ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕದ ಗಾಜು ಹುಷಾರು: ಸ್ಕ್ರಾಚ್‌ ಆದಾಗ ಏನು ಮಾಡಬೇಕು? ಇಲ್ಲಿದೆ ಟಿಪ್ಸ್‌

Last Updated 4 ನವೆಂಬರ್ 2021, 19:30 IST
ಅಕ್ಷರ ಗಾತ್ರ

‘ಕನ್ನಡಕ ಎಲ್ಲೋ ಇಟ್ಟು ಬಿಟ್ಟಿದ್ದೇನೆ, ಎಲ್ಲಿ ಇಟ್ಟೆ ಅಂತ ನೆನಪೇ ಆಗ್ತಾ ಇಲ್ಲ’ ಎಂದು ಅಜ್ಜ–ಅಜ್ಜಿ, ಅಪ್ಪ–ಅಮ್ಮ ಎಷ್ಟೋ ಬಾರಿ ನಾವು ಕೂಡ ಕನ್ನಡಕವನ್ನು ಎಲ್ಲೋ ಇಟ್ಟು ‌ಈ ರೀತಿ ಗೊಣಗುವುದುಂಟು. ಕನ್ನಡಕ ಇಡಲೆಂದೇ ಇರುವ ಬಾಕ್ಸ್‌ಗಳನ್ನು ಹಲವು ಬಾರಿ ಕಳೆದುಕೊಂಡಿರುತ್ತೇವೆ ಅಥವಾ ಅದು ಎಲ್ಲೋ ಮೂಲೆಯಲ್ಲಿ ಇರುತ್ತದೆ.

ನಮ್ಮ ದೃಷ್ಟಿಗೆ ಪೂರಕವಾಗಿ ಕೆಲಸ ಮಾಡುವ ಕನ್ನಡಕದ ಕುರಿತ ನಿರ್ಲಕ್ಷ್ಯಕ್ಕೆ ಇಂಥ ಹಲವು ಉದಾಹರಣೆಗಳು ಸಿಗುತ್ತವೆ. ಇದೇ ಕಾರಣಕ್ಕೆ ಕನ್ನಡಕ ಗಾಜುಗಳಲ್ಲಿ ಅಲ್ಲಲ್ಲಿ ಸ್ಕ್ರಾಚ್‌ಗಳಾಗಿರುತ್ತವೆ. ಇದರಿಂದ ಬಳಸಲು ಸಾಧ್ಯವಾಗದೇ ಕೆಲವು ತಿಂಗಳುಗಳಲ್ಲೇ ಹೊಸತು ಖರೀದಿ ಮಾಡುವ ಸಂದರ್ಭ ಬರುತ್ತದೆ.

ಒಂದುವೇಳೆ ಕೆಲಸ ಒತ್ತಡದಲ್ಲಿ ಗಾಜುಗಳ ಮೇಲೆ ಸ್ಕ್ರಾಚ್‌ಗಳಾದಾಗ ಮನೆಯಲ್ಲಿಯೇ ಕೆಲವು ಉಪಾಯಗಳನ್ನು ಮಾಡಿಕೊಂಡು, ಸ್ಕ್ರಾಚ್‌ ಅನ್ನು ಸರಿ ಮಾಡಿಕೊಳ್ಳಬಹುದು. ಜೊತೆಗೆ, ಸ್ಕ್ರಾಚ್‌ ಆಗದಂತೆ ಹೇಗೆ ಮುತುವರ್ಜಿ ವಹಿಸಿಕೊಳ್ಳಬಹುದೂ ಎನ್ನುವುದನ್ನು ಇಲ್ಲಿ ನೋಡೋಣ.

ಸ್ಕ್ರಾಚ್‌ ಆದಾಗ ಏನು ಮಾಡಬೇಕು?

ದೊಡ್ಡ ದೊಡ್ಡ ಸ್ಕ್ರಾಚ್‌ ಆದಾಗ ಈ ಉಪಾಯ ಕೆಲಸಕ್ಕೆ ಬರುವುದಿಲ್ಲ. ನಿತ್ಯದ ಕೆಲಸದ ಮಧ್ಯೆ ಆದ ಸಣ್ಣ ಪುಟ್ಟ ಸ್ಕ್ರಾಚ್‌ಗಳನ್ನು ಈ ಉಪಾಯದ ಮೂಲಕ ಇಲ್ಲವಾಗಿಸಿಕೊಳ್ಳಬಹುದು.

-ಮೊದಲಿಗೆ ಬೆಚ್ಚಗಿನ ನೀರಿನಿಂದ ಗಾಜುಗಳನ್ನು ತೊಳೆದುಕೊಳ್ಳಬೇಕು. ನಂತರ ಮೈಕ್ರೋಫೈಬರ್ ಬಟ್ಟೆಯಿಂದ ನಿಧಾನವಾಗಿ ಒರೆಸಿಕೊಳ್ಳಬೇಕು. ಇದಾದ ಬಳಿಕ ಸೆಲ್ಯೂಷನ್‌ನಿಂದ ಮತ್ತೊಮ್ಮೆ ಗಾಜುಗಳನ್ನು ಒರೆಸಿಕೊಳ್ಳಬೇಕು.

-ಬೇಕಿಂಗ್‌ ಸೋಡಾಕ್ಕೆ ಸ್ವಲ್ಪ ನೀರು ಮಿಶ್ರಣ ಮಾಡಿ, ಗಟ್ಟಿ ಪೇಸ್ಟ್‌ ಮಾಡಿಕೊಳ್ಳಬೇಕು. ಮತ್ತೊಂದು ಮೈಕ್ರೋಫೈಬರ್ ಬಟ್ಟೆಯಿಂದ ಈ ಪೇಸ್ಟ್‌ ಅನ್ನು ಗಾಜಿಗೆ ಒರೆಸಿ ನಿಧಾನಕ್ಕೆ ಉಜ್ಜಬೇಕು.

-ಇದಾದ ಬಳಿಕ, ಮತ್ತೊಮ್ಮೆ ಬೆಚ್ಚಗಿನ ನೀರಿನಲ್ಲಿ ಗಾಜುಗಳನ್ನು ತೊಳೆಯಬೇಕು. ಹೊಸದೊಂದು ಮೈಕ್ರೋಫೈಬರ್ ಬಟ್ಟೆಯಿಂದ ನಿಧಾನವಾಗಿ ಗಾಜನ್ನು ಒರೆಸಿದರೆ, ಕನ್ನಡಕ ಗಾಜಿನ ಮೇಲೆ ಆಗಿರುವ ಸಣ್ಣಪುಟ್ಟ ಸ್ಕ್ರಾಚ್‌ಗಳನ್ನು ಇಲ್ಲವಾಗಿಸಿಕೊಳ್ಳಬಹುದು.

ಸ್ಕ್ರಾಚ್‌ ಆಗದೇ ಇರುವ ಹಾಗೆ ತಡೆಯುವುದು ಹೇಗೆ?

ಕನ್ನಡಕಗಳನ್ನು ಅದರ ಬಾಕ್ಸ್‌ (ಕೇಸ್‌)ನಲ್ಲೇ ಇಡುವುದು ಉತ್ತಮವಾದುದು. ಆದರೂ, ಇದನ್ನು ಬಿಟ್ಟು ಹಲವು ಮಾರ್ಗಗಳಲ್ಲಿ ಕನ್ನಡಕದ ಗಾಜುಗಳ ಮೇಲಾಗುವ ಸ್ಕ್ರಾಚ್‌ಗಳನ್ನು ತಡೆಯಬಹುದು. ಹೇಗೆ ಎಂದು ನೋಡೋಣ:‌

-ಕನ್ನಡಕವನ್ನು ತೆಗೆಯುವಾಗ ಕನ್ನಡಕದ ಹಿಡಿಯನ್ನು ಹಿಡಿದು ತೆಗೆಯುವುದು ಉತ್ತಮ. ಕನ್ನಡಕದ ಗಾಜಿನ ಪಟ್ಟಿಯನ್ನು ಹಿಡಿದು ತೆಗೆಯುವುದರಿಂದ ಬೀಳುವ ಪ್ರಮೇಯವೇ ಹೆಚ್ಚು. ಜೊತೆಗೆ, ಎರಡೂ ಕೈಗಳನ್ನು ಬಳಸಿ ಕನ್ನಡಕವನ್ನು ತೆಗೆಯುವುದು ಸೂಕ್ತ ಎನ್ನುತ್ತಾರೆ ನೇತ್ರ ತಜ್ಞರು.

-ಕನ್ನಡಕವನ್ನು ಹೇಗೆ ಇಡುತ್ತೇವೆ ಎನ್ನುವುದರಲ್ಲಿಯೂ ಉಪಾಯ ಇದೆ. ಗಾಜಿನ ಪಟ್ಟಿಯನ್ನು ಕೆಳಗೆ ಮುಖ ಮಾಡಿ ಇಡುವುದು ಒಳ್ಳೆಯದು. ಇದಕ್ಕಿಂತ ಉತ್ತಮವಾದುದು ಎಂದರೆ, ಕನ್ನಡಕ ಹಿಡಿಕೆಯನ್ನು ತೆರೆದಿಟ್ಟು, ಗಾಜಿನ ಪಟ್ಟಿಯನ್ನು ಅಡಿ ಮಾಡಿ ಇಡುವುದು ಸೂಕ್ತ. ಜೊತೆಗೆ, ಒಂದೊಮ್ಮೆ ಕೈಗೆ ತಾಕಿದರೂ ಕನ್ನಡಕ ಕೆಳಗೆ ಬೀಳುವುದಿಲ್ಲ ಎನ್ನುವಂಥ ಜಾಗದಲ್ಲಿ ಕನ್ನಡಕವನ್ನು ಇಡಬೇಕು.

-ಕನ್ನಡಕವನ್ನು ಸೀರೆಯ ಅಂಚು, ಶರ್ಟ್‌ನಿಂದ, ಕರ್ಚೀಫಿನಿಂದ ಒರೆಸುವುದು ಸಾಮಾನ್ಯ ರೂಢಿ. ಇದನ್ನು ಮಾಡಬಾರದು. ಮೈಕ್ರೋಫೈಬರ್ ಬಟ್ಟೆಯನ್ನು ಸದಾ ಇಟ್ಟುಕೊಂಡು, ಅದರಿಂದಲೇ ಕನ್ನಡಕವನ್ನು ಒರೆಸುವುದರಿಂದ ಸ್ಕ್ರಾಚ್‌ ಆಗುವುದನ್ನು ತಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT