ಜ್ಞಾನ ಪ್ರಮಾಣವೇ?

7
ಬೆರಗಿನ ಬೆಳಕು

ಜ್ಞಾನ ಪ್ರಮಾಣವೇ?

ಗುರುರಾಜ ಕರಜಗಿ
Published:
Updated:

ಏನು ಜೀವನದರ್ಥ ? ಎನು ಪ್ರಪಂಚಾರ್ಥ? |
ಏನು ಜೀವ ಪ್ರಪಂಚಗಳ ಸಂಬಂಧ ? ||
ಕಾಣದಿಲ್ಲಿರ‍್ಪುದೇನಾನುಮುಂಟೆ? ಅದೇನು ?
ಜ್ಞಾನ ಪ್ರಮಾಣವೇಂ? - ಮಂಕುತಿಮ್ಮ ||

(ಕಾಣದಿಲ್ಲಿರ‍್ಪುದೇನಾನುಮುಂಟೆ - ಕಾಣದೆ+ಇಲ್ಲಿ+ಇರ್ಪುದು (ಇರುವುದು)+ ಏನಾನುಂ (ಏನಾದರೂ) +ಉಂಟೆ?, ಪ್ರಮಾಣ = ಸಾಕ್ಷಿ, ಅಳತೆ)
ಅರ್ಥ: ಈ ಜೀವನಕ್ಕೆ, ಪ್ರಪಂಚಕ್ಕೆ ಏನಾದರೂ ಅರ್ಥವಿದೆಯೇ? ಇಲ್ಲಿ ಬದುಕಿರುವ ಜೀವಗಳಿಗೂ ಪ್ರಪಂಚಕ್ಕೂ ಸಂಬಂಧ ಯಾವುದು? ಈ ವ್ಯವಸ್ಥೆಯಲ್ಲಿ ನಮ್ಮ ಕಣ್ಣಿಗೆ ಕಾಣದಂತೆ ಇರುವುದು ಏನಾದರೂ ಉಂಟೆ? ನಮ್ಮ ಅನುಭವಗಳಿಗೆಲ್ಲ ಜ್ಞಾನವೇ ಅಳತೆಗೋಲೇ?
ಶಂಕರಾಚಾರ್ಯರ ಬಹು ಪ್ರಸಿದ್ಧವಾದ ಮಾತು, "ಕೋ ಹಂ, ಕುತ ಆಯಾತ:)". ನಾನು ಯಾರು? ಏಕೆ ಇಲ್ಲಿಗೆ ಬಂದಿದ್ದೇನೆ? ಇಂಥ ಪ್ರಶ್ನೆಗಳನ್ನು ಪ್ರತಿಯೊಬ್ಬ ಮನುಷ್ಯ ತನ್ನ ಬದುಕಿನಲ್ಲಿ ಒಂದು ಸಲವಾದರೂ ಕೇಳಿಕೊಳ್ಳುತ್ತಾನೆ. ನಾನು ಯಾರು ? ಈ ಜಗತ್ತು ಯಾರದ್ದು ? ನಾನು ಇಲ್ಲಿಗೆ ಬಂದದ್ದು ಏಕೆ? ದಾಸರು ಹಾಡಿದಂತೆ, "ಯಾಕೆನ್ನ ಈ ರಾಜ್ಯಕ್ಕೆ ಎಳೆತಂದೆ ಹರಿಯೆ?" ನಮ್ಮ ಹಾಡೂ ಆಗಿದೆ. ನಮ್ಮ ಪ್ರಪಂಚವೆಂದರೆ ಯಾವುದು? ಮನುಷ್ಯನ ಪಂಚೇಂದ್ರಿಯಗಳಿಂದ ಕಣ್ಣು, ಮೂಗು, ಕಿವಿ, ನಾಲಿಗೆ ಮತ್ತು ಚರ್ಮಗಳ ಮೂಲಕ ನಮಗೆ ಗೋಚರವಾಗುವ ನಾನಾ ರೂಪ, ನಾನಾ ಧ್ವನಿ, ನಾನಾ ಶಕ್ತಿ ಹಾಗೂ ನಾನಾ ವಸ್ತುಗಳ ಸಮುದಾಯವೇ ಪ್ರಪಂಚ. ಇಂದ್ರಿಯಗಳ ಮೂಲಕ ಬಂದ ಪ್ರೇರಣೆ ನಮ್ಮೊಳಗೆ ಇದೇನು? ಅದು ಏಕೆ? ಇದು ಹೇಗೆ? ಎಂಬ ಪ್ರಶ್ನೆಗಳನ್ನು ಎಬ್ಬಿಸಿ ಚಿಂತನೆಗೆ ಹಚ್ಚುತ್ತವೆ. ಜ್ಞಾನಮೂಲವಾದ ಚಿಂತನೆ ಮನುಷ್ಯನಲ್ಲಿ ಕಾರ್ಯಕ್ಕೆ ಪ್ರಚೋದನೆ ನೀಡುತ್ತದೆ. ಈ ಕಾರ್ಯಗಳಿಂದ ಪ್ರಪಂಚದ ಬೆಳವಣಿಗೆ. ಕಾವ್ಯ, ವಿಜ್ಞಾನ, ಶಿಲ್ಪ, ತಂತ್ರಜ್ಞಾನ, ಸಮಾಜಶಾಸ್ತ್ರ ಇತ್ಯಾದಿಗಳೆಲ್ಲ ಮನುಷ್ಯನ ಕುತೂಹಲ ತಣಿಸಲು ಹುಟ್ಟಿಕೊಂಡ ಅವಿಷ್ಕಾರಗಳು. ಪ್ರತಿಯೊಂದು ಅನುಭವಕ್ಕೆ "ಯಾಕೆ?" ಎಂದು ಪ್ರಶ್ನೆ ಕೇಳಿ ಉತ್ತರ ಹುಡುಕಲು ಪ್ರಯತ್ನಿಸಿದವನು ವಿಜ್ಞಾನಿಯಾದ. ಅದರಂತೆ ಪ್ರತಿಯೊಂದಕ್ಕೂ "ಇದನ್ನು ಮಾಡಿದ್ದು ಯಾರು? ಇದರ ಹಿಂದಿನ ಮೂಲತತ್ವವೇನು?" ಎಂದು ಸತ್ಯಾನ್ವೇಷಿಯಾದವನು ತತ್ವಜ್ಞಾನಿಯಾದ. ಪ್ರಪಂಚದ ಬೆಳವಣಿಗೆಯಿಂದ ಮಾನವನ ಬೆಳವಣಿಗೆ, ಅವನ ಚಿತ್‌ಶಕ್ತಿಯ ವೃದ್ಧಿಯಿಂದ ಪ್ರಪಂಚದ ಉತ್ಥಾನ. ಹೀಗೆ ಜೀವ ಮತ್ತು ಪ್ರಪಂಚಗಳು ಒಂದಕ್ಕೊಂದು ಪೂರಕವಾದವುಗಳು. ಈ ಜ್ಞಾನ ನಿರಂತರ ಬೆಳೆಯುವ ಸಿದ್ಧಿ.

ಮನುಷ್ಯನ ಜ್ಞಾನ ಇಂದ್ರಿಯಗಳಿಂದ ಬಂದದ್ದು. ಅದು ಅದರ ಮಿತಿ. ಯಾಕೆಂದರೆ ಇಂದ್ರಿಯಗಳಿಗೆ ವಸ್ತುಗಳ ಹೊರರೂಪ ಮಾತ್ರ ಗೊತ್ತಾಗುತ್ತದೆ. ಆದರೆ ಅವುಗಳ ಅಂತ:ಸ್ಸತ್ವ ಕಾಣಲಾರದು. ಆಕಾಶದಲ್ಲಿ ಕಾಣುವ ಸುಂದರವಾದ ಕಾಮನಬಿಲ್ಲಿನ ಬಣ್ಣಗಳು ಕಣ್ಣು ಸೆಳೆಯುತ್ತವೆ. ಆದರೆ ನಿಜವಾಗಿ ಗಮನಿಸಿದರೆ ಅಲ್ಲಿ ಬಣ್ಣಗಳೇ ಇಲ್ಲ. ಸಣ್ಣ ಸಣ್ಣ ನೀರ ಹನಿಗಳ ಮೇಲೆ ಸೂರ್ಯನ ಬೆಳಕು ತೂರಿ ಸಾಗಿದಾಗ ಉಂಟಾಗುವ ಭ್ರಮೆಯೇ ಬಣ್ಣ. ಆಧ್ಯಾತ್ಮಿಕವಾಗಿ ನೋಡಿದರೆ ಇನ್ನೂ ಅದ್ಭುತ. ಈ ಪ್ರಪಂಚ ಸತ್ಯವೋ? ಅಸತ್ಯವೋ? ಅದು ಸತ್ಯವೂ ಹೌದು, ಅಸತ್ಯವೂ ಹೌದು. ಹಾಗಾದರೆ ಕಂಡದ್ದು ನಿಜವಾಗಿ ಇರುವುದೇ ಬೇರೆಯಾಗಿ, ಇದ್ದದ್ದು ಕಂಡದ್ದೇ ಮತ್ತೊಂದಾಗಿ ಎಂದಾಗ ನಮ್ಮ ಜ್ಞಾನ ಸರಿಯಾದ ಅಳತೆಗೋಲೇ? ಹಾಗಾದರೆ ಸತ್ಯ ಯಾವುದು? ಎಂಬ ಜಿಜ್ಞಾಸೆ ಹುಟ್ಟುತ್ತದೆ.

ಅದಕ್ಕೇ ಈ ಕಗ್ಗದಲ್ಲಿ ಜೀವನದ ಬಗ್ಗೆ, ಪ್ರಪಂಚದ ಬಗ್ಗೆ, ಅವುಗಳ ಪರಸ್ಪರ ಸಂಬಂಧದ ಬಗ್ಗೆ ಮತ್ತು ನಮ್ಮ ಜ್ಞಾನದ ಖಚಿತತೆಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ನಾಲ್ಕನೆಯ ಕಗ್ಗದಿಂದ ನಲವತ್ತೆರಡರವರೆಗೆ ಪ್ರಶ್ನೆಗಳನ್ನೇ ಕೇಳುತ್ತಾರೆ. ಮುಂದೆ ಅವುಗಳಿಗೆ ಉತ್ತರ ನೀಡುತ್ತ ಹೋಗುತ್ತಾರೆ. ಇದು ಜ್ಞಾನವನ್ನು ಪಡೆಯುವ ಪ್ರಕ್ರಿಯೆ. ನಮ್ಮ ಎಲ್ಲ ಉಪನಿಷತ್ತುಗಳೂ ಪ್ರಶ್ನೋತ್ತರ ರೂಪದಲ್ಲೇ ಇರುವಂಥವು. ಅದೇ ಮಾರ್ಗವನ್ನು ಡಿ.ವಿ.ಜಿ ಅನುಸರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 11

  Happy
 • 4

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !