ಏರ್‌ಪೋರ್ಟ್‌ನಲ್ಲಿ ಕ್ರೆಡಿಟ್ ಕಾರ್ಡ್ ಸ್ವೀಕರಿಸಲು ನಕಾರ

7
ಪ್ರಯಾಣಿಕನಿಂದ ಕೆಐಎ ಆಡಳಿತ ಮಂಡಳಿಗೆ ಟ್ವಿಟರ್‌ ಮೂಲಕ ದೂರು: ತನಿಖೆ ಆರಂಭ

ಏರ್‌ಪೋರ್ಟ್‌ನಲ್ಲಿ ಕ್ರೆಡಿಟ್ ಕಾರ್ಡ್ ಸ್ವೀಕರಿಸಲು ನಕಾರ

Published:
Updated:

ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಬಹುತೇಕ ಪ್ರಕ್ರಿಯೆಗಳು ಡಿಜಿಟಲೀಕರಣಗೊಳಿಸಿರುವುದಾಗಿ ಆಡಳಿತ ಮಂಡಳಿ ಹೇಳುತ್ತಿದೆ. ಆದರೆ, ಅದೇ ನಿಲ್ದಾಣದ ಮಳಿಗೆಯೊಂದರ ಸಿಬ್ಬಂದಿ ಕ್ರೆಡಿಟ್ ಕಾರ್ಡ್‌ ಸ್ವೀಕರಿಸಲು ನಿರಾಕರಿಸಿದ್ದಾರೆ.

ಆ ಸಂಬಂಧ ಪ್ರಯಾಣಿಕ ಸನ್ನಿ ಶರ್ಮಾ, ನಿಲ್ದಾಣದ ಆಡಳಿತ ಮಂಡಳಿಗೆ ಟ್ವಿಟರ್‌ ಮೂಲಕ ದೂರು ನೀಡಿದ್ದಾರೆ.

‘ಸೆಪ್ಟೆಂಬರ್ 10ರಂದು ನಮ್ಮೂರಿಗೆ ಹೊರಟಿದ್ದೆ. ದೇಶೀಯ ವಿಮಾನಗಳ ಟರ್ಮಿನಲ್‌ನಲ್ಲಿರುವ ರಿಯಲ್‌ ಮಳಿಗೆಯಲ್ಲಿ ಕೆಲವು ವಸ್ತುಗಳನ್ನು ಖರೀದಿಸಿದ್ದೆ. ನನ್ನ ಕೈಯಲ್ಲಿ ಹಣವಿರಲಿಲ್ಲ. ಹೀಗಾಗಿ, ಕ್ರೆಡಿಟ್‌ ಕಾರ್ಡ್‌ ಕೊಟ್ಟು ಸ್ವ್ಯಾಪ್ ಮಾಡುವಂತೆ ಹೇಳಿದ್ದೆ. ಅದನ್ನು ಸ್ವೀಕರಿಸಲು ನಿರಾಕರಿಸಿದ ಮಳಿಗೆಯ ಸಿಬ್ಬಂದಿ, ಹಣ ಕೊಡಿ ಎಂದು ಪಟ್ಟು ಹಿಡಿದರು’ ಎಂದು ಅವರು ದೂರಿದ್ದಾರೆ.

‘ಹಲವು ವರ್ಷಗಳಿಂದ ನಾನು ವಿಮಾನದಲ್ಲಿ ಪ್ರಯಾಣಿಸುತ್ತಿದ್ದೇನೆ. ಇದೇ ಮೊದಲ ಬಾರಿಗೆ ಈ ರೀತಿ ಅನುಭವವಾಯಿತು. ಪ್ರಧಾನಿ ಮೋದಿಯವರು ನಗದುರಹಿತ ವಹಿವಾಟು ವ್ಯವಸ್ಥೆ ರೂಪಿಸಲು ಹೊರಟಿದ್ದಾರೆ. ಆದರೆ, ನಿಲ್ದಾಣದಲ್ಲೇ ಕ್ರೆಡಿಟ್ ಕಾರ್ಡ್‌ ಸ್ವೀಕರಿಸುತ್ತಿಲ್ಲ. ನಿಲ್ದಾಣವನ್ನು ಡಿಜಿಟಲೀಕರಣಗೊಳಿಸಿದ್ದೇವೆ ಎಂದು ಆಡಳಿತ ಮಂಡಳಿ ಹೇಳುತ್ತಿರುವುದು ಇದಕ್ಕೇನಾ’ ಎಂದು ಅವರು ಪ್ರಶ್ನಿಸಿದ್ದಾರೆ.

ದೂರಿಗೆ ಪ್ರತಿಕ್ರಿಯಿಸಿರುವ ಆಡಳಿತ ಮಂಡಳಿ ಪ್ರತಿನಿಧಿಯೊಬ್ಬರು, ‘ನಿಲ್ದಾಣದಲ್ಲಿ ₹10ಕ್ಕೂ ಮೇಲ್ಪಟ್ಟ ಮೌಲ್ಯದ ಯಾವುದೇ ವಸ್ತು ಖರೀದಿಸಿದರೂ ಕಾರ್ಡ್‌ ಮೂಲಕ ಹಣ ಪಾವತಿ ಮಾಡಬಹುದು. ಆದರೆ, ನಿಮಗಾಗಿರುವ ಅನುಭವಕ್ಕೆ ನಾವು ಕ್ಷಮೆ ಕೋರುತ್ತೇವೆ’ ಎಂದಿದ್ದಾರೆ.

‘ನಿಮ್ಮ ದೂರು ಆಧರಿಸಿ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರಿಯಲ್ ಮಳಿಗೆಯಲ್ಲಿ ಹೊಸದಾಗಿ ಕೆಲಸಗಾರನೊಬ್ಬ ನೇಮಕಗೊಂಡಿದ್ದಾನೆ. ಆತನಿಗೆ ಕ್ರೆಡಿಟ್ ಕಾರ್ಡ್‌ಗಳ ಬಗ್ಗೆ ಸಮರ್ಪಕವಾದ ತರಬೇತಿ ನೀಡಿಲ್ಲ. ಅದೇ ಕಾರಣಕ್ಕೆ ಆತ, ಕಾರ್ಡ್‌ ಪಡೆಯಲು ನಿರಾಕರಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಮಳಿಗೆ ಮಾಲೀಕರಿಂದಲೂ ಹೇಳಿಕೆ ಪಡೆಯುತ್ತಿದ್ದೇವೆ. ಅದರ ವಿವರನ್ನು ಕೆಲವೇ ದಿನಗಳಲ್ಲಿ ನಿಮಗೆ (ಸನ್ನಿ ಶರ್ಮಾ) ನೀಡಲಿದ್ದೇವೆ’ ಎಂದು ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !