೀರಿ. ಶಾಲಾ ಶಿಕ್ಷಣ ಪಡೆಯಬೇಕಿತ್ತು ಅನಿಸಿದ್ದಿದೆಯೇ ?

ಬಡಗುತಿಟ್ಟು ಯಕ್ಷಗಾನದ ಲಕ್ಷಣಗ್ರಂಥವನ್ನು ನಿರೂಪಿಸುವ ಸಂದರ್ಭದಲ್ಲಿ ಆಗೀಗ ಹಾಗೆ ಅನಿಸಿದ್ದಿದೆ. ಬರವಣಿಗೆ ತಿಳಿದಿದ್ದರೆ ಸ್ವಲ್ಪ ಒಳ್ಳೆಯದಿತ್ತು ಅಂತ. ಈ ಕಲೆಯೆಂದರೆ ಜೀವನ ಪ್ರೀತಿ. ಮತ್ತೇನೂ ಅಲ್ಲ. ನಮ್ಮಲ್ಲಿ ತ್ತತ್ತ ತಧಿಂ, ತ್ತತ್ತ ತಧಿಂ ಎಂದರೆ ಗುಬ್ಬಿಕುಣಿತ. ತಯ್ಯ ತಯ್ಯ ದಿನತ ದಿನದಿನತ.. ಎಂದರೆ ಗಿಳಿಕುಣಿತ. ಸುತ್ತುಬಲಿ, ಪ್ರಯಾಣ ಕುಣಿತ, ಜಿಡ್ಡೆ ಕುಣಿತ, ಜಾರುಗುಪ್ಪೆ... ಹೀಗೆ ಪ್ರಕೃತಿ, ಪರಿಸರಕ್ಕೆ ಸಂಬಂಧಿಸಿದ ಸಾವಿರ ವಿಷಯಗಳಿವೆ.

ಇವೆಲ್ಲ ಬದುಕಿನ ಶಿಕ್ಷಣವನ್ನೇ ನನಗೆ ಕೊಟ್ಟಿವೆ. ಹಕ್ಕಿಪಕ್ಕಿಗಳಿಗೆ ಕಾಳು ಇಡುವುದು, ತೋಟದಲ್ಲಿ ರಾತ್ರಿ ಅಡ್ಡಾಡುವ ಪ್ರಾಣಿಗಳಿಗೆ ಸಿಗಲಿ ಎಂದು ಒಂದಿಷ್ಟು ಅನ್ನವನ್ನು ಹಾಕುವುದು, ನಮ್ಮನೆಯ ರಸ್ತೆಯ ಗುಂಡಿಯನ್ನು ಮುಚ್ಚುವುದು, ಯಾರಾದರೂ ರಸ್ತೆಯಲ್ಲಿ ಕಸ ಸುರಿದರೆ ಅದನ್ನೆತ್ತಿ ಸ್ವಚ್ಛ ಮಾಡುವುದು ಎಲ್ಲವನ್ನೂ ಇಷ್ಟಪಟ್ಟು ಮಾಡುತ್ತೇನೆ. 21 ಮಂದಿ ಗುರುಗಳ ಮನೆಯಲ್ಲಿ ಕೇವಲ ಯಕ್ಷಗಾನದ ಹೆಜ್ಜೆಗಾರಿಕೆ, ಮಾತು, ಬಣ್ಣಗಾರಿಕೆಯನ್ನು ಮಾತ್ರ ಕಲಿತದ್ದಲ್ಲ ನಾನು. ಈ ಬದುಕನ್ನು ಪ್ರೀತಿಯಿಂದ ಬಾಳುವ ಶಿಕ್ಷಣ ನನಗೆ ದಕ್ಕಿದೆ.

ಕಲೆ ಎಂಬುದು ತಲೆತಲಾಂತರದಿಂದ ಬೆಳೆದು ಬಂದಿದೆ. ಭೂತಕೋಲ ಮಾಡುವವರನ್ನು ನೋಡಿ. ನಾಟ್ಯಶಾಸ್ತ್ರ ಕಲಿಯದೇ ಇದ್ದರೂ ಮುದ್ರೆಗಳನ್ನು ಬಳಸುವುದಿಲ್ಲವೇ. ಹೊಲೆಯರ ಕುಣಿತದಲ್ಲಿ ನಾದ, ಲಯ ಎಲ್ಲವೂ ಇಲ್ಲವೇ. ಹಾಗೆ ನೋಡಿದರೆ ಈ ಜಗತ್ತೇ ಒಂದು ಲಯದಲ್ಲಿ ಸಾಗುತ್ತದೆ. ನಾದ ಈ ಹೃದಯದಲ್ಲಿದೆ.

ಎದೆಬಡಿತದ ಲಯ ಕೇಳಿದ್ದೀರಾ? ಅದು ಯಾವ ತಾಳದಲ್ಲಿದೆ ಎಂದು ಆಲಿಸಿದ್ದೀರಾ? ಎದೆಯೊಳಗಿನ ಈ ನಾದ, ಲಯ, ತಾಳ ತಪ್ಪಿದರೆ ನಾವು ಸತ್ತ ಹಾಗೆ. ತಾಯಿಯ ಗರ್ಭದಿಂದ ಹೊರಬರುವಾಗಲೇ ಪದ್ಯ ಶುರುವಾಗಿದೆ. ಅದು ಯಾವ ಶ್ರುತಿಯಲ್ಲಿದೆ? ಹೆಜ್ಜೆ ಊರುವಾಗಲೇ ತಾಳ ಶುರುವಾಗಿಲ್ಲವೆ? ಹೀಗೆ ನಮ್ಮೊಳಗೆ ಅಂತರ್ಗತವಾಗಿರುವ ಕಲೆಯನ್ನು ಪ್ರಕಟಪಡಿಸುವ ದಾರಿ ತೋರುವವನೇ ‘ಗುರು’. ಅಂತಹ ಗುರುಗಳು ನನಗೆ ಸಿಕ್ಕಿದ್ದಾರೆ.

ಬರಹ ಇಷ್ಟವಾಯಿತೆ?

 • 15

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !