ಸೋಮವಾರ, ಅಕ್ಟೋಬರ್ 14, 2019
28 °C

ಅಕ್ರಮ ಖಾತಾ ನೋಂದಣಿ ಮೇಯರ್ ಗೌತಮ್ ಗರಂ

Published:
Updated:
Prajavani

ಬೊಮ್ಮನಹಳ್ಳಿ: ‘ಬಿಬಿಎಂಪಿ ವ್ಯಾಪ್ತಿ ಯಲ್ಲಿ ಅಕ್ರಮ ಖಾತಾ ನೋಂದಣಿ ಪ್ರಕರಣಗಳು ಕಂಡು ಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕದಿದ್ದರೆ ಶಿಕ್ಷೆಗೆ ಗುರಿಯಾಗುತ್ತೀರಿ’ ಎಂದು ಮೇಯರ್ ಎಂ.ಗೌತಮ್‌ಕುಮಾರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಶುಕ್ರವಾರ ಬೊಮ್ಮನಹಳ್ಳಿ ವಲಯ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ‘ವಲಯದಲ್ಲಿ ಈವರೆಗೂ ರಸ್ತೆ, ಪಾದಚಾರಿ ಮಾರ್ಗ  ಮತ್ತು ರಾಜ ಕಾಲುವೆ ಒತ್ತುವರಿ ಸಂಬಂಧ 302 ಪ್ರಕರಣಗಳು ದಾಖಲಾಗಿವೆ. ಆದರೆ, ಒತ್ತುವರಿದಾರರ ಮೇಲೆ ಯಾವುದೇ ಕ್ರಮ ಆಗಿಲ್ಲ‘ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ವಲಯದಲ್ಲಿ ಈವರೆಗೆ ಶೇ 41ರಷ್ಟು ಮಾತ್ರ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಬಾಕಿ ವಸೂಲಿ ಮಾಡುವುದರ ಜತೆಗೆ ಆಸ್ತಿಗಳ ಸಮರ್ಪಕ ಸರ್ವೆ ಕಾರ್ಯ ನಡೆಸಿ’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಝೀರೊ ಟ್ರಾಫಿಕ್‌: ಬನ್ನೇರುಘಟ್ಟ ರಸ್ತೆಯ ಜೆಡಿ ಮರ ಜಂಕ್ಷನ್‌ನಿಂದ ಸುತ್ತ ಮುತ್ತಲ ಬಡಾವಣೆಗಳಿಗೆ ಮೇಯರ್ ಬೈಕ್‌ನಲ್ಲೇ ತೆರಳಿ ನಿವಾಸಿಗಳ ಸಮಸ್ಯೆ ಆಲಿಸಿದರು.

ಮೇಯರ್‌ ಸಂಚಾರಕ್ಕಾಗಿ ಝೀರೊ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು.  ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್ ಗೌತಮ್ ಕುಮಾರ್ ‘ರಸ್ತೆಗಳ ಸ್ಥಿತಿ–ಗತಿಗಳನ್ನು ಅರಿಯಲು, ಸಂಚಾರ ದಟ್ಟಣೆ ಆಗುವುದನ್ನು ತಪ್ಪಿಸುವ ಉದ್ದೇಶ ದಿಂದಲೇ ಬೈಕ್‌ನಲ್ಲಿ ಹೋಗುತ್ತಿದ್ದೇನೆ’ ಎಂದರು.

Post Comments (+)