ಉತ್ಸವದ ಯಶಸ್ವಿಗೆ ಸಹಕರಿಸಿ; ಮನಗೂಳಿ ಸೂಚನೆ

7
ಇದೇ 24ರಿಂದ 31ರವರೆಗೆ ಕಗ್ಗೋಡದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ–5

ಉತ್ಸವದ ಯಶಸ್ವಿಗೆ ಸಹಕರಿಸಿ; ಮನಗೂಳಿ ಸೂಚನೆ

Published:
Updated:

ವಿಜಯಪುರ: ವಿಜಯಪುರ ತಾಲ್ಲೂಕಿನ ಕಗ್ಗೋಡ ಗ್ರಾಮದಲ್ಲಿ ಇದೇ 24ರಿಂದ 31ರವರೆಗೆ ನಡೆಯಲಿರುವ ಭಾರತೀಯ ಸಂಸ್ಕೃತಿ ಉತ್ಸವ–5ಕ್ಕೆ ಅಗತ್ಯ ಸಹಕಾರ ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಭಾರತೀಯ ಸಂಸ್ಕೃತಿ ಉತ್ಸವದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ಇಂತಹ ಉತ್ಸವಗಳಿಗೆ ಪ್ರೋತ್ಸಾಹ ನೀಡುವ ಅವಶ್ಯಕತೆ ಇದ್ದು, ಈ ಉತ್ಸವದ ಯಶಸ್ವಿಗೆ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರು ಪಕ್ಷಭೇದ, ಜಾತಿ, ಮತ, ಪಂಥ, ಭೇದ ಮರೆತು ಸಹಕರಿಸಿ’ ಎಂದು ಮನವಿ ಮಾಡಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ‘ಇದೇ 24ರಂದು ಭಾರತೀಯ ಸಂಸ್ಕೃತಿ ಉತ್ಸವದ ಅಂಗವಾಗಿ ವಿಜಯಪುರ ನಗರದಲ್ಲಿ ಬೃಹತ್ ಶೋಭಾಯಾತ್ರೆ, ಸ್ತಬ್ಧಚಿತ್ರ ಪ್ರದರ್ಶನ, ಜಾನಪದ ಹಾಗೂ ದೇಶಿಯ ವಿವಿಧ ಸಂಸ್ಕೃತಿ ಬಿಂಬಿಸುವ ಕಲಾ ತಂಡಗಳ ವೈಭವದ ಮೆರವಣಿಗೆ ಮತ್ತು ಪ್ರದರ್ಶನದ ಉದ್ಘಾಟನೆ ನಡೆಯಲಿದೆ’ ಎಂದು ಹೇಳಿದರು.

‘25ರಂದು ತಾಯಿ ಮತ್ತು ಮಗುವಿನ ಬಾಂಧವ್ಯ ಬೆಸೆಯುವ ಮಾತೃಸಂಗಮ ಕಾರ್ಯಕ್ರಮದ ಅಂಗವಾಗಿ 1ಲಕ್ಷ ಮಕ್ಕಳಿಗೆ ಭೋಜನ ಹಾಗೂ ಮಕ್ಕಳಿಂದ ಮಾತೆಯರಿಗೆ ಪಾದಪೂಜೆ, ವಿಶೇಷ ಚರ್ಚೆ, ಗೋಷ್ಠಿಗಳು ನಡೆಯಲಿವೆ.

26ರಂದು ಜ್ಞಾನ ಸಂಗಮ, 27ರಂದು ಕೃಷಿ ಸಂಗಮ, 28ರಂದು ಯುವ ಸಂಗಮ, 29ರಂದು ದೇಶ ನಿರ್ಮಾಣದಲ್ಲಿ ಕಾಯಕ ಮತ್ತು ಆರೋಗ್ಯದ ಮಹತ್ವ ತಿಳಿ ಹೇಳುವ ಕಾರ್ಯಕ್ರಮ, 30ರಂದು ಗ್ರಾಮ ಸಂಗಮ, 31ರಂದು ಧರ್ಮ ಮತ್ತು ಸಂಸ್ಕೃತಿಯಿಂದ ಬದುಕಿ ಜೀವನ ಮೌಲ್ಯ ಹೆಚ್ಚಿಸುವ ಕಾರ್ಯಕ್ರಮ ನಡೆಯಲಿವೆ’ ಎಂದು ಮಾಹಿತಿ ನೀಡಿದರು.

ಈ ಕಾರ್ಯಕ್ರಮಗಳಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ, ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ವಜುಭಾಯಿ ವಾಲಾ, ಸಿ.ವಿದ್ಯಾಸಾಗರ ರಾವ್, ವಿವಿಧ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ. ಅದರಂತೆ ವಿವಿಧ ಮಠಾಧೀಶರು ಸಹ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಶಾಸಕ ದೇವಾನಂದ ಚವ್ಹಾಣ, ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಕಾಸ್‌ ಕಿಶೋರ್ ಸುರಳಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಸಿದ್ಧೇಶ್ವರ ಸಂಸ್ಥೆಯ ಸಂಗು ಸಜ್ಜನ ಮತ್ತಿತರರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !