ಭಾನುವಾರ, ಸೆಪ್ಟೆಂಬರ್ 26, 2021
21 °C
ಪ್ರವಾಸಿಗರನ್ನು ಸೆಳೆಯುವ ತಾಣ

ಬಸವ ಜನ್ಮ ಸ್ಮಾರಕ; ಆಕರ್ಷಕ..! ಬಸವ ಭಕ್ತರನ್ನು ಬರ ಸೆಳೆಯುವ ಬಸವನಬಾಗೇವಾಡಿ

ಪ್ರಕಾಶ ಎನ್.ಮಸಬಿನಾಳ Updated:

ಅಕ್ಷರ ಗಾತ್ರ : | |

Prajavani

ಬಸವನಬಾಗೇವಾಡಿ: ಹನ್ನೆರಡನೇ ಶತಮಾನದ ಶರಣ, ಕ್ರಾಂತಿ ಪುರುಷ ಬಸವೇಶ್ವರರು ಜನಿಸಿದ ಮನೆ ಇದೀಗ ಭವ್ಯ ಸ್ಮಾರಕವಾಗಿದೆ. ಬಸವ ಭಕ್ತರ ಶ್ರದ್ಧಾ ಭಕ್ತಿಯ ಧಾರ್ಮಿಕ ಕೇಂದ್ರವೂ ಆಗಿದೆ.

ಭಾರತೀಯ ವಾಸ್ತುಶೈಲಿಯೊಂದಿಗೆ, ಪ್ರಪಂಚದ ವಿವಿಧ ವಾಸ್ತುಶೈಲಿಯನ್ನೊಳಗೊಂಡ ಭವ್ಯ ಸ್ಮಾರಕದಲ್ಲಿನ ಬಸವಣ್ಣನವರ ಜೀವನಾಧಾರಿತ ಚಿತ್ರಗಳು ಬಸವ ಭಕ್ತರನ್ನು ಚಿಂತನೆಗೆ ಹಚ್ಚುತ್ತವೆ.

ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ವಿಶೇಷ ಅಧಿಕಾರಿಯಾಗಿದ್ದ ಡಾ.ಶಿವಾನಂದ ಜಾಮದಾರ ನೇತೃತ್ವದಲ್ಲಿ ₹ 1.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ, 90 ಅಡಿ ಎತ್ತರದ ಬಸವ ಜನ್ಮಸ್ಮಾರಕವು ಬಸವನಬಾಗೇವಾಡಿಗೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಪಟ್ಟಣದ ವಿಜಯಪುರ ರಸ್ತೆಗೆ ಹೊಂದಿಕೊಂಡಂತೆ ಬಸವ ಜನ್ಮ ಸ್ಮಾರಕಕ್ಕೆ ಪ್ರವೇಶಿಸುವ ದ್ವಿಪಥ ರಸ್ತೆಗೆ ವಿಶಾಲವಾದ ಮಹಾದ್ವಾರ ನಿರ್ಮಿಸಲಾಗಿದೆ. ವಿಶಾಲವಾದ ಪ್ರವೇಶ ದ್ವಾರದಿಂದ ಬಸವಜನ್ಮ ಸ್ಮಾರಕದ ಒಳ ಹೋಗುತ್ತಿದ್ದಂತೆ, ಎದುರಿಗೆ ಬಸವಣ್ಣನವರ ಜನನಕ್ಕೆ ಸಂಬಂಧಿಸಿದ ದೃಶ್ಯಗಳಿವೆ.

90 ಅಡಿ ಎತ್ತರದ ಸ್ಮಾರಕ ಕಟ್ಟಡಕ್ಕೆ ಆಧಾರವಾಗಿರುವ 76 ಅಡಿ ಎತ್ತರದ ನಾಲ್ಕು ಕಂಬಗಳಿಗೆ ಹೊಂದಿಕೊಂಡು, ಎರಡು ಅಡಿ ಎತ್ತರದ ವೃತ್ತಾಕಾರದ ಪೀಠ ಸ್ಥಾನದಲ್ಲಿ ಬಾಲಕ ಬಸವಣ್ಣನವರನ್ನು ಎತ್ತಿಕೊಂಡು ಕುಳಿತಿರುವ ತಾಯಿ ಮಾದಲಾಂಬಿಕಾದೇವಿ, ಗುರುವಿಗೆ ಕೈಮುಗಿದು ನಿಂತಿರುವ ತಂದೆ ಮಾದರಸರು, ಆಶೀರ್ವದಿಸುತ್ತಿರುವ ಗುರುಗಳ ಕಂಚಿನ ಮೂರ್ತಿಗಳಿಗೆ ಬಂಗಾರದ ಬಣ್ಣದ ಲೇಪನ ಮಾಡಲಾಗಿದೆ.

ಸ್ಮಾರಕದ ಒಳಭಾಗದ ಸುತ್ತಲಿನ ಗೋಡೆಯಲ್ಲಿ ಮರದ, ಕಂಚಿನ, ಕಲ್ಲಿನ ಹಾಗೂ ಗಾಜಿನಿಂದ ತಯಾರಿಸಿದ ಕಲಾಕೃತಿಗಳು ಬಸವಣ್ಣನವರ ಬಾಲ್ಯ, ಬೆಳವಣಿಗೆ ಕುರಿತಾದ ದೃಶ್ಯಗಳನ್ನು ಮನಮುಟ್ಟುವಂತೆ ಬಿಂಬಿಸಲಿವೆ.

ಸಾಗವಾನಿ ಕಟ್ಟಿಗೆಯಲ್ಲಿ ತಯಾರಿಸಿದ ಒಂದನೇ ಉಬ್ಬು ಕಲಾಕೃತಿಯು ತಾಯಿ ಮಾದಲಾಂಬಿಕೆಯು ನಂದೀಶ್ವರನ ಮುಂದೆ ಕುಳಿತು ಪ್ರಾರ್ಥಿಸುತ್ತಿರುವ ದೃಶ್ಯವನ್ನು ಚಿತ್ರಿಸಿದೆ. ಎರಡನೇ ದೃಶ್ಯವನ್ನು ಕಂಚಿನಲ್ಲಿ ಕೆತ್ತಲಾಗಿದ್ದು, ಬಾಲಕ ಬಸವಣ್ಣ ಉಪನಯನವನ್ನು ತಿರಸ್ಕರಿಸುವ ಚಿತ್ರಣವಿದೆ.

ಕಲ್ಲಿನಲ್ಲಿ ಕೆತ್ತನೆ ಮಾಡಲಾದ ಮೂರನೇ ಕಲಾಕೃತಿ ಬಸವಣ್ಣನವರು ಮನೆಯನ್ನು ತ್ಯಜಿಸಿ, ಕೂಡಲಸಂಗಮದತ್ತ ತೆರಳುತ್ತಿರುವ ದೃಶ್ಯ ಹೊಂದಿದೆ. ನಾಲ್ಕನೇ ಕಲಾಕೃತಿ ಕಲ್ಲಿನ ಕೆತ್ತನೆಯಿಂದ ಕೂಡಿದೆ. ಕೂಡಲಸಂಗಮದಲ್ಲಿ ಬಸವಣ್ಣನವರು ಕೂಡಲಸಂಗಮನಾಥನಿಗೆ ಕೈಮುಗಿದು ನಿಂತುಕೊಂಡಿರುವ ದೃಶ್ಯವಿದೆ. ಕೂಡಲಸಂಗಮದಲ್ಲಿ ಗುರುಗಳ ಸಮ್ಮುಖದಲ್ಲಿ ಅಧ್ಯಯನದಲ್ಲಿ ತೊಡಗಿರುವ ಬಸವಣ್ಣನವರ ಕಲ್ಲಿನ ಕೆತ್ತನೆಯನ್ನು ಐದನೇ ಕಲಾಕೃತಿಯಲ್ಲಿ ಕಾಣಬಹುದು.

ಗಾಜಿನಿಂದ ತಯಾರಿಸಲಾದ ಆರನೇ ಕಲಾಕೃತಿಯಲ್ಲಿ ಬಸವಣ್ಣನವರು ವಚನಗಳ ಬರವಣಿಗೆಯಲ್ಲಿ ನಿರತರಾದ ದೃಶ್ಯ ಮನಮೋಹಕವಾಗಿದೆ. ಏಳನೇ ಕಲಾಕೃತಿಯಲ್ಲಿ ಬಸವಣ್ಣನವರು ಗುರುಗಳಿಗೆ ವಂದಿಸಿ ಸೋದರ ಮಾವನೊಂದಿಗೆ ಕೂಡಲಸಂಗಮದಿಂದ ತೆರಳುತ್ತಿರುವ ದೃಶ್ಯವನ್ನು ಕಂಚಿನಲ್ಲಿ ಕೆತ್ತಲಾಗಿದೆ.

ಬಸವ ಜನ್ಮ ಸ್ಮಾರಕದ ಮುಂಭಾಗ ಹಾಗೂ ಪಕ್ಕದಲ್ಲಿ ಉದ್ಯಾನ ನಿರ್ಮಿಸುವ ಮೂಲಕ ಸ್ಮಾರಕದ ಅಂದವನ್ನು ಹೆಚ್ಚಿಸಲಾಗಿದೆ. ಸ್ಮಾರಕದ ಕೆಳಭಾಗದಲ್ಲಿ ಸುಸಜ್ಜಿತ ಗ್ರಂಥಾಲಯ ಹಾಗೂ 500 ಜನರು ಕುಳಿತುಕೊಳ್ಳುವ ಸಭಾ ಭವನವಿದೆ. ಪ್ರವಾಸಿಗರಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಪ್ರವಾಸಿಗರ ವಸತಿಗಾಗಿ ಸುಸಜ್ಜಿತ ಯಾತ್ರಿ ನಿವಾಸವಿದೆ.

ಇದರ ಜತೆಯಲ್ಲೇ ಇಲ್ಲಿನ ಐತಿಹಾಸಿಕ ಮೂಲ ನಂದೀಶ್ವರ (ಬಸವೇಶ್ವರ) ದೇವಸ್ಥಾನವನ್ನು, ಮೂಲ ದೇವಸ್ಥಾನದ ಮಾದರಿಯಲ್ಲೇ ಜೀರ್ಣೋದ್ಧಾರಗೊಳಿಸಿದ್ದರಿಂದ, ಪಟ್ಟಣವು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಹಾಗೂ ಧಾರ್ಮಿಕ ಕೇಂದ್ರವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು