ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಾಬಿಯನ್ನು ಔಷಧ–ಸೌಂದರ್ಯವರ್ಧಕವಾಗಿ ಬಳಸುವುದು ಹೇಗೆ? ಇಲ್ಲಿದೆ ಟಿಪ್ಸ್‌

Last Updated 28 ಜನವರಿ 2022, 19:30 IST
ಅಕ್ಷರ ಗಾತ್ರ

ಗುಲಾಬಿ ಹೂವುಗಳ ರಾಣಿ. ಈ ಹೂವಿನ ಅಂದಕ್ಕೆ ಮರುಳಾಗದವರಿಲ್ಲ. ಡಮಾಸ್ಕ್ ಗುಲಾಬಿ ತಳಿಯ ಸುಗಂಧ ಇತರೆಲ್ಲ ಗುಲಾಬಿ ತಳಿಗಳನ್ನು ಮೀರಿಸುತ್ತದೆ. ಇಂಥ ಚಂದದ ಹೂವನ್ನುಕೇಶಾಲಂಕಾರಕ್ಕಾಗಿ, ಹಾರ, ತುರಾಯಿ, ಬೊಕ್ಕೆ ಮನೆಯ ಅಲಂಕಾರಕ್ಕಾಗಿ ಬಳಸುತ್ತಾರೆ.

ಅಲಂಕಾರದಿಂದಲೇ ‘ರಾಣಿ’ ಸ್ಥಾನ ಪಡೆದಿರುವ ಈ ಹೂವಿನ ಪಕಳೆಗಳಲ್ಲಿ ಔಷಧದ ಜೊತೆಗೆ ಸೌಂದರ್ಯ ವರ್ಧಿಸುವ ಗುಣಗಳೂ ಇವೆ. ಈ ಹೂವಿನ ‘ನೀರು’ ಅಂದರೆ ರೋಸ್ ವಾಟರ್ ಪ್ರಸಾದನ ಕ್ಷೇತ್ರದಲ್ಲಿ ಬಲು ಜನಪ್ರಿಯ. ಅದೇ ರೀತಿ ಗುಲಾಬಿ ಎಣ್ಣೆ, ಪಾಂಕುರಿ (ಗುಲಾಬಿ ಪಕಳೆಗಳನ್ನು ಒಣಗಿಸಿ, ಪುಡಿ ಮಾಡಿ, ಅದಕ್ಕೆ ಕೇಸರಿ, ಜೇನುತುಪ್ಪ ಬೆರೆಸಿ ತಯಾರಿಸುವ ಪೇಸ್ಟ್‌) ಮತ್ತು ಗುಲ್ಕಂದ್ ಕೂಡ ಔಷಧ ಹಾಗೂ ಸೌಂದರ್ಯವರ್ಧಕವಾಗಿ ಬಳಸಬಹುದು. ಈ ಉತ್ಪನ್ನಗಳನ್ನು ಔಷಧ–ಸೌಂದರ್ಯವರ್ಧಕವಾಗಿ ಬಳಸುವ ಬಗೆ ಹೇಗೆ? ಇಲ್ಲಿದೆ ಮಾಹಿತಿ.

ಗುಲಾಬಿ ಎಣ್ಣೆಗೆ ಎಳ್ಳೆಣ್ಣೆಯನ್ನು ಸಮ ಪ್ರಮಾಣದಲ್ಲಿ ಬೆರೆಸಿಕೊಂಡು, ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮೈಗೆ ಹಚ್ಚಿ ಮಸಾಜ್ ಮಾಡಿಕೊಂಡರೆ ಚರ್ಮದ ಕಾಂತಿ ಹೆಚ್ಚುತ್ತದೆ, ಚರ್ಮ ಮೃದುವಾಗುತ್ತದೆ.

ಗುಲಾಬಿ ಎಣ್ಣೆಯ ಕೆಲ ಹನಿಗಳನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡಬೇಕು. ಇಲ್ಲವೇ ಗುಲಾಬಿ ದಳಗಳನ್ನು ನೀರಿನಲ್ಲಿ ಹಾಕಿಯೂ ಸ್ನಾನ ಮಾಡುವುದರಿಂದ ಆಯಾಸ ಪರಿಹಾರವಾಗುತ್ತದೆ.

ರಾತ್ರಿ ಮಲಗುವ ಮುನ್ನ ಕಣ್ಣಿನ ಸುತ್ತಲೂ ಗುಲಾಬಿ ಜಲ(ರೋಸ್ ವಾಟರ್‌) ಅಥವಾ ಗುಲಾಬಿ ಎಣ್ಣೆಯನ್ನು ಲೇಪಿಸಿಕೊಂಡರೆ ಕಣ್ಣಿನ ಸುತ್ತಲೂ ಉಂಟಾಗುವ ಕಪ್ಪುನ್ನು ನಿವಾರಿಸಬಹುದು.

ಗುಲಾಬಿ ದಳಗಳನ್ನು ನುಣ್ಣಗೆ ರುಬ್ಬಿ ಪೇಸ್ಟ್ ತಯಾರಿಸಿಕೊಂಡು ಮುಖಕ್ಕೆ ಲೇಪಿಸಿಕೊಂಡು ಒಂದು ಗಂಟೆಯ ನಂತರ ಮುಖ ತೊಳೆಯಬೇಕು. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ. ವಾರಕ್ಕೊಮ್ಮೆ ಅಥವಾ ಹತ್ತು ದಿನಗಳಿಗೊಮ್ಮೆ ಈ ರೀತಿ ಮಾಡಿದರೆ ಮುಖದ ಕಾಂತಿ ಹೆಚ್ಚುತ್ತದೆ.

ಕಣ್ಣಿನ ಸುತ್ತಲೂ ಗುಲಾಬಿ ನೀರನ್ನು ಲೇಪಿಸುವುದರಿಂದ ಕಣ್ಣುಉರಿ ಕಡಿಮೆಯಾಗುತ್ತದೆ.

ತಲೆನೋವಿನಿಂದ ಬಳಲುತ್ತಿರುವಾಗ ಗುಲಾಬಿ ಎಣ್ಣೆಯನ್ನು ಹಣೆಯ ಮೇಲೆ ಲೇಪಿಸಿಕೊಳ್ಳಬೇಕು.

ಗುಲಾಬಿಯಿಂದ ತಯಾರಿಸುವ ಗುಲ್ಕಂದ್‌, ಆಹಾರ ಮಾತ್ರವಲ್ಲ– ಔಷಧವಾಗಿಯೂ ಉಪಯುಕ್ತ. ಒಂದು ಚಮಚ ಗುಲ್ಕಂದ್‌ ಅನ್ನು ಹಾಲಿನೊಡನೆ ಬೆರೆಸಿ, ದಿನಕ್ಕೆರಡು ಬಾರಿ ಸೇವಿಸುವುದರಿಂದ ರಕ್ತ ಮೂಲವ್ಯಾಧಿ, ದಾಹ, ಗಂಟಲು ನೋವು, ಮಹಿಳೆಯರಲ್ಲಿ ಉಂಟಾಗುವ ತೀವ್ರ ರಕ್ತಸ್ರಾವ ಗುಣವಾಗುತ್ತದೆ.

ಡಮಾಸ್ಕ್ ಮತ್ತು ಬಾರ್ಬೇರಿಯನ್ ಜಾತಿಯ ಗುಲಾಬಿ ಪಕಳೆಗಳನ್ನು ಬಳಸಿ, ಸಕ್ಕರೆ, ಜೇನು ಸೇರಿಸಿ ತಯಾರಿಸಿದ ಗುಲ್ಕಂದ್‌ ಶಕ್ತಿವರ್ಧಕ, ಲಘು ವಿರೇಚಕ ಮತ್ತು ಬಾಯಿಹುಣ್ಣಿಗೆ ಉತ್ತಮ ಔಷಧ.

ಮಲಗುವ ಮುನ್ನ ಗುಲಾಬಿ ಜಲದ(ರೋಸ್ ವಾಟರ್) ಕೆಲ ಹನಿಗಳನ್ನು ದಿಂಬಿನ ಮೇಲೆ ಚಿಮುಕಿಸುವುದರಿಂದ ಮನಸ್ಸು ಉಲ್ಲಸಿತವಾಗಿ, ತುಂಬಾ ಚೆನ್ನಾಗಿ ನಿದ್ದೆ ಬರುತ್ತದೆ.

ಗುಲಾಬಿ ಹೂವಿನ ಕಷಾಯಕ್ಕೆ ಸ್ವಲ್ಪ ತುಪ್ಪ ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿಯಬೇಕು. ಇದರಿಂದ ಮಲಬದ್ಧತೆ ತೊಂದರೆ ನಿವಾರಣೆಯಾಗುತ್ತದೆ.ಕಷಾಯ ತಯಾರಿಕೆ:ಒಂದು ಲೋಟ ನೀರಿಗೆ, 25 ಗ್ರಾಂಗಳಷ್ಟು ಗುಲಾಬಿ ದಳಗಳನ್ನು ಹಾಕಿ. ಆ ನೀರನ್ನು ಕುದಿಸಿ, ಅದು ಅರ್ಧಕ್ಕೆ ಇಳಿದ ನಂತರ, ಆರಿಸಿದರೆ. ಕಷಾಯ ಸಿದ್ಧ.

ಮಲವಿಸರ್ಜನೆ ವೇಳೆ ರಕ್ತ ಬೀಳುತ್ತಿದ್ದರೆ, ಅಂಥವರು ರಾತ್ರಿ ಮಲಗುವ ಮುನ್ನ 25 ಗುಲಾಬಿ ಹೂವಿನ ಪಕಳೆಗಳು ನೆನೆಯಿಟ್ಟು ಬೆಳಿಗ್ಗೆ ಅವುಗಳನ್ನು ಚೆನ್ನಾಗಿ ಅರೆದು, ಶೋಧಿಸಿಕೊಂಡು ಕಲ್ಲುಸಕ್ಕರೆ ಪುಡಿ ಬೆರೆಸಿ ಕುಡಿಯಬೇಕು.

100 ಗ್ರಾಂ ನಷ್ಟು ಗುಲಾಬಿ ಹೂವಿನ ದಳಗಳು, ಕಲ್ಲುಸಕ್ಕರೆ 10 ಗ್ರಾಂ, ಪಚ್ಚೆಕರ್ಪೂರ 5 ಗ್ರಾಂ ಎಲ್ಲವನ್ನೂ ಬೆರೆಸಿ, ನುಣ್ಣಗೆ ಅರೆದು ಮಾತ್ರೆ ರೀತಿ ತಯಾರಿಸಿಟ್ಟುಕೊಳ್ಳಬೇಕು. ಆಗಾಗ ಈ ಮಾತ್ರೆಯನ್ನು ಬಾಯಿಗೆ ಹಾಕಿ ಚಪ್ಪರಿಸುತ್ತಿದ್ದರೆ ಬಾಯಿಯ ದುರ್ವಾಸನೆ ದೂರವಾಗುತ್ತದೆ. ಇದೇ ಮಾತ್ರೆಗಳು ಕೆಮ್ಮು ನಿವಾರಣೆಗೂ ಔಷಧವಾಗುತ್ತದೆ.

ಎಲ್ಲ ಗುಲಾಬಿಗಳೂ ಔಷಧ ಮತ್ತು ಸೌಂದರ್ಯವರ್ಧಕವಾಗಿ ಬಳಕೆಯಾಗುವುದಿಲ್ಲ. ಗುಲಾಬಿ ಎಣ್ಣೆ ಗುಲಾಬಿ ಜಲ, ಪಾಂಕುರಿ, ಗುಲ್ಕಂದ್‌, ಕಷಾಯದ ಪುಡಿಗಳು ಆಯುರ್ವೇದ ಔಷಧದ ಅಂಗಡಿಗಳು, ಆರೊಮಾ ಥೆರಪಿ ಕೇಂದ್ರಗಳಲ್ಲಿ ಲಭ್ಯವಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT