ಫ್ಯಾಷನ್‌ ಮೋಹಿ ಜವಾಹರ್‌

7

ಫ್ಯಾಷನ್‌ ಮೋಹಿ ಜವಾಹರ್‌

Published:
Updated:
Deccan Herald

ಮೈಸೂರು ಮೂಲದ ಮಿರ್ಜಾ ಜವಹರ್ ಅಲಿ ಫ್ಯಾಷನ್ ಲೋಕದಲ್ಲಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರು ಓದಿದ್ದು ಬಿಬಿಎಂ ಆದರೂ ಬದುಕು ಕಟ್ಟಿಕೊಂಡದ್ದು ಮಾತ್ರ ಫ್ಯಾಷನ್ ಲೋಕದಲ್ಲಿ. ಹಲವಾರು ರ‍್ಯಾಂಪ್‌ ಷೋ, ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆಯೇ ಫ್ಯಾಷನ್ ಲೋಕದಲ್ಲಿ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಫ್ಯಾಷನ್‌ ನಂಟಿನ ಕುರಿತು ‘ಮೆಟ್ರೊ’ದೊಂದಿಗೆ ಮಾತನಾಡಿದ್ದಾರೆ.

ಫ್ಯಾಷನ್‌ ಲೋಕದೊಂದಿಗಿನ ನಂಟು ಯಾವಾಗ ಆರಂಭವಾಯಿತು?

2015 ರಿಂದ ಪಾಲ್ಗೊಳ್ಳುತ್ತಿದ್ದೇನೆ. ಮೊದಲ ಸ್ಪರ್ಧೆಯಲ್ಲೇ ನನಗೆ ಸೋಲುಂಟಾಯಿತು. ಬಳಿಕ ನನ್ನ ವಿಶ್ವಾಸವನ್ನು ಬಿಡದೆ, ಅಗತ್ಯ ತಯಾರಿ ನಡೆಸಿ 2016ರಲ್ಲಿ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡು ಮೊದಲಿಗನಾಗಿ ವಿಜೇತನಾದೆ. ಅಂದಿನಿಂದ ಇಲ್ಲಿಯವರೆಗೂ ಸುಮಾರು  23 ಭಾರಿ ಫ್ಯಾಷನ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, 8 ಬಾರಿ ವಿಜೇತನಾಗಿದ್ದೇನೆ.

ಫಿಟ್‌ನೆಸ್‌ಗಾಗಿ ನಿಮ್ಮ ತಯಾರಿ ?

2015ಲ್ಲಿ ದೇಹದ ಫಿಟ್‌ನೆಸ್‌ನಿಂದಾಗಿಯೇ ಸ್ಪರ್ಧೆಯಲ್ಲಿ ಯಶಸ್ಸು ಸಿಗಲಿಲ್ಲ. ಅಂದಿನಿಂದಲೇ ಪ್ರತಿದಿನ 3 ಗಂಟೆಗಳ ಕಾಲ ವರ್ಕೌಟ್‌ ಮಾಡಿದೆ, ದೇಹದ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಆರಂಭಿಸಿದೆ. ಹಾಗಾಗಿ 8 ಬಾರಿ ವಿವಿಧ ಸ್ಪರ್ಧೆಗಳಲ್ಲಿ ಗೆಲುವು ಪಡೆಯಲು ಸಾಧ್ಯವಾಯಿತು.

ನಟನೆಯ ಬಗ್ಗೆ ಒಲವಿದೆಯೇ‌ ?

ನಾನು ಎಂದಿಗೂ ನಟನೆಯ ಬಗ್ಗೆ ಕನಸು ಕಂಡವನಲ್ಲ. ಮೊದಲ ಬಾರಿ ಫ್ಯಾಷನ್‌ ಟೈಟಲ್‌ ವಿನ್ನರ್ ಆದಾಗ ‘ಹಿಫ್ತಾ ಕಪೂರ್’ ಹಿಂದಿ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶವೂ ಬಂದಿತ್ತು. ಫ್ಯಾಷನ್ ಮೇಲಿನ ಆಸಕ್ತಿಯಿಂದ ಧಾರಾವಾಹಿಯಲ್ಲಿ ಅಭಿನಯಿಸಲು ಆಸಕ್ತಿ ತೋರಲಿಲ್ಲ. ಆದರೆ ‘ಕೊಡಗಿನ ಪರಂಪರ’ ಮತ್ತು ‘ಬೆಮೆಲ್‌ ಕ್ಯಾಂಪ್‌’ ಜಾಹೀರಾತುಗಳಲ್ಲಿ ಅಭಿನಯಿಸಿದ್ದೆ ಅಷ್ಟೆ.

ನಿಮ್ಮ ಮನೆಯವರ ಬೆಂಬಲ ಹೇಗಿದೆ?

ನಮ್ಮ ಮನೆಯಲ್ಲಿ ಉತ್ತಮ ಬೆಂಬಲವಿದೆ. ಹಾಗಾಗಿ ನಾನು ಯಾವುದೇ ದೇಶದಲ್ಲಿ ಸ್ಪರ್ಧೆ ನಡೆದರೂ ಪಾಲ್ಗೊಳ್ಳಲು ಸಿದ್ಧನಾಗಿದ್ದೇನೆ.

ಫ್ಯಾಷನ್ ಲೋಕದಲ್ಲಿ ಹುಡುಗರಿಗೆ ಎಷ್ಟರ ಮಟ್ಟಿಗೆ ಆದ್ಯತೆ ಇದೆ?

ಮಹಿಳಾ ರೂಪದರ್ಶಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅದರಂತೆ ಪುರುಷರಿಗೂ ಇದೆ, ಆದರೆ ರೂಪದರ್ಶಿಯಾಗಿ ಭಾಗವಹಿಸುವ ಪುರುಷರ ಸಂಖ್ಯೆ ಕಡಿಮೆಯಾಗಿದೆ ಅಷ್ಟೆ. ಎಲ್ಲಾ ಜಾಹೀರಾತುಗಳಲ್ಲಿಯೂ ಮಹಿಳೆಯರು ಅಭಿನಯಿಸಲು ಸಾಧ್ಯವಾಗುವುದಿಲ್ಲ. ಶೂ, ಫ್ಯಾಂಟ್, ಹೇರ್‌ ಸ್ಟೈಲ್‌, ಸೂಟ್ಸ್‌ ಡ್ರೆಸ್‌ ಮುಂತಾದವುಗಳ ಜಾಹೀರಾತು ನೀಡುವಲ್ಲಿ ಪುರುಷರ ಅಗತ್ಯ ಇದೆ.

ನಿಮ್ಮ ಹವ್ಯಾಸಗಳು?

ಡಾನ್ಸ್‌ ಕಲಿಯುತ್ತಿದ್ದೇನೆ, ಸ್ನೇಹಿತರೊಂದಿಗೆ ಸಿನಿಮಾ ವೀಕ್ಷಿಸುವುದು, ಪ್ರವಾಸ, ಬೈಕ್‌ ರೈಡ್‌ ನನ್ನ ಹವ್ಯಾಸವಾಗಿದೆ. ಅಲ್ಲದೇ ನಾನು ವಾರ್ಡ್‌ ಸಂಖ್ಯೆ 35ರಲ್ಲಿರುವ ‘ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಮಂಡಳಿ’ಯಲ್ಲಿ ಕಾರ್ಯದರ್ಶಿಯಾಗಿದ್ದು, ಬಿಡುವಿನ ಸಮಯವನ್ನು ಸಮಾಜಸೇವೆಗಾಗಿ ಮೀಸಲಿಟ್ಟಿದ್ದೇನೆ.

ಇದುವರೆಗೂ ಸಿಕ್ಕ ಪ್ರಶಸ್ತಿಗಳು?

ನಾನು ಪ್ರಶಸ್ತಿಗಾಗಿ ಸ್ಪರ್ಧಿಸಲಿಲ್ಲ. ಆದರೆ ನನ್ನ ಕಲೆಗೆ ‘2015ರಲ್ಲಿ ‘ಮಿಸ್ಟರ್ ದಸರಾ’ ರನ್ನರ್‌ ಅಪ್, 2016ರಲ್ಲಿ ‘ಟಾಪ್‌ ಮಾಡೆಲ್‌ ಆಫ್‌ ಕರ್ನಾಟಕದ ‘ಮಿಸ್ಟರ್‌ ರನ್ನರ್‌ ಅಪ್’, ‘ಮಿಸ್ಟರ್ ಕರ್ನಾಟಕ ಎಲಿಜೆಂಟ್‌’–2017ರಲ್ಲಿ ‘ಮಿಸ್ಟರ್‌ ಸ್ಮಾರ್ಟ್‌ ಹಾಗೂ ‘ಟಾಪ್ ಮಾಡೆಲ್‌ ಆಫ್ ಮೈಸೂರು’, ‘ಮಿಸ್ಟರ್ ಆಟಿಟ್ಯೂಡ್ –2017’ ಪ್ರಶಸ್ತಿಗಳು ಲಭಿಸಿದೆ ಜೊತೆಗೆ ‘ಮಾಡೆಲ್‌ ಆಫ್‌ ಈಯರ್‌–2017’, ‘ಮಿಸ್ಟರ್‌ ಸ್ಪೆಕ್ಟ್ರಾ–2017’, ‘ವೋಗ್ ಕಾರ್ನಿವಲ್‌ ಮಿಸ್ಟರ್ ರನ್ವೇ–2018’ ಪ್ರಶಸ್ತಿಗಳು ಲಭಿಸಿವೆ.

ನಿಮ್ಮ ಮುಂದಿನ ಯೋಜನೆ?

ನನ್ನ ಮುಂದಿನ ಯೋಜನೆ ‘ಮಿಸ್ಟರ್ ಇಂಡಿಯಾ’ ಆಗುವ ಮೂಲಕ ಫ್ಯಾಷನ್‌ ಲೋಕದಲ್ಲಿ ಮಿಂಚುವಾಸೆಯಿದೆ.

ರೂಪದರ್ಶಿ ಆಗಲು ಬರುವವರಿಗೆ ನಿಮ್ಮ ಸಂದೇಶ?

ಯಾವುದೇ ರೂಪದರ್ಶಿಯಾದರೂ ಗೆಲುವಿರಲಿ, ಸೋಲಿರಲಿ ತಮ್ಮ ವಿಶ್ವಾಸ ಬಿಡಬಾರದು. ತೀರಾ ಕಷ್ಟ ಎನಿಸಿದಲ್ಲಿ ಹೋಗುವ ದಾರಿಯನ್ನು ಬದಲಾಯಿಸಬೇಕೆ ಹೊರತು ಗುರಿಯನ್ನಲ್ಲ ಎನ್ನುವುದೇ ನನ್ನ ಸಂದೇಶ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !