ಸೋಮವಾರ, ಸೆಪ್ಟೆಂಬರ್ 16, 2019
22 °C
ಹಸಿ–ಒಣ ಕಸ ಬೇರ್ಪಡಿಸುವ ಪ್ರಸ್ತಾವ ಕೈಬಿಟ್ಟ ಪಾಲಿಕೆ

ಕಸ ಸಂಗ್ರಹಣೆಗೆ ಪ್ರತ್ಯೇಕ ಟೆಂಡರ್‌ ಇಲ್ಲ

Published:
Updated:
Prajavani

ಬೆಂಗಳೂರು: ಹಸಿ ಮತ್ತು ಒಣ ಕಸ ಸಂಗ್ರಹಣೆಗೆ ಪ್ರತ್ಯೇಕವಾಗಿ ಟೆಂಡರ್‌ ಕರೆಯುವ ಪದ್ಧತಿಯನ್ನು ಕೊನೆಗೊಳಿಸಿ ಎಲ್ಲವನ್ನು ಒಂದೇ ಏಜೆನ್ಸಿಗೆ ಗುತ್ತಿಗೆ ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚಿಂತನೆ ನಡೆಸಿದೆ.

ಮೇಯರ್ ಗಂಗಾಂಬಿಕೆ ಅಧ್ಯಕ್ಷತೆಯ ಘನತ್ಯಾಜ್ಯ ನಿರ್ವಹಣಾ ಸಮಿತಿಯಲ್ಲಿರುವ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಪ್ರತ್ಯೇಕ ಟೆಂಡರ್ ಪದ್ಧತಿ ರದ್ದುಗೊಳಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ.

‘ಹಸಿಕಸ, ಒಣಕಸ ಮತ್ತು ವಾಣಿಜ್ಯ ಕೇಂದ್ರಗಳ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಎಲ್ಲದಕ್ಕೂ ಪ್ರತ್ಯೇಕ ಗುತ್ತಿಗೆದಾರರು ಇದ್ದಾರೆ. ಇದರಿಂದಾಗಿ ಮೇಲುಸ್ತುವಾರಿ ತೊಂದರೆಯಾಗುತ್ತಿದೆ. ಪ್ರತಿನಿತ್ಯ ಮೂವರಿಗೂ ಕರೆ ಮಾಡಿ ಮಾತನಾಡಬೇಕಾದ ಸ್ಥಿತಿ ಇದೆ. ಇದನ್ನು ತಪ್ಪಿಸಲು ಈ ಆಲೋಚನೆ ನಡೆಸಲಾಗಿದೆ’ ಎಂದು ಮೇಯರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಸ ಸಂಗ್ರಹಣೆಯ ವಿಧಾನದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಹಸಿ ಕಸಕ್ಕೆ ಹಸಿರು ಬಣ್ಣದ ವಾಹನ, ಒಣ ಕಸಕ್ಕೆ ಕೆಂಪು ಬಣ್ಣದ ಮತ್ತು ವಾಣಿಜ್ಯ ಕೇಂದ್ರಗಳ ಕಸ ಸಂಗ್ರಹಣೆಗೆ ಹಳದಿ ಬಣ್ಣದ ವಾಹನಗಳೇ ಬರಲಿವೆ. ಆದರೆ, ನಿರ್ವಹಣೆಗೆ ಅನುಕೂಲ ಆಗುವಂತೆ ಒಬ್ಬ ಗುತ್ತಿಗೆದಾರರಿಗೆ ಎಲ್ಲಾ ಜವಾಬ್ದಾರಿ ವಹಿಸುವ ಬಗ್ಗೆ ಆಲೋಚಿಸಲಾಗಿದೆ’ ಎಂದರು.

ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು, ಆಯುಕ್ತರು ಸೇರಿ ನಾಲ್ವರು ಅಧಿಕಾರಿಗಳು ಸಮಿತಿಯಲ್ಲಿ ಇದ್ದಾರೆ. ಲೋಕಸಭೆ ಚುನಾವಣಾ ನೀತಿ ಸಂಹಿತೆ ಇರುವ ಕಾರಣ ಅಧಿಕೃತವಾಗಿ ಸಭೆ ನಡೆಸಿಲ್ಲ. ಮತ ಎಣಿಕೆ ಮುಗಿದ ಬಳಿಕ ಸಭೆ ನಡೆಸಲಾಗುವುದು ಎಂದು ಹೇಳಿದರು.

‘ಗುತ್ತಿಗೆದಾರರ ಒತ್ತಡಕ್ಕೆ ಮಣಿದು ಈ ರೀತಿಯ ಆಲೋಚನೆ ನಡೆಸಲಾಗಿದೆ ಎಂಬುದು ತಪ್ಪು. ರಸ್ತೆಯಲ್ಲಿ ಕಸ ಬಿದ್ದರೆ ಆ ವಾರ್ಡಿನ ಸದಸ್ಯರು ಸಾರ್ವಜನಿಕರಿಂದ ಮಾತು ಕೇಳಬೇಕಾಗುತ್ತದೆ. ಇದನ್ನು ತಪ್ಪಿಸುವುದು ನಮ್ಮ ಉದ್ದೇಶ ಅಷ್ಟೆ’ ಎಂದರು.

Post Comments (+)