ಗುರುವಾರ , ನವೆಂಬರ್ 14, 2019
19 °C

ಟ್ರಾಯ್‌ ಹೊಸ ನೀತಿ ಯಾರಿಗೆ ಲಾಭ?

Published:
Updated:
Prajavani

ಇದೇ 29ರ ಮಧ್ಯರಾತ್ರಿ ನಂತರ ನೀವು ಇಷ್ಟಪಡುವ ಕಾರ್ಯಕ್ರಮಗಳನ್ನು ನೋಡಲು ಆಗದಿರಬಹುದು. ನೆಚ್ಚಿನ ಧಾರಾವಾಹಿಗಳೂ ಕಾಣಲು ಸಿಗದಿರಬಹುದು. ಹಾಗಂತ ಆತಂಕ ಪಡುವ ಅಗತ್ಯವೇನೂ ಇಲ್ಲ. ಗ್ರಾಹಕರು ತಮ್ಮ ನೆಚ್ಚಿನ ಚಾನೆಲ್‌ಗಳನ್ನು ಇನ್ನಷ್ಟು ಕಡಿಮೆ ದರದಲ್ಲಿ ಎಂದಿನಂತೆ ನೋಡುವ ವ್ಯವಸ್ಥೆ ನಿರ್ಮಿಸಲು ‘ಟ್ರಾಯ್’ ಈ ಮೂಲಕ ಅಡಿಗಲ್ಲು ಹಾಕಿದೆ.

ಇಷ್ಟು ದಿನ ಅನಗತ್ಯ ಚಾನೆಲ್‌ಗಳನ್ನೆಲ್ಲಾ ಗ್ರಾಹಕರು ನೋಡುವಂತೆ ಮಾಡುತ್ತಿದ್ದ ಕೇಬಲ್‌ ಆಪರೇಟರ್‌ಗಳಿಗೆ, ಈ ವ್ಯವಸ್ಥೆ ಮೂಲಕ ‘ಟ್ರಾಯ್‌’ ಬಿಗಿಯಾಗಿ ಲಗಾಮು ಹಾಕಿದೆ. ಆದರೆ, ಹೊಸ ವ್ಯವಸ್ಥೆಯಿಂದಾಗಿ ನಮಗಷ್ಟೇ ಅಲ್ಲ, ಬ್ರಾಡ್‌ಕಾಸ್ಟ್ ಸಂಸ್ಥೆಗಳು ಮತ್ತು ಗ್ರಾಹಕರಿಗೂ ಸಮಸ್ಯೆ ಎದುರಾಗಲಿದೆ ಎಂಬುದು ಕೇಬಲ್ ಆಪರೇಟರ್‌ಗಳ ದೂರು. 

ಟ್ರಾಯ್‌ನ ಹೊಸ ನಿಯಮಗಳನ್ನು ಗಮನವಿಟ್ಟು ಓದಿದರೆ, ಅವೆಲ್ಲಾ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಮತ್ತು ಸರ್ಕಾರದ ಬೊಕ್ಕಸಕ್ಕೆ ವರಮಾನ ತರುವಂತೆಯೇ ಇದೆ ಎಂಬುದು ಟ್ರಾಯ್ ಅಧಿಕಾರಿಗಳ ವಾದ.

ಏನು ಹೇಳುತ್ತದೆ ಹೊಸ ನೀತಿ?

ಈ ಹೊಸ ವ್ಯವಸ್ಥೆಯ ಒಟ್ಟಾರೆ ಸಾರಾಂಶವೆಂದರೆ, ಕೇಬಲ್ ಮತ್ತು ಡಿಟಿಎಚ್ ಆಪರೇಟರ್‌ಗಳು ಗ್ರಾಹಕರು ಕೇಳಿದ ಮತ್ತು ಅವರು ಆಯ್ಕೆ ಮಾಡಿಕೊಂಡ ಚಾನೆಲ್‌ಗಳನ್ನು ಮಾತ್ರ ಪ್ರಸಾರ ಮಾಡಬೇಕು. ಅಂದರೆ ಗ್ರಾಹಕರು ತಾವು ನೋಡುವ ಚಾನೆಲ್‌ಗಳಿಗೆ ಮಾತ್ರ ಹಣ ಪಾವತಿ ಮಾಡಿದರೆ ಸಾಕು. 

ದೂರದರ್ಶನದ 26 ಚಾನೆಲ್‌ಗಳು ಸೇರಿದಂತೆ 100 ಚಾನೆಲ್‌ಗಳ ವೀಕ್ಷಣೆಗೆ, ಇದೇ 29ರ ಮಧ್ಯರಾತ್ರಿಯಿಂದ ಗ್ರಾಹಕರಿಗೆ ಅವಕಾಶ ಸಿಗಲಿದೆ. ಉಚಿತವಾಗಿರುವ 74 ಚಾನೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಇದೆ. ಇದಕ್ಕೆ ₹ 130 ಶುಲ್ಕವಿರುತ್ತದೆ, ಜತೆಗೆ ಶೇ 18ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಅಂದರೆ ಒಟ್ಟು ₹ 154 ಕೊಟ್ಟರೆ 100 ಚಾನೆಲ್‌ಗಳು ನೋಡಬಹುದು.

ಕೇವಲ 100 ಚಾನೆಲ್‌ಗಳೇ ಎಂದು ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. ಇವಲ್ಲದೇ ಇನ್ನೂ ಉಚಿತವಾಗಿ ಲಭ್ಯವಿರುವ ಚಾನೆಲ್‌ಗಳನ್ನೂ ನೋಡಬಹುದು. ಆದರೆ ಪ್ರತಿ 25 ಉಚಿತ ಚಾನೆಲ್‌ಗಳಿಗೆ ₹ 20+ ಜಿಎಸ್‌ಟಿ ಸೇರಿ ಸುಮಾರು ₹ 25 ಪಾವತಿಸಬೇಕಾಗುತ್ತದೆ. 

ಅಂದರೆ ಪ್ರಸ್ತುತ ನೀವು ನೋಡುತ್ತಿರುವ ಎಲ್ಲ ಚಾನೆಲ್‌ಗಳೂ ನೋಡಲು ಸಿಗಬಹುದು. ಆದರೆ ಈ ಉಚಿತ ಚಾನೆಲ್‌ಗಳಲ್ಲಿ ನೆಚ್ಚಿನ ಚಾನೆಲ್‌ಗಳು ಇಲ್ಲದಿದ್ದರೆ ಏನು ಮಾಡಬೇಕು ಎಂಬುದು ಗ್ರಾಹಕರ ಚಿಂತೆ. ಈ ಬಗ್ಗೆಯೂ ಹೆಚ್ಚು ಯೋಚಿಸುವ ಅಗತ್ಯವಿಲ್ಲ. ಈಗಾಗಲೇ ಪ್ರತಿಯೊಂದು ಚಾನೆಲ್‌ಗೂ ದರ ನಿಗದಿಯಾಗಿದೆ. ಈ ದರವು ಕನಿಷ್ಠ 1 ಪೈಸೆ, ಗರಿಷ್ಠ ₹19 ಮೀರುವಂತಿಲ್ಲ ಎಂದು ಟ್ರಾಯ್ ಹೇಳಿದೆ.

ಕೇಬಲ್‌ ಆಪರೇಟರ್‌ಗಳ ತಕರಾರು

‘ಟ್ರಾಯ್‌ನ ಹೊಸ ನೀತಿ ಸರಿಯಾಗಿಯೇ ಇದೆ ಎಂದು ಟ್ರಾಯ್‌ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಕೆಲವೊಂದು ಬ್ರಾಡ್‌ಕಾಸ್ಟ್‌ ಕಂಪನಿಗಳು ತಮ್ಮ ಚಾನೆಲ್‌ಗಳಿಗೆ ₹15, ₹16, ₹17, ₹18 ಹೀಗೆ ವಿವಿಧ ದರ ನಿಗದಿ ಮಾಡಿವೆ. ಗ್ರಾಹಕರು ಪ್ರತಿಯೊಂದು ಚಾನೆಲ್‌ಗೂ ಇಷ್ಟೊಂದು ಹಣ ಪಾವತಿಸಿದರೆ ಒಟ್ಟು ಮೊತ್ತ ಎಷ್ಟಾಗಬಹುದು. ಇದು ಸಾಲದೆಂಬಂತೆ ಪ್ರತಿಯೊಂದು ಚಾನೆಲ್‌ಗೂ ಮತ್ತೆ ಜಿಎಸ್‌ಟಿ ಪಾವತಿಸಬೇಕು. ಇವೆಲ್ಲವನ್ನೂ ಟ್ರಾಯ್‌ನವರು ಯೋಚನೆ ಮಾಡದೇ ನಿರ್ಧಾರ ತೆಗೆದುಕೊಂಡಂತಿದೆ’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸಿದ ಎನ್‌.ಆರ್ ಕಾಲೊನಿಯ ಕೇಬಲ್ ಆಪರೇಟರ್‌. 

ಉದಾಹರಣೆಗೆ, ಉಚಿತವಾಗಿ ಸಿಗುವ ಚಾನೆಲ್‌ಗಳ ಜತೆಗೆ ಉದಯ ಟಿ.ವಿ ನೋಡಬೇಕೆಂದರೆ ₹ 17 ಪಾವತಿಸಬೇಕು. ಜಿಎಸ್‌ಟಿ ಸೇರಿದಂತೆ ₹ 18.5 ಆಗಬಹದು. ಹೀಗಾಗಿ ಇದು ಗ್ರಾಹಕರಿಗೆ ಹೊರೆಯಾಗುತ್ತದೆ ಎಂದು ಆಪರೇಟರ್‌ಗಳು ಹೇಳುತ್ತಿದ್ದಾರೆ.

ಗ್ರಾಹಕರು ಏನು ಮಾಡಬೇಕು?

ಹೊಸ ವ್ಯವಸ್ಥೆಯಿಂದ ದೊರೆಯುವ 100 ಚಾನೆಲ್‌ಗಳ ಜತೆಗೆ ಬ್ರಾಡ್‌ಕಾಸ್ಟ್‌ ಕಂಪನಿಗಳ ಒಂದೊಂದೇ ಚಾನೆಲ್‌ಗೆ ಹಣ ಪಾವತಿಸುವ ಬದಲು, ಚಾನೆಲ್‌ಗಳ ಗುಚ್ಛಕ್ಕೆ ಹಣ ಪಾವತಿಸಬಹುದು. ಉದಾಹರಣೆಗೆ ಕಲರ್ಸ್ ಕನ್ನಡ ಸಮೂಹದ ಎಂಟು ಅಥವಾ ಒಂಬತ್ತು ಚಾನೆಲ್‌ಗಳ ಗುಚ್ಛಕ್ಕೆ ₹ 30 ದರ ನಿಗದಿ ಪಡಿಸಲಾಗಿದೆ. ಹೀಗೆ ಚಾನೆಲ್‌ಗಳ ಸಮೂಹವನ್ನು ಆಯ್ಕೆ ಮಾಡಿಕೊಂಡರೆ ಈಗ ಪಾವತಿಸುತ್ತಿರುವ ₹ 300 ಅಥವಾ ₹ 350ರ ದರಕ್ಕೇ ಈಗ ನೋಡುತ್ತಿರುವ ಬಹುತೇಕ ಚಾನೆಲ್‌ಗಳನ್ನು ನೋಡಬಹುದು, ಬೇಡ ಎನಿಸಿದ ಚಾನೆಲ್‌ಗಳನ್ನು ಬಿಡಬಹುದು.

ಇನ್ನೂ ಸಂತೋಷದ ವಿಷಯವೆಂದರೆ, ಒಂದು ವೇಳೆ ನಿಮ್ಮಿಷ್ಟದ ಚಾನೆಲ್‌ಗಳಿಗೆ ಬ್ರಾಡ್‌ಕಾಸ್ಟ್ ಕಂಪನಿಗಳು ಯಾವುದೇ ದರ ನಿಗದಿ ಮಾಡದಿದ್ದರೆ, ಅಂತಹ ಚಾನೆಲ್‌ಗಳನ್ನೇ ಆರಂಭದ 100 ಉಚಿತ ಚಾನೆಲ್‌ಗಳ ಪಟ್ಟಿಗೆ ಸೇರಿಸಿಕೊಂಡು ನೋಡಲು ಅವಕಾಶವಿದೆ.

ಇನ್ನು ಐಪಿಎಲ್‌, ಪ್ರೊ ಕಬಡ್ಡಿಯಂತಹ ಆಟಗಳು ಪ್ರಸಾರವಾಗುವ ಸಂದರ್ಭದಲ್ಲಿ ಆ ಚಾನೆಲ್‌ಗಳು ಬೇಕೆಂದರೆ, ಅವಕ್ಕೆ ನಿಗದಿ ಪಡಿಸಿದ ಹಣವಷ್ಟೇ ಪಾವತಿಸಿ ಪಡೆಯಬಹುದು. ಹೀಗೆ ಗ್ರಾಹಕರ ಇಷ್ಟದ ಪ್ಯಾಕೇಜ್‌ ಮೂರು ತಿಂಗಳವರೆಗೆ ಇರುತ್ತದೆ. ಆ ನಂತರ ಬೇಡವೆನಿಸಿದ ಚಾನೆಲ್‌ಗಳನ್ನು ರದ್ದುಗೊಳಿಸುವ ಅವಕಾಶವೂ ಇರುತ್ತದೆ. ಈ ಮೂರು ತಿಂಗಳ ಅವಧಿಯಲ್ಲಿ ಬೇಕೆಂದರೆ, ಸೇರಿಸಿಕೊಳ್ಳಬಹುದು.

ಪಾವತಿಯೂ ಸುಲಭ

ಇನ್ನುಮುಂದೆ ಗ್ರಾಹಕರು ‘ಸೆಟ್‌ಅಪ್‌’ ಬಾಕ್ಸ್‌ನಲ್ಲಿರುವ ವಿಸಿ (ವ್ಯೂಯಿಂಗ್ ಕಾರ್ಡ್) ನಂಬರ್ ಮೂಲಕ ತಮ್ಮಿಷ್ಟದ ಚಾನೆಲ್‌ಗಳನ್ನು ಪಡೆಯಬಹುದು. ಈ ಚಾನೆಲ್ ಹಾಕಿ, ಆ ಚಾನೆಲ್ ಹಾಕಿ ಎಂದು ಕೇಬಲ್ ಆಪರೇಟರ್‌ಗಳ ಹಿಂದೆ ದುಂಬಾಲು ಬೀಳುವ ಅಗತ್ಯವಿರುವುದಿಲ್ಲ. ಆದರೆ ಮುಂಗಡ ಹಣ ಪಾವತಿಸಬೇಕು. ಪೇಟಿಎಂ, ಫೋನ್‌ಪೇ ಮೂಲಕವೂ ಹಣ ಪಾವತಿಸುವ ಸೌಲಭ್ಯ ಸಿಗಲಿದೆ.

ಇಷ್ಟು ದಿನ ರಶೀದಿ ಪಡೆಯದೆಯೇ ಹಣ ಪಾವಿತಸಬೇಕಾಗು‌ತ್ತಿತ್ತು. ಇದರಿಂದ ನಮ್ಮ ತೆರಿಗೆ ಹಣ ನಿಜವಾಗಿಯೂ ಸರ್ಕಾರಕ್ಕೆ ತಲುಪುತ್ತಿದೆಯೇ ಎಂಬುದು ಗೊತ್ತಾಗುತ್ತಿರಲಿಲ್ಲ. ಹೊಸ ವ್ಯವಸ್ಥೆಯಿಂದಾಗಿ ತೆರಿಗೆ ಹಣ ನೇರವಾಗಿ ಸರ್ಕಾರಕ್ಕೆ ತಲುಪುತ್ತದೆ.

**

ಪೊರ್ಟೆಬಿಲಿಟಿ ವ್ಯವಸ್ಥೆ ಬರಲಿ!

ಹೊಸ ದರ ವ್ಯವಸ್ಥೆಯನ್ನು ಟ್ರಾಯ್ ಪ್ರಕಟಿಸಿದ ನಂತರ, ಕೇವಲ ಕೇಬಲ್ ಆಪರೇಟರ್‌ಗಳಷ್ಟೇ ವಿರೋಧ ವ್ಯಕ್ತಪಡಿಸಿದ್ದಾರೆಯೇ ಹೊರತು, ಗ್ರಾಹಕರು ಚಕಾರ ಎತ್ತಿಲ್ಲ. ಕಾರಣ ಇದು ಗ್ರಾಹಕ ಸ್ನೇಹಿ ನೀತಿ. ಆಪರೇಟರ್‌ಗಳ ವಿರೋಧಕ್ಕೆ ಕಾರಣ ವರಮಾನ ಕುಸಿಯುತ್ತದೆ ಎಂಬ ಭೀತಿ. ಟ್ರಾಯ್‌ ನಿಗದಿ ಪಡಿಸಿರುವ ₹130ರ ದರದಲ್ಲಿ ಶೇ 55ರಷ್ಟು ಹಣ ಡೆನ್‌, ಹಾಥ್ ವೇಯಂತಹ ಕೇಬಲ್ ನೆಟ್‌ವರ್ಕ್‌ ಸಂಸ್ಥೆಗಳಿಗೆ ಹೋದರೆ, ಉಳಿದ ಶೇ 45ರಷ್ಟು ಹಣ ಮಾತ್ರ ಕೇಬಲ್‌ ಆಪರೇಟರ್‌ಗಳಿಗೆ ಸಿಗುತ್ತದೆ. ಇದರಿಂದ ನಿರ್ವಹಣೆ ಮಾಡುವುದು ಹೇಗೆ, ಕೆಲಸ ಮಾಡುವ ಹುಡುಗರಿಗೆ ಹಣ ಪಾವತಿಸುವುದು ಹೇಗೆ ಎಂಬುದೇ ಅವರ ಸಮಸ್ಯೆ. ಈ ಉದ್ಯಮವನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಉದ್ಯೋಗಿಗಳ ಕಿಸೆಗೆ ಕತ್ತರಿ ಬೀಳಲಿದೆ. ಹೀಗಾಗಿ ಈ ದರ ವ್ಯವಸ್ಥೆಯನ್ನು ಪರಿಶೀಲಿಸಬೇಕು ಎಂಬುದು ಕೇಬಲ್ ಆಪರೇಟರ್‌ಗಳ ವಾದ.

ಈ ಸಮಸ್ಯೆಗೆ ಸೂಕ್ತ ಪರಿಹಾರವೆಂದರೆ ಕೇಬಲ್ ಆಪರೇಟರ್‌ಗಳು ಡೆನ್, ಹಾಥ್ ವೇಯಂತಹ ಎಂಎಸ್‌ಒಗಳನ್ನು ಅವಲಂಬಿಸುವ ಬದಲು, ತಾವೇ ಎಂಎಸ್‌ಒ ಕಂಪನಿ ಆರಂಭಿಸಬಹುದು. ಇದಕ್ಕೆ ಟ್ರಾಯ್‌ನ ಹೊಸ ನಿಯಮಗಳಲ್ಲಿ ಅವಕಾಶವಿದೆ. ಇಲ್ಲಿರುವ ಮುಖ್ಯ ಸಮಸ್ಯೆ ಎಂದರೆ, ಪ್ರಸ್ತುತ ಗ್ರಾಹಕರು ಬಳಸುತ್ತಿರುವ ಸೆಟ್‌ಅಪ್ ಬಾಕ್ಸ್‌ಗಳು, ಆಯಾ ಎಂಎಸ್‌ಒಗಳಿಗೆ ಮಾತ್ರ ಸೀಮಿತವಾಗಿವೆ. ಇದರಿಂದ ಗ್ರಾಹಕರು ಹೊಸ ಬಾಕ್ಸ್‌ಗಳನ್ನು ಖರೀದಿಸಲು ಇಷ್ಟಪಡುವುದಿಲ್ಲ. ಎಟಿಎಂಗಳು, ಸಿಮ್‌ಗಳ ಬಳಕೆಯಲ್ಲಿ ಪೊರ್ಟೆಬಿಲಿಟಿ ವ್ಯವಸ್ಥೆ ತಂದಿರುವಂತೆ ಕೇಬಲ್ ನೆಟ್‌ವರ್ಕ್‌ ವ್ಯವಸ್ಥೆಯಲ್ಲೂ ಪೊರ್ಟೆಬಿಲಿಟಿ ತಂದರೆ ಆಪರೇಟರ್‌ಗಳಿಗೆ ಸಮಸ್ಯೆಯೇ ಇರುವುದಿಲ್ಲ.

–ಎಂ. ಯತೀಶ್‌, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಡಿಜಿಟಲ್ ಕೇಬಲ್ ಆಪರೇಟರ್‌ಗಳ ಹಿತರಕ್ಷಣಾ ಸಮಿತಿ

**

‌ಚಾನೆಲ್‌ಗಳು ದರವನ್ನೇನೋ ಪ್ರಕಟಿಸುತ್ತಿವೆ. ಆದರೆ ಅದು ಜಿಎಸ್‌ಟಿ ಬಿಟ್ಟು ಎಂದು ಹೇಳುತ್ತಿಲ್ಲ. ಈ ವಿಷಯವನ್ನು ಪ್ರತಿಯೊಬ್ಬ ಗ್ರಾಹಕರಿಗೂ ನಾವೇ ತಿಳಿಸಿ ಹೇಳಬೇಕು. ಆದರೆ ಅರ್ಥ ಮಾಡಿಕೊಳ್ಳದ ಗ್ರಾಹಕರು ಪರದೆ ಮೇಲೆ ತೋರಿಸಿದ ಹಣವನ್ನಷ್ಟೇ ಪಾವತಿಸುವುದಾಗಿ ಮೊಂಡುವಾದ ಮಾಡುತ್ತಾರೆ. ಇಂತಹ ಸಮಸ್ಯೆಗಳು ಹಲವಾರು ಇವೆ ಯಾರಿಗೆ ಹೇಳೋಣ.

–ಅನಿಲ್‌, ಶಿವ ಕೇಬಲ್ ನೆಟ್‌ವರ್ಕ್‌, ತ್ಯಾಗರಾಜನಗರ

**

ಈ ಹೊಸ ವ್ಯವಸ್ಥೆಗೆ ಜನ ಒಗ್ಗಿಕೊಳ್ಳುವುದಕ್ಕೆ, ಬಹಶಃ ಮೂರು ತಿಂಗಳು ಬೇಕಾಗಬಹುದು. ಅಲ್ಲಿಯವರೆಗೂ ನಾವು ಸ್ವಲ್ಪ ಕಷ್ಟಪಡಬೇಕು. ಗ್ರಾಹಕರಲ್ಲಿ ಜಾಗೃತಿ ಮೂಡಿಸಬೇಕಾದ ಕೆಲಸ ಮಾಡಬೇಕು. ಮುಖ್ಯವಾಗಿ ಜಿಎಸ್‌ಟಿ ಕುರಿತು ತಿಳಿಸುವುದು ದೊಡ್ಡ ಕೆಲಸ.

–ವೆಂಕಟೇಶ್‌, ವಾಸವಿ ಕೇಬಲ್ ನೆಟ್‌ವರ್ಕ್‌, ಗವಿಪುರಂ

ಪ್ರತಿಕ್ರಿಯಿಸಿ (+)