ಮಂಗಳವಾರ, ಮಾರ್ಚ್ 28, 2023
23 °C
ಜಗಜ್ಯೋತಿ ಬಸವೇಶ್ವರ ಜಯಂತಿ

ಬಸವಣ್ಣ ಎಲ್ಲ ಸಮುದಾಯಕ್ಕೆ ಸೇರಿದವರು: ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ನುಡಿದಂತೆ ನಡೆದ, ನಡೆದಂತೆ ನುಡಿದ ಕಾಯಕಯೋಗಿ ಬಸವಣ್ಣ ಅವರು ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ಸಾಮಾಜಿಕ ಕ್ರಾಂತಿಪುರುಷ. ಅವರನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡುವುದು ಬೇಡ. ಅವರು ಎಲ್ಲರಿಗೂ ಸೇರಿದವರು’ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಮಂಗಳವಾರ ಪ್ರತಿಪಾದಿಸಿದರು.

ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ರಾಷ್ಟ್ರಕವಿ ಕುವೆಂ‍ಪು ಅವರು 20ನೇ ಶತಮಾನದಲ್ಲಿ ವಿಶ್ವಮಾನವ ಕನಸನ್ನು ಕಂಡಿದ್ದರು. ಬಸವಣ್ಣ ಅವರು 12ನೇ ಶತಮಾನದಲ್ಲಿಯೇ ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದ್ದರು. ಕರ್ನಾಟಕದಲ್ಲಿ ಜನರ ಮೇಲೆ ಇವರಷ್ಟು ಪ್ರಭಾವ ಬೀರಿದ ಧಾರ್ಮಿಕ ಪುರುಷರು ಬೇರೆ ಯಾರೂ ಇಲ್ಲ. ಅವರು ರಚಿಸಿರುವ ವಚನಗಳು ಈಗಲೂ ರಾಜ್ಯದಲ್ಲಿ ಜೀವಂತವಾಗಿವೆ. ಜನರ ನಾಲಿಗೆಯಲ್ಲಿ ನಲಿದಾಡುತ್ತಿವೆ’ ಎಂದರು.

‘ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದಾಗಲೂ ಜನಪರ ಕೆಲಸಗಳನ್ನು ಮಾಡಿದರು. ಸ್ತ್ರೀ– ಪುರುಷ ಸಮಾನತೆ ತರಲು ಪ್ರಯತ್ನಿಸಿದರು. ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ಕೊಟ್ಟರು. ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತಂದರು. ವರ್ಣಭೇದ, ಅಸಮಾನತೆಯನ್ನು ತೊಡೆದುಹಾಕಲು ಯತ್ನಿಸಿದರು. ಸಮಾಜದಲ್ಲಿ ಮೇಲು–ಕೀಳು ಇಲ್ಲ. ಎಲ್ಲರೂ ಸಮಾನರು ಎಂಬ ಸಂದೇಶವನ್ನು ಸಾರಿದರು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಲತಾಕುಮಾರಿ ಮಾತನಾಡಿ, ‘ಬಾಲ್ಯದಲ್ಲೇ ಹೆಣ್ಣು–ಗಂಡು, ಅಸಮಾನತೆಯನ್ನು ಖಂಡಿಸಿದ್ದ, ಮೌಢ್ಯ ಆಚರಣೆಗಳನ್ನು ಪ್ರಶ್ನಿಸಿದ್ದ ಬಸವಣ್ಣ ಅವರು ಶರಣ ಸಂಸ್ಕೃತಿಯ ಧ್ರುವತಾರೆ’ ಎಂದು ಬಣ್ಣಿಸಿದರು.

‘ತಮ್ಮ ವಚನಗಳ ಮೂಲಕ ಜನರಿಗೆ ಸಂದೇಶ ರವಾನಿಸುತ್ತ ಸಮಾಜವನ್ನು ತಿದ್ದಲು ಬಸವಣ್ಣ ಪ್ರಯತ್ನಿಸಿದರು. ಜಗತ್ತಿನ ಎಲ್ಲ ಧರ್ಮಗಳ ಸಾರವನ್ನು ಅರಿತಿದ್ದ ಅವರು ದಯೆ, ಕರುಣೆ ಇಲ್ಲದ ಧರ್ಮ ಯಾವುದೂ ಇಲ್ಲ. ದಯೆಯೇ ಧರ್ಮದ ಮೂಲವಯ್ಯ ಎಂದು ಸಾರಿ ವಿಶ್ವಮಾನ್ಯರಾದರು. 12ನೇ ಶತಮಾನದಲ್ಲಿ ಅವರು ಪ್ರಸ್ತಾಪಿಸಿದ್ದ ಕ್ರಾಂತಿಕಾರಿ ಸಂಗತಿಗಳೆಲ್ಲ ಇಂದಿಗೂ ಪ್ರಸ್ತುತವಾಗಿವೆ’ ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಬಿ.ಹದ್ದಣ್ಣವರ ಅವರು ಮಾತನಾಡಿ, ‘ಬಸವಣ್ಣ ಸಾರಿದ ಸಂದೇಶಗಳನ್ನು ನಾವು ಕಟ್ಟುನಿಟ್ಟಾಗಿ ಪಾಲಿಸಿದರೆ, ಅಪರಾಧ ಮುಕ್ತ ಸಮಾಜವನ್ನು ನಿರ್ಮಿಸಬಹುದು’ ಎಂದರು.

‘ಸಮಾಜದಲ್ಲಿ ಹೇಗೆ ವರ್ತಿಸಬೇಕು? ಹೇಗೆ ಬಾಳಬೇಕು ಎಂಬುದನ್ನೆಲ್ಲ 12ನೇ ಶತಮಾನದಲ್ಲೇ ಹೇಳಿದ್ದರು. ಬಸವಣ್ಣ ಅಂದು ಹೇಳಿದ್ದನ್ನು ಈಗ ನಾವು ಕಾನೂನನ್ನು ರಚಿಸಿ, ಅವುಗಳನ್ನು ಪಾಲನೆ ಮಾಡುತ್ತಿದ್ದೇವೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌ ಇದ್ದರು.

‘ಜಿಲ್ಲೆಗೆ ಅವಶ್ಯಕತೆ ಇದೆ’

‘ಬಸವಣ್ಣ ಅವರು 12ನೇ ಶತಮಾನದಲ್ಲಿ ಪ್ರತಿಪಾದಿಸಿದ ಕ್ರಾಂತಿಕಾರಕ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ನಮ್ಮ ಜಿಲ್ಲೆಯ ಮಟ್ಟಿಗೆ ಅವುಗಳನ್ನು ಪಾಲಿಸುವ ಅಗತ್ಯವಿದೆ’ ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹೇಳಿದರು.

‘ನಮ್ಮಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗಬೇಕಿದೆ. ಈಗಲೂ ಜಾತಿಯತೆ ಕಾಣುತ್ತಿದ್ದೇವೆ. ಇವುಗಳನ್ನೆಲ್ಲ ದೂರ ಮಾಡಬೇಕಿದೆ. ಅದಕ್ಕಾಗಿ ಇಡೀ ಸಮಾಜ ಬಸವಣ್ಣ ಅವರ ತತ್ವಗಳನ್ನು ಅನುಸರಿಸಲು ಮುಂದಾಗಬೇಕಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು