ರಾಜಧಾನಿಯಲ್ಲಿ ಮತದಾನಕ್ಕೆ ಮತ್ತೆ ನಿರುತ್ಸಾಹ; ಅರ್ಧದಷ್ಟು ಮತದಾರರು ಬರಲೇ ಇಲ್ಲ!

ಭಾನುವಾರ, ಮೇ 19, 2019
32 °C
ಕಳೆದ ಸಲದಷ್ಟೂ ಹಕ್ಕು ಚಲಾವಣೆ ಆಗಲಿಲ್ಲ

ರಾಜಧಾನಿಯಲ್ಲಿ ಮತದಾನಕ್ಕೆ ಮತ್ತೆ ನಿರುತ್ಸಾಹ; ಅರ್ಧದಷ್ಟು ಮತದಾರರು ಬರಲೇ ಇಲ್ಲ!

Published:
Updated:
Prajavani

ಬೆಂಗಳೂರು: ರಾಜಧಾನಿಯ ಮತದಾರರು ಈ ಸಲದ ಲೋಕಸಭಾ ಚುನಾವಣೆಯಲ್ಲಾದರೂ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಮತದಾರರಲ್ಲಿ ಪಟ್ಟಿಯಲ್ಲಿ ಹೆಸರು ಇರುವವರ ಪೈಕಿ ಹೆಚ್ಚೂ ಕಡಿಮೆ ಅರ್ಧದಷ್ಟು ಮಂದಿ ಈ ಬಾರಿಯೂ ಮತಗಟ್ಟೆಯತ್ತ ಹೆಜ್ಜೆ ಹಾಕಲೇ ಇಲ್ಲ.

ಪ್ರತಿ ಲೋಕಸಭಾ ಚುನಾವಣೆಯಲ್ಲೂ ರಾಜಧಾನಿಯಲ್ಲಿ ಮತದಾನದ ಪ್ರಮಾಣ ರಾಜ್ಯದ ಸರಾಸರಿಗಿಂತ ಕಡಿಮೆಯೇ ಇರುತ್ತಿತ್ತು. ಈ ಬಾರಿಯೂ ಇದೇ ಚಾಳಿ ಮುಂದುವರಿಯಿತು. ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗವು ನಡೆಸಿದ್ದ ಕಸರತ್ತುಗಳು ಫಲ ನೀಡಲಿಲ್ಲ.


ವಿಲ್ಸನ್ ಗಾರ್ಡನ್‌ನ ಶಾಲೆಯೊಂದರ ನೆಲಮಹಡಿಯಲ್ಲಿ ಪೆಂಡಾಲ್‌ ಬಳಸಿ ನಿರ್ಮಿಸಲಾಗಿದ್ದ ಮತಗಟ್ಟೆ 

ಬಿಬಿಎಂಪಿ ವ್ಯಾಪ್ತಿಯ ಬೆಂಗಳೂರು ಉತ್ತರ, ದಕ್ಷಿಣ , ಕೇಂದ್ರ ಹಾಗೂ ಗ್ರಾಮಾಂತರ ಕ್ಷೇತ್ರಗಳಲ್ಲಿ (ಮೂರು ಕ್ಷೇತ್ರಗಳು) 2014ರ ಚುನಾವಣೆಗಿಂತಲೂ ಕಡಿಮೆ ಪ್ರಮಾಣದಲ್ಲಿ ಮತ ಚಲಾವಣೆಯಾಗಿವೆ. ಮತದಾನದ ಪ್ರಮಾಣವು ಬೆಂಗಳೂರು ಉತ್ತರದಲ್ಲಿ ಶೇ 6.23, ದಕ್ಷಿಣದಲ್ಲಿ ಶೇ 1.63, ಕೇಂದ್ರದಲ್ಲಿ ಶೇ 5.80 ಹಾಗೂ ಗ್ರಾಮಾಂತರದಲ್ಲಿ ಶೇ 1.55ರಷ್ಟು ಕಡಿಮೆಯಾಗಿದೆ. ರಾಜ್ಯದಲ್ಲಿ ಆಗಿರುವ ಸರಾಸರಿ ಮತದಾನಕ್ಕೆ ಹೋಲಿಸಿದರೆ ನಗರದಲ್ಲಿ ಈ ಬಾರಿಯ ಮತದಾನದ ಪ್ರಮಾಣ ಶೇ 10ಕ್ಕಿಂತಲೂ ಕಡಿಮೆ ಇದೆ.

ಘರ್ಷಣೆ: ಗೋವಿಂದರಾಜನಗರದ ಕಾರ್ಡಿಯಲ್ ಪ್ರೌಢಶಾಲೆಯ ಮತಗಟ್ಟೆ ಆವರಣದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಬಿಜೆಪಿಯ ಕೆಲ ಕಾರ್ಯಕರ್ತರು, ಮತಗಟ್ಟೆ ಆವರಣದಲ್ಲೇ ಮತಯಾಚನೆ ಮಾಡುತ್ತಿದ್ದರು. ಅದಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಅದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಪ್ರಿಯಕೃಷ್ಣ ಸ್ಥಳಕ್ಕೆ ಬಂದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಪೊಲೀಸರು, ಕಾರ್ಯಕರ್ತರನ್ನು ಆವರಣದಿಂದ ಚದುರಿಸಿದರು. 

ಒಂದೆರಡು ಕಡೆ ಕಾರ್ಯಕರ್ತರ ನಡುವೆ ಪಕ್ಷಗಳ ಕಾರ್ಯಕರ್ತದ ನಡುವೆ ಸಣ್ಣ ಪುಟ್ಟ ಘರ್ಷಣೆ ನಡೆದಿದ್ದನ್ನು ಹೊರತುಪಡಿಸಿದರೆ ಮತದಾನ ಶಾಂತಿಯುತವಾಗಿತ್ತು.

‘ಸಾಲು ರಜೆ:ಮತ ಪ್ರಮಾಣ ಇಳಿಕೆ’
‘ಸಾಲು ಸಾಲು ರಜೆಗಳು ಇದ್ದುದರಿಂದ ನಗರದ ಅನೇಕ ಮತದಾರರು ಪ್ರವಾಸಕ್ಕೆ ‌ತೆರಳಿದ್ದರು. ಹಾಗಾಗಿ ಮತದಾನದ ಪ್ರಮಾಣ ಕಡಿಮೆಯಾಗಿದೆ’ ಎಂದು ಎನ್‌.ಮಂಜುನಾಥ ಪ್ರಸಾದ್‌ ಅಭಿಪ್ರಾಯಪಟ್ಟರು.

‘ಈ ಬಾರಿ ಮತದಾನದ ಪ್ರಮಾಣ ಕಡಿಮೆ ಆಗಬಹುದು ಎಂದು ನಾವು ಮೊದಲೇ ಊಹಿಸಿದ್ದೆವು. ಹೆಚ್ಚು ಜನ ಹಕ್ಕು ಚಲಾಯಿಸುವಂತೆ ಮಾಡಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು. ಹೊಸ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬಹುದು ಎಂಬು ಭಾವಿಸಿದ್ದೆವು. ಮತಗಟ್ಟೆಗಳ ಬಳಿ ಯುವಕರ ಸಂಖ್ಯೆ ಕಡಿಮೆ ಇತ್ತು. ಮತದಾನ ಪ್ರಮಾಣ ಹೆಚ್ಚಳ ಆಗದ ಬಗ್ಗೆ ಬೇಸರವಿದೆ’ ಎಂದರು.

ನಕಲಿ ಮತದಾನಕ್ಕೆ ಯತ್ನ
ಚಿಕ್ಕಬಳ್ಳಾಪುರ ಲೋಕಸಭಾ ವ್ಯಾಪ್ತಿಯ ಯಲಹಂಕದಲ್ಲಿ ನಕಲಿ ಮತದಾನ ಮಾಡುವ ಯತ್ನವನ್ನು ಚುನಾವಣಾ ಸಿಬ್ಬಂದಿ ತಡೆದಿದ್ದಾರೆ. ಒಟ್ಟು 13 ಮಂದಿ ಮತಗಟ್ಟೆಗೆ ಬಂದಿದ್ದರು. ಅವರ ವರ್ತನೆ ಬಗ್ಗೆ ಸಂದೇಹಗೊಂಡು ಸಿಬ್ಬಂದಿಯು ಅವರನ್ನು ವಿಚಾರಿಸಿದಾಗ ಸರಿಯಾದ ಉತ್ತರ ನೀಡಲಿಲ್ಲ. ಮೂವರನ್ನು ಹಿಡಿದು ಸಿಬ್ಬಂದಿ ವಿಚಾರಣೆ ಆರಂಭಿಸುತ್ತಿದ್ದಂತೆಯೇ ಉಳಿದ 10 ಮಂದಿ ಸ್ಥಳದಿಂದ ಪರಾರಿಯಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ನಕಲಿ ಮತದಾನ ಮಾಡಲು ಬಂದವರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು.

‘ಯಲಹಂಕದ ಉರ್ದು ಸರ್ಕಾರಿ ಶಾಲೆಯ ಮತಗಟ್ಟೆಯಲ್ಲಿ ಕೆಲವರು ನಕಲಿ ಮತದಾನಕ್ಕೆ ಯತ್ನಿಸಿದ್ದು ಹೌದು. ಆದರೆ ನಾವು ಅದಕ್ಕೆ ಅವಕಾಶ ನೀಡಿಲ್ಲ’ ಎಂದು ತಹಸೀಲ್ದಾರ್‌ ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮತಗಟ್ಟೆ ಬಳಿ ಮತ ಯಾಚನೆ
ಪಕ್ಷಗಳು ಮತದಾರರಿಗೆ ಚೀಟಿ ನೀಡಲು ಮತಗಟ್ಟೆಯಿಂದ 200 ಮೀ ವ್ಯಾಪ್ತಿಯಲ್ಲಿ ಟೇಬಲ್‌ ಹಾಕಿಕೊಳ್ಳಲು ಆಯೋಗವು ಅವಕಾಶ ಕಲ್ಪಿಸಿತ್ತು. ಆದರೆ, ಅಲ್ಲಿ ಪಕ್ಷದ ಚಿಹ್ನೆ, ಬಾವುಟ ಅಥವಾ ಅಭ್ಯರ್ಥಿಯ ಭಾವಚಿತ್ರ ಬಳಸುವುದಕ್ಕೆ ಅವಕಾಶ ಇರಲಿಲ್ಲ. ಆದರೆ ಅನೇಕ ಮತಗಟ್ಟೆಗಳ ಬಳಿ ಈ ನಿಯಮ ಕಟ್ಟುನಿಟ್ಟಾಗಿ ಪಾಲನೆ ಆಗಲಿಲ್ಲ. ಮತದಾರರು ಮತದಾರರ ಪಟ್ಟಿಯಲ್ಲಿ ಸಂಖ್ಯೆ ಹುಡುಕಲು ನೆರವಾಗುತ್ತಿದ್ದ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತಯಾಚನೆಯಲ್ಲಿ ತೊಡಗಿದ್ದರು. ಕೆಲವೆಡೆ ಮಾದರಿ ಮತಪತ್ರವನ್ನು ಇಟ್ಟುಕೊಂಡು ಪಕ್ಷದ ಅಭ್ಯರ್ಥಿಯ ಚಿಹ್ನೆಯನ್ನು ತೋರಿಸಿ ಮತ ಯಾಚಿಸುವುದೂ ಕಂಡುಬಂತು. 

ಕೈಕೊಟ್ಟ ಮತಯಂತ್ರ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮ್ಯಾಕ್ಸ್‌ವೆಲ್‌ ಪಬ್ಲಿಕ್‌ ಶಾಲೆಯ ಮತಗಟ್ಟೆಯಲ್ಲಿ (ನ.237) ಹಾಗೂ ವಿದ್ಯಾರಣ್ಯಪುರದ ವಿದ್ಯಾಪೀಠ ಶಾಲೆಯ ಮತಗಟ್ಟೆಯಲ್ಲಿ (ನ. 284) ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿತ್ತು. ಬಳಿಕ ಸರಿಪಡಿಸಲಾಯಿತು.

ಕೆಲವೆಡೆ ಮತದಾನ ವಿಳಂಬ
ಬೆಳಿಗ್ಗೆ 6.45ರ ಒಳಗೆ ಅಣಕು ಮತದಾನ ಪ್ರಕ್ರಿಯೆ ಮುಗಿಸಿ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಿಸಬೇಕಿತ್ತು. ಕೆಲವು ಮತಗಟ್ಟೆಗಳಲ್ಲಿ ರಾಜಕೀಯ ಪಕ್ಷಗಳ ಪೋಲಿಂಗ್‌ ಏಜೆಂಟ್‌ಗಳು ತಡವಾಗಿ ಬಂದಿದ್ದರಿಂದ ಅಣಕು ಮತದಾನ ಪ್ರಕ್ರಿಯೆ ತಡವಾಯಿತು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !