ಬ್ರಹ್ಮನ ಪ್ರಕಾಶದ ಹರಹು

7

ಬ್ರಹ್ಮನ ಪ್ರಕಾಶದ ಹರಹು

ಗುರುರಾಜ ಕರಜಗಿ
Published:
Updated:
Prajavani

ಚಲನೆ ವಿಶ್ವಾಸ್ತರಣೆಯದುವೆ ಮಾಯಾಭ್ರಮಣೆ |
ಸಲೆ ಬಗೆಯಲದು ಪರಬ್ರಹ್ಮ ವಿಸ್ಫುರಣೆ ||
ಥಳಥಳಿಕೆ ವಜ್ರದಲಿ ನೈಜವಿರುವಂತೆಯು |
ಜ್ವಲತೆ ಬೊಮ್ಮ್ಮಗೆ ನೈಜ – ಮಂಕುತಿಮ್ಮ || 88 ||

ಪದ-ಅರ್ಥ: ವಿಶ್ವಾಸ್ತರಣೆ=ಪ್ರಪಂಚದ ವಿಸ್ತಾರ, ಸಲೆ=ಸರಿಯಾಗಿ, ವಿಸ್ಫುರಣೆ=ಪ್ರಕಾಶದ ಹರಡಿಕೆ, ಜ್ವಲತೆ=ಹೊಳಪು, ನೈಜ=ಸಹಜ
ವಾಚ್ಯಾರ್ಥ: ಚಲನೆ, ವಿಶ್ವದ ವಿಸ್ತಾರ ಎಲ್ಲವೂ ಮಾಯೆಯಿಂದಾದ ಭ್ರಮೆ. ನಿಜವಾಗಿ ತಿಳಿದರೆ ಅದು ಪರಬ್ರಹ್ಮದ ಪ್ರಕಾಶದ ಹರಡುವಿಕೆ. ವಜ್ರದಲ್ಲಿ ಥಳಥಳ ಹೊಳಪು ಹೇಗೆ ಅದಕ್ಕೆ ಸಹಜವಾಗಿದೆಯೋ ಹಾಗೆ ಪ್ರಕಾಶ ಬ್ರಹ್ಮನಿಗೆ ಸಹಜವಾಗಿದೆ.
ವಿವರಣೆ: ಏನು ಈ ಪ್ರಪಂಚದ ವೇಗ! ಏನು ಅದರ ವಿಸ್ತಾರ! ಅದು ಅತ್ಯದ್ಭುತವೆನ್ನಿಸುವಂತಹದ್ದು. ಕ್ಷಣಕ್ಷಣಕ್ಕೂ ಬದಲಾಗುತ್ತದೆ ಎಂಬ ಭ್ರಮೆ ತರುವುದು. ಕಗ್ಗ ಹೇಳುತ್ತದೆ, ಈ ಚಲನೆಯ ವೇಗ, ಈ ಅಪಾರ ವಿಸ್ತಾರ ಎಲ್ಲವೂ ಸರಿಯಾಗಿ ಗ್ರಹಿಸಿದರೆ ಪರವಸ್ತುವಿನ ಪ್ರಕಾಶದ ಹರಡುವಿಕೆಯೇ. ಅದರ ಹೊಳಪೇ ಪ್ರಪಂಚದ ಹೊಳಪಂತೆ ತೋರುತ್ತದೆ

ಅಲ್ಲಮಪ್ರಭುವಿನ ಒಂದು ವಚನ ಹೀಗಿದೆ

–ಪಂಚಾಶತ್ಕೋಟಿ ವಿಸ್ತೀರ್ಣ ಭೂಮಂಡಲವನೊಂದು
ತಲೆಯಿಲ್ಲದ ಮುಂಡ ನುಂಗಿತ್ತು ಕಂಡೆನು.
ತಲೆಯಿಲ್ಲದೆ ಕಂಡು ಬೆರಗಾದೆನು !
ನವಖಂಡಮಂಡಲ ಭಿನ್ನವಾದಂದು
ಆ ತಲೆಯ ಕಂಡವರುಂಟೆ ಗುಹೇಶ್ವರಾ ?

ಮೊದಲನೆಯ ಸಾಲು ಅಪಾರವಾಗಿ ಹರಡಿದ ವಿಶ್ವವನ್ನು ಹೇಳುತ್ತದೆ. ಅದನ್ನು ತಲೆಯಿಲ್ಲದ ಮುಂಡ ನುಂಗಿತ್ತ ಕಂಡೆನು ಎನ್ನುತ್ತಾರೆ. ತಲೆ ಎಂದರೆ ಶುದ್ಧ ಅರಿವು, ಮುಂಡ ಎಂದರೆ ದೇಹ. ತಲೆ ಇಲ್ಲದ ಮುಂಡವೆಂದರೆ ಶುದ್ಧ ಅರಿವಿನ ಮರೆವು ಅದೇ ಮಾಯೆ. ಈ ಮಾಯೆ ಇಡೀ ವಿಶ್ವವನ್ನೆಲ್ಲ ನುಂಗಿದೆ. ತಲೆ ಇಲ್ಲದೆ ಕಂಡುಬೆರಗಾದೆನು ಎಂದರೆ ಶಿವಜ್ಞಾನ ದೃಷ್ಟಿಯನ್ನು ಪಡೆದು ನಾನು ಅರಿವು, ಮಾಯೆಯ ಭೇದವನ್ನು ಅಡಗಿಸಿದಾಗ ಮಾಯೆಯ ಹರಹನ್ನು ಕಂಡು ಬೆರಗಾದೆನು. ನವಖಂಡಮಂಡಲ ಭಿನ್ನವಾದಂದು ಎಂದರೆ ಜ್ಞಾನಸಾಧನವಾದ ಒಂಭತ್ತು ವೃತ್ತಿಗಳು – ಐದು ಬಾಹ್ಯಕರಣಗಳು ಮತ್ತು ನಾಲ್ಕು ಅಂತ:ಕರಣಗಳು – ಇವುಗಳನ್ನೆಲ್ಲ ದಾಟಿ ಸಾಗಿದಾಗ ಎಂದರ್ಥ. ಜಾತಲೆಯ ಕಂಡವರುಂಟೆ ಗುಹೇಶ್ವರಾ ಎಂದರೆ ಆ ತಲೆಯನ್ನು ಕಂಡವರು ಯಾರೂ ಇಲ್ಲ. ಯಾಕೆಂದರೆ ಎಲ್ಲೆಲ್ಲಿಯೂ ಮಾಯೆ ಹರಡಿಕೊಂಡಿದೆ. ಯಾವಾಗ ಪರವಸ್ತುವಿನ ಜ್ಞಾನ ಉಂಟಾಯಿತೋ ಆಗ ಮಾತ್ರ ಮಾಯೆ ಮರೆಯಾಗುತ್ತದೆ. ಎಂಥ ಸಾಮ್ಯ ಪ್ರಭುವಿನ ವಚನದಲ್ಲಿ ಮತ್ತು ಈ ಕಗ್ಗದಲ್ಲಿ |

ಮಾಯೆಯ ಪೊರೆಯಿಂದ ಈಶ್ವರನಿಗೂ ಜಗತ್ತಿಗೂ ಇರುವ ಅವಿನಾಭಾವವನ್ನು ಕಾಣುವುದು ಕಷ್ಟವಾಗಿ ತೋರುತ್ತದೆ. ಜೀವಿಗೆ ದಿನದಿನದ ಪ್ರಪಂಚವೇ ಶಾಶ್ವತವಾದದ್ದೆಂಬ ನಂಬಿಕೆ ಬರುವಂತೆ ಮಾಡುತ್ತದೆ. ಕಗ್ಗದ ಕೊನೆಯ ಎರಡು ಸಾಲುಗಳು ಪರವಸ್ತುವಿನ ಮೂಲಗುಣದ ಬಗ್ಗೆ ಹೇಳುತ್ತವೆ. ಥಳಥಳಿಸುವ ಹೊಳಪು ವಜ್ರಕ್ಕೆ ಹೇಗೆ ಸಹಜವಾಗಿದೆಯೋ ಹಾಗೆಯೇ ಬ್ರಹ್ಮಕ್ಕೂ ಅನ್ಯಾದೃಶವಾದ ಪ್ರಕಾಶ ನೈಜವಾಗಿದೆ. ಅದರ ಬೆಳಕಿನಲ್ಲೇ ಪ್ರಪಂಚದ ವಿಸ್ತರಣೆ ನಡೆಯುತ್ತಿದೆ. ಹೀಗೆ ವಾಸ್ತವ ಮತ್ತು ಭ್ರಮೆಗಳ ನಡುವಿನ ವ್ಯತ್ಯಾಸವನ್ನು ಕಗ್ಗ ಎತ್ತಿ ತೋರಿಸುತ್ತದೆ. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !