ಕೆಂಪೇಗೌಡ ಪ್ರಶಸ್ತಿ: ಅರ್ಹರ ಆಯ್ಕೆಗೆ ಮಾರ್ಗದಂಡ

7
ಆಯ್ಕೆ ಸಮಿತಿ ರಚನೆಗೆ ಪಾಲಿಕೆ ಆಡಳಿತ ಪಕ್ಷದ ನಾಯಕ ಶಿವರಾಜ್‌ ಒತ್ತಾಯ

ಕೆಂಪೇಗೌಡ ಪ್ರಶಸ್ತಿ: ಅರ್ಹರ ಆಯ್ಕೆಗೆ ಮಾರ್ಗದಂಡ

Published:
Updated:

ಬೆಂಗಳೂರು: ಬಿಬಿಎಂಪಿ ವತಿಯಿಂದ ನೀಡುವ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಕುರಿತು ಟೀಕೆ ವ್ಯಕ್ತವಾದ ಬಳಿಕ ಎಚ್ಚೆತ್ತುಕೊಂಡಿರುವ ಪಾಲಿಕೆ, ಈ ಗೌರವಕ್ಕೆ ಅರ್ಹರನ್ನು ಆಯ್ಕೆ ಮಾಡಲು ಮಾನದಂಡ ರೂಪಿಸಲು ಮುಂದಾಗಿದೆ.

ಅರ್ಹರಿಗೆ ಮಾತ್ರ ಈ ಪ್ರಶಸ್ತಿ ಸಲ್ಲಿಕೆ ಆಗುವಂತೆ ನೋಡಿಕೊಳ್ಳುವ ಸಲುವಾಗಿ ಆಯ್ಕೆ ಸಮಿತಿ ರಚಿಸುವ ಪ್ರಸ್ತಾಪವೂ ಪಾಲಿಕೆ ಮುಂದಿದೆ.

ಸ್ವತಃ ಮೇಯರ್‌ ಅವರೇ ಈ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುತ್ತಾರೆ. ವರ್ಷದಲ್ಲಿ ಇಂತಿಷ್ಟೇ ಮಂದಿಗೆ ಈ ಪ್ರಶಸ್ತಿ ನೀಡಬೇಕು ಎಂಬ ಮಿತಿ ಇಲ್ಲ. ಪ್ರಶಸ್ತಿ ಪಡೆಯುವುದಕ್ಕೆ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿರಬೇಕು ಎಂಬ ಬಗ್ಗೆ ನಿರ್ದಿಷ್ಟ ಮಾನದಂಡವನ್ನು ಪಾಲಿಕೆ ಹೊಂದಿಲ್ಲ. ಹಾಗಾಗಿ ವರ್ಷ ವರ್ಷವೂ ಈ ಪ್ರಶಸ್ತಿ ಪಡೆಯುವವರ ಸಂಖ್ಯೆ ಬೆಳೆಯುತ್ತಲೇ ಇದೆ.

ಪ್ರಶಸ್ತಿಗೆ ಆಯ್ಕೆ ಆದವರ ಪಟ್ಟಿ ಪ್ರಕಟ ಆದ ಬಳಿವೂ ಪಾಲಿಕೆ ಸದಸ್ಯರು ಹಾಗೂ ರಾಜಕೀಯ ಮುಖಂಡರು ಮೇಯರ್‌ ಮೇಲೆ ಒತ್ತಡ ಹೇರಿ ತಮಗೆ ಬೇಕಾದವರ ಹೆಸರುಗಳನ್ನು ಕೊನೆಕ್ಷಣದಲ್ಲಿ ಸೇರಿಸುತ್ತಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದ್ದಂತೆಯೇ ವೇದಿಕೆಯಲ್ಲೇ ಹೊಸ ಹೆಸರುಗಳನ್ನು ಸೇರ್ಪಡೆ ಮಾಡಲಾಗುತ್ತಿತ್ತು. 

ಪ್ರಶಸ್ತಿ ಪ್ರದಾನ ಸಮಾರಂಭವೂ ಶಿಸ್ತಿನಿಂದ ನಡೆಯುತ್ತಿರಲಿಲ್ಲ. ಪ್ರಶಸ್ತಿ ಪುರಸ್ಕೃತರನ್ನು ಗೌರವಯುತವಾಗಿ ನಡೆಸಿಕೊಳ್ಳುವ ವ್ಯವಸ್ಥೆಯನ್ನೂ ಪಾಲಿಕೆ ಮಾಡುತ್ತಿರಲಿಲ್ಲ. ನಿಜವಾದ ಅರ್ಹತೆಯಿಂದ ಈ ಪ್ರಶಸ್ತಿಗೆ ಆಯ್ಕೆ ಆದವರಿಗೆ ಈ ಎಲ್ಲ ಗೊಂದಲಗಳು ಮುಜುಗರವನ್ನುಂಟು ಮಾಡುತ್ತಿದ್ದವು.

2018ನೇ ಸಾಲಿನ ಪ್ರಶಸ್ತಿಗೆ 500ಕ್ಕೂ ಅಧಿಕ ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಈ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ನಡೆದ ಬಳಿಕ ಕೆಲವು ಸಾಹಿತಿಗಳು ಹಾಗೂ ರಂಗಕರ್ಮಿಗಳು ಈ ಅವ್ಯವಸ್ಥೆ ಬಗ್ಗೆ ಬಹಿರಂಗವಾಗಿಯೇ ದನಿ ಎತ್ತಿದ್ದರು.

ಪಾಲಿಕೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್ ಅವರು ಈ ಪ್ರಶಸ್ತಿಗೆ ಮಾನದಂಡಗಳನ್ನು ರೂಪಿಸುವ ಬಗ್ಗೆ ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.

‘ಅರ್ಹರನ್ನು ಆಯ್ಕೆ ಮಾಡಲು ಸಮಿತಿಯನ್ನು ರಚಿಸಬೇಕು. ಸರ್ಕಾರದ ಮಟ್ಟದಲ್ಲಿ ಇದಕ್ಕೆ  ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !