ಸೋಮವಾರ, ನವೆಂಬರ್ 18, 2019
21 °C

‘ಗಡ್ಡ’ದಾರಿ ಹಿಡಿಯುತ್ತಿರುವ ಅಭಿಮಾನಿಗಳು

Published:
Updated:
Prajavani

ಗಡ್ಡ, ಮೀಸೆ, ಕೂದಲು ಬಿಟ್ಟವರನ್ನು ಕಂಡರೆ, ಈ ಹಿಂದೆ ‘ಹರಕೆಗೋ, ದೇವರಿಗೋ’ ಅಂತ ಕೇಳುತ್ತಿದ್ದವರೇ ಹೆಚ್ಚು. ಈಗ ಅಂಥವರನ್ನು ಕಂಡರೆ, ‘ಯಾವ ಸಿನಿಮಾಗೆ ಬಿಟ್ಟಿದೀಯಪ್ಪ’ ಎಂದು ಕೇಳತೊಡಗಿದ್ದಾರೆ. ಮೊದಲು ಪ್ರಿಯತಮೆ ಕೈ ಕೊಟ್ಟಾಗ ಭಗ್ನ ಪ್ರೇಮಿಗಳು, ವ್ಯವಹಾರದಲ್ಲಿ ನಷ್ಟ ಹೊಂದಿದ್ದ ನತದೃಷ್ಟರು ನೋವಿಗಾಗಿ ಗಡ್ಡ, ಮೀಸೆ ಬೆಳೆಸುತ್ತಿದ್ದರು. ಈಗ ನೋವೇ ಆಕಾರ ಕಳೆದುಕೊಂಡಿದೆ. ಸಾಹಿತಿ, ಬುದ್ಧಿಜೀವಿಗಳ ಮುಖದಲ್ಲಿ ಕಾಣಿಸುತ್ತಿದ್ದ ಈ ಗಡ್ಡ, ಮೀಸೆ ಈಗೀಗ ಕಾಲೇಜು ಯುವಕರ, ಕ್ರೀಡಾಪಟುಗಳ, ಹೀರೊಗಳ ಮುಖಗಳನ್ನು ಆವರಿಸಿಕೊಂಡಿವೆ.

ಚಿಗುರುಮೀಸೆ ಇದ್ದರೆ ಹೀರೋ, ಗಿರಿಜಾಮೀಸೆ ಇದ್ದರೆ ವಿಲನ್ ಎನ್ನುವ ಕಾಲ ಬದಲಾಗಿದೆ. ಹಾಲಿವುಡ್ ಹೀರೊಗಳ ಮುಖದ ಮೇಲಿದ್ದ ರಗ್ಗಡ್ ಲುಕ್‌ನ ರೋಮವಿನ್ಯಾಸ ನೋಡನೋಡುತ್ತಿದ್ದಂತೆ ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌ ಮತ್ತು ಇದೀಗ ಸ್ಯಾಂಡಲ್‌ವುಡ್‌ಗೆ ಹರಡಿದೆ. ಕಲಾವಿದನಾಗಲು ಗಡ್ಡ ಮೀಸೆ ಕಡ್ಡಾಯ ಎನ್ನುವ ರೀತಿಯಲ್ಲಿ ಅವುಗಳಿಗೆ ಮುಖವೊಡ್ಡುವವರೇ ಹೆಚ್ಚಾಗಿದ್ದಾರೆ.

ಆಗ, ಹೀರೊಯಿನ್‌ಗಳಿಗೆ ಉದ್ದನೆಯ ಜಡೆ ಇದ್ದರೆ ಒಳ್ಳೆಯದು ಎನ್ನುತ್ತಿದ್ದರು. ಈಗ ಹೀರೊಗಳು ಉದ್ದ ಕೂದಲು. ಗಡ್ಡ, ಮೀಸೆ ಬೆಳೆಸುತ್ತಿದ್ದಾರೆ. ಹಿಂದಿನ ಸಿನಿಮಾಗಳಲ್ಲಿ ಹೀರೊ ಪೌರುಷ, ಕೋಪದ ಡೈಲಾಗ್‌ಗಳು ಮೀಸೆ ಮೇಲೆ ಮಾತ್ರ ಇರುತ್ತಿದ್ದವು. ಈಗ ಅದರ ಜೊತೆ ಗಡ್ಡವೂ ಸೇರಿಕೊಂಡಿದೆ. ದಾಡಿ, ಮೀಸೆಯವರನ್ನು ನೋಡುವ ಜನರ ಮಾತಿನ ವರಸೆಯೂ ಅಗಾಧವಾಗಿ ಬದಲಾಗಿದೆ. ‘ಯಾವುದಾದರೂ ಮಠಕ್ಕೆ ಸೇರಿಕೊಳ್ಳಿ’ ಎನ್ನುತ್ತಿದವರೆಲ್ಲ ಈಗ ‘ಸಿನಿಮಾಗೆ ಸೇರಿಕೊಳ್ಳಿ’ ಎನ್ನುವ ಸಲಹೆ ನೀಡತೊಡಗಿದ್ದಾರೆ.

ಇದು ಸಿನಿಮಾ ಪ್ರೇಕ್ಷಕರ ಮೇಲೂ ಮೋಡಿ ಮಾಡಿದೆ. ಮೀಸೆ ಬೋಳಿಸಿಕೊಂಡು ನೀಟಾದ ಕ್ರಾಪ್‌ ತೆಗೆದುಕೊಂಡರೆ ‘ಬಯಲುದಾರಿ ಅನಂತನಾಗ್ ತರಹ ಇದೀರಾ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದ ಕಾಲವೊಂದಿತ್ತು. ಈಗ ಮೀಸೆ, ಗಡ್ಡ ಇಟ್ಟುಕೊಂಡವರನ್ನು ನೋಡಿ ‘ಏನ್, ನಮ್ ಬಾಸ್ ಥರ ಬಿಟ್ಕೊಂಡಿದೀಯ’ ಎನ್ನತೊಡಗಿದ್ದಾರೆ.

‘ಹೆಬ್ಬುಲಿ’ ನಂತರ ಕೆಲವು ಕಟ್ಟಾಭಿಮಾನಿಗಳು ನಟ ಸುದೀಪ್ ರೀತಿಯ ಕೇಶವಿನ್ಯಾಸ ಅನುಸರಿಸಿದರು. ‘ಚಕ್ರವರ್ತಿ’ ಸಿನಿಮಾ ಬಂದದ್ದೇ ತಡ ದರ್ಶನ್‌ ಅಭಿಮಾನಿಗಳು ಅವರ ತರಹ ಸ್ಟೈಲ್‌ಗಿಳಿದರು. ‘ಕೆಜಿಎಫ್’ ತೆರೆಕಂಡು ಯಶಸ್ವಿಯಾದ ನಂತರವಂತೂ ಉದ್ದುದ್ದ ಗಡ್ಡ, ಮೀಸೆ, ಕೂದಲು ಬಹುದೊಡ್ಡ ಸುದ್ದಿಯನ್ನೇ ಮಾಡಿತು. ನಟ ಯಶ್ ಒಂದು ರೀತಿಯ ನ್ಯಾಷನಲ್ ಸ್ಟಾರ್ ಆಗಿ ಮಿಂಚಿದರು. ಈಗಲೂ ಅವರನ್ನು ಗುರುತಿಸುವುದು ಪೊಗದಸ್ತಾದ ಕೇಶ ಚಹರೆಯಲ್ಲಿ.

ಕೂದಲು ಬೆಳೆದು ಸ್ವಲ್ಪ ಕಿವಿ ಮೇಲೆ ಬಂದ್ರೆ ಸಾಕು ಬೈಯ್ಯುತ್ತಿದ್ದ ಅಜ್ಜಿ, ತಾತ, ಅಪ್ಪ, ಅಮ್ಮಂದಿರು ಈಗ ‘ನಿನಗೆ ಗಡ್ಡ ಮೀಸೆಯೇ ಚೆನ್ನಾಗ್ ಕಾಣೋದು’ ಎನ್ನುತ್ತಿದ್ದಾರೆ. ಯುವತಿಯರ ಅಭಿರುಚಿ ಕೂಡ ಬದಲಾಗಿದೆ. ಗಡ್ಡ, ಮೀಸೆ ಬಿಟ್ಟ ಯುವಕರು ಅವರ ಹಾರ್ಟ್‌ ಬೀಟ್‌ ಹೆಚ್ಚಿಸತೊಡಗಿದ್ದಾರೆ. ಪಡ್ಡೆ ಹುಡುಗರಂತೂ ನೆಚ್ಚಿನ ಹೀರೊಗಳಿಂದ ಪ್ರಭಾವಿತರಾಗಿ ತಮ್ಮ ನಿಶ್ಚಿತಾರ್ಥ, ಮದುವೆ ಸಮಾರಂಭಗಳಲ್ಲಿ ಅವರ ಗೆಟಪ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಈ ಕೇಶವಿಶೇಷ ಎನ್ನುವುದು ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟಿದೆ. ಕೇಶವಿನ್ಯಾಸದಲ್ಲಿ ಡಿಪ್ಲೊಮಾ ಕೋರ್ಸ್‌ಗಳು ಶುರುವಾಗಿವೆ. ಬೃಹತ್ ಕಂಪನಿಗಳು ಹೆಚ್ಚು ಬಂಡವಾಳ ತೊಡಗಿಸಿ ದೊಡ್ಡ ಸಲೂನ್‌ಗಳನ್ನು ತೆರೆಯುತ್ತಿವೆ. ಅಂದು ಉದ್ದ ಕೂದಲು ಹುಡುಗಿಯರ ಜಡೆಯಾಗಿತ್ತು. ಇಂದು ಅದೇ ಉದ್ದ ಕೂದಲು ಹುಡುಗರ ಫ್ಯಾಷನ್‌ ನಡೆಯಾಗಿದೆ.

ಕಲಾಶ್ರದ್ಧೆ, ನಟನಾ ಪ್ರತಿಭೆ, ಅವಕಾಶಕ್ಕೆ ಸಹನೆ, ಕೆರಿಯರ್‌ಗಾಗಿ ಶ್ರಮ, ತಲುಪುವ ಗುರಿ ಇವುಗಳು ಕಲಾವಿದರಿಗೆ ದಾರಿಯಾಗಬೇಕಿತ್ತು. ಆದರೆ, ಈಗ ‘ಗಡ್ಡ’ವೇ ಅವಕಾಶದ ದಾರಿಯಂತಾಗಿದೆ. ಹೀಗಾಗಿ ಎಲ್ಲರೂ ಸಾಗುತ್ತಿರುವುದು ‘ಗಡ್ಡದಾರಿ’ಯಲ್ಲೇ.

–ಮಾಸ್ತಿ (ಕನ್ನಡ ಚಿತ್ರರಂಗದ ಹೆಸರಾಂತ ಸಂಭಾಷಣಕಾರ)

ಪ್ರತಿಕ್ರಿಯಿಸಿ (+)