ಬಿಬಿಎಂಪಿ ಸದಸ್ಯೆಯ ಜಾತಿ ಪ್ರಮಾಣಪತ್ರ ರದ್ದು

7
ಕೆಂಪಾಪುರ ಅಗ್ರಹಾರ ವಾರ್ಡ್‌ನಲ್ಲಿ ಪಕ್ಷೇತರರಾಗಿ ಆಯ್ಕೆಯಾಗಿದ್ದ ಗಾಯತ್ರಿ

ಬಿಬಿಎಂಪಿ ಸದಸ್ಯೆಯ ಜಾತಿ ಪ್ರಮಾಣಪತ್ರ ರದ್ದು

Published:
Updated:
Deccan Herald

ಬೆಂಗಳೂರು: ಬಿಬಿಎಂಪಿ ಸದಸ್ಯೆ ಎಂ.ಗಾಯತ್ರಿ ಅವರಿಗೆ ಬೆಂಗಳೂರು ಉತ್ತರ ತಾಲ್ಲೂಕು ತಹಶೀಲ್ದಾರ್‌ ನೀಡಿದ್ದ ‘ನಾಯಕ’  ಜಾತಿ ಪ್ರಮಾಣಪತ್ರವನ್ನು (ಪರಿಶಿಷ್ಟ ಪಂಗಡ) ನಗರ ಜಿಲ್ಲಾಧಿಕಾರಿ ರದ್ದುಪಡಿಸಿದ್ದಾರೆ. ಇದರಿಂದ ಅವರ ಸದಸ್ಯತ್ವ ರದ್ದಾಗುವ ಸಾಧ್ಯತೆ ಇದೆ.

ಗಾಯತ್ರಿ ಅವರು ವಿಜಯನಗರ ವಿಧಾನಸಭಾ ಕ್ಷೇತ್ರದ ಕೆಂಪಾಪುರ ಅಗ್ರಹಾರ (122) ವಾರ್ಡ್‌ನ ಪಕ್ಷೇತರ ಸದಸ್ಯೆಯಾಗಿದ್ದಾರೆ. ಅವರು 2015ರ ಜೂನ್‌ 30ರಂದು ತಹಶೀಲ್ದಾರ್‌ ಅವರಿಂದ ಜಾತಿ ಪ್ರಮಾಣಪತ್ರ ಪಡೆದಿದ್ದರು. ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಅವರು ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ್ದಾರೆ ಎಂದು ಹಂಪಿನಗರದ ಗುರುಪ್ರಸಾದ್‌ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿರುವ ಜಿಲ್ಲಾ ಮಟ್ಟದ ಜಾತಿ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ, ‘ನಿಖರ ದಾಖಲೆ ಲಭ್ಯವಿಲ್ಲದ ಕಾರಣ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಗಾಯತ್ರಿ ಅವರಿಗೆ ಬುದ್ಧಿ ತಿಳಿಯುವ ಮುನ್ನವೇ ತಂದೆ ತಾಯಿ ಮೃತಪಟ್ಟಿದ್ದರು. ಅವರನ್ನು ಅಜ್ಜಿ ಕುಳ್ಳಮ್ಮ ಬೆಳೆಸಿದ್ದರು. ಸೌಭಾಗ್ಯ ಎಂಬುವರ ಮನೆಯಲ್ಲಿ ಕೆಲಸಕ್ಕಿದ್ದ ಕುಳ್ಳಮ್ಮ ಮೃತಪಟ್ಟ ಬಳಿಕ ಗಾಯತ್ರಿ ಅನಾಥರಾಗಿದ್ದರು. ಬಳಿಕ ಸೌಭಾಗ್ಯ ಅವರೇ ಮುಂದೆ ನಿಂತು 2006ರಲ್ಲಿ ಅವರಿಗೆ ಗಣೇಶ್‌ ನಾಯ್ಡು ಜೊತೆ ಅಂತರ್ಜಾತಿ ವಿವಾಹ ಮಾಡಿಸಿದ್ದರು.
‘‌ಗಾಯತ್ರಿ ಅವರು ಕೆಂಪಾಪುರ ಅಗ್ರಹಾರದ ಸಿದ್ಧಲಿಂಗೇಶ್ವರ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ಓದಿದ್ದು, ಶಾಲಾ ದಾಖಲೆಗಳಲ್ಲಿ ಅವರ ಜಾತಿ ‘ನಾಯಕ’ ಎಂದೇ ನಮೂದಾಗಿದೆ. ಶಾಲೆಯವರು ಗಾಯತ್ರಿ ಅವರು ನಕಲಿ ಜಾತಿ ಪ್ರಮಾಣ ಪತ್ರ ಪಡೆಯಲು ನೆರವಾಗಿದ್ದಾರೆ’ ಎಂದು ಆರೋಪಿಸಿ ಗುರುಪ್ರಸಾದ್‌ ಕ್ಷೇತ್ರ ಶಿಕ್ಷಣಾಧಿಕಾರಿಗೆ (ಬಿಇಒ) ದೂರು ನೀಡಿದ್ದರು.

‘ಗಾಯತ್ರಿ ಅವರು ಈ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದನ್ನು ಧೃಡೀಕರಿಸಲು ಸಾಧ್ಯವಾಗುತ್ತಿಲ್ಲ. ನಕಲಿ ಶಾಲಾ ದಾಖಲಾತಿ ಸೃಷ್ಟಿಸಲಾಗಿದೆ’ ಎಂದು ವರದಿ ನೀಡಿದ್ದರು. ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತನಿಖೆ ನಡೆಸಿದಾಗ ಶಾಲೆಯವರು ತಪ್ಪೆಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು.  

‘2015ರ ಬಿಬಿಎಂಪಿ ಚುನಾವಣೆಯಲ್ಲಿ ಕೆಂಪಾಪುರ ಅಗ್ರಹಾರ ವಾರ್ಡ್‌ ಪರಿಶಿಷ್ಟ ಜಾತಿ ಮಹಿಳೆಯರಿಗೆ ಮೀಸಲಾಗಿತ್ತು. ಇಲ್ಲಿಂದ ಆಯ್ಕೆಯಾದ ಸದಸ್ಯರ ಜಾತಿ ಪ್ರಮಾಣಪತ್ರ ರದ್ದಾದರೆ, ಅವರ ಸದಸ್ಯತ್ವವೂ ರದ್ದಾಗಬೇಕು. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ಕ್ರಮಕೈಗೊಳ್ಳಲಿದೆ’ ಎಂದು ಬಿಬಿಎಂಪಿ ಆಯುಕ್ತ  ಮಂಜುನಾಥ ಪ್ರಸಾದ್‌ ತಿಳಿಸಿದರು. 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !