ಶುಕ್ರವಾರ, ಸೆಪ್ಟೆಂಬರ್ 17, 2021
23 °C
ಬಸವ ಪ್ರಶಸ್ತಿ ಪ್ರದಾನ

‘ಶರಣ ತತ್ವದ ಬೆಳಕಿನಿಂದ ಬಸವಧರ್ಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನೂರಾರು ಶರಣರ ತತ್ವಗಳ ಬೆಳಕಿನಲ್ಲಿ ಬಸವ ಮಾರ್ಗವು ಧರ್ಮವಾಗಿ ರೂಪಗೊಂಡಿದೆ’ ಎಂದು ಬೇಲಿಮಠದ ಶಿವರುದ್ರ ಸ್ವಾಮೀಜಿ ಹೇಳಿದರು.

ಬಸವ ಸಮಿತಿ ಮಂಗಳವಾರ ಆಯೋಜಿಸಿದ್ದ ಬಸವ ಜಯಂತಿ ಹಾಗೂ ಬಸವ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಅರಿವು– ಆಚಾರಗಳ ಸಂಗಮವೇ ಇಷ್ಟಲಿಂಗ ಪೂಜೆ. ದ್ವಿದಳ ಧಾನ್ಯದಲ್ಲಿ ಒಂದು ದಳ ಬೇರ್ಪಟ್ಟರೂ ಕಾಳು ಮೊಳಕೆಯೊಡೆಯುವುದಿಲ್ಲ. ಚೈತನ್ಯ ಹುಟ್ಟುವುದಿಲ್ಲ. ಹಾಗೆಯೇ ಅರಿವು– ಆಚಾರಗಳಲ್ಲಿ ಒಂದರಲ್ಲಿ ಕೊರತೆ ಕಂಡುಬಂದರೂ ಬಸವ ಪ್ರಜ್ಞೆ ಮೂಡುವುದಿಲ್ಲ’ ಎಂದು ಹೇಳಿದರು.

‘ಬಸವಣ್ಣ ಆಯಸ್ಕಾಂತದಂತೆ. ಒಂದು ಬಾರಿ ಆತನ ಆಕರ್ಷಣೆಗೆ ಒಳಗಾದರೆ ವಿಚಾರಗಳು ತಿಳಿಯುತ್ತಲೇ ಹೋಗುತ್ತವೆ. ಮೊದಲಿನಿಂದಲೂ ಮಣ್ಣೆತ್ತಿನ ಅಮವಾಸ್ಯೆ ನೆನಪಿನಲ್ಲಿ ಬಸವನನ್ನು (ಎತ್ತು) ಪೂಜಿಸಲಾಗುತ್ತಿದೆ. ಹರ್ಡೇಕರ್‌ ಮಂಜಪ್ಪ ಅವರು ಈ ಜಯಂತಿಯನ್ನು ಮೃಗ ಪ್ರಜ್ಞೆಯಿಂದ ಬಸವ ಪ್ರಜ್ಞೆಯ ನೆಲೆಗೆ ತಂದರು’ ಎಂದು ನೆನಪಿಸಿಕೊಂಡರು.

ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ, ‘ಬಸವಣ್ಣ ಅವರ ಅನುಭವ ಮಂಟಪ ಅಂದಿನ ಕಾಲದ ಸಂಸತ್ತು ಆಗಿತ್ತು. ಕಾಯಕ, ದಾಸೋಹ, ಸಮಭಾವ, ದಯೆ ಕುರಿತು ಅಲ್ಲಿ ತತ್ವ ಚಿಂತನೆ ನಡೆಯುತ್ತಿತ್ತು’ ಎಂದು ಹೇಳಿದರು. 

ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌.ಮಂಜನಾಥ್‌, ‘ನಿದ್ದೆಯನ್ನು ಕೆಡಿಸುವ ಅಸೂಯೆ, ಸ್ನೇಹವನ್ನು ಹಾಳುಮಾಡುವ ಅಹಂಕಾರ ಮತ್ತು ಜೀವನವನ್ನು ಕೆಡಿಸುವ ಅನುಮಾನದ ಗುಣಗಳನ್ನು ಬಿಡಬೇಕು ಎಂದು ಬಸವಣ್ಣ ಹೇಳಿದ್ದಾರೆ. ಅವರು ಹೇಳಿದಂತೆ ಮೋಕ್ಷಕ್ಕಾಗಿ ಧರ್ಮಗ್ರಂಥಗಳನ್ನು ಓದಬೇಕಿಲ್ಲ. ಮಂದಿರ, ಮಸೀದಿ, ಚರ್ಚುಗಳಿಗೆ ಅಲೆಯಬೇಕಿಲ್ಲ. ಕಾಯಕವನ್ನು ಪ್ರಾಮಾಣಿಕವಾಗಿ ಮಾಡಿದರೆ ಸಾಕು’ ಎಂದರು.

ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ‘ಬಸವಣ್ಣರ ತತ್ವಗಳನ್ನು ಪಸರಿಸಲು ದೇಶದ 27 ಭಾಷೆಗಳಿಗೆ ವಚನಗಳನ್ನು ಭಾಷಾಂತರ ಮಾಡಲಾಗಿದೆ. ಜಾಗತಿಕ ಬಸವ ಪ್ರತಿಷ್ಠಾನದಿಂದ ವಿದೇಶಗಳಲ್ಲೂ ಶರಣರ ತತ್ವದ ಬೆಳಕನ್ನು ಹರಿಸುತ್ತಿದ್ದೇವೆ’ ಎಂದು ಹೇಳಿದರು.

ಡಾ.ಸಿ.ಎನ್‌.ಮಂಜುನಾಥ್‌ ಅವರಿಗೆ ಕಾಯಕ ರತ್ನ, ಜೆ.ಎಸ್‌.ಖಂಡೇರಾವ್‌, ಎಚ್‌.ಎಂ.ಸ್ವಾಮಿ, ಬಿ.ಎನ್‌.ಬಸವರಾಜಪ್ಪ ಅವರಿಗೆ ಬಸವ ವಿಭೂಷಣ, ಶಿವಶಂಕರಪ್ಪ ಎಫ್‌.ಅಕ್ಕಿ ಅವರಿಗೆ ಬಸವ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಾಸೋಹ ರತ್ನ ಪ್ರಶಸ್ತಿಯನ್ನು ಸುಧಾಮೂರ್ತಿ ಅವರ ಪರವಾಗಿ ಅವರ ಅಕ್ಕ ಸುನಂದಾ ಕುಲಕರ್ಣಿ ಸ್ವೀಕರಿಸಿದರು.

ಬಿ.ಪುಟ್ಟಸ್ವಾಮಯ್ಯ ಅವರ ಕಾದಂಬರಿಗಳ ಸಂಪುಟಗಳನ್ನು ಬಿಡುಗಡೆ ಮಾಡಲಾಯಿತು.

ಪುಸ್ತಕದ ಕುರಿತು

ಪುಸ್ತಕ: ಬಿ.ಪುಟ್ಟಸ್ವಾಮಯ್ಯ ಅವರ ಐತಿಹಾಸಿಕ ಕಾದಂಬರಿಗಳು (2 ಸಂಪುಟಗಳು)

ಒಂದನೇ ಸಂಪುಟ ಬೆಲೆ: ₹ 1,600

ಪುಟಗಳು: 832 

ಎರಡನೇ ಸಂಪುಟ ಬೆಲೆ: ₹ 1,600

ಪುಟಗಳು: 1,082

ಪ್ರಕಟಣೆ: ಬಸವ ಸಮಿತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.