ಸಾಲ ಮನ್ನಾ: 28ರೊಳಗೆ ನೋಂದಾಯಿಸಿಕೊಳ್ಳಿ

7
ಬ್ಯಾಂಕ್‌ಗಳಲ್ಲಿ ಇಂದಿನಿಂದ ಪೊಲೀಸ್ ಭದ್ರತೆಯೊಂದಿಗೆ ರೈತರ ದಾಖಲಾತಿ ನೋಂದಣಿ

ಸಾಲ ಮನ್ನಾ: 28ರೊಳಗೆ ನೋಂದಾಯಿಸಿಕೊಳ್ಳಿ

Published:
Updated:

ವಿಜಯಪುರ: ಜಿಲ್ಲೆಯ ಎಲ್ಲ ರೈತರು ಸಾಲಮನ್ನಾ ಯೋಜನೆಯಡಿ ಸದುಪಯೋಗ ಪಡೆದುಕೊಳ್ಳಲು, ಇದೇ 28ರೊಳಗೆ ಬೆಳೆ ಸಾಲ ಪಡೆದ ಬ್ಯಾಂಕ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ತಿಳಿಸಿದ್ದಾರೆ.

ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡಲು, ಸರ್ಕಾರ ತಂತ್ರಾಂಶ ರೂಪಿಸಿದ್ದು, ಜಿಲ್ಲೆಯಲ್ಲಿ ಸಾಲಮನ್ನಾ ಕುರಿತ ತಂತ್ರಾಂಶ ಜಾರಿ ಮಾಡಲು, 2017ರ ಡಿಸೆಂಬರ್‌ ಅಂತ್ಯದವರೆಗೂ ಬೆಳೆ ಸಾಲ ಪಡೆದ, ಜಿಲ್ಲೆಯ ಪ್ರತಿಯೊಬ್ಬ ರೈತರು ಇದೇ 15ರಿಂದ 28ರೊಳಗೆ ತಾವು ಸಾಲ ಪಡೆದ ವಾಣಿಜ್ಯ ಬ್ಯಾಂಕ್‌ಗಳಿಗೆ ತೆರಳಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಈ ಯೋಜನೆಯಡಿ ನೋಂದಾಯಿಸಿಕೊಳ್ಳಲು ರೈತರಿಗೆ ಸಾಕಷ್ಟು ಸಮಯಾವಕಾಶ ನೀಡಲಾಗಿದೆ. ಬೆಳೆ ಸಾಲ ಪಡೆದ ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್‌, ರೇಷನ್ ಕಾರ್ಡ್‌ನ ನಕಲು ಪ್ರತಿಗಳನ್ನು ಮತ್ತು ತಾವು ಸಾಲ ಪಡೆದ ಭೂಮಿಯ ಸರ್ವೇ ನಂಬರ್‌ನ ಮಾಹಿತಿಯನ್ನು ತಪ್ಪದೇ ಸಲ್ಲಿಸಬೇಕು. ಪಹಣಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

ಒಂದು ಬ್ಯಾಂಕ್ ಶಾಖೆಯಲ್ಲಿ ಪ್ರತಿ ದಿನ ಕನಿಷ್ಠ 40 ರೈತರ ಹೆಸರುಗಳನ್ನು ಮಾತ್ರ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ರೈತರು ಕ್ರಮಬದ್ಧವಾಗಿ ಕ್ರಮ ಸಂಖ್ಯೆ ಮತ್ತು ದಿನಾಂಕ ನಮೂದಿಸಿ, ಟೋಕನ್‌ಗಳನ್ನು ನೀಡಿದ ದಿನಾಂಕದಂದು, ಬ್ಯಾಂಕ್ ಶಾಖೆಗೆ ಹೋಗಿ ಸ್ವಯಂ ದೃಢೀಕರಣ ಪತ್ರದೊಂದಿಗೆ ದಾಖಲಾತಿಗಳನ್ನು ನೀಡಿ ನೋಂದಾಯಿಸಿಕೊಳ್ಳಬೇಕು.

ಅರ್ಹತೆಗಳು: 2009ರ ಏಪ್ರಿಲ್‌ 1ರಿಂದ ಮತ್ತು ನಂತರದ ದಿನಗಳಲ್ಲಿ ಮಂಜೂರಾದ ಬೆಳೆ ಸಾಲಗಳು, 2017ರ ಡಿಸೆಂಬರ್‌ ಅಂತ್ಯದವರೆಗೂ ಬಾಕಿ ಇರುವ ಬೆಳೆ ಸಾಲಗಳು ಅಂದರೇ ಸುಸ್ತಿಸಾಲ, ಪುನರಾವಸ್ತಿ ಸಾಲ, ಎನ್‌ಪಿಎ ಸಾಲಗಳು ಈ ಯೋಜನೆಯಡಿ ಅರ್ಹವಾಗಿವೆ.

ವೈಯಕ್ತಿಕ ಬೆಳೆ ಸಾಲ ಪಡೆದ ರೈತರು ಮಾತ್ರ ಇದಕ್ಕೆ ಅರ್ಹರು. ಒಂದು ಕುಟುಂಬ ಗರಿಷ್ಠ ₹ 2 ಲಕ್ಷದವರೆಗೆ ಮಾತ್ರ ಬೆಳೆ ಸಾಲ ಮನ್ನಾ ಪಡೆಯಲು ಅರ್ಹ. ಇದಕ್ಕಾಗಿ 05/07/2018ಕ್ಕಿಂತ ಮುಂಚಿತವಾಗಿ ಪಡೆದ ರೇಷನ್ ಕಾರ್ಡ್‌ನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಯಾವ ರೈತರು ವಾರ್ಷಿಕ ಆದಾಯ ತೆರಿಗೆ ಪಾವತಿದಾರರೋ ಮತ್ತು ರಾಜ್ಯ, ಕೇಂದ್ರ ಸರ್ಕಾರಿ, ಅರೆ ಸರ್ಕಾರಿ, ಸರ್ಕಾರದಿಂದ ಅನುದಾನಕ್ಕೊಳಪಡುವ ಸಂಸ್ಥೆಗಳಲ್ಲಿ, ಸಾರ್ವಜನಿಕ ಸ್ವಾಮ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಈ ಬೆಳೆ ಸಾಲ ಮನ್ನಾ ಯೋಜನೆಗೆ ಅರ್ಹರಿರುವುದಿಲ್ಲ.

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು ₹ 15000ಕ್ಕಿಂತ ಹೆಚ್ಚಿನ ಪಿಂಚಣಿ ಪಡೆಯುವ ನಿವೃತ್ತ ನೌಕರರು ಈ ಯೋಜನೆಗೆ ಅರ್ಹರಲ್ಲ. ಹಾಗೂ ಈ ಮಿತಿಯು ಮಾಜಿ ಸೈನಿಕರಿಗೆ ಅನ್ವಯಿಸುವುದಿಲ್ಲ.

ಸಹಕಾರಿ ಬ್ಯಾಂಕ್‌ಗಳಲ್ಲಿನ ಬೆಳೆ ಸಾಲ ಮನ್ನಾ ಫಲಾನುಭವಿಗಳು ವಾಣಿಜ್ಯ ಬ್ಯಾಂಕ್ ಬೆಳೆಸಾಲ ಮನ್ನಾ ಯೋಜನೆಯಡಿ ಅರ್ಹರಿರುವುದಿಲ್ಲ.

ಅರ್ಹರಿರುವ ಎಲ್ಲ ರೈತರಿಗೆ ಸಾಲ ಮನ್ನಾ ಯೋಜನೆಯಡಿ ತಮ್ಮ ಬ್ಯಾಂಕ್ ಶಾಖೆಗಳಲ್ಲಿ ನೋಂದಾಯಿಸಿಕೊಳ್ಳಲು ಸಾಕಷ್ಟು ಸಮಯಾವಕಾಶ ನೀಡಲಾಗಿದ್ದು, ರೈತರು ಯಾವುದೇ ಗೊಂದಲಗಳಿಗೆ ಒಳಗಾಗದೆ, ಬ್ಯಾಂಕ್ ಅಧಿಕಾರಿಗಳೊಂದಿಗೆ ಸಹಕರಿಸಿ ಹೆಸರನ್ನು ನೋಂದಾಯಿಸಿಕೊಂಡು, ಇದರ ಲಾಭ ಪಡೆದುಕೊಳ್ಳಲು ಕೋರಿದೆ.

ಪ್ರತಿ ಬ್ಯಾಂಕ್ ಶಾಖೆಯಲ್ಲಿ ಒಬ್ಬ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪೊಲೀಸ್ ಬಂದೋಬಸ್ತನ್ನು ಕೂಡ ಮಾಡಲಾಗಿದೆ. ರೈತರಿಗೆ ಯಾವುದಾದರೂ ಗೊಂದಲ, ಸಂದೇಹಗಳಿದ್ದಲ್ಲಿ, ಜಿಲ್ಲಾಧಿಕಾರಿ ಕಚೇರಿಯ ಸಹಾಯವಾಣಿ ಸಂಖ್ಯೆ 08352-221261 ಮತ್ತು ಟ್ರೋಲ್ ಫ್ರೀ ನಂಬರ್ 1077ಗೆ ಸಂಪರ್ಕಿಸಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !