ಮಾಲೀಕತ್ವ ಬಿಟ್ಟುಕೊಡಲು ಬಿಡಿಎ ಚಿಂತನೆ

7
ಸಿ.ಎ ನಿವೇಶನ: ವಿಧಾನಪರಿಷತ್ತಿನಲ್ಲಿ ಡಿಸಿಎಂ ಜಿ.ಪರಮೇಶ್ವರ ಹೇಳಿಕೆ

ಮಾಲೀಕತ್ವ ಬಿಟ್ಟುಕೊಡಲು ಬಿಡಿಎ ಚಿಂತನೆ

Published:
Updated:

ಬೆಳಗಾವಿ: ’ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿ ಭೋಗ್ಯಕ್ಕೆ ನೀಡಿರುವ ನಾಗರಿಕ ಮೂಲಸೌಕರ್ಯ (ಸಿ.ಎ) ನಿವೇಶನಗಳ ಮಾಲೀಕತ್ವವನ್ನು ಗುತ್ತಿಗೆಗೆ ಪಡೆದಿರುವ ಸಂಸ್ಥೆಗಳಿಗೆ ಬಿಟ್ಟುಕೊಡುವ ಚಿಂತನೆ ಇದೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಜಿ.ಪರಮೇಶ್ವರ ತಿಳಿಸಿದರು.

ವಿಧಾನಪರಿಷತ್ತಿನಲ್ಲಿ ಮಂಗಳವಾರ ಕಾಂಗ್ರೆಸ್‌ನ ಎಂ.ಸಿ.ವೇಣುಗೋಪಾಲ್‌ ಅವರ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಅವರು ಈ ಬಗ್ಗೆ ಪ್ರಸ್ತಾಪಿಸಿದರು.‌

‘ಪ್ರಾಧಿಕಾರವು ಸಿ.ಎ ನಿವೇಶನಗಳನ್ನು 99 ವರ್ಷಗಳ ಅವಧಿಗೆ ಭೋಗ್ಯಕ್ಕೆ ನೀಡುತ್ತಿತ್ತು. ಕೆಲವು ವರ್ಷಗಳ ಹಿಂದೆ ಭೋಗ್ಯದ ಅವಧಿಯನ್ನು 30 ವರ್ಷಗಳಿಗೆ ಇಳಿಸಲಾಗಿದೆ. ಭೋಗ್ಯದ ಅವಧಿ ಮುಗಿದ ಬಳಿಕವೂ ಈ ನಿವೇಶನಗಳನ್ನು ಹಿಂದಕ್ಕೆ ಪಡೆಯುವ ಸ್ಥಿತಿಯಲ್ಲಿ ಬಿಡಿಎ ಇಲ್ಲ. ನಿವೇಶನವನ್ನು ಪಡೆದ ಅನೇಕರು ಅದರ ಸಂಪೂರ್ಣ ಮಾಲೀಕತ್ವವನ್ನು ಬಿಟ್ಟುಕೊಡುವಂತೆ ಬೇಡಿಕೆ ಮುಂದಿಟ್ಟಿದ್ದಾರೆ. ಈ ನಿವೇಶನಗಳ ಈಗಿನ ಮಾರುಕಟ್ಟೆ ಬೆಲೆಯನ್ನು ಪಡೆದು, ಅದನ್ನು ಭೋಗ್ಯಕ್ಕೆ ಪಡೆದವರ ಹೆಸರಿಗೆ ಕ್ರಯಪತ್ರ ಮಾಡಿಕೊಡುವ ಸಲಹೆಯನ್ನು ಅಧಿಕಾರಿಗಳು ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ಬಿಡಿಎ ಎಲ್ಲೆಲ್ಲಿ ಸಿ.ಎ ನಿವೇಶನಗಳನ್ನು ಹೊಂದಿದೆ, ಅವುಗಳನ್ನು ಯಾವ ಸಂಸ್ಥೆಗೆ ನೀಡಲಾಗಿದೆ ಎಂಬ ಬಗ್ಗೆ ಪರಿಷ್ಕೃತ ನಗರ ಮಹಾಯೋಜನೆಯಲ್ಲಿ ಉಲ್ಲೇಖಿಸಬೇಕು ಎಂದು ಕಾಂಗ್ರೆಸ್‌ ಸದಸ್ಯ ಪಿ.ಆರ್‌.ರಮೇಶ್ ಸಲಹೆ ನೀಡಿದರು.

‘ಬಿಡಿಎ ಸ್ವತ್ತುಗಳು ಎಲ್ಲೆಲ್ಲಿವೆ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಇದರ ವರದಿ ಬಂದ ಬಳಿಕ ಈ ಸಲಹೆ ಅನುಷ್ಠಾನದ ಬಗ್ಗೆ ಚಿಂತಿಸಲಾಗುವುದು’ ಎಂದು ಸಚಿವರು ಉತ್ತರಿಸಿದರು. 

ಬಿಡಿಎ ಸಿ.ಎ. ನಿವೇಶನಗಳಲ್ಲಿ ಕೆಲವನ್ನು ಬೀದಿ ಬದಿ ವ್ಯಾಪಾರಿಗಳಿಗೆ ಮಾರುಕಟ್ಟೆ ನಿರ್ಮಿಸಲು ಬಳಸಬೇಕು ಎಂದು ಬಿಜೆಪಿಯ ಆಯನೂರು ಮಂಜುನಾಥ್‌ ಸಲಹೆ ನೀಡಿದರು.

‘ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಸಚಿವರು ಭರವಸೆ ನೀಡಿದರು.

‘ಅನ್ಯ ಉದ್ದೇಶಕ್ಕೆ ಬಳಸಿದರೆ ಗುತ್ತಿಗೆ ರದ್ದು’
‘ಸಿ.ಎ ನಿವೇಶನಗಳನ್ನು ಯಾವ ಉದ್ದೇಶಕ್ಕೆ ನೀಡಿರುತ್ತೇವೆಯೋ ಅದೇ ಉದ್ದೇಶಕ್ಕೆ ಬಳಸಿಕೊಳ್ಳಬೇಕು. ಅದನ್ನು ಬಿಟ್ಟು ಬೇರೆ ಉದ್ದೇಶಕ್ಕೆ ಬಳಸಿದರೆ ಗುತ್ತಿಗೆಯನ್ನು ರದ್ದುಪಡಿಸಿ ನಿವೇಶನವನ್ನು ಹಿಂದಕ್ಕೆ ಪಡೆಯುತ್ತೇವೆ’ ಎಂದು ಸಚಿವ ಪರಮೇಶ್ವರ ಸ್ಪಷ್ಟಪಡಿಸಿದರು.

‘ನಿಯಮ ಮಾರ್ಪಾಡು’
ಸಿ.ಎ. ನಿವೇಶನಗಳ ಹಂಚಿಕೆಗೆ ಸಂಬಂಧಿಸಿದ ನಿಯಮಗಳನ್ನು ಮಾರ್ಪಾಡು ಮಾಡಲು ಬಿಡಿಎ ನಿರ್ಧರಿಸಿದೆ. ಶೀಘ್ರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪರಮೇಶ್ವರ ತಿಳಿಸಿದರು.

*
ಸಿ.ಎ ನಿವೇಶನದಲ್ಲಿ ಕೆಲವು ಸಂಸ್ಥೆಗಳು ಮನರಂಜನಾ ಕ್ಲಬ್‌ಗಳನ್ನು ನಡೆಸುತ್ತಿವೆ. ಲಕ್ಷಗಟ್ಟಲೆ ಶುಲ್ಕ ವಸೂಲಿ ಮಾಡುತ್ತಿವೆ. ಇಂತಹ ನಿವೇಶನಗಳನ್ನು ಹಿಂಪಡೆಯಬೇಕು.
-ಎಂ.ಸಿ.ವೇಣುಗೋಪಾಲ್‌, ವಿಧಾನ ಪರಿಷತ್‌ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !