ಮಳಿಗೆಗಳು ತೆರೆದರೂ ಗ್ರಾಹಕರು ಬರಲಿಲ್ಲ...

7
ಬಿಎಂಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ

ಮಳಿಗೆಗಳು ತೆರೆದರೂ ಗ್ರಾಹಕರು ಬರಲಿಲ್ಲ...

Published:
Updated:
Prajavani

ಬೆಂಗಳೂರು: ನಗರದಲ್ಲಿ ಮಂಗಳವಾರ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ಸಂಚಾರ ಭಾಗಶಃ ಬಂದ್‌ ಆಗಿತ್ತು. ಆಟೊ, ಟ್ಯಾಕ್ಸಿ ಸೇರಿದಂತೆ ಖಾಸಗಿ ವಾಹನಗಳ ಓಡಾಟ ಹೆಚ್ಚು–ಕಡಿಮೆ ಎಂದಿನಂತಿತ್ತು. ಬಂದ್‌ ಬಗ್ಗೆ ಮೊದಲೇ ತಿಳಿದಿದ್ದರಿಂದ ಬಹುಪಾಲು ಜನ, ಮನೆಯಲ್ಲೇ ದಿನಕಳೆದರು. ರಸ್ತೆ, ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.

ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಬೆಳಿಗ್ಗೆ ಮೆಜೆಸ್ಟಿಕ್‌ಗೆ ಬಂದಿಳಿದ ಪ್ರಯಾಣಿಕರು, ನಿಗದಿತ ಸ್ಥಳಕ್ಕೆ ಹೋಗಲು ಬಸ್‌ ಸಿಗದೆ ಪರದಾಡಿದರು. ನಿಲ್ದಾಣದಲ್ಲೇ ಸುತ್ತಾಡುತ್ತಿದ್ದ ಆಟೊ ಚಾಲಕರು, ಮಂಗಳವಾರ ದುಬಾರಿ ಪ್ರಯಾಣ ದರಕ್ಕೆ ಬೇಡಿಕೆ ಇಟ್ಟರು.

ನಿಲ್ದಾಣ ಹಾಗೂ ಮಾರುಕಟ್ಟೆಯ ಅಂಗಡಿಗಳೆಲ್ಲವೂ ತೆರೆದಿದ್ದವು. ಆದರೆ, ವ್ಯಾಪಾರ ಮಂಕಾಗಿತ್ತು. ಮಾಲ್‌ಗಳು, ಚಿತ್ರಮಂದಿರಗಳು ತೆರೆದಿದ್ದವು. 

ನಸುಕಿನಲ್ಲಿ ಬಹುತೇಕ ಬಸ್‌ಗಳನ್ನು ರಸ್ತೆಗೆ ಇಳಿಸಲಾಗಿತ್ತು. ಮಲ್ಲೇಶ್ವರ, ಶೇಷಾದ್ರಿಪುರ, ನೆಲಮಂಗಲ, ಯಶವಂತಪುರ, ಅವಲಹಳ್ಳಿ ಬಳಿ ಬಿಎಂಟಿಸಿ ಬಸ್‌ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು. ಆ ಸುದ್ದಿ ತಿಳಿದ ಬಹುತೇಕ ಚಾಲಕರು, ಬಸ್‌ ಸಂಚಾರ ಸ್ಥಗಿತಗೊಳಿಸಿದರು. ಕೆಲವು ಮಾರ್ಗಗಳಲ್ಲಿ ಮಾತ್ರ ಬೆರಳೆಣಿಕೆಯಷ್ಟು ಬಸ್‌ಗಳ ಓಡಾಟವಿತ್ತು. 

ಬೃಹತ್ ಮೆರವಣಿಗೆ: ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು, ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಗಾರ್ಮೆಂಟ್‌ ಕಾರ್ಖಾನೆಗಳು ಬಂದ್‌: ನಗರದ ಬಹುತೇಕ ಗಾರ್ಮೆಂಟ್‌ ಕಾರ್ಖಾನೆಗಳು ಮಂಗಳವಾರ ಬಂದ್‌ ಆಗಿದ್ದವು. ಅಲ್ಲಿ ಕೆಲಸ ಮಾಡುವ ಕಾರ್ಮಿಕರು, ಸಂಘಟನೆಗಳ ನೇತೃತ್ವದಲ್ಲಿ ಮೆರವಣಿಗೆ ನಡೆಸಿದರು.

ಎನ್‌ಟಿಟಿಎಫ್‌ ‘ನಿಶಾ ಡಿಸೈನ್’ ಹಾಗೂ ‘ಪರ್ಲ್ ಗ್ಲೋಬಲ್’ ಗಾರ್ಮೆಂಟ್ಸ್ ಕಾರ್ಖಾನೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು. ಅಲ್ಲಿಗೆ ಹೋಗಿದ್ದ ಕಾರ್ಮಿಕ ಸಂಘಟನೆಗಳ ಮುಖಂಡರು, ಸ್ಥಳದಲ್ಲೇ ಪ್ರತಿಭಟನೆ ನಡೆಸಿ ಕಾರ್ಖಾನೆಗಳನ್ನು ಬಂದ್‌ ಮಾಡಿಸಿದರು.

ಪೀಣ್ಯ 2ನೇ ಹಂತ, ಮೈಸೂರು ರಸ್ತೆ, ಬೊಮ್ಮನಹಳ್ಳಿ ಹಾಗೂ ಸುತ್ತಮುತ್ತಲ ಗಾರ್ಮೆಂಟ್‌ ಕಾರ್ಖಾನೆಗಳೆಲ್ಲವೂ ಬಂದ್‌ ಆಗಿದ್ದವು. ಕೆಲವು ಕಾರ್ಖಾನೆಯವರು, ‘ಬಂದ್‌ ಹಿನ್ನೆಲೆಯಲ್ಲಿ ಇಂದು ಹಾಗೂ ನಾಳೆ ರಜೆ’ ಎಂಬ ಫಲಕಗಳನ್ನು ಬಾಗಿಲುಗಳಿಗೆ ಅಂಟಿಸಿದ್ದರು. 

‘ಗಾರ್ಮೆಂಟ್ಸ್ ಕಾರ್ಖಾನೆ ಕಾರ್ಮಿಕರೆಲ್ಲರೂ ಬಂದ್‌ಗೆ ಬೆಂಬಲ ನೀಡಿದರು. ಎಂಇಐ ಕಾಲೊನಿಯಿಂದ ಜಾಲಹಳ್ಳಿ ಕ್ರಾಸ್‌ವರೆಗೆ ಮೆರವಣಿಗೆ ನಡೆಸಿ ಬಹಿರಂಗ ಸಭೆ ನಡೆಸಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಯಿತು’ ಎಂದು ಗಾರ್ಮೆಂಟ್ಸ್ ಲೇಬರ್ ಯೂನಿಯನ್ ಕಾರ್ಯದರ್ಶಿ ಕೆ.ಸರೋಜಾ ‘ಪ್ರಜಾವಾಣಿ’ಗೆ ತಿಳಿಸಿದರು. 

ಬಿಕೋ ಎಂದ ಎಪಿಎಂಸಿ: ಯಶವಂತಪುರ ಎಪಿಎಂಸಿಗೂ ಬಂದ್ ಬಿಸಿ ತಟ್ಟಿತು. ಶೇ 80ರಷ್ಟು ಮಳಿಗೆ, ಅಂಗಡಿಗಳು ತೆರೆದಿದ್ದವು. ಆದರೆ, ಕಾರ್ಮಿಕರು ಕೆಲಸಕ್ಕೆ ಗೈರಾದರು. ಜನರು ಸಹ ಎಪಿಎಂಸಿಯತ್ತ ಸುಳಿಯಲಿಲ್ಲ.

ಈರುಳ್ಳಿ, ಆಲೂಗಡ್ಡೆ, ಬೆಳೆಕಾಳು ಸೇರಿದಂತೆ ಕೃಷಿ ಉತ್ಪನ್ನಗಳ ಸಂಗ್ರಹ ಮಾರುಕಟ್ಟೆಯಲ್ಲಿತ್ತು. ಆದರೆ, ಅವುಗಳನ್ನು ಖರೀದಿಸುವವರೇ ಇರಲಿಲ್ಲ. ಕಾರ್ಮಿಕರು ಇರದಿದ್ದರಿಂದ, ಲಾರಿಗಳಿಗೆ ಸರಕು ಹೇರುವುದು ಹಾಗೂ ಇಳಿಸುವ ಕಾರ್ಯ ನಡೆಯಲಿಲ್ಲ.

‘ಬಂದ್‌ಗೆ ನೈತಿಕ ಬೆಂಬಲ ಮಾತ್ರ ನೀಡಿದ್ದೇವೆ. ವಹಿವಾಟು ಸ್ಥಗಿತಗೊಳಿಸಿಲ್ಲ. ನಿತ್ಯವೂ ₹50 ಕೋಟಿ ವಹಿವಾಟು ನಡೆಯುತ್ತದೆ. ಗ್ರಾಹಕರು ಕಡಿಮೆ ಸಂಖ್ಯೆಯಲ್ಲಿ ಬಂದಿದ್ದು, ವಹಿವಾಟು ಕಡಿಮೆ ಆಗಿದೆ’ ಎಂದು ಬೇಳೆ ಕಾಳುಗಳ ವರ್ತಕರ ಸಂಘದ ಅಧ್ಯಕ್ಷ ರಮೇಶ್ ಚಂದ್ರ ಹೇಳಿದರು.  

ಮಾರುಕಟ್ಟೆಯಲ್ಲಿ: ‘ಬೆಳಿಗ್ಗೆಯಿಂದ ಕಾದು ಕುಳಿತಿದ್ದರೂ ಕೊಳ್ಳುವವರೇ ಇಲ್ಲ. ಬಡವರ ಹೊಟ್ಟೆ ಮೇಲೆ ಹೊಡೆಯೋಕೆ ಇಂತಹ ಬಂದ್‌ ಮಾಡುತ್ತಾರೇನೊ...’ ಎಂದು ಬೇಸರ ವ್ಯಕ್ತಪಡಿಸಿದವರು ಕೆ.ಆರ್‌.ಮಾರುಕಟ್ಟೆಯ ಹೂವಿನ ವ್ಯಾಪಾರಿ ರತ್ನಮ್ಮ. 

ನಿತ್ಯವೂ ಗಿಜಿಗುಡುವ ಮಾರುಕಟ್ಟೆ ಬಂದ್‌ನಿಂದಾಗಿ ಬಿಕೋ ಎನ್ನುತ್ತಿತ್ತು. ವ್ಯಾಪಾರಿಗಳು ಗ್ರಾಹಕರನ್ನು ಎದುರು ನೋಡುತ್ತ, ಕಾದು ಕುಳಿತ್ತಿದ್ದರು. ಯಲಹಂಕ, ಕಲಾಸಿಪಾಳ್ಯ ಸೇರಿದಂತೆ ಹಲವು ಮಾರುಕಟ್ಟೆಗಳಿಗೆ ಬಂದ್‌ ಬಿಸಿ ತಟ್ಟಿದ್ದು, ತರಕಾರಿ, ಹಣ್ಣು, ಸೊಪ್ಪನ್ನು ಕೊಳ್ಳುವವರೇ ಇಲ್ಲದಂತಹ ವಾತಾವರಣ ನಿರ್ಮಾಣವಾಗಿತ್ತು. 

ರಾಜಭವನ ಚಲೊ ಇಂದು

ನಗರದಲ್ಲಿ ಬುಧವಾರವೂ ಬಂದ್‌ ಆಚರಿಸಲಿರುವ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು, ರಾಜಭವನ ಚಲೊ ನಡೆಸಲಿದ್ದಾರೆ.

‘ಮಂಗಳವಾರ ಆಯಾ ಭಾಗದಲ್ಲೇ ಸಂಘಟನೆಯವರು ಪ್ರತಿಭಟನೆ ಮಾಡಿದರು. ಬುಧವಾರ, ಎಲ್ಲ ಸಂಘಟನೆಯವರು ಪುರಭವನ ಎದುರು ಬೆಳಿಗ್ಗೆ 11 ಗಂಟೆಗೆ ಸೇರಲಿದ್ದಾರೆ. ಅಲ್ಲಿಂದಲೇ ಮೆರವಣಿಗೆ ಮೂಲಕ ರಾಜಭವನಕ್ಕೆ ಹೋಗಲಿದ್ದಾರೆ’ ಎಂದು ಸಂಘಟನೆಗಳ ಮುಖಂಡರು ತಿಳಿಸಿದರು.

ಉಚಿತ ಟ್ಯಾಕ್ಸಿ

ಹಸಗೂಸಿನ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ನಗರಕ್ಕೆ ಬಂದಿದ್ದ ವಿಜಯಪುರ ದಂಪತಿ, ಹೊಸೂರು ರಸ್ತೆಯಲ್ಲಿರುವ ನಾರಾಯಣ ನೇತ್ರಾಲಯಕ್ಕೆ ಹೋಗಲು ಕಷ್ಟಪಟ್ಟರು. ಆಟೊದವರು, ಒಂದೂವರೆ ಸಾವಿರ ಕೇಳಿದರು. ಆಗ ಸ್ಥಳದಲ್ಲಿದ್ದ ಚಾಲಕ ಸಭಾಪತಿ ಎಂಬುವರು, ತಮ್ಮ ಟ್ಯಾಕ್ಸಿಯಲ್ಲಿ ದಂಪತಿಯನ್ನು ಉಚಿತವಾಗಿಯೇ ನೇತ್ರಾಲಯಕ್ಕೆ ಕರೆದೊಯ್ದರು.

ಚಾಪೆ ಹಾಸಿ ಮಲಗಿದ ವಾಟಾಳ್

ಬಂದ್‌ಗೆ ಬೆಂಬಲ ಸೂಚಿಸಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಮೆಜೆಸ್ಟಿಕ್ ನಿಲ್ದಾಣದಲ್ಲೇ ಚಾಪೆ ಹಾಸಿ ಮಲಗಿಕೊಂಡೇ ಪ್ರತಿಭಟನೆ ನಡೆಸಿದರು. ಕನ್ನಡಪರ ಸಂಘಟನೆಗಳ ಒಕ್ಕೂಟದ ಮುಖಂಡ ಸಾ.ರಾ. ಗೋವಿಂದು ಇದ್ದರು.

ಬಂದ್‌ ವಿರೋಧಿಸಿದವರಿಗೆ ಗುಲಾಬಿ

ಬಂದ್‌ ವಿರೋಧಿಸಿ ಎಂದಿನಂತೆ ಕೆಲಸ ಮಾಡುತ್ತಿದ್ದ ಕೆ.ಆರ್.ಮಾರುಕಟ್ಟೆಯ ವ್ಯಾಪಾರಿಗಳು, ಆಟೊ ಚಾಲಕರಿಗೆ ಗುಲಾಬಿ ಹೂವು ನೀಡಲಾಯಿತು. ‘ಕರ್ನಾಟಕ ಸಂಘಟನೆಗಳ ಒಕ್ಕೂಟ’ದ ಕಾರ್ಯಕರ್ತರು, ಮಾರುಕಟ್ಟೆಯಲ್ಲಿ ಸಂಚರಿಸಿ ಬಂದ್ ವಿರೋಧಿಸಿದವರಿಗೆ ಅಭಿನಂದಿಸಿದರು.

ವಾಯುವಜ್ರ ಓಡಾಟ ವಿರಳ

ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಯುವಜ್ರ ಬಸ್‌ಗಳ ಓಡಾಟ ವಿರಳವಾಗಿತ್ತು.

ನಗರದಿಂದ ನಿಲ್ದಾಣಕ್ಕೆ ಬಂದಿದ್ದ ಬಸ್‌ಗಳು, ವಾಪಸ್‌ ನಗರಕ್ಕೆ ಹೋಗಲಿಲ್ಲ. ಅದರಲ್ಲಿ ಪ್ರಯಾಣಿಸಬೇಕಿದ್ದ ಪ್ರಯಾಣಿಕರು, ಟ್ಯಾಕ್ಸಿಗಳ ಮೊರೆ ಹೋದರು. ಮಧ್ಯಾಹ್ನದ ನಂತರ ಬಸ್‌ಗಳ ಓಡಾಟ ಯಥಾಸ್ಥಿತಿಗೆ ತಲುಪಿತು.

ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಜನ, ನಸುಕಿನಲ್ಲೇ ನಿಲ್ದಾಣಕ್ಕೆ ಬಂದಿದ್ದರು. ಅದರಿಂದಾಗಿ ನಿಲ್ದಾಣದಲ್ಲೇ ಜನರ ಸಂಖ್ಯೆ ಹೆಚ್ಚಿತ್ತು. ನಿಲ್ದಾಣದ ಸುತ್ತಮುತ್ತ ಬಂದೋಬಸ್ತ್‌ ಬಿಗಿಯಾಗಿತ್ತು. 

ಬಿಗಿ ಭದ್ರತೆ

ಬಂದ್‌ ಹಿನ್ನೆಲೆಯಲ್ಲಿ ಪೊಲೀಸರು, ನಗರದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದರು. ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್‌ ಜೊತೆಯಲ್ಲಿ ಸುಮಾರು 15 ಸಾವಿರ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದರು.

ಆಯಾ ವಿಭಾಗಗಳ ಭದ್ರತೆ ಜವಾಬ್ದಾರಿಯನ್ನು ಡಿಸಿಪಿಗಳಿಗೆ ವಹಿಸಲಾಗಿತ್ತು. ನಸುಕಿನಿಂದಲೇ ತಮ್ಮ ವ್ಯಾಪ್ತಿಯಲ್ಲಿ ಗಸ್ತು ತಿರುಗಿದ ಡಿಸಿಪಿಗಳು, ಭದ್ರತೆ ಪರಿಶೀಲಿಸಿದರು. ‘ಕಲ್ಲು ತೂರಾಟ ಹೊರತುಪಡಿಸಿ ಯಾವುದೇ ಅವಘಡಗಳು ಸಂಭವಿಸಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !