₹11,649 ಕೋಟಿಗೆ ಕುಗ್ಗಿದ ಪಾಲಿಕೆ ಬಜೆಟ್‌

ಸೋಮವಾರ, ಜೂನ್ 24, 2019
24 °C
ಲೋಕಸಭಾ ಫಲಿತಾಂಶಕ್ಕೆ ಮುನ್ನವೇ ನಗರಾಭಿವೃದ್ಧಿ ಇಲಾಖೆ ತರಾತುರಿಯಲ್ಲಿ ಅನುಮೋದನೆ?

₹11,649 ಕೋಟಿಗೆ ಕುಗ್ಗಿದ ಪಾಲಿಕೆ ಬಜೆಟ್‌

Published:
Updated:

ಬೆಂಗಳೂರು: ಬಿಬಿಎಂಪಿಯ 2019–20ನೇ ಸಾಲಿನ ಬಜೆಟ್‌ಗೆ ನಗರಾಭಿವೃದ್ಧಿ ಇಲಾಖೆ ಬುಧವಾರ ಅನುಮೋದನೆ ನೀಡಿದ್ದು, ಅದರ ಗಾತ್ರವನ್ನು ₹11,648.90 ಕೋಟಿಗೆ ಮಿತಗೊಳಿಸಿದೆ.

ಪಾಲಿಕೆಯು ₹12,958 ಕೋಟಿ ಗಾತ್ರದ ಬಜೆಟ್‌ಗೆ ಅನುಮೋದನೆ ನೀಡುವಂತೆ ನಗರಾಭಿವೃದ್ಧಿ ಇಲಾಖೆಯನ್ನು ಕೋರಿತ್ತು. ಆದರೆ, ಇಲಾಖೆಯು ಬಜೆಟ್‌ ಗಾತ್ರದಲ್ಲಿ ₹1,308.89 ಕೋಟಿ ಕಡಿತಗೊಳಿಸಿದೆ. ಕಡಿತಗೊಂಡ ಮೊತ್ತವನ್ನು ಪೂರಕ ಅಂದಾಜು ಮಂಡಿಸುವ ಮೂಲಕ ಹೊಂದಿಸಿಕೊಳ್ಳುವಂತೆ ಇಲಾಖೆ ಸಲಹೆ ನೀಡಿದೆ.

2018–19ನೇ ಸಾಲಿನಲ್ಲಿ ₹ 10,129.48 ಕೋಟಿ ಗಾತ್ರದ ಬಜೆಟ್‌ಗೆ ಇಲಾಖೆ ಅನುಮೋದನೆ ನೀಡಿತ್ತು. ಬಜೆಟ್‌ ಗಾತ್ರವನ್ನು ಹಿಂದಿನ ವರ್ಷದ ಗಾತ್ರಕ್ಕಿಂತ ಶೇ 15ರಷ್ಟು ಹೆಚ್ಚಿಸಿ ಅನುಮೋದನೆ ನೀಡಲಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಪಾಲಿಕೆ ಆಯುಕ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳಲು ಇನ್ನೇನು ಒಂದು ದಿನ ಬಾಕಿ ಇರುವಾಗ ಇಲಾಖೆ ಈ ಕ್ರಮ ಕೈಗೊಂಡಿರುವುದಕ್ಕೆ ಪಾಲಿಕೆಯ ವಿರೋಧ ಪಕ್ಷ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

‘ಪಾಲಿಕೆಯಲ್ಲಿ ಆರ್ಥಿಕ ಶಿಸ್ತು ಕಾಪಾಡಲು ಕ್ರಮ ಕೈಗೊಳ್ಳಬೇಕಿದೆ. ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಅಂಶಗಳು ಪಾಲಿಕೆ ಬಜೆಟ್‌ಗೂ ಅನ್ವಯವಾಗುವಂತೆ ನೋಡಿಕೊಳ್ಳಬೇಕು. ವಾಸ್ತವಕ್ಕೆ ಮೀರಿ ಆದಾಯ ನಿರೀಕ್ಷೆ ಮಾಡುವುದಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದೆ’ ಎಂದು ಈ ಬಾರಿ ಬಜೆಟ್‌ ಮಂಡನೆಗೆ ಸಾಕಷ್ಟು ಮುನ್ನವೇ ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. 

ಈ ಬಾರಿ ವಾಸ್ತವಕ್ಕೆ ಹತ್ತಿರವಾದ ಬಜೆಟ್‌ ಮಂಡಿಸುವ ಭರವಸೆ ನೀಡಿದ್ದ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟವು ಈ ಮಾತನ್ನು ಉಳಿಸಿಕೊಂಡಿರಲಿಲ್ಲ. 2019–20ನೇ ಸಾಲಿನಲ್ಲಿ ₹8987.73 ಕೋಟಿ ಆದಾಯ ನಿರೀಕ್ಷಿಸಿ ಬಜೆಟ್‌ ಮಂಡಿಸಬಹುದು ಎಂದು ಪಾಲಿಕೆ ಅಧಿಕಾರಿಗಳು ಶಿಫಾರಸು ಮಾಡಿದ್ದರು. ಆದರೆ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್‌.ಪಿ.ಹೇಮಲತಾ ಅವರು ಫೆ.18ರಂದು ₹10,691. 82 ಕೋಟಿ ಗಾತ್ರದ ಬಜೆಟ್‌ ಮಂಡಿಸಿದ್ದರು. ಬಳಿಕ ಕೌನ್ಸಿಲ್‌ ಸಭೆಯಲ್ಲಿ ಬಜೆಟ್‌ಗೆ ಕೆಲವೊಂದು ಕಾರ್ಯಕ್ರಮಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಿ ಗಾತ್ರವನ್ನು ₹ 12,958 ಕೋಟಿಗೆ ಹಿಗ್ಗಿಸಲಾಗಿತ್ತು.

ಬಜೆಟ್‌ನ ಲೆಕ್ಕಾಚಾರ ವಾಸ್ತವಕ್ಕೆ ದೂರವಾಗಿದೆ. ಹಾಗಾಗಿ ಅದರ ಗಾತ್ರವನ್ನು ₹9 ಸಾವಿರ ಕೋಟಿಗೆ ತಗ್ಗಿಸಬೇಕು ಎಂದು ಪಾಲಿಕೆ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದರು. ಪ್ರತಿ ವರ್ಷವೂ ವಾಸ್ತವಕ್ಕಿಂತ ಹೆಚ್ಚು ಆದಾಯ ನಿರೀಕ್ಷೆ ಮಾಡಿ ಬಜೆಟ್‌ ಮಂಡಿಸುತ್ತಿರುವುದರಿಂದ ಏನೆಲ್ಲ ಪ್ರತಿಕೂಲ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ ಎಂಬುದನ್ನು ಆಯುಕ್ತರು ಎಳೆ ಎಳೆಯಾಗಿ ವಿವರಿಸಿದ್ದರು. 

2017–18ನೇ ಸಾಲಿನ ನೈಜ ಲೆಕ್ಕಾಚಾರಗಳಿಗೆ ಹೋಲಿಸಿದರೆ 2019–20ನೇ ಸಾಲಿನ ಬಜೆಟ್‌ ಗಾತ್ರವು ಶೇ 173.61ರಷ್ಟು ಹೆಚ್ಚು ಇದೆ. 2017–18ನೇ ಸಾಲಿನ ಅಂದಾಜು ಲೆಕ್ಕಾಚಾರಗಳಿಗೆ ಹೋಲಿಸಿದರೂ ಬಜೆಟ್‌ ಗಾತ್ರ ಶೇ 148.09ರಷ್ಟು ಹೆಚ್ಚು ಇದೆ. ಇದನ್ನು ಅನುಷ್ಠಾನಗೊಳಿಸುವುದು ಅಸಾಧ್ಯ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದರು.

ಬಜೆಟ್‌ನಲ್ಲಿ ನಿರೀಕ್ಷಿಸಿದಷ್ಟು ಆದಾಯ ಬರದಿದ್ದರೂ ವೆಚ್ಚಗಳಿಗೆ ಒದಗಿಸಿದಷ್ಟು ಅನುದಾನಕ್ಕೆ ತಕ್ಕಂತೆ ಜಾಬ್‌ ಸಂಖ್ಯೆ ಪಡೆದು ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಇದರಿಂದಾಗಿ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಾಕಿ ಬಿಲ್‌ಗಳ ಮೊತ್ತ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಪಾಲಿಕೆಯ ಆರ್ಥಿಕ ಹೊರೆ ಹೆಚ್ಚುತ್ತಿರುವುದರಿಂದ ಹಣಕಾಸು ನಿರ್ವಹಣೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ವಿವರಿಸಿದ್ದರು.

ಬಜೆಟ್‌ ಗಾತ್ರವನ್ನು ₹9 ಸಾವಿರ ಕೋಟಿಗೆ ಮಿತಿಗೊಳಿಸಿದರೆ, ಅದು 2018–19ನೇ ಸಾಲಿನ ವಾಸ್ತವ ಲೆಕ್ಕಾಚಾರಕ್ಕಿಂತ ಶೇ 22.92ರಷ್ಟು ಹೆಚ್ಚಾಗುತ್ತದೆ. ಒಂದು ವೇಳೆ ನಿರೀಕ್ಷೆಗಿಂತ ಹೆಚ್ಚು ಆದಾಯ ಸಂಗ್ರಹವಾದಲ್ಲಿ ಹೆಚ್ಚಳವಾದರೆ ಪೂರಕ ಬಜೆಟ್‌ ಮಂಡಿಸಿ ಅದಕ್ಕೆ ಅನುಮೋದನೆ ಕೋರಲು ಅವಕಾಶ ಇದೆ ಎಂದೂ ಸಲಹೆ ನೀಡಿದ್ದರು.

‘ಆದಾಯ ಆಧರಿಸಿ ಪೂರಕ ಅಂದಾಜು ಮಂಡನೆ’

‘ಬಜೆಟ್‌ ಗಾತ್ರದಲ್ಲಿ ₹ 1,308. 89 ಕೋಟಿ ಕಡಿತ ಮಾಡಲಾಗಿದೆ. ಹಾಗಾಗಿ, ಆದ್ಯತೆ ಮೇರೆಗೆ ಕೈಗೊಳ್ಳಬೇಕಾದ ಕಾರ್ಯಕ್ರಮಗಳನ್ನು ಮೊದಲು ಅನುಷ್ಠಾನಗೊಳಿಸುತ್ತೇವೆ. ಪಾಲಿಕೆಯ ಆದಾಯವನ್ನು ನೋಡಿಕೊಂಡು ಪೂರಕ ಅಂದಾಜು ಮಂಡಿಸಿ ಬಾಕಿ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತೇವೆ’ ಎಂದು ಮೇಯರ್‌ ಗಂಗಾಂಬಿಕೆ ‘ಪ್ರಜಾವಾಣಿ’ಗೆ ತಿಳಿಸಿದರು.

ನೀತಿ ಸಂಹಿತೆ ಉಲ್ಲಂಘಿಸಿ ಬಜೆಟ್‌ಗೆ ಅನುಮೋದನೆ

‘ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಲ್ಲಿರುವಾಗಲೇ ಪಾಲಿಕೆ ಬಜೆಟ್‌ಗೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿರುವುದು ಕಾನೂನುಬಾಹಿರ’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದ್ದಾರೆ.

‘ಹಣಕಾಸು ಇಲಾಖೆ ₹ 9ಸಾವಿರ ಕೋಟಿ ಗಾತ್ರದ ಬಜೆಟ್‌ಗೆ ಮಾತ್ರ ಅನುಮೋದನೆ ನೀಡಿತ್ತು. ಅದನ್ನು ಪರಿಗಣಿಸದೆ ನಗರಾಭಿವೃದ್ಧಿ ಇಲಾಖೆ ಅದಕ್ಕಿಂತ ಹೆಚ್ಚು ಗಾತ್ರದ ಬಜೆಟ್‌ಗೆ ಒಪ್ಪಿಗೆ ನೀಡಲು ಹೇಗೆ ಸಾಧ್ಯ. ಈ ಬಜೆಟ್‌ಗೆ ಅನುಮೋದನೆ ಕೊಡಿಸಿರುವ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರ ನಡೆಯೂ ಸಂಶಯಾಸ್ಪದವಾಗಿದೆ. ಕಾನೂನುಬಾಹಿರ ನಿರ್ಧಾರವನ್ನು ಐಎಎಸ್‌ ಅಧಿಕಾರಿಗಳು ಸಮ್ಮತಿಸಿದ್ದು ದುರ್ದೈವ’ ಎಂದರು.

‘ಅವಾಸ್ತವಿಕ ಬಜೆಟ್‌ಗೆ ಅನುಮೋದನೆ ನೀಡಿದ ಕ್ರಮವನ್ನು ಖಂಡಿಸಿ ಬಿಜೆಪಿ ಹೋರಾಟ ನಡೆಸಲಿದೆ’ ಎಂದು ಅವರು ತಿಳಿಸಿದರು. 

***

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಸರ್ಕಾರ ಪತನವಾಗುವ ಭಯದಿಂದ ಪಾಲಿಕೆ ಬಜೆಟ್‌ಗೆ ತರಾತುರಿಯಲ್ಲಿ ಅನುಮೋದನೆ ನೀಡಲಾಗಿದೆ

–ಪದ್ಮನಾಭ ರೆಡ್ಡಿ, ಪಾಲಿಕೆ ವಿರೋಧ ಪಕ್ಷದ ನಾಯಕ

***

ಅಂಕಿ ಅಂಶ

* ₹ 10,691. 82 ಕೋಟಿ – ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು ಮಂಡಿಸಿದ್ದ ಬಜೆಟ್‌ ಗಾತ್ರ

* ₹ 12,958 ಕೋಟಿ – ಕೌನ್ಸಿಲ್‌ ಚರ್ಚೆ ಬಳಿಕ ಪರಿಷ್ಕರಣೆಗೊಂಡ ಬಜೆಟ್‌ ಗಾತ್ರ

* ₹ 11,648.90 ಕೋಟಿ – ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿರುವ ಬಜೆಟ್‌ ಗಾತ್ರ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !