ವಿಜಯಪುರ: ಭಾರತ್‌ ಬಂದ್‌ಗೆ ನೀರಸ ಪ್ರತಿಕ್ರಿಯೆ

7

ವಿಜಯಪುರ: ಭಾರತ್‌ ಬಂದ್‌ಗೆ ನೀರಸ ಪ್ರತಿಕ್ರಿಯೆ

Published:
Updated:
Prajavani

ವಿಜಯಪುರ: ಕೇಂದ್ರ ಸರ್ಕಾರದ ಕಾರ್ಮಿಕ, ರೈತ ವಿರೋಧಿ ನೀತಿ ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಜಂಟಿ ಕಾರ್ಮಿಕ ಸಂಘಟನೆ ಕರೆ ನೀಡಿದ್ದ, ಭಾರತ್‌ ಬಂದ್‌ನ ಎರಡನೇ ದಿನವಾದ ಬುಧವಾರ ಸಹ ಜಿಲ್ಲೆಯಾದ್ಯಂತ ಅಲ್ಲಲ್ಲಿ ಪ್ರತಿಭಟನೆ ನಡೆದವು.

ನಗರದ ಕೇಂದ್ರ ಬಸ್‌ ನಿಲ್ದಾಣ ಮುಂಭಾಗ ಬೆಳಿಗ್ಗೆ 9ಕ್ಕೆ ಜಮಾಯಿಸಿದ ಹಲವು ಸಂಘಟನೆಗಳ ನೂರಾರು ಕಾರ್ಯಕರ್ತರು, ಕೆಲ ಬಸ್‌ಗಳು ಸಂಚರಿಸುತ್ತಿರುವುದನ್ನು ಗಮನಿಸಿ, ಸ್ವಯಂ ಪ್ರೇರಿತವಾಗಿ ಬಂದ್‌ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಇದಕ್ಕೆ ಸ್ಪಂದಿಸಿದ ಸಾರಿಗೆ ಸಂಸ್ಥೆಯ ನೌಕರರು ಮಧ್ಯಾಹ್ನದವರೆಗೆ ಸಂಚಾರ ಸ್ಥಗಿತಗೊಳಿಸಿ, ಬಂದ್‌ಗೆ ಬೆಂಬಲ ಸೂಚಿಸಿದರು. ಇದರಿಂದ ಮೊದಲ ದಿನದಂತೆ ಎರಡನೇ ದಿನವೂ ಪ್ರಯಾಣಿಕರು ಕೊಂಚ ತೊಂದರೆ ಅನುಭವಿಸಿದರು.

ಮೆರವಣಿಗೆ ಮೂಲಕ ಮಹಾತ್ಮ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಸಂಜೆವರೆಗೆ ಧರಣಿ ಕೈಗೊಂಡರು.

ಕೇಂದ್ರ ಸರ್ಕಾರ ಕಾರ್ಮಿಕರ ಹೋರಾಟದ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಶಬರಿಮಲೆ, ರಾಮ ಮಂದಿರ ನಿರ್ಮಾಣ, ಮೇಲ್ವರ್ಗದ ಮೀಸಲಾತಿಯಂಥ ನಿಲುವುಗಳನ್ನು ತೆಗೆದುಕೊಳ್ಳುವ ಮೂಲಕ ಹೋರಾಟಗಳಿಗೆ ತಣ್ಣೀರು ಎರಚುತ್ತಿರುವ ಕ್ರಮವನ್ನು ಧರಣಿ ನಿರತರು ಇದೇ ಸಂದರ್ಭ ಖಂಡಿಸಿರು. ಕೂಡಲೇ ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸಲು ಆಗ್ರಹಿಸಿದರು.

ರೈತ ಕೃಷಿ ಕಾರ್ಮಿಕ ಸಂಘಟನೆ ಜಿಲ್ಲಾ ಸಂಚಾಲಕ ಬಾಳು ಜೇವೂರ, ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ಭಗವಾನರೆಡ್ಡಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ, ಜನವಾದಿ ಮಹಿಳಾ ಸಂಘಟನೆಯ ಸುರೇಖಾ ರಜಪೂತ, ರೈತ ಹಿತರಕ್ಷಣಾ ವೇದಿಕೆಯ ಮಾಣಿಕ್ಯ, ಬಿಎಸ್ಎನ್ಎಲ್ ನೌಕರರ ಸಂಘದ ಮುಖಂಡ ಜಿ.ಬಿ.ಸಾಲಕ್ಕಿ, ಕಟ್ಟಡ ಕಾರ್ಮಿಕರ ಮುಖಂಡ ಪ್ರಭುಗೌಡ ಪಾಟಿಲ, ಎಐಟಿಯುಸಿ ಮುಖಂಡ ಪ್ರಕಾಶ ಹಿಟ್ನಳ್ಳಿ, ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪರದಾಟದ ಜತೆ ಪ್ರಯಾಣಿಕರ ಜೇಬಿಗೆ ಕತ್ತರಿ

ಭಾರತ್‌ ಬಂದ್‌ನಿಂದ ಪ್ರಯಾಣಿಕರು ಸಂಚಾರಕ್ಕೆ ಪರದಾಟ ನಡೆಸುವ ಜತೆಗೆ, ಹೆಚ್ಚುವರಿ ಹಣ ನೀಡಿ ಖಾಸಗಿ ವಾಹನಗಳ ಮೂಲಕ ಓಡಾಟ ನಡೆಸಿದರು.

ಮೊದಲ ದಿನ ಬೆಳಿಗ್ಗೆಯಿಂದ ಸಂಜೆವರೆಗೂ ರಸ್ತೆಗೆ ಬಸ್‌ ಇಳಿಯದ ಹಿನ್ನೆಲೆ ಸಂಚಾರಕ್ಕೆ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಬುಧವಾರ ಜಿಲ್ಲೆಯಾದ್ಯಂಥ ಬಸ್‌ಗಳ ಓಡಾಟ ನಡೆದರೂ; ನಗರ ಹೊರ ವಲಯಕ್ಕೆ ಸೀಮಿತವಾಗಿದ್ದರಿಂದ, ತಾವು ತೆರಳಬೇಕಿದ್ದ ಸ್ಥಳಕ್ಕೆ ಹೋಗಲು ಖಾಸಗಿ ವಾಹನಗಳ ಮೂಲಕ ಊರಿಂದ ಬರಲು ಕೊಟ್ಟ ಹಣಕ್ಕಿಂತ ಹೆಚ್ಚಿಗೆ ಕೊಟ್ಟು ಹೋಗುವಂಥ ದುಃಸ್ಥಿತಿ ನಮ್ಮದಾಗಿದೆ ಎಂಬ ಮಾತುಗಳು ಪ್ರಯಾಣಿಕರಿಂದ ಕೇಳಿ ಬಂದವು.

‘ಭಾರತ್‌ ಬಂದ್ ಎರಡು ದಿನಗಳಿದ್ದರೂ, ಮೊದಲ ದಿನ ಜಿಲ್ಲೆಯಾದ್ಯಂಥ ಹೇಳಿಕೊಳ್ಳುವಂತಹ ಬಂದ್‌ ಆಗಲಿಲ್ಲ. ಹೀಗಾಗಿ ಇವತ್ತು ಬಸ್‌ ಸಂಚಾರ ಸರಾಗವಾಗಿ ನಡೆಯುತ್ತಿದೆ ಅಂದುಕೊಂಡು ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾವನನ್ನು ಮಾತನಾಡಿಸಲು ತಾಯಿ, ಹೆಂಡತಿ, ಮಗನ ಸಮೇತ ಬಂದಿದ್ದೆ.

ವಾತಾವರಣ ತಿಳಿಯಿದ್ದರೂ ನಗರದ ಹೊರವಲಯದಲ್ಲೇ ಬಸ್ಸಿಂದ ಇಳಿಸುತ್ತಿದ್ದಾರೆ. ಖಾಸಗಿ ಗಾಡಿಯವರು ಬಸ್‌ ನಿಲ್ದಾಣಕ್ಕೆ ಹೋಗಲು ₹ 100, ₹ 150 ಬಾಡಿಗೆ ಕೇಳ್ತಾರೆ. ಇದರಿಂದ ಡಬಲ್‌ ಹಣ ಹೋಗುತ್ತಿದೆ. ಯಾಕಾದ್ರೂ ಪ್ರತಿಭಟನೆ, ಬಂದ್‌ ಮಾಡ್ತಾರೋ ತಿಳಿವಲ್ದು’ ಎನ್ನುತ್ತಾರೆ ಹೂವಿನ ಹಿಪ್ಪರಗಿಯ ವೃದ್ಧ ಭೀಮಣ್ಣ ಬಿರಾದಾರ.

‘ರೈತರು, ಕಾರ್ಮಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ಮಾಡುವುದು ತಪ್ಪಲ್ಲ. ಎರಡೆರೆಡು ದಿನ ಬಂದ್‌ ಮಾಡಿದ್ರೆ ಜನ ಸಾಮಾನ್ಯರ ಗತಿ ಏನು. ಯಾರದೋ ಅನುಕೂಲಕ್ಕಾಗಿ ನಾವೇಕೆ ಪರದಾಟ ನಡೆಸಬೇಕು. ಬಸ್‌ಗಳಿಲ್ಲದಿದ್ದರೆ ಮತ್ಯಾಕೆ ಶಾಲಾ–ಕಾಲೇಜುಗಳಿಗೆ ರಜೆ ಕೊಟ್ಟಿಲ್ಲ. ಮಕ್ಕಳು ಹೇಗೆ ಬರಬೇಕು. ತಾಳಿಕೋಟೆಯಿಂದ ವಿಜಯಪುರವರೆಗೆ ಆಗದ ಸಮಸ್ಯೆ ನಗರದಲ್ಲೇನು ಆಗುತ್ತೆ. ಖಾಸಗಿ ವಾಹನಗಳ ಅನುಕೂಲಕ್ಕಾಗಿಯೇ ದೂರದಲ್ಲಿ ಬಸ್‌ ನಿಲ್ಲಿಸುತ್ತಿದ್ದಾರೆ’ ಎಂದು ತಾಳಿಕೋಟೆಯ ಹಣಮಂತ ಕಾಂಬ್ಳೆ ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !