ಪ್ರತಿಪಕ್ಷದ ವಿರೋಧದ ನಡುವೆಯೇ ನಿರ್ಣಯ

7
ಕಸ ಗುಡಿಸುವ ಯಂತ್ರ ಖರೀದಿ, ಕಸ ವರ್ಗಾವಣೆ ಕೇಂದ್ರ ಸ್ಥಾಪನೆಗೆ ಒಪ್ಪಿಗೆ

ಪ್ರತಿಪಕ್ಷದ ವಿರೋಧದ ನಡುವೆಯೇ ನಿರ್ಣಯ

Published:
Updated:

ಬೆಂಗಳೂರು: ನಗರದ 50 ಕಡೆ ಕಸ ವರ್ಗಾವಣೆ ಕೇಂದ್ರಗಳನ್ನು ಸ್ಥಾಪಿಸುವ ಪ್ರಸ್ತಾಪಕ್ಕೆ ಹಾಗೂ ಸ್ವಯಂಚಾಲಿತ ಕಸಗುಡಿಸುವ ಯಂತ್ರಗಳ ಖರೀದಿಗೆ ವಿರೋಧ ಪಕ್ಷದ ವಿರೋಧದ ನಡುವೆಯೇ ಪಾಲಿಕೆ ಸಭೆಯಲ್ಲಿ ಮಂಗಳವಾರ ಒಪ್ಪಿಗೆ ನೀಡಲಾಯಿತು.

ನಗರದಲ್ಲಿ ಮಾರುಕಟ್ಟೆಗಳು ವಾರ್ಡ್‌ಗಳಲ್ಲಿ ಸೇರಿ ಒಟ್ಟು 50 ಕಡೆ ಕಸ ವರ್ಗಾವಣೆ ಕೇಂದ್ರಗಳನ್ನು ಸ್ಥಾ‍ಪಿಸುವ ಈ ಕಾಮಗಾರಿಯನ್ನು ಕಮಲ ನಯನ್‌ ತನೇಜ (ಟಿಪಿಎಸ್‌ ಇನ್‌ಫ್ರಾಸ್ಟ್ರಕ್ಚರ್‌) ಸಂಸ್ಥೆಗೆ ವಹಿಸಲು ಬಿಬಿಎಂಪಿ ತೀರ್ಮಾನಿಸಿದೆ. ಈ ಕೇಂದ್ರಗಳ ನಿರ್ವಹಣೆಯನ್ನೂ ಈ ಸಂಸ್ಥೆಗೆ ಗುತ್ತಿಗೆ ನೀಡಲಾಗುತ್ತದೆ. ಇದರ ನಿರ್ವಹಣಾ ವೆಚ್ಚವನ್ನು ಪಾಲಿಕೆಯೇ ಭರಿಸಲಿದೆ.

ಪ್ರಸ್ತುತ ಆಟೊ ಟಿಪ್ಪರ್‌ಗಳಿಂದ ಕಾಂಪ್ಯಾಕ್ಟರ್‌ಗಳಿಗೆ ಕಸವನ್ನು ತುಂಬಿಸಿ ವಿಲೇವಾರಿ ಸ್ಥಳಕ್ಕೆ ಸಾಗಿಸಲಾಗುತ್ತಿದೆ. ಇನ್ನು ದ್ವಿತೀಯ ಹಂತದ ಕಸ ಸಂಗ್ರಹಣೆಗಾಗಿ ಕಸ ವರ್ಗಾವಣೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ. ಈ ಕೇಂದ್ರಗಳಲ್ಲಿ 13  ಟನ್‌ ಸಾಮರ್ಥ್ಯದ ಎರಡು ಸ್ಟೇಷನರಿ ಕಾಂಪ್ಯಾಕ್ಟರ್‌ ಅಳವಡಿಸಲಾಗುತ್ತದೆ. ಅವುಗಳನ್ನು ಹುಕ್‌ಲೋಡರ್‌ಗಳ ಮೂಲಕ ವಿಲೇವಾರಿ ಸ್ಥಳಕ್ಕೆ ಸಾಗಿಸಲಾಗುತ್ತದೆ.

ಮುಖ್ಯ ರಸ್ತೆ ಹಾಗೂ ಉಪಮುಖ್ಯರಸ್ತೆಗಳನ್ನು ಸ್ವಚ್ಛಗೊಳಿಸಲು ಪಾಲಿಕೆ ಸ್ವಯಂಚಾಲಿತ ಕಸ ಗುಡಿಸುವ 17 ಯಂತ್ರಗಳ  ಖರೀದಿಸಲಿದೆ. ಟೆಂಡರ್‌ ಮೊತ್ತಕ್ಕಿಂತೆ ಶೇ 8.95ರಷ್ಟು ಮೊತ್ತವನ್ನು ನಮೂದಿಸಿರುವ ಟಿಪಿಎಸ್‌ ಇನ್‌ಫಾಸ್ಟ್ರಕ್ಚರ್ಸ್‌ ಸಂಸ್ಥೆ ಇದರ ಗುತ್ತಿಗೆ ಪಡೆದಿದೆ. ಯಂತ್ರಗಳ ಖರೀದಿಗೆ ನಗರೋತ್ಥಾನ ಯೋಜನೆಯಡಿ ₹ 23.95 ಕೋಟಿ ಹಣವನ್ನು ಒದಗಿಸಲಾಗಿದೆ. ಐದು ವರ್ಷಗಳು ಈ ಯಂತ್ರಗಳ ನಿರ್ವಹಣೆಗೆ ಒಟ್ಟು ₹ 53.26 ಕೋಟಿ ವಚ್ಚವಾಗಲಿದ್ದು, ಅದನ್ನು ಪಾಲಿಕೆ ಅನುದಾನದಲ್ಲಿ ಭರಿಸಲಾಗುತ್ತದೆ.

‘ಟೆಂಡರ್‌ ಪ್ರಕ್ರಿಯೆಯಲ್ಲಿ ಇದೊಂದೇ ಕಂಪನಿ ಭಾಗವಹಿಸಿತ್ತು. ಈ ಎರಡೂ ಟೆಂಡರ್‌ಗಳನ್ನು ಒಂದೇ ಸಂಸ್ಥೆಗೆ ವಹಿಸಲಾಗಿದೆ. ಈ ಕಂಪನಿಯನ್ನು ನವದೆಹಲಿ ಮಹಾನಗರ ಪಾಲಿಕೆ ಕಪ್ಪುಪಟ್ಟಿಗೆ ಸೇರಿಸಿತ್ತು. ಆದರೂ, ಚರ್ಚೆಗೆ ಅವಕಾಶ ನೀಡದೆಯೇ ಈ ಕಂಪನಿಗೆ ಗುತ್ತಿಗೆ ನೀಡುವ ನಿರ್ಣಯ ಕೈಗೊಂಡಿರುವುದು ಸಂಶಯಕ್ಕೆಡೆಮಾಡಿದೆ’ ಎಂದು ಬಿಜೆಪಿ ಸದಸ್ಯ ಬಿ.ಎಸ್‌.ಸತ್ಯನಾರಾಯಣ ತಿಳಿಸಿದರು.

‘ಬಿಬಿಎಂಪಿ ಮೊದಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ನಡುವೆ ಕಸ ವರ್ಗಾವಣೆ ಕೇಂದ್ರಗಳ ಹಾಗೂ ಕಸ ಗುಡಿಸುವ ನಿರ್ವಹಣೆಗೆ ₹220 ಕೋಟಿಗೂ ಹೆಚ್ಚು ಮೊತ್ತವನ್ನು ಪಾಲಿಕೆ ಭರಿಸಬೇಕು. ಅಷ್ಟೊಂದು ದುಡ್ಡು ಎಲ್ಲಿಂದ ಹೊಂದಿಸುತ್ತಾರೆ’ ಎಂದು ಅವರು ಪ್ರಶ್ನಿಸಿದರು.

‘ಮಾರುಕಟ್ಟೆಗಳಲ್ಲಿ ಹಸಿ ಕಸವೇ ಹೆಚ್ಚು ಉತ್ಪಾದನೆಯಾಗುತ್ತದೆ. ಅಲ್ಲಿ ಕಸ ವರ್ಗಾವಣೆ ಕೇಂದ್ರ ಸ್ಥಾಪಿಸುವುದು ವೈಜ್ಞಾನಿಕವಲ್ಲ’ ಎಂದರು.

‘ಅಭಿವೃದ್ಧಿ ಕಾಮಗಾರಿಗಳಿಗೆ ನಮ್ಮ ವಿರೋಧವಿಲ್ಲ. ಆದರೆ, ಅದರ ಸಾಧಕ ಬಾಧಕ ಬಗ್ಗೆ ಚರ್ಚೆಗೆ ಅವಕಾಶ ನೀಡಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದನ್ನು ಒಪ್ಪಲಾಗದು. ನಾವು ಈ ಬಗ್ಗೆ ಸದನದ ಹೊರಗೂ ಹೋರಾಟ ನಡೆಸುತ್ತೇವೆ’ ಎಂದು ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಪ್ಪುಪಟ್ಟಿಗೆ ಸೇರಿದ ಕಂಪನಿಗೆ ಗುತ್ತಿಗೆ ನೀಡಿಲ್ಲ. ಪಾಲಿಕೆ ನಿರ್ಣಯವನ್ನು ಸರ್ಕಾರಕ್ಕೆ ಕಳುಹಿಸಿಕೊಡುತ್ತೇವೆ. ಅವರು ಇನ್ನೊಂದು ಸುತ್ತಿನ ಪರಿಶೀಲನೆ ನಡೆಸುತ್ತಾರೆ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಇಂದಿರಾ ಕ್ಯಾಂಟೀನ್‌ಗೆ ಸ್ಥಳ ಹುಡುಕಲು ಪಾಲಿಕೆ ಅಧಿಕಾರಿಗಳು ಹೈರಾಣಾಗಿದ್ದರು, ಇನ್ನು ಕಸ ವರ್ಗಾವಣೆ ಕೇಂದ್ರಗಳಿಗೆ 50 ಕಡೆ ಜಾಗವನ್ನು ಎಲ್ಲಿಂದ ಹುಡುಕುತ್ತಾರೆ</p>
-ಪದ್ಮನಾಭ ರೆಡ್ಡಿ
ವಿರೋಧ ಪಕ್ಷದ ನಾಯಕ
 

***

ಅಂಕಿ ಅಂಶ

₹ 256.73 ಕೋಟಿ -ಕಸ ವರ್ಗಾವಣೆ ಕೇಂದ್ರ ಸ್ಥಾಪಿಸುವ ಕಾಮಗಾರಿಗೆ ಪಾಲಿಕೆ ನಿಗದಿ ಪಡಿಸಿದ್ದ ಒಟ್ಟು ಮೊತ್ತ

₹ 246.01 ಕೋಟಿ -ಟಿಪಿಎಸ್‌ ಇನ್‌ಫ್ರಾಸ್ಟ್ರಕ್ಚರ್ಸ್‌ ಸಂಸ್ಥೆ ಟೆಂಡರ್‌ನಲ್ಲಿ ಉಲ್ಲೇಖಿಸಿರುವ ಮೊತ್ತ

₹ 170 ಕೋಟಿ -ಈ ಕೇಂದ್ರಗಳ ನಿರ್ವಹಣೆಗೆ ಪಾಲಿಕೆ ಭರಿಸಬೇಕಾದ ಮೊತ್ತ

1200 ಚದರ ಮೀ -ಕಸ ವರ್ಗಾವಣೆ ಕೇಂದ್ರ ಸ್ಥಾಪಿಸಲು ಬೇಕಾಗುವ ಜಾಗ

 
₹ 69.69 ಕೋಟಿ -17 ಕಸ ಗುಡಿಸುವ ಯಂತ್ರ ಖರೀದಿಗೆ ಪಾಲಿಕೆ ನಿಗದಿ ಪಡಿಸಿದ್ದ ಮೊತ್ತ

₹ 75.92 ಕೋಟಿ -ಟಿಪಿಎಸ್‌ ಸಂಸ್ಥೆ ನಮೂದಿಸಿದ ಮೊತ್ತ

 ***

ಪಾಡ್‌ ಟ್ಯಾಕ್ಸಿ, ಸಾರ್ವಜನಿಕ ಬೈಸಿಕಲ್‌ ಯೋಜನೆಗೆ ಒಪ್ಪಿಗೆ

ಟ್ರಿನಿಟಿ ವೃತ್ತದಿಂದ ವೈಟ್‌ಫೀಲ್ಡ್‌ವರೆಗೆ ಪಾಡ್‌ ಟ್ಯಾಕ್ಸಿ ಸೇವೆ ಆರಂಭಿಸುವ ₹ 6.55 ಕೋಟಿ ವೆಚ್ಚದ ಯೋಜನೆಗೂ ಪಾಲಿಕೆ ಸಭೆ ಒಪ್ಪಿಗೆ ನೀಡಿದೆ. 

ಈ ಟೆಂಡರ್‌ ಪ್ರಕ್ರಿಯೆಯಲ್ಲಿ ಸ್ಮಾರ್ಟ್‌ ಪಸರ್ನಲ್‌ ರ‍್ಯಾಪಿಡ್‌ ಟ್ರಾನ್ಸಿಟ್‌ ಸಿಸ್ಟಮ್‌, ಅಲ್ಟ್ರಾ ಪಿಆರ್‌ಟಿ ಹಾಗೂ ಎಂಬಸಿ ಪ್ರಾಪರ್ಟೀಸ್‌ ಡೆವಲಪರ್ಸ್‌ ಸಂಸ್ಥೆಗಳ ಒಕ್ಕೂಟ ಮಾತ್ರ ಭಾಗವಹಿಸಿತ್ತು. 

ಈ ಯೋಜನೆಗೆ ಸಾರ್ವಜನಿಕರಿಂದ ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಸ್ಥೆಗಳಿಂದ ವಿರೋಧ ವ್ಯಕ್ತವಾಗಿತ್ತು.

ಮೆಟ್ರೊ ನಿಲ್ದಾಣದಿಂದ ಕೊನೆಯ ತಾಣದವರೆಗೆ ಸಂಪರ್ಕ ಕಲ್ಪಿಸಲು ಸಾರ್ವಜನಿಕ ಬೈಸಿಕಲ್‌ ಹಂಚಿಕೆ ವ್ಯವಸ್ಥೆ ಅಭಿವೃದ್ಧಿಪಡಿಸುವ ಹಾಗೂ ಮೆಟ್ರೊ ನಿಲ್ದಾಣಗಳ ಸುತ್ತ ಪಾದಚಾರಿ ಮಾರ್ಗ ಅಭಿವೃದ್ಧಿಪಡಿಸುವ ಯೋಜನೆಗಳಿಗೂ ಒಪ್ಪಿಗೆ ನೀಡಲಾಯಿತು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !