ಬೇನಾಳದ ದುರ್ಗಾದೇವಿ ಜಾತ್ರೆ ಇಂದಿನಿಂದ

ಬುಧವಾರ, ಜೂನ್ 19, 2019
28 °C
11 ವರ್ಷಕ್ಕೊಮ್ಮೆ ನಡೆಯುವ ಜಾತ್ರೆ: ಎರಡು ವರ್ಷ ಯಾವುದೇ ಮದುವೆಯಿಲ್ಲ

ಬೇನಾಳದ ದುರ್ಗಾದೇವಿ ಜಾತ್ರೆ ಇಂದಿನಿಂದ

Published:
Updated:
Prajavani

ನಿಡಗುಂದಿ: ಈ ಜಾತ್ರೆ ನಡೆಯುವುದು ಪ್ರತಿ 11 ವರ್ಷಗಳಿಗೆ ಒಮ್ಮೆ, ಜಾತ್ರೆ ಆಚರಣೆಗೆ ಮುನ್ನವೇ ಹಲವು ಕಠಿಣ ನಿಯಮ, ಯಾವುದೇ ಜಾತಿ ಬೇಧ ಭಾವವಿಲ್ಲದೇ ಎಲ್ಲರೂ ಜಾತ್ರಾ ನಿಯಮಕ್ಕೆ ಬದ್ಧರು, ಜಾತ್ರೆ ಮುಗಿದ ಎರಡು ವರ್ಷಗಳವರೆಗೆ ಗ್ರಾಮದ ಗಂಡು ಮಕ್ಕಳಿಗೆ ಮದುವೆ ಮಾಡುವಂತಿಲ್ಲ. 2 ವರ್ಷ ಯಾವುದೇ ಶುಭಕರ ಕಾರ್ಯ ಜರುಗುವುದೇ ಇಲ್ಲ.

ಇಂತಹ ಹಲವು ಅಚ್ಚರಿಗಳಿಗೆ ಕಾರಣವಾಗಿರುವ ಜಾತ್ರೆ ನಡೆಯುವುದು, ತಾಲ್ಲೂಕಿನ ಬೇನಾಳ ಆರ್‌.ಎಸ್‌. ಮತ್ತು ಬೇನಾಳ ಎನ್‌.ಎಚ್. ಗ್ರಾಮದ ಶಕ್ತಿ ದೇವತೆ ದುರ್ಗಾದೇವಿಯ ಜಾತ್ರೆಯಲ್ಲಿ.

ಮೇ 28 ರಿಂದ ನಾಲ್ಕು ದಿನ ನಡೆಯುವ ಈ ಶಕ್ತಿ ದೇವತೆ ಜಾತ್ರೆ ಹಲವಾರು ವೈಶಿಷ್ಟ್ಯಗಳಿಂದ ಕೂಡಿದೆ.
2021ರವರೆಗೆ ಈ ಗ್ರಾಮದ ಗಂಡು ಮಕ್ಕಳ ಮದುವೆ ನಡೆಯುವುದಿಲ್ಲ, ಒಂದು ವರ್ಷ ಮನೆಗೆ ಸುಣ್ಣ ಬಣ್ಣವಿಲ್ಲ, ದೀಪಾವಳಿಯಲ್ಲಿ ಲಕ್ಷ್ಮೀ ಪೂಜೆ ಸೇರಿದಂತೆ ಪ್ರತಿ ಹಬ್ಬಗಳನ್ನು ಸಾಂಕೇತಿಕವಾಗಿ ಆಚರಣೆ, ಕಾರಹುಣ್ಣಿಮೆಯ ಕರಿ ಹರಿಯುವಂತಿಲ್ಲ, ಹೊಲಕ್ಕೆ ಒಂದು ವರ್ಷ ತಿಪ್ಪಿಗೊಬ್ಬರ ಬಳಸುವಂತಿಲ್ಲ. ಹೀಗೆ ಹಲವು ಕಠಿಣ ಆಚರಣೆಗಳು ಹಲ ಶತಮಾನಗಳಿಂದ ಈ ಗ್ರಾಮದಲ್ಲಿ ನಡೆದು ಬಂದಿವೆ.

ಜಾತ್ರೆ ಆರಂಭಕ್ಕೂ ಮುನ್ನವೇ ಈ ಗ್ರಾಮದಲ್ಲಿ ಮದುವೆಯ ಸುಗ್ಗಿ ಹೆಚ್ಚು, ರಾಮನವಮಿಯ ನಂತರ ಬರುವ ಪ್ರತಿ ಮಂಗಳವಾರ, ಶುಕ್ರವಾರ ಗ್ರಾಮದ ಪ್ರತಿ ಕುಟುಂಬದವರು ಕಡ್ಡಾಯವಾಗಿ ವಾರ ಹಿಡಿಯಲೇಬೇಕು, ಜಾತ್ರೆ ಮುಗಿಯುವ ತನಕ ಕರಿಬಟ್ಟೆ ತೊಡುವಂತಿಲ್ಲ, ಈ ಎಲ್ಲ ಆಚರಣೆಗಳಲ್ಲಿ ಮುಸ್ಲಿಂ ಸಮುದಾಯ ಕೂಡಾ ಭಕ್ತಿ ಭಾವದಿಂದ ಪಾಲ್ಗೊಳ್ಳುತ್ತದೆ.

ಮೇ 29ರಂದು ಜರುಗುವ ಕಳಸ ಹಿಡಿಯುವ ಕಾರ್ಯಕ್ರಮ ಸೌಹಾರ್ದವನ್ನೇ ಸಾರುತ್ತದೆ. ಚಲವಾದಿ ಸಮಾಜದವರು ಮುಂದೆ ಕಳಸ ಹಿಡಿದರೆ, ಅವರ ಹಿಂದೆ ಶೈವ ಪದ್ಧತಿ ಆಚರಿಸುವ ಪ್ರತಿ ಜಾತಿಯ ಪ್ರತಿ ಕುಟುಂಬದ ಮಹಿಳೆಯರು ಕಳಸ ಹಿಡಿದು ಸಾಗುತ್ತಾರೆ. ಇನ್ನೊಂದೆಡೆ ಮಾದಿಗ ಸಮುದಾಯದವರು ಮುಂದೆ ಕಳಸ ಹಿಡಿದರೆ ಅವರ ಹಿಂದೆ ವೈಷ್ಣವ ಪರಂಪರೆಯ ಕುಟುಂಬದವರು ಕಳಸ ಹಿಡಿದು ನಡೆಯುತ್ತಾರೆ. ಈ ಮೆರವಣಿಗೆಯಲ್ಲಿ ಯಾರೊಬ್ಬರೂ ಕಳಸದ ಮುಂದೆ ಹೋಗುವಂತಿಲ್ಲ, ಎಲ್ಲ ಶೈವ, ವೈಷ್ಣವರು ದೇವಿಯ ಆವರಣದಲ್ಲಿ ಏಕಕಾಲಕ್ಕೆ ಕಳಸ ನೆಲಕ್ಕೆ ಇಡಬೇಕು, ಹೀಗೆ ಹಲವಾರು ಸಂಪ್ರದಾಯಗಳು ಇಲ್ಲಿ ಕಟ್ಟುನಿಟ್ಟಾಗಿ ಪಾಲನೆಯಾಗುತ್ತವೆ.  

ದಶಕದ ನಂತರ ಆಚರಿಸುತ್ತಿರುವ ಜಾತ್ರೆ 28ರಂದು ಆರಂಭವಾಗಿ 31ರಂದು ಕೊನೆಗೊಳ್ಳಲಿದೆ. ಪ್ರತಿ ದಿನವೂ ಅನ್ನ ಸಂತರ್ಪಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !