ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನೀ ಸೌಂದರ್ಯವೇ... ಶಸ್ತ್ರಚಿಕಿತ್ಸೆ ಅನಿವಾರ್ಯವೇ?

Last Updated 10 ಜೂನ್ 2022, 19:30 IST
ಅಕ್ಷರ ಗಾತ್ರ

‘ಸೌಂದರ್ಯದ ಮೇಲಿನ ಕಾಳಜಿ ಇರಬೇಕು. ಆದರೆ, ಅದು ಅತಿಯಾಗಬಾರದು’ ಎನ್ನುತ್ತಾರೆ ಸೆಲೆಬ್ರಿಟಿ ಜಿಮ್‌ ಟ್ರೈನರ್‌ ಪವಿ ಪಡುಕೋಣೆ.

‘ಕೇವಲ 10–15 ದಿನಗಳಲ್ಲಿ ತೂಕ ಕಡಿಮೆ ಮಾಡಿಕೊಳ್ಳುವ ಆತುರದಿಂದ ನಮ್ಮ ಜಿಮ್‌ಗೆ ಬರುತ್ತಾರೆ. ಬದಲಾದ ಜೀವನಶೈಲಿ ಮತ್ತು ಎಲ್ಲವೂ ತ್ವರಿತವಾಗಿ ಆಗಬೇಕು ಎನ್ನುವ ಒತ್ತಡದ ಮನಃಸ್ಥಿತಿಯಿಂದ ನಮ್ಮಲ್ಲಿಗೆ ಬರುವ ಯುವಜನರು ಹೆಚ್ಚು. ಇದು ಸಾಧ್ಯವೇ? ಇಂಥ ಪ್ರಯೋಗಗಳ ಪರಿಣಾಮವನ್ನು ಈಗಲೇ ನೋಡುತ್ತಿದ್ದೇವಲ್ಲಾ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅವರು.

ಸಾಮಾಜಿಕ ಜಾಲತಾಣಗಳಲ್ಲಿ ಚೆಂದವಾಗಿ ಕಾಣಿಸಿಕೊಳ್ಳುವ ಹಂಬಲ, ರೀಲ್ಸ್‌, ಪೋಸ್ಟ್‌ಗಳ ಟ್ರೆಂಡ್‌, ಧಾರಾವಾಹಿ, ಸಿನಿಮಾಗಳಿಗೆ ಸೇರುವ ಆಸೆ ಇವೆಲ್ಲವೂ ಇನ್ನಿಲ್ಲದಂತೆ ಸೌಂದರ್ಯ ಕಾಳಜಿಯತ್ತ ಜನರು ಹುಡುಕಿ ಹೋಗುವಂತೆ ಮಾಡಿದೆ. ಅದಕ್ಕೆ ತಕ್ಕಂತೆ ಸೌಂದರ್ಯ ಚಿಕಿತ್ಸೆ ಉದ್ಯಮದ ಸ್ವರೂಪ ಪಡೆದಿದೆ. ಹೀಗೆ ಅತಿಯಾದ ಕಾಳಜಿ, ದಿಢೀರ್‌ ಬದಲಾವಣೆಯ ಒತ್ತಡಕ್ಕೊಳಗಾಗಿ ಚಿಕಿತ್ಸೆ ಪಡೆದ ಪರಿಣಾಮವೇ ಇತ್ತೀಚೆಗೆ ಕಿರುತೆರೆ ನಟಿ ಚೇತನಾ ರಾಜ್‌ ಅವರ ಸಾವು ಸಂಭವಿಸಿದ್ದು.

ತಮ್ಮ ಅತಿಯಾದ ಸೌಂದರ್ಯ ಕಾಳಜಿಯಿಂದಾಗಿ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದ ಕಿರುತೆರೆ ನಟಿ ಚೇತನಾ ರಾಜ್, ಸರ್ಜರಿ ನಂತರ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಸಾವನ್ನಪ್ಪಿದರು. ಚೇತನಾ ಸಾವಿನಿಂದ ಯುವಜನತೆ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ. ಇಂತಹ ಸರ್ಜರಿಗಳು, ಉಂಟು ಮಾಡುವ ದುಷ್ಪರಿಣಾಮಗಳು ಅನೇಕ ಎನ್ನುತ್ತಾರೆ ಚರ್ಮರೋಗ ತಜ್ಞ ಡಾ. ಶ್ರೀನಿವಾಸ್.

‘ಧಾರಾವಾಹಿ, ಸಿನಿಮಾ ಸೇರುವುದಕ್ಕೆ ಕನಸು ಕಾಣುವುದು, ಅದಕ್ಕಾಗಿ ಪ್ರಯತ್ನಿಸುವುದು ತಪ್ಪಲ್ಲ. ಆದರೆ, ಸರಿಯಾದ ತರಬೇತಿ ಪಡೆದು ಹೋಗಬೇಕು. ಯಾರೋ ಏನೋ ಹೇಳಿದರು ಎಂದು ಅದನ್ನೇ ಮನಸ್ಸಿಗೆ ಹಚ್ಚಿಕೊಳ್ಳ ಬಾರದು’ ಎನ್ನುತ್ತಾರೆ ಸೌಂದರ್ಯ ತಜ್ಞೆ ಪ್ರತಿಭಾ.

ಇಂಥದ್ದೊಂದು ಸೌಂದರ್ಯದ ಕಾಳಜಿಯಿರುವವರು ಹೇಗಾದರೂ ಮಾಡಿ ದೇಹದ ಕೊಬ್ಬು ಕರಗಿಸಲು ಪ್ರಯತ್ನಿಸುತ್ತಿರುತ್ತಾರೆ. ಕೊಬ್ಬು ಕರಗಿಸುವ ಚಿಕಿತ್ಸೆ ಸದ್ಯ ಟ್ರೆಂಡ್‌ನಲ್ಲಿದೆ. ಅದರಲ್ಲೂ ಎರಡು ವಿಧಗಳಿವೆ. ಅವುಗಳೆಂದರೆ ಬೇರಿಯಾಟ್ರಿಕ್ ಮತ್ತು ಕಾಸ್ಮೆಟಿಕ್ ಲೈಪೋಸಕ್ಷನ್.

ತೂಕ ಕಡಿಮೆ ಮಾಡುವುದು ಅಥವಾ ತೂಕ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ಯುವಜನರು ಈ ಚಿಕಿತ್ಸೆಗೆ ಒಳಪಡುತ್ತಾರೆ. ಡಯೆಟ್ ಮತ್ತು ವ್ಯಾಯಾಮ ವ್ಯಕ್ತಿಯ ದೇಹದ ತೂಕವನ್ನು ನಿಯಂತ್ರಿಸುವಲ್ಲಿ ವಿಫಲವಾದಾಗ ಅಥವಾ ಅಧಿಕ ದೇಹ ತೂಕದಿಂದಾಗಿ ಗಂಭೀರ ಸಮಸ್ಯೆ ಎದುರಾದಾಗ ಮಾತ್ರ ಈ ಸರ್ಜರಿಗೆ ವೈದ್ಯರು ಶಿಫಾರಸು ಮಾಡ್ತಾರೆ.

ಕಾಸ್ಮೆಟಿಕ್ ಲೈಪೋಸಕ್ಷನ್– ಅನಗತ್ಯ ಕೊಬ್ಬನ್ನು ಕರಗಿಸುವ ಸರಳ ಲೇಸರ್ ಚಿಕಿತ್ಸೆ. ವಿಶೇಷವಾಗಿ ಹೊಟ್ಟೆ ಮತ್ತು ಸೊಂಟದ ಸುತ್ತ ಸಂಗ್ರಹವಾಗುವ ಬೊಜ್ಜನ್ನು ಕರಗಿಸಲು ಬಳಸಲಾಗುತ್ತದೆ.

ಸಾಮಾನ್ಯವಾಗಿ ಕಾಸ್ಮೆಟಿಕ್ ಸರ್ಜರಿಗೆ ನಿರ್ದಿಷ್ಟ ಮಾರ್ಗಸೂಚಿಗಳಿಲ್ಲ. ಆದರೆ, ಸಣ್ಣ ಕ್ಲಿನಿಕ್‌ನಲ್ಲಿ ಯಾವುದೇ ಕಾರಣಕ್ಕೂ ಸರ್ಜರಿ ಮಾಡುವ ಹಾಗಿಲ್ಲ. ಸಾಮಾನ್ಯ ಪ್ರಕ್ರಿಯೆಗಳನ್ನಷ್ಟೇ ಮಾಡಬಹುದು. ಹಾಗೆಂದು ದೊಡ್ಡ ಆಸ್ಪತ್ರೆಗಳು ಸರ್ಜರಿ ಮಾಡಬಹುದು ಎಂದಲ್ಲ. ಅವರಿಗೂ ಅದರದ್ದೇ ಆದ ಮಾನದಂಡಗಳಿವೆ. ರೋಗಿ ಚಿಕಿತ್ಸೆಗಾಗಿ ಬಂದರೂ, ಮೊದಲು ಅವರ ಒಪ್ಪಿಗೆ ತೆಗೆದುಕೊಳ್ಳಬೇಕು. ನಂತರ ಅವರ ಮನೆಯವರ ಸಹಿಯೊಂದಿಗೆ ಅನುಮತಿ ಪಡೆಯಬೇಕು. ಸರ್ಜರಿಗೆ ಒಳಪಡುವ ವ್ಯಕ್ತಿಯ ವೈದ್ಯಕೀಯ ಪ್ರಮಾಣಪತ್ರದ ಪ್ರಕಾರ ಆರೋಗ್ಯ ಸ್ಥಿತಿ ಸಮರ್ಪಕವಾಗಿದ್ದರೆ ಮಾತ್ರ ಸರ್ಜರಿ ಮಾಡಬೇಕು ಇಲ್ಲವಾದಲ್ಲಿ ಅಂತಹ ಆಸ್ಪತ್ರೆಯ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT