ನಗರ ಮಹಾ ಯೋಜನೆಗೆ ಇನ್ನೂ ಸಿಕ್ಕಿಲ್ಲ ಮುಕ್ತಿ

7
ಆರ್‌ಎಂಪಿ 2031: ಕರಡು ಪ್ರಕಟವಾಗಿ ಕಳೆಯಿತು 9 ತಿಂಗಳು l ತಜ್ಞರ ಸಮಿತಿ ಮುಂದುವರಿಕೆ ಕುರಿತು ಗೊಂದಲ

ನಗರ ಮಹಾ ಯೋಜನೆಗೆ ಇನ್ನೂ ಸಿಕ್ಕಿಲ್ಲ ಮುಕ್ತಿ

Published:
Updated:

ಬೆಂಗಳೂರು: ನಗರದ ‘ಪರಿಷ್ಕೃತ ಮಹಾಯೋಜನೆ 2031’ ಕರಡನ್ನು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವೆಬ್‌ಸೈಟ್‌ನಲ್ಲಿ ಪ್ರಕಟಿಸಿ 9 ತಿಂಗಳು ಕಳೆದ ಬಳಿಕವೂ ಸರ್ಕಾರ ಈ ಯೋಜನೆ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ.

ಪ್ರಾಧಿಕಾರವು 2017ರ ನವೆಂಬರ್‌ 25ರಂದು ಯೋಜನೆಯ ಕರಡನ್ನು ವೆಬ್‌ಸೈಟ್‌ನಲ್ಲಿ (www.bdabangalore.org) ಪ್ರಕಟಿಸಿತ್ತು. ಆಕ್ಷೇಪಣೆಗಳನ್ನು ಸಲ್ಲಿಸುವುದಕ್ಕೆ 2018ರ ಜನವರಿ 23ರವರೆಗೆ ಕಾಲಾವಕಾಶ ನೀಡಿತ್ತು. ಸಾರ್ವಜನಿಕರಿಂದ 13,046 ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಇವುಗಳ ಪರಿಶೀಲನೆಗೆ ಬಿಬಿಎಂಪಿ ವಿಶೇಷ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.

ಬಿಡಿಎ ಮಹಾಯೋಜನೆ ಬಗ್ಗೆ ಸಾರ್ವಜನಿಕರು ಎತ್ತಿರುವ ಪ್ರಶ್ನೆಗಳಿಗೆ ಸರಿಯಾದ ಸ್ಪಷ್ಟನೆ ನೀಡದೆಯೇ ಕರಡನ್ನು ಅಂತಿಮಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿ ‘ಸಿಟಿಜನ್ಸ್‌ ಆ್ಯಕ್ಷನ್‌ ಫೋರಂ’ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಹಾಗಾಗಿ ಕರಡು ಅಂತಿಮಗೊಳಿಸುವ ಮುನ್ನ ಸಾರ್ವಜನಿಕರ ಆಕ್ಷೇಪಣೆಗಳನ್ನು ಪರಿಗಣಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು. 

ಬಿಬಿಎಂಪಿ ವಿಶೇಷ ಆಯುಕ್ತರ ನೇತೃತ್ವದ ಸಮಿತಿ ಆಕ್ಷೇಪಣೆಗಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಸಲ್ಲಿಸಲು ಅಂತಿಮ ಸಿದ್ಧತೆ ನಡೆಸಿತ್ತು. ಅಷ್ಟರಲ್ಲಿ, ಯೋಜನೆಯ ಕರಡನ್ನು ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲನೆ ನಡೆಸಲು ಸರ್ಕಾರ 2018ರ ಮಾರ್ಚ್‌ನಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್‌.ಪಾಟೀಲ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಿತ್ತು. ನಿವೃತ್ತ ಐಎಎಸ್‌ ಅಧಿಕಾರಿ ಸಿದ್ಧಯ್ಯ, ಬಿಡಿಎ ಆಯುಕ್ತ, ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆ ನಿರ್ದೇಶಕ, ನಗರ ಯೋಜನೆ ತಜ್ಞ ಆರ್‌.ಕೆ.ಮಿಶ್ರಾ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿತ್ತು. ಬಿಡಿಎ ನಗರ ಯೋಜನಾ ಸದಸ್ಯರು ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿದ್ದರು.

ಸಾರ್ವಜನಿಕರ ಆಕ್ಷೇಪಣೆ ಹಾಗೂ ಸಲಹೆಗಳನ್ನು ಸ್ವೀಕರಿಸಲು ಸಮಿತಿಗೆ ಮತ್ತೆ 30 ದಿನಗಳ ಕಾಲಾವಕಾಶ ನೀಡಲಾ
ಗಿತ್ತು. ಅಚ್ಚರಿಯೆಂದರೆ, ಈ ಸಮಿತಿ ಇದುವರೆಗೂ ಸಭೆಯನ್ನೇ ನಡೆಸಿಲ್ಲ. ಈ ನಡುವೆ ಸದಸ್ಯ ಸಿದ್ದಯ್ಯ ಸಮಿತಿಗೆ ರಾಜೀನಾಮೆ ನೀಡಿದ್ದರು.

ಹೊಸ ಸರ್ಕಾರ ರಚನೆ ಆದ ಬಳಿಕವೂ ಈ ಸಮಿತಿಯನ್ನು ಮುಂದುವರಿಸಲಾಗಿದೆಯೇ, ಇಲ್ಲವೇ ಎಂಬ ಬಗ್ಗೆ ಬಿಡಿಎ ಅಧಿಕಾರಿಗಳಿಗೆ ಮಾತ್ರವಲ್ಲ, ಸಮಿತಿಯಲ್ಲಿರುವವರಿಗೂ ಗೊಂದಲ ಇದೆ.

‘ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದು ನಿಜ. ನಾವು ಕೆಲಸ ಆರಂಭಿಸುವಷ್ಟರಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಆಯಿತು. ಹೊಸ ಸರ್ಕಾರ ರಚನೆ ಆದ ಬಳಿಕ ಸರ್ಕಾರದಿಂದ ನನಗೆ ಯಾವುದೇ ಸ್ಪಷ್ಟ ನಿರ್ದೇಶನ ಬಂದಿಲ್ಲ’ ಎಂದು ಬಿ.ಎಸ್‌.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಯೋಜನೆ ಸಿದ್ಧಪಡಿಸುವ ಪ್ರಕಿಯೆಯನ್ನು ನಾವು ಕ್ರಮಬದ್ಧವಾಗಿ ನಡೆಸಿದ್ದೇವೆ. ನಗರದ ಬೆಳವಣಿಗೆಯ ಸಂಪೂರ್ಣ ಚಿತ್ರಣಗಳನ್ನು ಸಾರ್ವಜನಿಕರಿಗೆ ವಿವರಿಸಿದ್ದೇವೆ. ಈಗ ಇರುವ ಭೂಬಳಕೆ ಕುರಿತ ಮಾಹಿತಿಯನ್ನು ಜನ ಮುಂದಿಟ್ಟು, ಸಲಹೆಗಳನ್ನು ಕೇಳಿದ್ದೇವೆ. ಅವುಗಳನ್ನು ಆಧರಿಸಿಯೇ ಅಂತಿಮ ಕರಡನ್ನು ರೂಪಿಸಿದ್ದೇವೆ. ಬಳಿಕ ಬಂದ ಆಕ್ಷೇಪಣೆಗಳ ಪರಿಶೀಲನೆಯೂ ನಡೆದಿತ್ತು. ನಂತರ ಅವುಗಳನ್ನು ಮತ್ತೊಂದು ಸಮಿತಿಯಿಂದ ಪರಿಶೀಲನೆಗೆ ಒಳಪಡಿಸಲು ಸರ್ಕಾರ ನಿರ್ಧರಿಸಿದೆ. ಯೋಜನೆಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದು ನಮ್ಮ ಕೈಯಲ್ಲಿ ಇಲ್ಲ. ಸರ್ಕಾರದ ಹಂತದಲ್ಲೇ ಈ ಕಾರ್ಯ ಆಗಬೇಕಿದೆ’ ಎಂದು ಬಿಡಿಎ ನಗರ ಯೋಜನೆ ಸದಸ್ಯ ಎಂ.ಎನ್‌.ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

**

‘ಜನರ ಅಭಿಪ್ರಾಯಕ್ಕೆ ಮನ್ನಣೆ ಸಿಗಲಿ’

‘ಮಹಾನಗರ ಯೋಜನಾ ಸಮಿತಿ (ಎಂಪಿಸಿ) ರಚನೆಯಾದ ಬಳಿಕ ಅವರೇ ಪರಿಷ್ಕೃತ ನಗರ ಮಹಾಯೋಜನೆ ಸಿದ್ಧಪಡಿಸಬೇಕು. ಅಧಿಕಾರಿಗಳು ನೀಡಿದ ಕರಡನ್ನು ಜನ ಒಪ್ಪುವುದಲ್ಲ. ವಾರ್ಡ್‌ಮಟ್ಟದಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಅದರ ಪ್ರಕಾರ ಯೋಜನೆ ಸಿದ್ಧಪಡಿಸಬೇಕು ಎಂಬುದು ನಮ್ಮ ಬೇಡಿಕೆ’ ಎಂದು ಸಿಟಿಜನ್ಸ್‌ ಆ್ಯಕ್ಷನ್ ಫೋರಂನ ಅಧ್ಯಕ್ಷ ಡಿ.ಎಸ್‌.ರಾಜಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಎಂಪಿಸಿ ಸಲಹೆ ಆಧರಿಸಿ ಹಾಗೂ ಜನರಿಂದ ಆಕ್ಷೇಪಣೆ ಆಹ್ವಾನಿಸಿದ ಬಳಿಕವೇ ಯೋಜನೆ ಕರಡು ಸಿದ್ಧಪಡಿಸಿದ್ದಾಗಿ ಬಿಡಿಎ ಹೇಳುತ್ತಿದೆ. ಆದರೆ, ಜನರು ನೀಡಿದ ಸಲಹೆಗಳನ್ನು ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗಿದೆಯೇ, ಅವುಗಳನ್ನು ತಿರಸ್ಕರಿಸಿದ್ದರೆ ಅದು ಯಾವ ಕಾರಣಕ್ಕೆ ಎಂಬ ವಿಚಾರದ ಬಗ್ಗೆ ಬಿಡಿಎ ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ. ಈ ಪ್ರಕ್ರಿಯೆಯೂ ಪಾರದರ್ಶಕವಾಗಿ ನಡೆಯಬೇಕು’ ಎಂದು ಅವರು ಒತ್ತಾಯಿಸಿದರು.

**

‘ಪರಿಷ್ಕೃತ ನಗರ ಮಹಾಯೋಜನೆ 2031’ರ ಹಾದಿ

l2016ರ ಡಿಸೆಂಬರ್‌ 16: ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಬೆಂಗಳೂರು ನಗರ ಯೋಜನೆ ಸಮಿತಿ (ಬಿಎಂಪಿಸಿ) ಸಮ್ಮುಖದಲ್ಲಿ ಪರಿಷ್ಕೃತ ನಗರ ಮಹಾಯೋಜನೆ (ಸಿಡಿಪಿ) 2031ರ ಪರಿಷ್ಕರಣೆಯ ಪೂರ್ವತಯಾರಿಯ ಪ್ರಾತ್ಯಕ್ಷಿಕೆ ನೀಡಿದ ಬಿಡಿಎ. ಕರಡು ಸಿದ್ಧಪಡಿಸುವ ಪ್ರಕ್ರಿಯೆಯನ್ನು 2017ರ ಜುಲೈ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸೂಚನೆ. 

* 2016 ಡಿಸೆಂಬರ್‌30: ನಗರದ ಚಿತ್ರಣ 2031ರ ವೇಳೆಗೆ ನಗರದ ಸನ್ನಿವೇಶಗಳು ಹೇಗಿರುತ್ತವೆ? ನಗರದ ಅಭಿವೃದ್ಧಿಗೆ ಏನೆಲ್ಲ ಆಯ್ಕೆಗಳಿವೆ, ಏನೆಲ್ಲ ಸಿದ್ಧತೆ ಅಗತ್ಯ ಎಂಬ ವಿವರ ಬಿಡಿಎ ವೆಬ್‌ಸೈಟ್‌ನಲ್ಲಿ ಪ್ರಕಟ. 

* ಸಾರ್ವಜನಿಕ ಸಲಹೆ ಆಹ್ವಾನಿಸಲು 2017 ಜನವರಿಯಿಂದ 12ರಿಂದ 27ರವರೆಗೆ ಬಿಬಿಎಂಪಿಯ ಎಂಟು ವಲಯಗಳಲ್ಲಿ ಸಭೆ

* ಸಭೆಗಳಲ್ಲಿ ಸಾರ್ವಜನಿಕರಿಂದ 487 ಸಲಹೆಗಳು ಬಂದಿದ್ದವು

* 22 ಮಂದಿ ಇ ಮೇಲ್ ಮೂಲಕ ಸಲಹೆ ನೀಡಿದ್ದರು

* 2017 ಜೂನ್‌ 9: ಪ್ರಾಧಿಕಾರದಲ್ಲಿ ಸಭೆಯಲ್ಲಿ ಯೋಜನೆಯ ಕರಡು ಮಂಡನೆ

* 2017ರ ನವೆಂಬರ್‌ 25: ಯೋಜನೆಯ ಕರಡು ಬಿಡಿಎ ವೆಬ್‌ಸೈಟ್‌ನಲ್ಲಿ ಪ್ರಕಟ; ಸಾರ್ವಜನಿಕರಿಂದ ಸಲಹೆ ಹಾಗೂ ಆಕ್ಷೇಪಣೆ ಸಲ್ಲಿಸಲು 60 ದಿನ ಕಾಲಾವಕಾಶ

* 2018 ಜ. 23: ಆಕ್ಷೇಪಣೆ ಸಲ್ಲಿಕೆ ಅವಧಿ ಮುಕ್ತಾಯ

* 13,046 ಸಾರ್ವಜನಿಕರಿಂದ ಸಲ್ಲಿಕೆಯಾದ ಆಕ್ಷೇಪಣೆಗಳು

* 2018 ಫೆ 12: ಆರ್‌ಎಂಪಿ 2031 ಕುರಿತು ಸಿಟಿಜನ್ಸ್‌ ಆ್ಯಕ್ಷನ್‌ ಫೋರಂ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಬಿಡಿಎಗೆ ನೋಟಿಸ್‌ ನೀಡಿದ ಹೈಕೋರ್ಟ್‌. ಆಕ್ಷೇಪಣೆ ಸರಿಯಾಗಿ ವಿಲೇ ಮಾಡುವಂತೆ ಬಳಿಕ ಹೈಕೋರ್ಟ್‌ ಸೂಚನೆ

* 2018 ಮಾರ್ಚ್‌: ಆಕ್ಷೇಪಣೆ ಮರುಪರಿಶೀಲನೆಗೆ ಬಿ.ಎಸ್‌.ಪಾಟೀಲ ನೇತೃತ್ವದಲ್ಲಿ ಸಮಿತಿ ರಚನೆ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !