ಬೆಳಗಾವಿ: ವಿಮಾನ ಹಾರಾಟ ಸ್ಥಗಿತ

7
ಇದೇ 30ಕ್ಕೆ ಕೊನೆ: ಹುಬ್ಬಳ್ಳಿಗೆ ವರವಾದ ಉಡಾನ್‌ !

ಬೆಳಗಾವಿ: ವಿಮಾನ ಹಾರಾಟ ಸ್ಥಗಿತ

Published:
Updated:
ಸಾಂಬ್ರಾ ವಿಮಾನ ನಿಲ್ದಾಣ

ಬೆಳಗಾವಿ: ಜುಲೈ 1ರಿಂದ ಬೆಳಗಾವಿ (ಸಾಂಬ್ರಾ) ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ಸ್ಥಗಿತಗೊಳ್ಳಲಿದೆ.

ಸದ್ಯಕ್ಕೆ ಇಲ್ಲಿಂದ ಬೆಂಗಳೂರಿಗೆ ಹಾರಾಟ ನಡೆಸುತ್ತಿರುವ ಏಕೈಕ ವಿಮಾನವನ್ನೂ ಸ್ಥಗಿತಗೊಳಿಸಲು ಸ್ಪೈಸ್‌ಜೆಟ್‌ ಕಂಪನಿ ನಿರ್ಧರಿಸಿದ್ದು, ಇದೇ ತಿಂಗಳ 30ರಂದು ಕೊನೆಯ ಹಾರಾಟ ನಡೆಸಲಿದೆ.

ಎರಡು ತಿಂಗಳ ಹಿಂದೆಯಷ್ಟೇ ಇಲ್ಲಿಂದ ಬೆಂಗಳೂರು, ಹೈದರಾಬಾದ್‌, ಚೆನ್ನೈ ಹಾಗೂ ಮುಂಬೈಗೆ ಪ್ರತಿದಿನ ನಾಲ್ಕು ವಿಮಾನಗಳು ಹಾರಾಟ ನಡೆಸುತ್ತಿದ್ದವು. ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ದಟ್ಟಣೆಯ ವಿಮಾನ ನಿಲ್ದಾಣವಾಗಿತ್ತು. ಈ ಅಂಶವೇ ವಿಮಾನ ನಿಲ್ದಾಣಕ್ಕೆ ‘ಶಾಪ’ವಾಗಿ ಪರಿಣಮಿಸಿದ್ದು, ಪಕ್ಕದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ‘ವರ’ವಾಗಿ ಪರಿಣಮಿಸಿದೆ.

‘ಉಡಾನ್‌’ ಯೋಜನೆಯ ಪರಿಣಾಮ!: ನಿರುಪಯುಕ್ತವಾದ ಅಥವಾ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ತೋರದ ವಿಮಾನ ನಿಲ್ದಾಣಗಳನ್ನು ಪುನಃಶ್ಚೇತನ ಗೊಳಿಸಲು ಕೇಂದ್ರದ ನಾಗರಿಕ ವಿಮಾನಯಾನ ಸಚಿವಾಲಯವು ‘ಉಡಾನ್‌’ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ವಿಮಾನಯಾನ ಸೇವೆ ನೀಡುವ ಕಂಪನಿಗಳಿಗೆ ಅನೇಕ ಆರ್ಥಿಕ ಸವಲತ್ತು ನೀಡುತ್ತದೆ. 500 ಕಿ.ಮೀ ಅಂತರದೊಳಗಿನ ಹಾಗೂ ಒಂದು ಗಂಟೆಯಲ್ಲಿ ಪ್ರಯಾಣಿಸಬಹುದಾದ ಊರುಗಳಿಗೆ ಕೇಂದ್ರ ಸರ್ಕಾರವು
₹ 2,500 ಪ್ರಯಾಣ ದರ ನಿಗದಿಗೊಳಿಸಿದೆ. ಇದಕ್ಕೆ, ಹೆಚ್ಚುವರಿಯಾಗಿ ತಗಲುವ ವೆಚ್ಚವನ್ನು ಸರ್ಕಾರವೇ ಕಂಪನಿಗಳಿಗೆ ಭರಿಸುತ್ತದೆ.

ಇದಲ್ಲದೇ, ವಿಮಾನ ನಿಲ್ದಾಣಗಳನ್ನು ಬಳಸಲು ಪಡೆಯಲಾಗುವ ಶುಲ್ಕದಲ್ಲಿಯೂ ಸರ್ಕಾರ ರಿಯಾಯಿತಿ ನೀಡುತ್ತದೆ. ಇವೆಲ್ಲ ಕಾರಣಗಳಿಂದಾಗಿ ಕಂಪನಿಗಳು ‘ಉಡಾನ್‌’ ಯೋಜನೆಯಡಿ ಆಯ್ಕೆಯಾದ ಊರುಗಳಿಗೆ ಹೋಗಲು ಬಯಸುತ್ತವೆ.

ಈ ಯೋಜನೆಯ ಎರಡನೇ ಹಂತದಲ್ಲಿ, ವಿಮಾನ ನಿಲ್ದಾಣ ಗಳನ್ನು ಆಯ್ಕೆ ಮಾಡಿಕೊಳ್ಳುವಾಗಲೂ ಹುಬ್ಬಳ್ಳಿಯಿಂದ ಕೇವಲ ಎರಡು ವಿಮಾನಗಳು ಹಾರಾಟ ನಡೆಸು ತ್ತಿದ್ದರೆ, ಬೆಳಗಾವಿಯಿಂದ ನಾಲ್ಕು ವಿಮಾನಗಳು ಹಾರಾಟ ನಡೆಸುತ್ತಿದ್ದವು. ಹೀಗಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅದೃಷ್ಟ ಒಲಿದುಬಂದಿತು. ಕಂಪನಿಗಳು ಅತ್ತ ಮುಖಮಾಡಿದವು.

‘ಅಲಯನ್ಸ್‌ ಏರ್‌’ ಆಸಕ್ತಿ: ‘ಕೇಂದ್ರ ಸರ್ಕಾರದ ಏರ್‌ ಇಂಡಿಯಾ ಕಂಪನಿಯ ಅಂಗಸಂಸ್ಥೆಯಾಗಿರುವ ‘ಅಲಯನ್ಸ್‌ ಏರ್‌’ ಪ್ರತಿನಿಧಿಗಳು, ಬೆಳಗಾವಿಯಿಂದ ವಿಮಾನ ಸಂಚಾರ ಆರಂಭಿಸಲು ಆಸಕ್ತಿ ತೋರಿದ್ದಾರೆ. ವಾರದಲ್ಲಿ ಕೇವಲ ಮೂರು ದಿನ (ಮಂಗಳವಾರ, ಬುಧವಾರ, ಶನಿವಾರ) ಕಾರ್ಯಾಚರಣೆ ನಡೆಸಲು ಪ್ರಸ್ತಾವ ಸಲ್ಲಿಸಿದ್ದಾರೆ.

ಅದಕ್ಕೆ ಇನ್ನೂ ಅಧಿಕೃತ ಒಪ್ಪಿಗೆ ದೊರೆತಿಲ್ಲ. ಇತರ ಕಂಪನಿಗಳ ಜೊತೆಯೂ ವಿಮಾನ ನಿಲ್ದಾಣ ಪ್ರಾಧಿಕಾರವು ಚರ್ಚೆಯಲ್ಲಿ ತೊಡಗಿದ್ದು, ವಿಮಾನಗಳನ್ನು ಕರೆತರಲು ಪ್ರಯತ್ನ ನಡೆಸಿದೆ’ ಎಂದು ಬೆಳಗಾವಿ ವಿಮಾನ ನಿಲ್ದಾಣದ ನಿಯಂತ್ರಣಾಧಿಕಾರಿ ಮೌರ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !