ಮಳೆಯಲ್ಲಿ ತೊಯ್ದ ಬೆಂಗಳೂರು; ಮನೆಯೊಳಗೆ ನುಗ್ಗಿದ ಚರಂಡಿ ನೀರು

ಶನಿವಾರ, ಮೇ 25, 2019
28 °C

ಮಳೆಯಲ್ಲಿ ತೊಯ್ದ ಬೆಂಗಳೂರು; ಮನೆಯೊಳಗೆ ನುಗ್ಗಿದ ಚರಂಡಿ ನೀರು

Published:
Updated:
Prajavani

ಬೆಂಗಳೂರು: ನಗರದಲ್ಲಿ ಸೋಮವಾರ ಗುಡುಗು – ಸಿಡಿಲಿನಿಂದ ಕೂಡಿದ ಮಳೆ ಸುರಿದಿದ್ದು, ಕೆಲವೆಡೆ ಮರಗಳು ಉರುಳಿಬಿದ್ದಿವೆ. ಮರದ ಕೊಂಬೆಗಳಡಿ ಸಿಲುಕಿ ವಾಹನಗಳು ಜಖಂಗೊಂಡಿವೆ.

ಇಂದಿರಾನಗರ, ಹೂಡಿ, ಮಾರತ್ತಹಳ್ಳಿ, ವೈಟ್‌ಫೀಲ್ಡ್, ಕೋರಮಂಗಲ, ಮಡಿವಾಳ, ಬೊಮ್ಮನಹಳ್ಳಿ, ಜಯನಗರ, ಎಚ್‌ಎಸ್‌ಆರ್‌ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಬನಶಂಕರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದೆ.‌ ಈ ಪ್ರದೇಶಗಳ ರಸ್ತೆಯಲ್ಲೆಲ್ಲ ನೀರು ಹರಿಯಿತು. ರಾಜಕಾಲುವೆ ಹಾಗೂ ಚರಂಡಿಯ ತ್ಯಾಜ್ಯ ರಸ್ತೆಗೆ ಬಂದಿತ್ತು.

ಜೆ.ಪಿ.ನಗರ, ಚಾಮರಾಜಪೇಟೆ, ರಾಜಾಜಿನಗರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ನಾಗಸಂದ್ರ, ಪೀಣ್ಯ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಸಾಧಾರಣ ಮಳೆ ಸುರಿದಿದೆ.

ಇಂದಿರಾನಗರ ಸಿಎಂಎಸ್ ರಸ್ತೆಯಲ್ಲಿ ಮರವೊಂದು ಕಾರಿನ ಮೇಲೆ ಉರುಳಿಬಿದ್ದಿದ್ದು, ವಾಹನವು ಜಖಂಗೊಂಡಿದೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಜೋರಾಗಿ ಗಾಳಿ ಬೀಸಿದ್ದರಿಂದ ಇಂದಿರಾನಗರದಲ್ಲಿ ವಿದ್ಯುತ್‌ ತಂತಿಗಳು ಒಂದಕ್ಕೊಂದು ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡಿತ್ತು. ತಂತಿ ಪಕ್ಕವೇ ಇದ್ದ ಮರಕ್ಕೂ ಬೆಂಕಿ ತಗುಲಿ ಉರಿಯಿತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ನಂದಿಸಿದರು.

ಕೆಂಗೇರಿ ಹಾಗೂ ಕೋರಮಂಗಲ 5ನೇ ಹಂತದಲ್ಲೂ ಮರಗಳು ಉರುಳಿಬಿದ್ದಿವೆ. ಮರಗಳ ಕೊಂಬೆಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ, ವಾಹನಗಳ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ, ಮರ ತೆರವುಗೊಳಿಸಿದ ನಂತರ ವಾಹನ ಸಂಚಾರ ಯಥಾಸ್ಥಿತಿಗೆ ತಲುಪಿತು. 

ಬಿಟಿಎಂ ಬಡಾವಣೆಯಲ್ಲಿ ಮೆಟ್ರೊ ಕಾಮಗಾರಿ ನಡೆಯುತ್ತಿದ್ದ ಕಡೆ ರಸ್ತೆಗಳು ಹೊಳೆಯಂತಾಗಿದ್ದವು. ಹರಿಯುತ್ತಿದ್ದ ನೀರಿನಲ್ಲೇ ವಾಹನಗಳು ಸಂಚರಿಸಿದವು. ಪ್ರಮುಖ ವೃತ್ತಗಳಲ್ಲಿ ವಾಹನಗಳ ದಟ್ಟಣೆ ಉಂಟಾಯಿತು.

ಕೋಡಿಚಿಕ್ಕನಹಳ್ಳಿ: ಮನೆಗಳಿಗೆ ನುಗ್ಗಿದ ಚರಂಡಿ ನೀರು

ಬೊಮ್ಮನಹಳ್ಳಿ: ಕೋಡಿಚಿಕ್ಕನಹಳ್ಳಿಯ ಬಡಾವಣೆಗಳ ಮನೆಗಳಿಗೆ ಮಳೆನೀರು ನುಗ್ಗಿದ್ದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.  

ವೆಂಕಟೇಶ್ವರ ದೇವಸ್ಥಾನದ ಬಳಿ ಚರಂಡಿ ಪಕ್ಕದಲ್ಲೇ ಇರುವ ಕೆಲವು ಅಂಗಡಿಗಳು ಹಾಗೂ ಅಂಗನವಾಡಿ ಕೇಂದ್ರಕ್ಕೂ ನೀರು ನುಗ್ಗಿತ್ತು. ಮನೆಗಳ ನೀರಿನ ಸಂಪುಗಳಿಗೆ ಚರಂಡಿ ನೀರು ಸೇರಿತ್ತು. ಹಾಗಾಗಿ ಜನ ನೀರಿಗಾಗಿ ಪರಿತಪಿಸಿದರು.

ಕೋಡಿಚಿಕ್ಕನಹಳ್ಳಿಯಿಂದ ಹಾದುಹೋಗುವ ಬಿಳೇಕಹಳ್ಳಿ ಮುಖ್ಯರಸ್ತೆಯಲ್ಲಿ ನೀರು ನಿಂತಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. 

‘ಚರಂಡಿಗಳಲ್ಲಿ ಹೂಳು ತುಂಬಿದೆ. ಇದರಿಂದಾಗಿಯೇ ಗಲೀಜು ನೀರು ಮನೆಗಳಿಗೆ ನುಗ್ಗಿದೆ’ ಎನ್ನುವುದು ಸ್ಥಳೀಯರ ಆರೋಪ.

‘ಕಾಮಗಾರಿಗಾಗಿ ರಸ್ತೆ ಅಗೆದು ಹಾಗೆ ಬಿಟ್ಟು ಹೋಗಿದ್ದಾರೆ. ಆ ಮಣ್ಣು ಚರಂಡಿ ಸೇರಿ ಮೂರು ಅಡಿ ಹೂಳು ತುಂಬಿದೆ’ ಎನ್ನುತ್ತಾರೆ ಸ್ಥಳೀಯರಾದ ಪುನೀತ್.  

‘ಪ್ರತಿಸಲ ಮಳೆ ಬಂದಾಗಲೂ ನಮ್ಮ ಮನೆಗೆ ನೀರು ನುಗ್ಗುತ್ತದೆ. ಅಧಿಕಾರಿಗಳು ಬರುತ್ತಾರೆ. ನಾಳೆಯೇ ಸರಿಪಡಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ಮತ್ತೆ ಎಂದೂ ಇತ್ತ ತಲೆ ಹಾಕುವುದಿಲ್ಲ’ ಎಂದು ಗೃಹಿಣಿ ಸ್ವಪ್ನ ಆಕ್ರೋಶ ವ್ಯಕ್ತಪಡಿಸಿದರು.  

‘ಪ್ರತಿ ಮಳೆಗಾಲದಲ್ಲಿ ನೆರೆ ಸಂಭವಿಸುವ ಕುರಿತು ಜಂಟಿ ಆಯುಕ್ತರ ಗಮನ ಸೆಳೆಯುತ್ತಲೇ ಬಂದಿದ್ದೇವೆ. ವಾರ್ಡ್ ಕಚೇರಿ ಎದುರೇ ಚರಂಡಿ ಕಟ್ಟಿಕೊಂಡಿದ್ದರೂ ಎಂಜಿನಿಯರ್‌ಗಳು ಗಮನ ಹರಿಸುತ್ತಿಲ್ಲ’ ಎಂದು ಸ್ಥಳೀಯರಾದ ರಾಜಶೇಖರ್ ತಿಳಿಸಿದರು.   

ಮನೆಗಳಿಗೆ ನೀರು ನುಗ್ಗಿದ್ದ ಪ್ರದೇಶಕ್ಕೆ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತೆ ಸೌಜನ್ಯ ಭೇಟಿ ನೀಡಿ ಪರಿಶೀಲಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !