ಅಮ್ಮನಾಗುವ ಮುನ್ನವೇ ಇರಲಿ ಎಚ್ಚರ

7

ಅಮ್ಮನಾಗುವ ಮುನ್ನವೇ ಇರಲಿ ಎಚ್ಚರ

Published:
Updated:

ಶಿಶುಗಳಲ್ಲಿ ಕಾಣಿಸಿಕೊಳ್ಳುವ ಎಲ್ಲಾ ರೀತಿಯ ಜನನ ದೋಷಗಳನ್ನು ನಿವಾರಿಸಲು ಸಾಧ್ಯವಿಲ್ಲ ಎಂಬುದು ತಿಳಿದಿರುವ ಸಂಗತಿ. ಆದರೆ, ಮಹಿಳೆಯು ತಾನು ತಾಯಿಯಾಗುವ ಮುನ್ನ ಇಲ್ಲವೇ ಗರ್ಭ ಧರಿಸಿದಾಗ ಕೆಲವು ಆರೋಗ್ಯಕರ ಜೀವನಶೈಲಿಗಳನ್ನು ಅನುಸರಿಸಿದರೆ ಆರೋಗ್ಯವಂತ ಮಗುವನ್ನು ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದನ್ನೂ ಮರೆಯುವಂತಿಲ್ಲ. ಇದಕ್ಕೆಂದೇ ವೈದ್ಯರು ‘ಪ್ಯಾಕ್ಟ್’ (PACT) (ಪ್ಲಾನ್ ಅಹೆಡ್ -ಮುನ್ನವೇ ಯೋಜನೆ ರೂಪಿಸಿ,‌

ಅವಾಯ್ಡ್ ಹಾರ್ಮ್‌ಪುಲ್‌ ಸಬ್‌ಸ್ಟನ್ಸಸ್‌ –

ಹಾನಿಕಾರಕ ಅಂಶಗಳಿಂದ ದೂರವಿರಿ,

ಚೂಸ್‌ ಹೆಲ್ದಿ ಲೈಫ್‌ಸ್ಟೈಲ್‌ – ಆರೋಗ್ಯವಂತ ಜೀವನಶೈಲಿ ಆರಿಸಿಕೊಳ್ಳಿ, ಟಾಕ್ ವಿತ್ ಯುವರ್ ಹೆಲ್ತ್‌ಕೇರ್ ಪ್ರೊವೈಡರ್- ನಿಮ್ಮ ವೈದ್ಯರೊಂದಿಗೆ ಚರ್ಚಿಸಿ) ಸೂತ್ರವನ್ನು ಅನುಸರಿಸುವಂತೆ ಸಲಹೆ ನೀಡುತ್ತಾರೆ.

1. ಮುನ್ನವೇ ಯೋಜನೆ ರೂಪಿಸಿ: ತಾಯಿಯಾಗಲು ಬಯಸುವವರು ಪ್ರತಿದಿನವೂ 400 ಮೈಕ್ರೊ ಗ್ರಾಂನಷ್ಟು ಫೋಲಿಕ್ ಆಸಿಡ್ ಅನ್ನು ಸೇವಿಸುವುದು ತುಂಬಾ ಸಹಕಾರಿ. ಫೋಲಿಕ್ ಆಸಿಡ್ ಎಂದರೆ ವಿಟಮಿನ್ ಬಿ. ಒಬ್ಬ ಮಹಿಳೆಗೆ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಫೋಲಿಕ್ ಆಸಿಡ್ ಅಂಶ ಇದೆ ಎಂದಾದರೆ, ಅದರಲ್ಲೂ ಗರ್ಭ ಧರಿಸುವ ಒಂದು ತಿಂಗಳ ಮುನ್ನ ಹಾಗೂ ಗರ್ಭಧಾರಣೆ ಸಮಯದಲ್ಲಿ ಈ ಅಂಶ ಸಾಕಷ್ಟಿದ್ದರೆ, ಮಗುವಿನ ಮೆದುಳು ಹಾಗೂ ಬೆನ್ನುಹುರಿಯಲ್ಲಿ ಉಂಟಾಗಬಹುದಾದ ಗಂಭೀರ ಜನನ ದೋಷ -ಅನೆನ್ಸೆಫಲಿ ಹಾಗೂ ಸ್ಪೈನಾ ಬೈಫಿಡ ಸಮಸ್ಯೆಯನ್ನು ತಡೆಗಟ್ಟಲು ಸಾಧ್ಯವಿದೆ. ಫೊಲೇಟ್ ಅಂಶ ಹೆಚ್ಚಿರುವ, ಜೊತೆಗೆ ದೇಹವನ್ನು ಬಲಪಡಿಸುವ ಆಹಾರ ಸೇವನೆಯಿಂದ ಫೋಲಿಕ್ ಆಸಿಡ್ ಅಂಶವನ್ನು ಪಡೆದುಕೊಳ್ಳಬಹುದು.

ಆಗಾಗ್ಗೆ ವೈದ್ಯರು ಅಥವಾ ಪ್ರಸೂತಿತಜ್ಞರನ್ನು ಭೇಟಿ ಮಾಡುತ್ತಿರಿ. ಮಗುವಿನ ನಿರೀಕ್ಷೆಯಿದ್ದರೆ, ಮುನ್ನವೇ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು. ತಾಯಿಯಾಗುತ್ತಿರುವುದು ನಿಶ್ಚಯವಾಗುತ್ತಿದ್ದಂತೆ, ಅದಕ್ಕೆ ತಕ್ಕಂತೆ ಅವಶ್ಯಕ ಆರೈಕೆಯೂ ಅಗತ್ಯ.

2. ಹಾನಿಕಾರಕ ಅಂಶಗಳಿಂದ ದೂರವಿರಿ:

ಮದ್ಯಪಾನ: ಗರ್ಭಧಾರಣೆಯ ಯಾವುದೇ ಹಂತದಲ್ಲೂ ಮಹಿಳೆ ಮದ್ಯಪಾನದಿಂದ ದೂರವುಳಿಯುವುದು ಕಡ್ಡಾಯ. ಈ ಅವಧಿಯಲ್ಲಿ ಮದ್ಯಪಾನ ಮಾಡಿದರೆ, ರಕ್ತನಾಳಗಳಿಂದ ಹೊಕ್ಕಳಿನ ಮೂಲಕ, ಅದು ಬೆಳವಣಿಗೆ ಹೊಂದುತ್ತಿರುವ ಮಗುವನ್ನು ಸೇರುತ್ತದೆ. ಗರ್ಭಧಾರಣೆಗೆ ಮುನ್ನ ಅಥವಾ ಗರ್ಭ ಧರಿಸಿದ ಸಮಯ ಯಾವುದೇ ಪ್ರಮಾಣದಲ್ಲೂ ಮದ್ಯ ಸೇವನೆ ಸಲ್ಲದು. ವೈನ್ ಮತ್ತು ಬಿಯರ್ ಒಳಗೊಂಡಂತೆ ಯಾವುದೇ ಪ್ರಕಾರದ ಮದ್ಯವೂ ಈ ಅವಧಿಯಲ್ಲಿ ಹಾನಿಕಾರಕವೇ.

ಇದರಿಂದ ಗರ್ಭಪಾತ, ಮಗುವಿನ ಕುಂಠಿತ ಬೆಳವಣಿಗೆ, ಜೀವನವಿಡೀ ದೈಹಿಕ, ನಡವಳಿಕೆ ಹಾಗೂ ಬೌದ್ಧಿಕ ಅಸಾಮರ್ಥ್ಯಕ್ಕೆ ಕಾರಣವಾಗಬಹುದು. ಮಗುವಿನಲ್ಲಿನ ಈ ಅಸಾಮರ್ಥ್ಯಕ್ಕೂ, ಗರ್ಭಧಾರಣೆ ಅವಧಿಯಲ್ಲಿ ತಾಯಿ ಮದ್ಯ ಸೇವಿಸಿದ್ದಕ್ಕೂ ಇರಬಹುದಾದ ಸಂಬಂಧವನ್ನೇ ವೈದ್ಯರು ಫೆಟಲ್ ಆಲ್ಕೊಹಾಲ್ ಸ್ಪೆಕ್ಟ್ರಮ್ ಡಿಸಾರ್ಡರ್ (ಎಫ್‍ಎಎಸ್ಡಿ) ಎಂದು ಕರೆಯುತ್ತಾರೆ.

ಧೂಮಪಾನ: ಗರ್ಭಧರಿಸಿದ ಅವಧಿಯಲ್ಲಿ ಧೂಮಪಾನ ಮಾಡಿದರೆ ಅವಧಿಗೂ ಮುನ್ನವೇ ಮಗು ಜನಿಸುವ ಸಂಭವವಿರುತ್ತದೆ. ಸೀಳು ತುಟಿಯಂಥ ಸಮಸ್ಯೆಯೂ ಕಾಣಿಸಿಕೊಳ್ಳಬಹುದು. ಮಿತಿಮೀರಿದರೆ ಶಿಶು ಮರಣವೂ ಸಂಭವಿಸಬಹುದು. ಈ ಸಮಯದಲ್ಲಿ ಧೂಮಪಾನಿಗಳ ಸನಿಹವಿರುವುದೂ ಅಪಾಯ ತರುತ್ತದೆ. ಗರ್ಭಧಾರಣೆಗೂ ಮುನ್ನವೇ ಧೂಮಪಾನ ತ್ಯಜಿಸುವುದು ಉತ್ತಮ. ಈಗಾಗಲೇ ಗರ್ಭಿಣಿಯಾಗಿದ್ದರೆ, ಎಷ್ಟು ಸಾಧ್ಯವೋ ಅಷ್ಟು ಬೇಗ ಧೂಮಪಾನ ಬಿಡುವುದು ಮಗುವಿನ ಆರೋಗ್ಯಕ್ಕೆ ಒಳಿತು.

 ಮಾದಕವ್ಯಸನ: ಗರ್ಭಧಾರಣೆ ಅವಧಿಯಲ್ಲಿನ ಮಾದಕ ವ್ಯಸನ, ಕಡಿಮೆ ತೂಕದ ಮಗುವಿನ ಜನನಕ್ಕೆ ದಾರಿ. ಜೊತೆಗೆ ಅವಧಿಗೂ ಮುನ್ನ ಮಗು ಜನಿಸುತ್ತದೆ. ಗರ್ಭ ಧರಿಸಿದಾಗ ಕೆಲವೆಡೆ ಕೆಲ ಪ್ರಕಾರದ ಮಾದಕವಸ್ತುಗಳನ್ನು ಸೇವಿಸುವ ರೂಢಿಯಿದೆ. ಆದರೆ ಅದು ಅಧಿಕೃತವಾಗಿದ್ದರೂ, ಚಿಕಿತ್ಸೆ ಸಂಬಂಧಿ ಸೇವಿಸುತ್ತಿದ್ದರೂ ಬದಲಿ ಔಷಧದ ಕುರಿತು ವೈದ್ಯರ ಸಲಹೆ ಪಡೆಯುವುದು ಉತ್ತಮ.

ಸೋಂಕಿನಿಂದ ದೂರವುಳಿಯಿರಿ: ಗರ್ಭಧಾರಣೆ ಸಮಯ ಬಹುಬೇಗ ಸೋಕುವ ಕೆಲವು ಸೋಂಕುಗಳು, ಬೆಳೆಯುತ್ತಿರುವ ಮಗುವಿಗೆ ಹಾನಿಕಾರಕ. ಇವೇ ಮಗುವಿನಲ್ಲಿ ಕೆಲವು ಜನನ ದೋಷಗಳಿಗೆ ದಾರಿ ಮಾಡಿಕೊಡಬಹುದು. ಆದ್ದರಿಂದ ಸೋಂಕನ್ನು ಹತ್ತಿರ ಸುಳಿಯದಂತೆ ಎಚ್ಚರವಹಿಸಿ.

3. ಆರೋಗ್ಯಕರ ಜೀವನಶೈಲಿಯ ಆಯ್ಕೆಯಿರಲಿ:

ಮಧುಮೇಹ ನಿಯಂತ್ರಣ: ಗರ್ಭಧಾರಣೆ ಸಮಯ ಮಧುಮೇಹದ ನಿಯಂತ್ರಣದಲ್ಲಿ ಸೋತರೆ ಸಮಸ್ಯೆಗಳು ಎದುರಾಗುತ್ತವೆ. ಇದು ಗರ್ಭಿಣಿಗೆ, ಮಗುವಿಗೆ, ಇಬ್ಬರಿಗೂ ತೊಂದರೆ ಒಡ್ಡಬಹುದಾದ್ದರಿಂದ ಮಧುಮೇಹ ನಿಯಂತ್ರಣ ಕಡ್ಡಾಯ.

ಆರೋಗ್ಯಕರ ತೂಕ ನಿರ್ವಹಣೆ: ಈ ಸಮಯದಲ್ಲಿ ತೂಕ ನಿರ್ವಹಣೆ ಬಹಳ ಅವಶ್ಯಕ. ಹೆಚ್ಚು ಬೊಜ್ಜನ್ನು ಹೊಂದಿದ್ದರೆ ಗರ್ಭಧಾರಣೆ ಅವಧಿಯಲ್ಲಿ ಸಮಸ್ಯೆಗಳು ತಲೆದೋರಬಹುದು. ತಾಯಿಯ ಸ್ಥೂಲಕಾಯ ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ ಗರ್ಭ ಧರಿಸುವ ಮುನ್ನ ವೈದ್ಯರೊಂದಿಗೆ ಚರ್ಚಿಸಿ ತೂಕ ಇಳಿಸಿಕೊಳ್ಳುವುದು ಸೂಕ್ತ.

4. ತಜ್ಞರೊಂದಿಗೆ ಚರ್ಚಿಸಿ:

ಗರ್ಭ ಧರಿಸಿದ ಅವಧಿ ಯಾವುದೇ ಔಷಧ ಸೇವಿಸುವ ಮುನ್ನ ವೈದ್ಯರ ಜೊತೆ ಚರ್ಚಿಸುವುದು, ಸಲಹೆ ಪಡೆಯುವುದು ಸೂಕ್ತ. ಕೆಲವು ಔಷಧಿಗಳನ್ನು ಗರ್ಭಧಾರಣೆ ಸಮಯ ಸೇವಿಸುವುದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಹಾಗೆಂದು ಇದ್ದಕ್ಕಿದ್ದಂತೆ ಔಷಧ ಸೇವನೆಯನ್ನು ನಿಲ್ಲಿಸುವುದೂ ಅಪಾಯವೇ. ಆದ್ದರಿಂದ ವೈದ್ಯರ ಸಲಹೆ ಮೇರೆಗಷ್ಟೇ ಔಷಧ ಸೇವನೆ ನಿಲ್ಲಿಸುವುದು ಇಲ್ಲವೇ ಹೊಸ ಔಷಧಗಳ ಸೇವನೆ ಮಾಡುವುದು ಸೂಕ್ತ. ಇದು ಯಾವುದೇ ರೀತಿಯ ಔಷಧಕ್ಕೂ ಅನ್ವಯವಾಗುತ್ತದೆ.

ಚುಚ್ಚುಮದ್ದಿನ ಕುರಿತು ತಿಳಿಯಿರಿ: ಕೆಲವು ಚುಚ್ಚುಮದ್ದುಗಳು ಗರ್ಭಧಾರಣೆ ಸಮಯ ಕಡ್ಡಾಯ. ಮಗುವಿಗೆ ಜನನ ದೋಷ ತರುವಂಥ ಸೋಂಕುಗಳು ಗರ್ಭಿಣಿಯನ್ನು ಸೋಕುವುದನ್ನು ಈ ಮದ್ದುಗಳು ತಡೆಯುತ್ತವೆ. ಆದ್ದರಿಂದ ಸೂಕ್ತ ಸಮಯದಲ್ಲಿ ಸೂಕ್ತ ಚುಚ್ಚುಮದ್ದನ್ನು ತೆಗೆದುಕೊಳ್ಳುವುದು ತಾಯಿ ಮತ್ತು ಮಗುವಿಗೆ ಅವಶ್ಯಕ. ಸಾಮಾನ್ಯ ಮಹಿಳೆಯರಿಗೆ ಹೋಲಿಸಿದರೆ, ಗರ್ಭಿಣಿಯರು ಬೇಗ ಕೆಲವು ರೀತಿಯ ಸೋಂಕಿಗೆ ಒಳಗಾಗುತ್ತಾರೆ. ಇದು ಗಂಭೀರ ಮಟ್ಟವನ್ನೂ ತಲುಪಬಹುದು, ಮಿತಿ ಮೀರಿದರೆ ಸಾವೂ ಸಂಭವಿಸಬಹುದು. ಅವಧಿಗೂ ಮುನ್ನ ಮಕ್ಕಳ ಜನನದಂಥ ಸಮಸ್ಯೆ ತಲೆದೋರಬಹುದು. ಆದ್ದರಿಂದ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯ ಸೂಚನೆ ದೊರೆತಾಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಚುಚ್ಚುಮದ್ದು ತೆಗೆದುಕೊಳ್ಳುವುದು ಅವಶ್ಯಕ. ಕೆಲವು ಚುಚ್ಚುಮದ್ದುಗಳು ಹೆರಿಗೆ ನಂತರದ ಆರು ತಿಂಗಳವರೆಗೂ ತಾಯಿ ಮತ್ತು ಮಗುವಿಗೆ ರಕ್ಷಣೆ ನೀಡುತ್ತವೆ.

ಬರಹ ಇಷ್ಟವಾಯಿತೆ?

  • 3

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !