ಸೋಮವಾರ, ಮಾರ್ಚ್ 8, 2021
22 °C

ಗುರಿಯತ್ತ ಛಲದ ನಡಿಗೆ

ಕಾವ್ಯ ಸಮತಳ Updated:

ಅಕ್ಷರ ಗಾತ್ರ : | |

Deccan Herald

ನಾನು ಮಾಡೆಲ್‌ ಆಗಬೇಕು ಎಂಬ ಕನಸು ಚಿಕ್ಕಂದಿನಿಂದಲೇ ಇತ್ತು. ಶಾಲಾ ಕಾಲೇಜು ದಿನಗಳಲ್ಲಿ ಓದಿನ ಜೊತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ನಾನು ಮುಂದಿದ್ದೆ. ಪದವಿ ಓದುತ್ತಿದ್ದ ಸಮಯದಲ್ಲಿ ವೇದಿಕೆ ಮೇಲೆ ಚಂದದ ಉಡುಗೆ ತೊಟ್ಟು ಹೆಜ್ಜೆ ಹಾಕಿದ್ದು ಇದೆ. ಚೆನ್ನಾಗಿ ಓದಬೇಕು. ಜನ ಮೆಚ್ಚುವಂತೆ ಏನಾದರೂ ಸಾಧಿಸಬೇಕು ಎಂಬ ತುಡಿತ ಆಗ ನನ್ನಲ್ಲಿತ್ತು. 

ಪದವಿ ಮುಗಿಯುತ್ತಿದ್ದಂತೆ ನಮ್ಮ ಮನೆಯಲ್ಲಿಯೂ ಮದುವೆಯಾಗಬೇಕು ಎಂಬ ಕಟ್ಟಾಜ್ಞೆಯನ್ನು ಹೊರಡಿಸಿದರು. ನನ್ನ ಆಸೆಗಳನ್ನೆಲ್ಲಾ ಗಂಟು ಕಟ್ಟಿಟ್ಟು, ಮದುವೆಗೆ ಸಮ್ಮತಿ ಸೂಚಿಸಿದೆ. 

ಹೀಗೆ ಆರಂಭವಾದ ನನ್ನ ಸಾಂಸಾರಿಕ ಜೀವನ ಮುನ್ನಡೆಯುತ್ತಿದೆ. ಮಕ್ಕಳ ಲಾಲನೆ, ಪೋಷಣೆಯಲ್ಲಿ ಸ್ವಲ್ಪ ಸಮಯ ಕಳೆವಾಗಲೂ ನಾನು ಕಂಡಿದ್ದ ಕನಸುಗಳು ಮತ್ತೆ ಮತ್ತೆ ನನ್ನನ್ನು ಎಚ್ಚರಿಸುತ್ತಿದ್ದವು. ಮಕ್ಕಳಿಗಾಗಿ ಈವೆಂಟ್‌ ನಡೆಸಲು ಆರಂಭಿಸಿದೆ. ಮಾಸ್ಟರ್‌ ಶೆಫ್‌, ಕ್ರಿಸ್‌ಮಸ್‌ ಸಮಯಗಳಲ್ಲಿ ಮಕ್ಕಳಿಗಾಗಿ ಈವೆಂಟ್‌ಗಳನ್ನು ನಡೆಸುತ್ತಿದ್ದೆ. ನನ್ನ ಸಂಗಾತಿಯು ಕೂಡ ನನ್ನನ್ನು ಪ್ರೋತ್ಸಾಹಿಸಿದ್ದರಿಂದ ಮಾಡೆಲಿಂಗ್‌ ಕ್ಷೇತ್ರದಲ್ಲಿ ಏನಾದರೂ ಮಾಡಬೇಕೆಂಬ ಆಸೆಯಿಂದ ಈ ಕ್ಷೇತ್ರಕ್ಕೆ ಹೆಜ್ಜೆ ಇರಿಸಿದೆ.

ಮಾಡೆಲಿಂಗ್‌ ಕ್ಷೇತ್ರದ ಬಗ್ಗೆ ಕೊಂಚ ಪರಿಚಯ ಇತ್ತು. ಆದ್ದರಿಂದ ಯಾವುದು ಕಷ್ಟ ಎನಿಸಲಿಲ್ಲ. ನನ್ನ ವಯಸ್ಸು ಸಹಜವಾಗಿಯೇ ಒಂದು ಸವಾಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಇದು ನನ್ನಲ್ಲಿದ್ದ ಮುಜುಗರವನ್ನು ಮಾಯ ಮಾಡಿ, ನಾನು ಇನ್ನಷ್ಟು ಸಕ್ರಿಯವಾಗಿ ಈ ಕ್ಷೇತ್ರದಲ್ಲಿ ನಿರತಳಾಗಿರುವಂತೆ ಮಾಡಿತು. ಆಕ್ಟೀವ್‌ ಹೊಂಡಾ ಗಾಡಿಗೆ ಮಾಡೆಲ್‌ ಆಗುವ ಮೂಲಕ ಈ ಕ್ಷೇತ್ರದ ಪರಿಚಯವಾಯಿತು. 

ಮಿಸಸ್‌ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸುವಾಗ ಹಿಂಜರಿಕೆಯಿತ್ತು. ಆದರೆ ಇದಕ್ಕಾಗಿ ನಡೆದ ತಯಾರಿ ಸಮಯದಲ್ಲಿ ನನ್ನಂತೆ ಹಲವಾರು ಮಹಿಳೆಯರು ಮಾಡೆಲಿಂಗ್‌ನಲ್ಲಿ ಖುಷಿಯಿಂದಲೇ ಇದ್ದಿದ್ದರಿಂದ ಸ್ಪರ್ಧೆಗೆ ತಯಾರಾಗಬೇಕು ಎಂಬುದನ್ನು ಬಿಟ್ಟರೆ ಬೇರಾವ ಆಲೋಚನೆಗಳು ನನ್ನನ್ನು ಕಾಡಲಿಲ್ಲ. ಕೊನೆಗೆ ನನ್ನಲ್ಲಿದ್ದ ಆತ್ಮವಿಶ್ವಾಸವೇ ಅಂತಿಮ ಸ್ಪರ್ಧೆಯಲ್ಲಿ ನನ್ನನ್ನೂ ಒಬ್ಬಳಾಗುವಂತೆ ಮಾಡಿತು. 

ಯಾವುದೇ ಕ್ಷೇತ್ರದಲ್ಲಾಗಲಿ ನಾವು ಮುಂದುವರೆಯಬೇಕೆಂದರೆ ಕುಟುಂಬದವರ ಸಹಕಾರ ಅತಿಮುಖ್ಯ. ನನ್ನ ಗಂಡ, ಅತ್ತೆ, ಮಕ್ಕಳು ಎಲ್ಲರೂ ಮಾಡೆಲಿಂಗ್‌ ಪಯಣ ಆರಂಭವಾದಾಗಿನಿಂದ ನನಗೆ ಬೆಂಬಲವಾಗಿ ನಿಂತಿದ್ದಾರೆ. ನನ್ನ ಮಗಳು ಕೆಲವು ಸಲಹೆಗಳನ್ನು ಕೊಡುತ್ತಾಳೆ. ನಾನು ಮನೆಯಿಂದ ಹೊರಗಿದ್ದರೂ ಮನೆ ನಿರ್ವಹಣೆ ಮಾಡುತ್ತಾಳೆ. ಹಾಗಾಗಿ ಕುಟುಂಬ ನಿರ್ವಹಣೆ ಸಮಸ್ಯೆ ಎನಿಸಲಿಲ್ಲ. 

ನಮ್ಮ ವ್ಯಕ್ತಿತ್ವವೇ ನಮ್ಮ ಸೌಂದರ್ಯ. ಈ ಆಂತರಿಕ ಸೌಂದರ್ಯದೊಟ್ಟಿಗೆ ಬಾಹ್ಯ ಸೌಂದರ್ಯದ ಬಗ್ಗೆ ಗಮನ ಕೊಡಬೇಕು. ಈಜುವುದೆಂದರೆ ನನಗಿಷ್ಟ. ಹಾಗಾಗಿ ಪ್ರತಿನಿತ್ಯದ ವರ್ಕ್‌ಔಟ್‌ನಲ್ಲಿ ಇದಕ್ಕೆ ಮೊದಲ ಸ್ಥಾನ. ಉಳಿದಂತೆ ಜಾಗಿಂಗ್‌, ನಿಯಮಿತವಾಗಿ ವ್ಯಾಯಾಮ ಮಾಡುತ್ತೇನೆ. ಊಟದ ವಿಷಯದಲ್ಲಿ ತೀರಾ ಕಟ್ಟುನಿಟ್ಟಿಲ್ಲ. ಇಷ್ಟವಾದದ್ದನ್ನು ತಿನ್ನುತ್ತೇನೆ. 

ಪ್ರಯಾಣ ಮಾಡುವುದೆಂದರೆ ನನಗಿಷ್ಟ. ಸ್ನೇಹಿತರು ಅಥವಾ ಕುಟುಂಬದವರೊಟ್ಟಿಗೆ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡುತ್ತೇನೆ.  ಮಾಡೆಲಿಂಗ್‌ ಕ್ಷೇತ್ರದಲ್ಲಿಯೇ ಮುಂದು ವರೆಯಬೇಕು ಎಂಬ ಆಸೆಯಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.