ಗುರುವಾರ , ಡಿಸೆಂಬರ್ 12, 2019
26 °C
ವಿಜಯಪುರದಲ್ಲಿ ಹೆಚ್ಚುತ್ತಿರುವ ರಾಜಕೀಯ ನಾಟಕ ಕಂಪನಿ; ಬಸನಗೌಡ ಪಾಟೀಲ ಯತ್ನಾಳ ವ್ಯಂಗ್ಯ

‘ದಲಿತ ಸಮುದಾಯದವರು ಎಚ್ಚರದಿಂದಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ‘ದಲಿತ ಸಮುದಾಯಕ್ಕೆ ಸೌಲಭ್ಯ ಕೊಡಿಸುವಲ್ಲಿ ಆಸಕ್ತಿ ತೋರದ ಕೆಲ ದಲಿತ ಮುಖಂಡರು, ಟಾರ್ಚ್‌ ಬಟ್ಟೆ ಹಾಕಿಕೊಂಡು, ಸಫಾರಿ ಗಾಡಿಯಲ್ಲಿ ಓಡಾಡಿ, ಅಧಿಕಾರಿಗಳನ್ನು ಹೆದರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಂಥವರಿಂದ ದಲಿತ ಸಮಾಜ ಎಚ್ಚರಿಕೆಯಿಂದಿರಬೇಕು’ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರ ಶಾಸಕರ ಕಾರ್ಯಾಲಯದ ಆವರಣದಲ್ಲಿ ಶನಿವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್‌ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ‘ದಲಿತ ಸಂಘಟನೆಯ ಕೆಲವು ನಾಯಕರು, ಸಂಘಟನೆಯನ್ನು ಬಳಸಿಕೊಂಡು ಅಧಿಕಾರಿಗಳನ್ನು, ಮುಗ್ಧ ದಲಿತರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ. ಅಂಥವರಿಂದ ನೀವು ದೂರವಿರಿ’ ಎಂದು ಕಿವಿಮಾತು ಹೇಳಿದರು.

‘ವಿಜಯಪುರ ನಗರವನ್ನು ಸ್ಲಂ ಮುಕ್ತ ನಗರವನ್ನಾಗಿ ರೂಪಿಸುವ ಸಂಕಲ್ಪ ಮಾಡಿದ್ದೇನೆ. ನಗರಕ್ಕೆ ಹೊಂದಿಕೊಂಡಂತೆ 100 ಎಕರೆಯಷ್ಟು ಜಮೀನು ಖರೀದಿಸಿ, ಅಲ್ಲಿ ಸಾವಿರಾರು ಮನೆಗಳನ್ನು ನಿರ್ಮಿಸಿ ವಿತರಿಸಲಾಗುವುದು. ನಾನು ಬಸನಗೌಡ, ನಾನು ಸದಾ ಬಡವರ ಪರ. ಈ ಕಾರಣಕ್ಕಾಗಿಯೇ ಜನತೆ ನನಗೆ ಆಶೀರ್ವದಿಸಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ’ ಎಂದು ಇದೇ ಸಂದರ್ಭ ಹೇಳಿದರು.

ರಾಜಕೀಯ ನಾಟಕ ಕಂಪನಿ: ‘ಆಶ್ರಮ ರಸ್ತೆಯ ವಿಸ್ತರಣೆಗಾಗಿ ಒಂದು ದಿನವೂ ಹೋರಾಟ ಮಾಡದ ಪಾಲಿಕೆ ಸದಸ್ಯರೊಬ್ಬರು, ರಸ್ತೆ ವಿಸ್ತರಣೆಯ ಎಲ್ಲ ಕ್ರೆಡಿಟ್‌ ತಾವೇ ತೆಗೆದುಕೊಂಡು ಬಹುದಿನಗಳ ಹೋರಾಟ ಎಂದು ಪತ್ರಿಕೆಯಲ್ಲಿ ವಿಜೃಂಭಿಸಿದ್ದಾರೆ.

ಆದರೆ ನಾನೇ ಈ ರಸ್ತೆ ನಿರ್ಮಾಣಕ್ಕಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿದ್ದೇನೆ. ಪತ್ರಿಕಾ ಹೇಳಿಕೆ ನೀಡಿದ ಆ ಕಾರ್ಪೊರೇಟರ್ ಏನನ್ನೂ ಮಾಡದೆ, ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಈಚೆಗೆ ಈ ರೀತಿಯ ರಾಜಕೀಯ ನಾಟಕ ಕಂಪನಿಗಳು ವಿಜಯಪುರದಲ್ಲಿ ಹೆಚ್ಚಾಗಿವೆ’ ಎಂದು ಬಸನಗೌಡ ಲೇವಡಿ ಮಾಡಿದರು.

ಮೇಯರ್ ಶ್ರೀದೇವಿ ಲೋಗಾಂವಿ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಲಕ್ಷ್ಮೀ ಕನ್ನೊಳ್ಳಿ, ರಾಹುಲ ಜಾಧವ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು