ಎಲಿವೇಟೆಡ್‌ ಕಾರಿಡಾರ್‌ ವಿರುದ್ಧ ನಾಳೆ ಪ್ರತಿಭಟನೆ: ಆನ್‌ಲೈನ್‌ನಲ್ಲಿ ಸಹಿ ಸಂಗ್ರಹ

ಸೋಮವಾರ, ಮಾರ್ಚ್ 18, 2019
31 °C
50ಕ್ಕೂ ಹೆಚ್ಚು ಸಂಘಟನೆಗಳು ಭಾಗಿ

ಎಲಿವೇಟೆಡ್‌ ಕಾರಿಡಾರ್‌ ವಿರುದ್ಧ ನಾಳೆ ಪ್ರತಿಭಟನೆ: ಆನ್‌ಲೈನ್‌ನಲ್ಲಿ ಸಹಿ ಸಂಗ್ರಹ

Published:
Updated:

ಬೆಂಗಳೂರು: ವಿವಾದಿತ ಎಲಿವೇಟೆಡ್‌ ಕಾರಿಡಾರ್‌ ವಿರುದ್ಧ ನಾಗರಿಕ ಸಂಘಟನೆಗಳು ಪ್ರತಿಭಟನೆಯ ಧ್ವನಿ ತೀವ್ರಗೊಳಿಸಿವೆ. ಈ ಯೋಜನೆಯನ್ನು ರದ್ದುಗೊಳಿಸಲು ಒತ್ತಾಯಿಸಿ ಮಾರ್ಚ್‌ 16ರಂದು ನಗರದ ಮೌರ್ಯ ವೃತ್ತದ ಬಳಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿವೆ. 

‘ಈ ಯೋಜನೆಯ ಟೆಂಡರ್ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. 50 ನಾಗರಿಕ ಸಂಘಟನೆಗಳು ಭಾಗವಹಿಸಲಿವೆ’ ಎಂದು ರಂಗಕರ್ಮಿ ಪ್ರಕಾಶ ಬೆಳವಾಡಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಹಿಂದೆ ಒಳ್ಳೆಯ ಕೆಲಸ ಮಾಡಿದ್ದರು. ಆದರೆ ಇಂದು ಅವರಿಗೆ ಎಲಿವೇಟೆಡ್‌ ಕಾರಿಡಾರ್‌ ವ್ಯಸನ ಶುರುವಾಗಿದೆ. ಹಿಂದಿನ ಸರ್ಕಾರ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಮುಂದಾದಾಗ ಅವರನ್ನು ಭೇಟಿ ಮಾಡಿದ್ದೆವು. ಅಂದಿನ ಸರ್ಕಾರದ ಕ್ರಮವನ್ನು ಟೀಕಿಸಿದ್ದರು. ಸದ್ಯ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣಕ್ಕೆ ಆಸ್ಥೆ ವಹಿಸಿದ್ದಾರೆ’ ಎಂದರು.

‘ಬಿಎಂಟಿಸಿಯ 6,300 ಬಸ್‌ಗಳು ಕೇವಲ ಶೇ 0.5ರಷ್ಟು ರಸ್ತೆಯ ಜಾಗವನ್ನು ಅಕ್ರಮಿಸಿಕೊಳ್ಳುತ್ತವೆ. ಕಾರುಗಳು ಬಸ್‌ನ ಎರಡು ಸಾವಿರ ಪಟ್ಟು ಹೆಚ್ಚು ಜಾಗವನ್ನು ಅಕ್ರಮಿಸಿಕೊಳ್ಳುತ್ತವೆ. ಸಾರ್ವಜನಿಕ ಸಾರಿಗೆಯನ್ನು ಉತ್ತಮಪಡಿಸುವುದು ಬಿಟ್ಟು ಕಾರಿನವರಿಗೆ ದಾರಿ ಮಾಡಲು ಸರ್ಕಾರ ಹೊರಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎನ್ವಿರಾನ್‌ಮೆಂಟ್‌ ಸಪೋರ್ಟ್‌ ಗ್ರೂಪ್‌ನ (ಇಎಸ್‌ಜಿ) ಲಿಯೊ ಸಲ್ದಾನ,‘ಆರ್‌.ಕೆ.ಮಿಶ್ರಾ ಎಂಬ ವ್ಯಕ್ತಿ ಏಕಾಏಕಿ ಯೋಜನೆಯ ನೀಲನಕ್ಷೆಯನ್ನು ತೆಗೆದುಕೊಂಡು ಹೋಗಿ ಉಪಮುಖ್ಯಮಂತ್ರಿಯವರ ಮುಂದೆ ಇಟ್ಟ ತಕ್ಷಣ ಹೈಪವರ್‌ ಸಮಿತಿಯ ಒಪ್ಪಿಗೆ ಇಲ್ಲದೆ. ಬಹುಕೋಟಿ ಯೋಜನೆ ಜಾರಿಗೆ ಮುಂದಾಗಿರುವುದು ಸರಿಯಿಲ್ಲ’ ಎಂದರು.

‘ಎಲಿವೇಟೆಡ್‌ ಕಾರಿಡಾರ್‌ ಯೋಜನೆಯಿಂದ ನಗರದ ಕಬ್ಬನ್‌ ಉದ್ಯಾನಕ್ಕೆ ಹಾನಿಯಾಗಲಿದೆ. ಇದು ಕರ್ನಾಟಕದ ಉದ್ಯಾನ, ಆಟದ ಮೈದಾನ ಮತ್ತು ಮುಕ್ತ ಜಾಗಗಳ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಆದ್ದರಿಂದ ಯೋಜನೆಗೆ ಸಂಬಂಧಿಸಿದ ಟೆಂಡರ್‌ ರದ್ದುಪಡಿಸಬೇಕು’ ಎಂದು ಹೇಳಿದರು.

ಇದನ್ನೂ ಓದಿ... ಎಲಿವೇಟೆಡ್‌ ಕಾರಿಡಾರ್‌ನಲ್ಲಿ ಆಧುನಿಕ ಸೌಕರ್ಯ?

ಯೋಜನೆ ಬೆಂಬಲಿಸಿದ ಸಂಘಟನೆಗಳು! 
ಕಾರಿಡಾರ್‌ ನಿರ್ಮಾಣದ ಬಗ್ಗೆ ‍ಪ್ರತಿರೋಧದ ಧ್ವನಿ ಇದ್ದಂತೆಯೇ ಕೆಲವು ನಿವಾಸಿ ಸಂಘಟನೆಗಳು ಯೋಜನೆಗೆ ಬೆಂಬಲ ವ್ಯಕ್ತಪಡಿಸಿ ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿವೆ. ಬೆಂಗಳೂರಿನ ಜನಸಂಖ್ಯೆಗೆ ಈಗಿರುವ ರಸ್ತೆಗಳು ಏನೇನೂ ಸಾಲವು. ಜನಸಂಖ್ಯೆ ಬೆಳೆಯುತ್ತಿರುವ ಪರಿಯನ್ನು ನೋಡಿದರೆ ಸದ್ಯದ ರಸ್ತೆ ಕಾರ್ಯಜಾಲ ಮುಂದಿನ ಕೆಲವೇ ವರ್ಷಗಳ ಬೆಳವಣಿಗೆಗೆ ತಕ್ಕ ಪ್ರಮಾಣದಲ್ಲಿ ಇಲ್ಲ. ಟ್ರಾಫಿಕ್‌, ವಾಯು ಮಾಲಿನ್ಯ ಹಾಗೂ ಶಬ್ದ ಮಾಲಿನ್ಯಗಳಿಂದಾಗಿ ವಸತಿ ಪ್ರದೇಶಗಳಲ್ಲಿ ನೆಮ್ಮದಿಯೇ ಇಲ್ಲವಾಗಿದೆ. ಆದ್ದರಿಂದ ಒತ್ತಡ ನಿವಾರಿಸುವ ನಿಟ್ಟಿನಲ್ಲಿ ಹೊಸ ರಸ್ತೆಗಳ ನಿರ್ಮಾಣ ಅಗತ್ಯವಾಗಿದೆ ಎಂದು ಸಂಘಟನೆಗಳು ಮನವಿಯಲ್ಲಿ ಹೇಳಿವೆ. 

ಪರಮೇಶ್ವರ ಅವರ ಆಪ್ತರ ಪ್ರಕಾರ, ‘ನಿವಾಸಿ ಸಂಘಟನೆಗಳಿಗೆ ಈಗ ಯೋಜನೆಯ ಮಹತ್ವ ಅರಿವಾಗಿದೆ. ಹೀಗಾಗಿ ಅವರು ಯೋಜನೆಯನ್ನು ಬೆಂಬಲಿಸುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. 

‘ಕೆಲವರು ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ಅವರಿಗೆ ಮನವರಿಕೆ ಮಾಡಬೇಕು. ಸರ್ಕಾರ ಈ ಯೋಜನೆಯನ್ನು ಪಾರದರ್ಶಕವಾಗಿ ಜಾರಿಗೆ ತಂದರೆ ಯಾವುದೇ ಗೊಂದಲಕ್ಕೆ ಅವಕಾಶವಿರುವುದಿಲ್ಲ’ ಎಂದು ನಿವಾಸಿ ಸಂಘಟನೆಗಳ ಮುಖಂಡರು ಹೇಳಿದ್ದಾರೆ.

ಹಸಿರು  ನಾಶ ವಿರೋಧಿಸಿ ಸಹಿ ಸಂಗ್ರಹ 
ವಿವಾದಿತ ಎಲಿವೇಟೆಡ್‌ ಕಾರಿಡಾರ್‌ ಯೋಜನೆಯು ನಗರದ ಹಸಿರು ನಾಶ ಮಾಡುವುದನ್ನು ವಿರೋಧಿಸಿ ನಡೆಸಿದ ಆನ್‌ಲೈನ್‌ ಅಭಿಯಾನದಲ್ಲಿ ಒಂದು ಲಕ್ಷದಷ್ಟು ಸಹಿ ಸಂಗ್ರಹ ನಡೆದಿದೆ. change.org ಮೂಲಕ ಸುಮಾರು ಒಂದು ಲಕ್ಷ ಸಹಿ ಸಂಗ್ರಹವಾಗಿದೆ. 

ಟೆಂಡರು ರದ್ದು ಮಾಡಿ (#TenderRadduMaadi) ಹ್ಯಾಷ್‌ಟ್ಯಾಗ್‌ನೊಂದಿಗೆ ಜನರು ಧ್ವನಿಯೆತ್ತುವಂತೆ ಮಾಡುವ ಪ್ರಯತ್ನ ಸಾಗಿದೆ. ಕೆಲವು ನಾಗರಿಕ ಸಂಘಟನೆಗಳು ಶನಿವಾರ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲೂ ನಿರ್ಧರಿಸಿವೆ.

ನಾಗರಿಕ ಹೋರಾಟಗಾರ್ತಿ ರಿತಿಕಾ ಶರ್ಮ ಅವರು ಜನರ ಸಾಮೂಹಿಕ ಆಕ್ರೋಶವನ್ನು ಫೇಸ್‌ಬುಕ್‌ ಬರಹದ ಮೂಲಕ ಹೊರಹಾಕಿದ್ದಾರೆ. ಬೇರೆ ದೇಶಗಳು ಅಲ್ಲಿ ಹಸಿರು ಹೊದಿಕೆ ಹೆಚ್ಚಿಸಲು ಹೂಡಿಕೆ ಮಾಡುತ್ತಿವೆ. ಇದೇ ವೇಳೆ ನಮ್ಮಲ್ಲಿ ಹಸಿರು ನಾಶಗೊಳಿಸುವ ಹಠಕ್ಕೆ ಬಿದ್ದಿದ್ದೇವೆ. ಈ ಬಗ್ಗೆ ನಾವೇನಾದರೂ ಮಾಡದಿದ್ದರೆ ಹಾನಿ ಮಾಡಲು ಮುಂದಾದವರಿಗೂ ನಮಗೂ ಯಾವುದೇ ಭಿನ್ನತೆ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !