ಕೊಳಚೆ ಕಂಡು ಮೇಯರ್‌ ಗಂಗಾಂಬಿಕೆ ತಬ್ಬಿಬ್ಬು

7
ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಪರಿಶೀಲನೆ; ಬದಲಾಗದ ಕೆ.ಆರ್‌.ಮಾರುಕಟ್ಟೆ ಸುರಂಗ ಮಾರ್ಗ

ಕೊಳಚೆ ಕಂಡು ಮೇಯರ್‌ ಗಂಗಾಂಬಿಕೆ ತಬ್ಬಿಬ್ಬು

Published:
Updated:
Prajavani

ಬೆಂಗಳೂರು: ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಚರಂಡಿಗಳಲ್ಲಿ ಹರಿಯುತ್ತಿರುವ ಕೊಳಚೆ ನೀರು, ಮೂಗುಮುಚ್ಚುವಂತೆ ಮಾಡುವ ದುರ್ವಾಸನೆ ಮೇಯರ್‌ ಗಂಗಾಂಬಿಕೆ ಅವರೇ ತಬ್ಬಿಬ್ಬಾಗುವಂತೆ ಮಾಡಿತು.

ಇಲ್ಲಿ ರಾಜಕಾಲುವೆ ದುರಸ್ತಿ ಕಾರ್ಯ ಆರಂಭವಾಗಿ ವರ್ಷವೇ ಕಳೆದಿದೆ. ಕಾಮಗಾರಿ ವೇಳೆ ಕೆಲವು ಒಳಚರಂಡಿ ಕಟ್ಟಿಕೊಂಡು ಶೌಚಾಲಯದ ಕೊಳಚೆ ನೀರು ಚರಂಡಿಗಳಲ್ಲೇ ಹರಿಯುತ್ತಿದೆ. ‌ಮೇಯರ್‌ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ಈ ಬಡಾವಣೆಯ ನಿವಾಸಿಗಳು ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ಅವರ ಕೋರಿಕೆ ಮೇರೆಗೆ ಮೇಯರ್‌ ಅವರು ಬುಧವಾರ ಸ್ಥಳ ಪರಿಶೀಲನೆ ನಡೆಸಿದರು.

ಸ್ಥಳಕ್ಕೆ ಜಲಮಂಡಳಿ ಅಧಿಕಾರಿಗಳನ್ನು ಕರೆಸಿದ ಮೇಯರ್‌, ಮಳೆ ನೀರು ಹರಿಯುವ ಚರಂಡಿಗೆ ಒಳಚರಂಡಿಯ ಕೊಳಚೆ ನೀರು ಸೇರುವುದನ್ನು ನಿಲ್ಲಿಸುವಂತೆ ಸೂಚಿಸಿದರು.

ರಾಜಕಾಲುವೆ ದುರಸ್ತಿ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸವಂತೆ ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ‘ಈ ಕಾಮಗಾರಿ ಪೂರ್ಣಗೊಳಿಸಲು ಇನ್ನೂ 2 ತಿಂಗಳು ಕಾಲಾವಕಾಶ ಬೇಕು’ ಎಂದು ಪಾಲಿಕೆ ಅಧಿಕಾರಿ ತಿಳಿಸಿದರು.

‘2 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಮೇಯರ್‌ ಎಚ್ಚರಿಕೆ ನೀಡಿದರು.

ಸಾರಕ್ಕಿ ಕೆರೆಯ ಹೂಳೆತ್ತುವ ಕಾಮಗಾರಿಯನ್ನು ವೀಕ್ಷಿಸಿದ ಮೇಯರ್‌ ಬಳಿಕ ಬನಶಂಕರಿ ಪ್ರದೇಶಕ್ಕೆ ತೆರಳಿದರು. ಅಲ್ಲಿ ಮಾರುಕಟ್ಟೆ ಪಕ್ಕ ಕಸ ರಾಶಿ ಹಾಕಿದ್ದನ್ನು ಕಂಡು ಕೆಂಡಾಮಂಡಲರಾದರು.

ಎರಡು ತಿಂಗಳ ಹಿಂದಷ್ಟೇ ಈ ಪ್ರದೇಶಕ್ಕೆ ಮೇಯರ್‌ ಭೇಟಿ ನೀಡಿದ ಸಂದರ್ಭದಲ್ಲಿ ಮೆಟ್ರೊ ನಿಲ್ದಾಣದ ಬಳಿ ರಸ್ತೆ ಪಕ್ಕ ಕಸ ರಾಶಿ ಹಾಕಿದ್ದು ಕಂಡುಬಂದಿತ್ತು. ಅದನ್ನು ತೆರವುಗೊಳಿಸುವಂತೆ ಸೂಚಿಸಿದ್ದರು. ಈಗ ರಸ್ತೆಯ ಪಕ್ಕದಲ್ಲಿ ಕಸ ಹಾಕುವ ಬದಲು ಮಾರುಕಟ್ಟೆ ಬಳಿ ರಾಶಿ ಹಾಕಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮೇಯರ್‌ ಸೂಚನೆ ಮೇರೆಗೆ ದಕ್ಷಿಣ ವಲಯದ ಜಂಟಿ ಆಯುಕ್ತ ವಿಶ್ವನಾಥ್‌ ಅವರು ಕಸವನ್ನು ತೆರವುಗೊಳಿಸಲು ಕ್ರಮ ಕೈಗೊಂಡರು.

ಬಳಿಕ ಕಲಾಸಿಪಾಳ್ಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದಾಗಲೂ ಕಸ ರಾಶಿ ಬಿದ್ದಿತ್ತು. ಇದು ಕೂಡಾ ಮೇಯರ್‌ ಕೆಂಗಣ್ಣಿಗೆ ಗುರಿಯಾಯಿತು.

‘ಇಲ್ಲಿ ನಿಲ್ಲಿಸಿರುವ ಬಸ್‌ಗಳನ್ನು ಮೊದಲು ತೆರವುಗೊಳಿಸಬೇಕು. ಈ ಬಗ್ಗೆ ನಗರದ ಹೆಚ್ಚುವರಿ ಪೊಲೀಸ್‌ ಆಯುಕ್ತ (ಸಂಚಾರ) ಹರಿಶೇಖರ್‌ ಅವರ ಜೊತೆ ಸಮಾಲೋಚನೆ ನಡೆಸುತ್ತೇನೆ’ ಎಂದು ಮೇಯರ್‌ ತಿಳಿಸಿದರು.

ಬಳಿಕ ಕೆ.ಆರ್‌.ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ಸ್ವಚ್ಛತೆ ಕಾಪಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಿದರು. ಅಲ್ಲಿ ಪಾದಚಾರಿ ಸುರಂಗ ಮಾರ್ಗವು ಶೋಚನೀಯ ಪರಿಸ್ಥಿತಿಯಲ್ಲಿರುವುದನ್ನು ಕಂಡು ಮೇಯರ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 

‘ನಾನು ತಿಂಗಳ ಹಿಂದೆ ಇಲ್ಲಿಗೆ ಭೇಟಿ ನೀಡಿದಾಗಲೂ ಸುರಂಗ ಮಾರ್ಗದ ದುಃಸ್ಥಿತಿ ಹೀಗೆಯೇ ಇತ್ತು. ಸ್ವಲ್ಪವೂ ಬದಲಾವಣೆ ಆಗಿಲ್ಲ. ಇನ್ನು ಮೂರು ದಿನ ಗಡುವು ನೀಡುತ್ತೇನೆ. ಅಷ್ಟರೊಳಗೆ ಇಲ್ಲಿನ ಚಿತ್ರಣ ಬದಲಾಗಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ದಿಢೀರ್‌ ತಪಾಸಣೆ
ಪ್ರತಿ ಬುಧವಾರ ತೆರಿಗೆ ವಸೂಲಿ ಅಭಿಯಾನ ನಡೆಸುವಂತೆ ಮೇಯರ್‌ ತಿಂಗಳ ಹಿಂದೆ ಕಂದಾಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಕಾರ್ಯ ಸಮರ್ಪಕವಾಗಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸುವ ಸಲುವಾಗಿ ಬೇಗೂರು ಕಂದಾಯ ಕಚೇರಿಗೆ ಬುಧವಾರ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು. ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪಟ್ಟಿಯನ್ನು ಕಚೇರಿಯಲ್ಲಿ ಪ್ರದರ್ಶಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 16

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !