ಬಿಡಿಎ ಕಚೇರಿ ಬಳಿ ರೈತರ ಆಹೋರಾತ್ರಿ ಧರಣಿ

ಶುಕ್ರವಾರ, ಮಾರ್ಚ್ 22, 2019
26 °C
ಪಿಆರ್‌ಆರ್‌ ಸಂತ್ರಸ್ತರಿಗೆ ಯೋಗ್ಯ ಪರಿಹಾರ ಕೊಡಿ

ಬಿಡಿಎ ಕಚೇರಿ ಬಳಿ ರೈತರ ಆಹೋರಾತ್ರಿ ಧರಣಿ

Published:
Updated:
Prajavani

ಬೆಂಗಳೂರು: ‘ಪೆರಿಫೆರಲ್‌ ರಿಂಗ್‌ ರಸ್ತೆ (ಪಿಆರ್‌ಆರ್‌) ನಿರ್ಮಿಸುವ ಯೋಜನೆ ಯನ್ನು ಅನುಷ್ಠಾನ ಮಾಡುವ ವೇಳೆ ಭೂಮಿ ಕಳೆದುಕೊಳ್ಳುವ ಸಂತ್ರಸ್ತ ರೈತ ರಿಗೆ ಯೋಗ್ಯ ಪರಿಹಾರ ನೀಡಬೇಕು. ಶಿವರಾಮ ಕಾರಂತ ಬಡಾವಣೆ ನಿರ್ಮಿ ಸುವ ಪ್ರಸ್ತಾಪವನ್ನು ಕೈಬಿಡಬೇಕು’ ಎಂದು ಒತ್ತಾಯಿಸಿ ರೈತರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೇಂದ್ರ ಕಚೇರಿ ಬಳಿ ಮಂಗಳವಾರ ಆಹೋರಾತ್ರಿ ಧರಣಿ ಆರಂಭಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ‘ಪಿಆರ್‌ಆರ್‌ ಯೋಜನೆ ದಶಕಗಳಿಂದ ನನೆಗುದಿಗೆ ಬಿದ್ದಿದೆ. ಯಾವ ಸರ್ಕಾರವೂ ಈ ಬಗ್ಗೆ ಖಚಿತ ನಿರ್ಧಾರ ಕೈಗೊಂಡಿಲ್ಲ. ಈ ಯೋಜನೆಗಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಬಳಿಕ ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಒಂದೋ ಅವರ ಭೂಮಿಗೆ ಯೋಗ್ಯ ಬೆಲೆಯನ್ನು ನೀಡಿ ಭೂಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಬೇಕು. ಇಲ್ಲವಾದರೆ ರೈತರಿಗೆ ಭೂಮಿಯ ಸಂಪೂರ್ಣ ಹಕ್ಕನ್ನು ಬಿಟ್ಟುಕೊಡಬೇಕು’ ಎಂದರು.

‘ಶಿವರಾಮ ಕಾರಂತ ಬಡಾವಣೆಯಲ್ಲಿ ಈಗಾಗಲೇ 709 ಎಕರೆಯನ್ನು ಸರ್ಕಾರ ಡಿನೋಟಿಫೈ ಮಾಡಿದೆ. ಸುಮಾರು 1,300 ಎಕರೆಯಷ್ಟು ಭೂಮಿಯಲ್ಲಿ ಅಭಿವೃದ್ಧಿ ಚಟುವಟಿಕೆ ಹಮ್ಮಿಕೊಳ್ಳಲು ಬಿಡಿಎ ನಿರಾಕ್ಷೇಪಣಾ ಪತ್ರ ನೀಡಿದೆ. 10 ವರ್ಷಕ್ಕೂ ಹೆಚ್ಚು ಕಾಲ ಸುಮ್ಮನಿದ್ದ ಬಿಡಿಎ ಈಗ ಏಕಾಏಕಿ ಸುಪ್ರೀಂ ಕೋರ್ಟ್‌ ತೀರ್ಪಿನ ನೆಪ ಹೇಳಿ ಭೂಸ್ವಾಧೀನ ನಡೆಸಲು ಮುಂದಾದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಶಿವರಾಮ ಕಾರಂತ ಬಡಾವಣೆ ನಿರ್ಮಿಸಲು ಗುರುತಿಸಿರುವ ಗ್ರಾಮಗಳಲ್ಲಿ 25 ಸಾವಿರಕ್ಕೂ ಅಧಿಕ ಹೊಸ ಮನೆಗಳು ತಲೆ ಎತ್ತಿವೆ. 25ಕ್ಕೂ ಅಧಿಕ ಬಡಾವಣೆಗಳು ನಿರ್ಮಾಣಗೊಂಡಿವೆ. ಅವರ ಪರಿಸ್ಥಿತಿ ಏನಾಗಬೇಕು. ಬಿಡಿಎ ಸುಪ್ರೀಂ ಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿದ್ದರಿಂದಲೇ ಈ ಎಲ್ಲ ಅವಾಂತರಗಳು ಸೃಷ್ಟಿಯಾಗಿವೆ. ಈ ಬಡಾವಣೆಯನ್ನು ಯಾವುದೇ ಕಾರಣಕ್ಕೆ ನಿರ್ಮಿಸ
ಬಾರದು’ ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಬಿಡಿಎ ಅಧ್ಯಕ್ಷ ಎಸ್‌.ಟಿ.ಸೋಮಶೇಖರ್‌, ‘ಈ ಎರಡೂ ಯೋಜನೆಗಳ ಬಗ್ಗೆ ನಿರ್ಣಯ ಕೈಗೊಳ್ಳುವ ಅಧಿಕಾರ ಬಿಡಿಎಗೆ ಇಲ್ಲ. ಸರ್ಕಾರವೇ ಈ ಬಗ್ಗೆ ನಿರ್ಧಾರ ತಳೆಯಬೇಕು. ನಿಮ್ಮ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಗಮನಕ್ಕೆ ತರುತ್ತೇನೆ’ ಎಂದು ಭರವಸೆ ನೀಡಿದರು.  ಧರಣಿ ಕೈಬಿಡುವಂತೆ ಮನವಿ ಮಾಡಿದರು. ಅವ ರಿಂದ ಖಚಿತ ಭರವಸೆ ಸಿಗದ ಕಾರಣ ಧರಣಿ ಕೈಬಿಡಲು ರೈತರ ಮುಖಂಡರು ಒಪ್ಪಲಿಲ್ಲ.

‘ಪಿಆರ್‌ಆರ್‌ ಯೋಜನೆಗೆ ಈ ವರ್ಷ ₹2,500 ಕೋಟಿ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಬಜೆಟ್‌ನಲ್ಲಿ ಕೇವಲ ₹ 1 ಸಾವಿರ ಕೋಟಿ ಮೀಸಲಿಟ್ಟಿದೆ. ಈ ಯೋಜನೆಗೆ ಜಮೀನು ಬಿಟ್ಟುಕೊಡುವ ಸಂತ್ರಸ್ತರಿಗೆ ಪರಿಹಾರ ನೀಡಲು ಇಷ್ಟು ಮೊತ್ತ ಸಾಲದು’ ಎಂದು ರೈತ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.ಮುಖಂಡರಾದ ಶಂಕರ್‌, ರಘು, ಜಯರಾಂ ಯಲ್ಲೇಶಪ್ಪ ಧರಣಿಯಲ್ಲಿ ಭಾಗವಹಿಸಿದ್ದರು.

 

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರ ಜೊತೆ ರೈತರು ಸಭೆ ನಡೆಸುವುದಕ್ಕೆ ವ್ಯವಸ್ಥೆ ಮಾಡುತ್ತೇನೆ
-ಎಸ್‌.ಟಿ.ಸೋಮಶೇಖರ,  ಬಿಡಿಎ ಅಧ್ಯಕ್ಷ

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ನಮ್ಮ ಬೇಡಿಕೆ ಈಡೇರಿಸುವ ಬಗ್ಗೆ ಖಚಿತ ಭರವಸೆ ನೀಡದ ಹೊರತು ನಾವು ಧರಣಿ ಕೈಬಿಡುವುದಿಲ್ಲ
- ಕೋಡಿಹಳ್ಳಿ ಚಂದ್ರಶೇಖರ್, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !