ಕಂಗೊಳಿಸುವ ‘ಕಮಲ ಬಸದಿ’

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಶಿಲ್ಪಕಲಾ ವೈಭವದ ದರ್ಪಣ ಈ ಸ್ಮಾರಕ

ಕಂಗೊಳಿಸುವ ‘ಕಮಲ ಬಸದಿ’

Published:
Updated:
Prajavani

ಇತ್ತೀಚೆಗೆ ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡಿದ್ದಾಗ ಅಲ್ಲಿನ ‘ಕಮಲ ಮಂಟಪ’ ಗಮನಸೆಳೆದಿತ್ತು. ಅದನ್ನು ನೋಡುತ್ತಿದ್ದಾಗ ನಾವಿರುವ ಬೆಳಗಾವಿಯ ಕೋಟೆ ಆವರಣದಲ್ಲಿರುವ ಪುರಾತನ ‘ಕಮಲ ಬಸದಿ’ ಚಿತ್ರವೂ ಮನದಲ್ಲಿ ಹಾದು ಹೋಗಿತ್ತು. ಆ ನೆಪದಲ್ಲಿ ಕೆಲವು ದಿನಗಳ ನಂತರ ಮತ್ತೊಮ್ಮೆ ಸಂದರ್ಶಿಸಿದಾಗ ‘ಕಮಲ ಬಸದಿ’ಯು ವಿಶೇಷವಾಗಿ ತೋರಿತು.

ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ಬಸದಿಯು, ಶಿಲ್ಪಕಲೆಯ ಗತವೈಭವಕ್ಕೆ ದರ್ಪಣದಂತಿದೆ. ಹಾಗಾಗಿ ಹೆಚ್ಚು ಪ್ರವಾಸಿಗರನ್ನು ಬಸದಿ ವೀಕ್ಷಿಸಲು ಬರುತ್ತಾರೆ.

ಬಸದಿ ಎಂದಾಕ್ಷಣ ಜೈನರು ಮಾತ್ರವೇ ಇಲ್ಲಿಗೆ ಬರುತ್ತಾರೆ ಎಂದುಕೊಳ್ಳಬೇಡಿ. ಎಲ್ಲ ಧರ್ಮೀಯರೂ ಭೇಟಿ ನೀಡಿ ಆಸಕ್ತಿಯಿಂದ ವೀಕ್ಷಿಸುತ್ತಾರೆ. ಇದು ಭಕ್ತಿಯಿಂದ ನಮಿಸುವ ಶ್ರದ್ಧಾ ಕೇಂದ್ರವೂ ಆಗಿದೆ; ಪ್ರವಾಸಿ ತಾಣವೂ ಹೌದು.

ಇಲ್ಲಿಗೆ ಕರ್ನಾಟಕದೊಂದಿಗೆ, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ಗುಜರಾತ್‌ ಸೇರಿದಂತೆ ದೇಶದ ಬೇರೆ ಬೇರೆ ಕಡೆಗಳಿಂದಲೂ ಪ್ರವಾಸಿಗರು ಭೇಟಿ ಕೊಡುತ್ತಾರೆ. ವಿದೇಶಿಯರಿಗೂ ಇದು ಅಚ್ಚುಮೆಚ್ಚು.

ರಟ್ಟರ ಕಾಲದಲ್ಲಿ

ರಟ್ಟರ ದೊರೆಯಾದ ನಾಲ್ವಡಿ ಕಾರ್ತವೀರ್ಯನ ಮಹಾಮಂತ್ರಿ ಬೀಚಿ (ಬೀಚನ ಅಥವಾ ಬಿಚ್ಚಿ ರಾಜ ಎಂದೂ ಹೇಳಲಾಗುತ್ತದೆ) ರಾಜ ಕ್ರಿ.ಶ.1204ರಲ್ಲಿ ಶುಭಚಂದ್ರ ಗುರುಗಳ ಪ್ರೇರಣೆಯಿಂದ ಇದನ್ನು ನಿರ್ಮಿಸಿದ್ದಾರೆ. ಈ ಬಸದಿಯು ಮೂಲತಃ ಶಾಂತಿನಾಥ ತೀರ್ಥಂಕರದ್ದು ಆಗಿದ್ದು ಈಗ ನೇಮಿನಾಥನ ಮೂರ್ತಿ ಇದೆ.

ಕವಿ ಕಂದಪ್ಪ (ಬಾಳಚಂದ್ರದೇವ)ಅವರಿಂದ ರಚಿತವಾದ ಕ್ರಿ.ಶ.1204ರ ಎರಡು ಶಾಸನಗಳು (ಅವು ಸದ್ಯ ಲಂಡನ್‌ನ ಬ್ರಿಟಿಷ್ ಮ್ಯೂಸಿಯಂನಲ್ಲಿವೆ ಎಂದು ಮಾಹಿತಿ ಫಲಕದಲ್ಲಿ ಬರೆಯಲಾಗಿದೆ) ಈ ಬಸದಿಯ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸುತ್ತದೆ. ರಟ್ಟರಿಂದ ನಿರ್ಮಾಣಗೊಂಡ ಕಾರಣ ಇದಕ್ಕೆ ರಟ್ಟ ಜಿನಾಲಯವೆಂದೂ ಹೆಸರಿದೆ. ನಿರ್ಮಾಣಕ್ಕೆ ಕಾರಣವಾದ ಶುಭ ಚಂದ್ರರಿಗೆ ಕಾರ್ತವೀರ್ಯನು ಇದನ್ನು ದಾನ ನೀಡಿದ್ದರು. ರಟ್ಟ ರಾಜ್ಯ ಸ್ಥಾಪನೆಯಲ್ಲಿ ಸಹಕರಿಸಿದ ಮುನಿಚಂದ್ರರಿಗೂ ಅನೇಕ ಹಳ್ಳಿಗಳನ್ನು ಉಂಬಳಿಯಾಗಿ ಬಿಟ್ಟುಕೊಟ್ಟಿದ್ದನು ಎಂದು ಶಾಸನದಲ್ಲಿರುವುದಾಗಿ ತಿಳಿಸಲಾಗಿದೆ.

ಕಮಲದ ಆಕಾರದಲ್ಲಿದೆ

ಮೊದಲು ಶಾಂತಿನಾಥ ಬಸದಿಗೆ ರಟ್ಟ ಜಿನಾಲಯವೆಂದು ಕರೆಯಲಾಗುತ್ತಿತ್ತು. ಬಸದಿ, ಕಮಲದ ಆಕಾರದಲ್ಲಿ ಇರುವುದರಿಂದ ಹಾಗೂ ರಂಗಮಂಟಪದ ಚಾವಣಿಯು ಕಮಲದಳದ ಮಾದರಿಯಲ್ಲಿ ಅಲಂಕೃತವಾಗಿರುವುದರಿಂದ ‘ಕಮಲ ಬಸದಿ’ ಎಂದೇ ಜನಪ್ರಿಯವಾಗಿದೆ. ಕೋಟೆಯೊಳಗೆ ಇರುವುದರಿಂದ ಇದನ್ನು ‘ಕಿಲ್ಲಾ ಬಸದಿ’ ಎಂದೂ ಜನರು ಕರೆಯುತ್ತಾರೆ.

ಉತ್ತರಾಭಿಮುಖವಾಗಿರುವ ಇದು ತಲವಿನ್ಯಾಸದಲ್ಲಿ ಗರ್ಭಗೃಹ, ಸುಖನಾಸಿ, ನವರಂಗ ಮತ್ತು ಮುಖಮಂಟಪಗಳಿಂದ ಕೂಡಿದೆ. ಈ ಮುಖ ಮಂಟಪಕ್ಕೆ ಮೂರು ಕಡೆಗಳಿಂದ (ಮುಂಬಾಗಿಲು, ಎಡ ಹಾಗೂ ಬಲಗಡೆಯಿಂದ) ಪ್ರವೇಶ ದ್ವಾರಗಳಿವೆ. ಗರ್ಭಗೃಹದ ‍ಪ್ರವೇಶದ್ವಾರ ಸುತ್ತಲೂ ಸಿಂಹದ ಬಳ್ಳಿಯನ್ನು ಹೊಂದಿದೆ. ಗರ್ಭಗೃಹ ಚೌಕಾಕಾರವಾಗಿದ್ದು, ಮಧ್ಯದಲ್ಲಿ 22ನೇ ತೀರ್ಥಂಕರರಾದ ನೇಮಿನಾಥರ ಧ್ಯಾನಮುದ್ರೆಯ ಸಿದ್ದಾಸನ ಮೂರ್ತಿ ಇದೆ. ನೇಮಿನಾಥ ತೀರ್ಥಂಕರರ ಪ್ರಭಾವಳಿ ಕಲ್ಪವೃಕ್ಷದ್ದಾಗಿರುವುದರಿಂದ ನೋಡುಗರನ್ನು ಆಕರ್ಷಿಸುತ್ತದೆ. ಮುಖಮಂಟಪದ ಶಿಖರಗಳು ಕದಂಬ ನಾಗರಶೈಲಿಯಲ್ಲಿವೆ.

ಆಕರ್ಷಿಸುವ ಕಲ್ಪವೃಕ್ಷಗಳು

ಈ ಮಂಟಪವು 1996ರಲ್ಲಿ ಪುರಾತತ್ವ ಇಲಾಖೆಯಿಂದ ಪುನರುತ್ಥಾನಗೊಂಡಿದೆ. ಇದನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಲಾಗಿದೆ.

ಆವರಣದಲ್ಲಿರುವ ಕಲ್ಪವೃಕ್ಷಗಳು ಬಸದಿಗೆ ವಿಶೇಷ ಮೆರುಗು ನೀಡುತ್ತಿವೆ. ಹೊರಾವರಣದಲ್ಲಿ
ನಿರ್ವಹಿಸಲಾಗುತ್ತಿರುವ ಹೂವಿನ ಸಸಿಗಳು ಹಾಗೂ ಹಸಿರು ಹುಲ್ಲು ಹಾಸು ಬೇಸಿಗೆಯಲ್ಲೂ ಕಂಗೊಳಿಸುತ್ತಿದೆ. ಬಿಸಿಲಿನಿಂದ ದಣಿದು ಬಂದ ಮನಕ್ಕೆ ಬಸದಿಯ ಒಳಗಿನ ಆಹ್ಲಾದಕರ ವಾತಾವರಣ ತಂಪಿನ ಮುದ ನೀಡುತ್ತದೆ.

ಈ ಬಸದಿಯ ಎದುರಿನಲ್ಲಿ ದಕ್ಷಿಣಾಭಿಮುಖವಾಗಿ ನಿರ್ಮಿಸಿರುವ ಹಳೆಯ ಜಿನಾಲಯವೊಂದಿದೆ. ಎತ್ತರದ ಅದಿಷ್ಠಾನದ ಮೇಲೆ ಕಟ್ಟಲಾದ ಈ ಬಸದಿಯ ಪ್ರವೇಶ ದ್ವಾರದ ಮುಂಭಾಗ ಕಟಾಂಜನ ಹೊಂದಿದೆ. ಹೊರಬದಿಯಲ್ಲಿ ವಿವಿಧ ವಾದ್ಯವೃಂದಗಳಿರುವ ಶಿಲ್ಪವನ್ನು ಕಂಡರಿಸಲಾಗಿದೆ. ಈ ಜಿನಾಲಯವೂ ಗಮನಸೆಳೆಯುತ್ತದೆ.

ಕಮಲ ಬಸದಿ ಬೆಳಗಾವಿಯ ನಗರದೊಳಗೇ ಇರುವುದರಿಂದ ಇಲ್ಲಿರುವ ಇತರ ಪ್ರವಾಸಿ ತಾಣಗಳನ್ನೂ ಸಂದರ್ಶಿಸಬಹುದು. ಊಟ, ವಸತಿ ವ್ಯವಸ್ಥೆ ಬಹಳಷ್ಟು ಹೋಟೆಲ್‌ಗಳಿವೆ.

(ಚಿತ್ರಗಳು ಲೇಖಕರವು)

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !