ನೌಕರರ ವಿರುದ್ಧ ಕ್ರಮಕ್ಕೆ ಮೀನಮೇಷ

7
ಬಿಡಿಎ: ತಾಯಿ, ಮಗನಿಗೆ 13 ಬದಲಿ ನಿವೇಶನ ಅಕ್ರಮ ಹಂಚಿಕೆ ಪ್ರಕರಣ

ನೌಕರರ ವಿರುದ್ಧ ಕ್ರಮಕ್ಕೆ ಮೀನಮೇಷ

Published:
Updated:
ಬಿಡಿಎ

ಬೆಂಗಳೂರು: ₹10.24 ಕೋಟಿ ಪಾವತಿಸಿಕೊಳ್ಳದೆಯೇ ತಾಯಿ ಮತ್ತು ಮಗನಿಗೆ 13 ಬದಲಿ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರುವ ಪ್ರಕರಣ ಸಂಬಂಧ ನೌಕರ ವೆಂಕಟರಮಣಪ್ಪ ಹಾಗೂ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರ ಕೆ.ರಾಜೇಂದ್ರ ಕುಮಾರ್‌ ವಿರುದ್ಧ ಕ್ರಮ ಕೈಗೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮೀನಮೇಷ ಎಣಿಸುತ್ತಿದೆ.

ಇವರಿಬ್ಬರ ಹಾಗೂ ಮಧ್ಯವರ್ತಿಗಳ ವಿರುದ್ಧ ಬಿಎಂಟಿಎಫ್‌ನಲ್ಲಿ ಇದೇ ಜೂನ್‌ 22ರಂದು ಎಫ್‌ಐಆರ್‌ ದಾಖಲಾಗಿತ್ತು. ಇದಾಗಿ 15 ದಿನಗಳು ಕಳೆದಿವೆ. ಅವರಿಬ್ಬರೂ ಈಗಲೂ ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ.

ಈ ಅಕ್ರಮದ ಬಗ್ಗೆ ಇದೇ ಜೂನ್‌ 24ರಂದು ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾದ ಬಳಿಕ ಉಪಮುಖ್ಯಮಂತ್ರಿ ಕಚೇರಿಯು ಸಮಗ್ರ ಮಾಹಿತಿಯನ್ನು ಕೇಳಿತ್ತು.

ವೆಂಕಟರಮಣಪ್ಪ ಅವರು ಪ್ರಾಧಿಕಾರದ ಕಚೇರಿಯಲ್ಲಿ ಟೆಲಿಪೋನ್‌ ಆಪರೇಟರ್‌ ಆಗಿದ್ದಾಗ ಮೇಲಧಿಕಾರಿಯ ಅನುಮತಿ ಪಡೆಯದೆಯೇ ಕಚೇರಿಯ ಮೊಬೈಲ್‌ ಬಳಸಿದ ಪ್ರಕರಣ ಸಂಬಂಧ 2010ರಲ್ಲಿ ಅಮಾನತ್ತಾಗಿದ್ದರು. ಲೋಕಾಯುಕ್ತದ ಬೆಂಗಳೂರು ಸೂಪರಿಂಟೆಂಡೆಂಟ್‌  ಹೆಸರನ್ನು ದುರ್ಬಳಕೆ ಮಾಡಿಕೊಂಡು ಅವರು ಕಚೇರಿಯ ಮೊಬೈಲ್‌ನಲ್ಲಿ ಕರೆ ಮಾಡಿರುವುದು ವಿಚಾರಣೆ ವೇಳೆ ದೃಢಪಟ್ಟಿದ್ದರಿಂದ ಇವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿತ್ತು.

ರಾಜೇಂದ್ರ ಅವರು ಈ ಹಿಂದೆ ಉಪಕಾರ್ಯದರ್ಶಿ–1 (ಸಿ.ಎ) ವಿಭಾಗದಲ್ಲಿ ಮೇಲ್ವಿಚಾರಕರಾಗಿದ್ದರು. 2017ರ ಡಿಸೆಂಬರ್‌ನಲ್ಲಿ ನಿವೃತ್ತರಾಗಿದ್ದ ಅವರನ್ನು ಪ್ರಾಧಿಕಾರವು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿತ್ತು. ನಿವೃತ್ತ ನೌಕರರನ್ನು ಪುನರ್ ನೇಮಕ ಮಾಡಿಕೊಳ್ಳಬಾರದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ 2016ರ ಫೆಬ್ರುವರಿ 29ರಲ್ಲಿ ಸುತ್ತೋಲೆ ಹೊರಡಿಸಿತ್ತು. ಅದನ್ನು ಉಲ್ಲೇಖಿಸಿ ಪ್ರಾಧಿಕಾರದ ಆಯುಕ್ತರು ಅದೇ ವರ್ಷ ಏಪ್ರಿಲ್‌ 6ರಲ್ಲಿ ಮತ್ತೊಂದು ಸುತ್ತೋಲೆ ಹೊರಡಿಸಿದ್ದರು. ರಾಜೇಂದ್ರ ಅವರನ್ನು ಪುನರ್‌ ನೇಮಕ ಮಾಡಿಕೊಳ್ಳುವಾಗ ಈ ಸುತ್ತೋಲೆಯನ್ನು ಕಡೆಗಣಿಸಲಾಗಿತ್ತು.

ಪ್ರಕರಣವೇನು?
ಪ್ರಾಧಿಕಾರವು ಯಶವಂತಪುರದಲ್ಲಿ 38 ಎಕರೆ 9 ಗುಂಟೆ ಸ್ವಾಧೀನಪಡಿಸಿಕೊಂಡು 1962ರ ನವೆಂಬರ್‌ 5ರಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ (ಎಪಿಎಂಸಿ) ಹಂಚಿಕೆ ಮಾಡಿತ್ತು. ಇಲ್ಲಿನ 32 ಗುಂಟೆಯನ್ನು ರಾಮರಾವ್‌ ಎಂಬುವರಿಗೆ ಹಂಚಿಕೆ ಮಾಡಿತ್ತು. ಆದರೆ, ಈ ಸ್ಥಳದಲ್ಲಿ ಎಪಿಎಂಸಿಯು ರಸ್ತೆ ಹಾಗೂ ಮಳಿಗೆಗಳನ್ನು ನಿರ್ಮಿಸಿತ್ತು. ‘ಮಂಜೂರಾದ ಜಾಗ ಅತಿಕ್ರಮಣವಾಗಿದೆ’ ಎಂದು ಆರೋಪಿಸಿ ರಾಮರಾವ್‌ ಪತ್ನಿ ಕಮಲಾಬಾಯಿ ಅವರು ವಿಧಾನಪರಿಷತ್ತಿನ ಅರ್ಜಿಗಳ ಸಮಿತಿಗೆ ದೂರು ನೀಡಿದ್ದರು.

ಎಪಿಎಂಸಿಯಿಂದ ₹10.24 ಕೋಟಿ ಪಾವತಿಸಿಕೊಳ್ಳದೆ ಹಾಗೂ ಯಾವುದೇ ಸರ್ಕಾರಿ ಆದೇಶ ಇಲ್ಲದೆ ಬಿಡಿಎ ಅಧಿಕಾರಿಗಳು 13 ಬದಲಿ ನಿವೇಶನಗಳನ್ನು 2017ರ ಜುಲೈ 18ರಂದು ಕಮಲಾಬಾಯಿ ಮತ್ತು ಅವರ ಮಗನ ಹೆಸರಿಗೆ ನೋಂದಣಿ ಮಾಡಿಕೊಟ್ಟಿದ್ದರು.

‘ಈ ಜಾಗದ ಮಾರುಕಟ್ಟೆ ಮೌಲ್ಯ ₹30 ಕೋಟಿಯಷ್ಟಿದೆ. ಆದರೆ, ಕ್ರಯಪತ್ರ ಮಾಡಿಕೊಡುವಾಗ ಬಿಡಿಎ ನಯಾಪೈಸೆ ಕಟ್ಟಿಸಿಕೊಂಡಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಪ್ರಾಧಿಕಾರದ ನಿವೃತ್ತ ನೌಕರ ಚಿಕ್ಕಯ್ಯ ಅವರು ಬಿಎಂಟಿಎಫ್‌ಗೆ ದೂರು ನೀಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !