ಉಡುಗೆ ಆಯ್ಕೆಯಲ್ಲಿ ನೀವು ಜಾಣರೇ?

7

ಉಡುಗೆ ಆಯ್ಕೆಯಲ್ಲಿ ನೀವು ಜಾಣರೇ?

Published:
Updated:
Deccan Herald

ಉಡುಗೆ ತೊಡುಗೆಗಳ ಆಯ್ಕೆಗೆ ದುಡ್ಡು ಮಾತ್ರ ಇದ್ದರೆ ಸಾಲದು. ಬುದ್ಧಿವಂತಿಕೆಯೂ ಇರಬೇಕು ಎಂಬುದು ಫ್ಯಾಷನ್ ಜಗತ್ತಿನ ಜಾಣ್ಣುಡಿ. ಬುದ್ಧಿವಂತಿಕೆ/ಜಾಣ್ಮೆ ಇದ್ದರೆ ನಮಗೆ ಒಪ್ಪುವಂತಹ, ಗುಂಪಿನಲ್ಲಿ ನಾವು ಎದ್ದು ಕಾಣುವಂತಹ ಉಡುಗೆ ತೊಡುಗೆ ಆಯ್ಕೆ ಮಾಡುವುದು ಸಾಧ್ಯ. 

ಸೆಲೆಬ್ರಿಟಿಗಳನ್ನು ‘ನಿಮ್ಮ ನೆಚ್ಚಿನ ಉಡುಗೆ ಯಾವುದು’ ಎಂದು ಕೇಳಿದರೆ, ‘ಕಂಫರ್ಟ್‌ ಆಗಿ ಇರುವ ಯಾವುದೇ ಉಡುಗೆಯಾದರೂ ನನಗಿಷ್ಟ’ ಎಂಬ ಸಾಮಾನ್ಯ ಉತ್ತರ ಸಿಗುತ್ತದೆ. ಇದು ಜನಸಾಮಾನ್ಯರಿಗೂ ಅನ್ವಯವಾಗುತ್ತದೆ. ಹೆಚ್ಚು ಬಿಗಿಯೂ ಅಲ್ಲದ, ಸಡಿಲವೂ ಅಲ್ಲದ ಉಡುಪು ಧರಿಸಿ ಸಮಾರಂಭಗಳಲ್ಲಿ ದಿನವಿಡೀ ಓಡಾಡಿದರೂ ಆರಾಮದಾಯಕವಾಗಿರುತ್ತದೆ.

ಜೀನ್ಸ್ ಟಾಪ್‌ನ ಮೇಲೆ ರೇಷ್ಮೆ ಕುರ್ತಾ ಧರಿಸುವ ಟ್ರೆಂಡ್‌ ಅನೇಕ ವರ್ಷಗಳಿಂದ ಚಾಲ್ತಿಯಲ್ಲಿದೆ.  ಚಿತ್ತಾರ, ವಿನ್ಯಾಸವಿಲ್ಲದ ಟಾಪ್‌ ಮೇಲೆ ಪ್ರಿಂಟೆಡ್‌ ಸಿಲ್ಕ್‌ನ ಸ್ಟೋಲ್‌ ಅಥವಾ ಸ್ಕಾರ್ಫ್‌ ಬಳಸುವುದೂ ಹೆಚ್ಚಾಗಿದೆ. ಇದು, ಟ್ರೆಂಡಿ ಲುಕ್‌ ಜೊತೆಗೆ ಸಾಂಪ್ರದಾಯಿಕ ಫೀಲ್‌ ಸಹ ನೀಡುತ್ತದೆ.  ನೀಲಿ ಹಾಗೂ ಕಂದು ಬಣ್ಣಕ್ಕಷ್ಟೇ ಸೀಮಿತವಾಗಿದ್ದ ಜೀನ್ಸ್‌ ಪ್ಯಾಂಟ್‌ಗಳು ಈಗ ಹಲವು ಬಣ್ಣಗಳಲ್ಲಿ ಲಭ್ಯ. ಈ ಪ್ಯಾಂಟ್‌ಗೆ ಯಾವುದೇ ಟಾಪ್‌ ಹೊಂದುತ್ತದೆ. ಆದರೂ ಬಿಳಿ, ತಿಳಿಹಳದಿ, ಕೆನೆ ಬಣ್ಣ, ತಿಳಿ ಗುಲಾಬಿ, ಫ್ಲೋರಾಸೆಂಟ್‌ ಛಾಯೆ ಇರುವ ಟಾಪ್‌ ಧರಿಸುವುದು ಹೆಚ್ಚು ಸೂಕ್ತವೆನಿಸುತ್ತದೆ. ಉದ್ದನೆಯ ಲಂಗಕ್ಕೆ ಮಣಿಗಳ ಚಿತ್ತಾರ ಇರುವ ಟಾಪ್‌/ರವಿಕೆ ಯುವತಿಯರಿಗೂ ಒಪ್ಪುತ್ತದೆ. ಗಾಢ ಬಣ್ಣದ ಬಟ್ಟೆಗಳ ವಿನ್ಯಾಸವಿದ್ದರೆ ಸಾಂಪ್ರದಾಯಿಕ ಮತ್ತು ಟ್ರೆಂಡಿ ನೋಟದ ಸಮಪಾಕದಂತಿರುತ್ತದೆ.

ಚೂಡಿದಾರ್ ಧರಿಸುವವರು ಅನಾರ್ಕಲಿ ಟಾಪ್‌ ಆರಿಸಿಕೊಳ್ಳುತ್ತಿದ್ದಾರೆ. ಅಗಲವಾದ ಟಾಪ್‌ನ ಮೇಲೆ ಮಣಿ ಹಾಗೂ ಹರಳುಗಳುಳ್ಳ ಹಾಗೂ ಕಸೂತಿ ಇರುವ ಅನಾರ್ಕಲಿ ಟಾಪ್‌ಗಳು ಈಗ ಜನಪ್ರಿಯ. ಪಟಿಯಾಲಾ ಹಾಗೂ ಧೋತಿ ಮೇಲೆ ಸ್ಲೀವ್‌ಲೆಸ್ ಟಾಪ್ ಗಮನ ಸೆಳೆಯುತ್ತದೆ. ಜಾರ್ಜೆಟ್‌, ಸಿಲ್ಕ್, ಕಾಟನ್ ಹಾಗೂ ಲೇಸ್ ಫ್ಯಾಬ್ರಿಕ್‌ಗಳು ಹಬ್ಬಕ್ಕೂ, ಸಮಾರಂಭಗಳಿಗೂ ಹೊಂದುತ್ತವೆ. ಹಾಗಾಗಿ, ಈ ಬಗೆಯ ಸಂಗ್ರಹವಿದ್ದರೆ ಯಾವ ಉಡುಪು ಧರಿಸುವುದು ಎಂಬ ಚಿಂತೆ ಕಾಡದು. ಕೆಂಪು, ಹಸಿರು, ನೀಲಿ ಹೀಗೆ ಗಾಢ ಬಣ್ಣದ ಉಡುಪುಗಳು ವಿಶೇಷ ಸಂದರ್ಭಗಳಲ್ಲಿ ನಾವೂ ಎದ್ದುಕಾಣುವಂತೆ ಮಾಡುತ್ತವೆ.

ಫ್ಯಾಷನ್‌ ಜಗತ್ತು ತಮಗೆ ಹೆಚ್ಚು ಆಯ್ಕೆ ಕೊಟ್ಟಿಲ್ಲ ಎಂದು ಪುರುಷರು ಈಗ ದೂರುವಂತಿಲ್ಲ. ಯಾಕೆಂದರೆ ಪುರುಷರ ಫ್ಯಾಷನ್‌ ಜಗತ್ತಿನಲ್ಲಿ ಈಗ ನಿಂತ ನೀರಲ್ಲ. ಅದೊಂದು ಸಾಗರ. ಮೊಗೆದಷ್ಟೂ ಹೊಸ ಆಯ್ಕೆಗಳು ತೆರೆದುಕೊಳ್ಳುತ್ತಲೇ ಇರುತ್ತವೆ. ಚೈನೀಸ್‌ ಕಾಲರ್‌ ಶರ್ಟ್‌ ಇನ್ನೂ ಟ್ರೆಂಡ್‌ ಉಳಿಸಿಕೊಂಡಿದೆ. ಕುರ್ತಾಗಳಲ್ಲಿ ಪುರುಷರಿಗಿರುವ ಆಯ್ಕೆ ಅವಕಾಶಗಳು ಬೆಚ್ಚಿಬೀಳಿಸುವಂತಿವೆ. ಹಾಫ್‌ ಕುರ್ತಾ, ಕೌಲ್‌ ಕುರ್ತಾ, ಲಾಂಗ್‌ ಕುರ್ತಾ, ಬಂದ್‌ ಗಲಾ... ನಾವೀನ್ಯದ ಸ್ಪರ್ಶದೊಂದಿಗೆ ಕುರ್ತಾಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲೇ ಇವೆ. 

ಆಯ್ಕೆ ಮಾಡಿದ ಉಡುಗೆ, ಅದಕ್ಕ ಹೊಂದಿಸಿಕೊಂಡ ತೊಡುಗೆ ಯಾವ ಸಂದರ್ಭಕ್ಕೆ ಸೂಕ್ತ ಎಂದು ಜಾಣ ಲೆಕ್ಕಾಚಾರ ಹಾಕಿ ಧರಿಸಿದರೆ ನಿಮ್ಮದೇ ಸ್ಟೈಲ್ ಸ್ಟೇಟ್‌ಮೆಂಟ್‌ ಕೊಟ್ಟಂತೆಯೇ. ಆದರೆ ಉಡುಗೆ ತೊಡುಗೆಗಳನ್ನು ಆರಿಸುವಾಗ ದೇಹಾಕಾರ, ಎತ್ತರ, ಕೂದಲ ವಿನ್ಯಾಸ, ಗಡ್ಡ–ಮೀಸೆ, ನಿಲ್ಲುವ ಭಂಗಿ ಕೂಡಾ ಗಣ್ಯವಾಗುತ್ತದೆ ಎಂಬುದನ್ನು ಮರೆಯಬಾರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !