ಭಾರತ ಬಂದ್‌ ಪ್ರತಿಭಟನೆಗೆ ಸೀಮಿತ: ವಿಜಯಪುರ ಜಿಲ್ಲೆಯಾದ್ಯಂತ ಮಿಶ್ರ ಪ್ರತಿಕ್ರಿಯೆ

7
ಮೊದಲ ದಿನ

ಭಾರತ ಬಂದ್‌ ಪ್ರತಿಭಟನೆಗೆ ಸೀಮಿತ: ವಿಜಯಪುರ ಜಿಲ್ಲೆಯಾದ್ಯಂತ ಮಿಶ್ರ ಪ್ರತಿಕ್ರಿಯೆ

Published:
Updated:
Prajavani

ವಿಜಯಪುರ: ಕೇಂದ್ರ ಸರ್ಕಾರದ ಕಾರ್ಮಿಕ, ರೈತ ವಿರೋಧಿ ನೀತಿ ಖಂಡಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಜಂಟಿ ಕಾರ್ಮಿಕ ಸಂಘಟನೆ ಕರೆ ನೀಡಿದ್ದ, ಭಾರತ್‌ ಬಂದ್‌ಗೆ ಸರ್ಕಾರಿ ಬಸ್‌ ಸಂಚಾರ ಸ್ಥಗಿತಗೊಂಡಿದ್ದು ಬಿಟ್ಟರೆ, ಉಳಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ಸರಣಿ ಪ್ರತಿಭಟನೆ ನಡೆದವು.

ನಗರದ ಸಿದ್ಧೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ವಿವಿಧ ಸಂಘಟನೆಗಳ ನೂರಾರು ಪ್ರತಿಭಟನಾಕಾರರು, ಮೆರವಣಿಗೆ ಮೂಲಕ ಮಹಾತ್ಮ ಗಾಂಧಿ ವೃತ್ತಕ್ಕೆ ಆಗಮಿಸಿ ಕೆಲಹೊತ್ತು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಹಲವು ಮುಖಂಡರು ತಮ್ಮ ಭಾಷಣದ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕಿಡಿಕಾರಿದರು. ನಂತರ ಬಸವೇಶ್ವರ ವೃತ್ತ, ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸಂಜೆವರೆಗೂ ಧರಣಿ ನಡೆಸಿದರು.

ದೇಶದಲ್ಲಿ 1991ರಲ್ಲಿ ಜಾರಿಗೆ ಬಂದ ಹೊಸ ಆರ್ಥಿಕ ನೀತಿಗಳನ್ನು ಇಂದಿನ ಕೇಂದ್ರ ಸರ್ಕಾರ ಬಹಳಷ್ಟು ವೇಗವಾಗಿ ಜಾರಿ ಮಾಡುತ್ತಿದೆ. ಇದರ ಪರಿಣಾಮವಾಗಿ ದೇಶಕ್ಕೆ ಅನ್ನ ನೀಡುವ ರೈತರು, ಸಂಪತ್ತು ಸೃಷ್ಟಿಸುವ ಕಾರ್ಮಿಕರು, ಸೇವೆ ಮಾಡುವ ನೌಕರರು, ಕೂಲಿಯನ್ನು ನಂಬಿರುವ ಕೃಷಿ ಕಾರ್ಮಿಕರು ಗಂಭೀರವಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದಲ್ಲದೆ ದೇಶದ ಆರ್ಥಿಕ ಸಾರ್ವಭೌಮತೆಗೆ ಧಕ್ಕೆ ತರುವಂತಹ ನೀತಿಗಳನ್ನು ಜಾರಿಗೆ ತರಲಾಗುತ್ತಿದೆ. ಇದನ್ನು ಖಂಡಿಸಿ ಎರಡು ದಿನ ಭಾರತ್‌ ಬಂದ್‌ಗೆ ಕರೆ ನೀಡಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಕಾರಣಕ್ಕೂ ಕಾರ್ಮಿಕ ಕಾನೂನುಗಳ ತಿದ್ದುಪಡಿ ತರಬಾರದು. ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಸಾರ್ವತ್ರಿಕಗೊಳಿಸಿ, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ತಡೆ ಹಾಕುವ ಜತೆಗೆ ಕಾಳಸಂತೆ ವ್ಯಾಪಾರವನ್ನು ನಿಷೇಧಿಸಬೇಕು. ನಿರುದ್ಯೋಗ ಸಮಸ್ಯೆ ಬಗೆಹರಿಸಲು ಹೊಸ ಉದ್ಯೋಗ ಸೃಷ್ಟಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಮಾಸಿಕ ₹ 18000 ಕನಿಷ್ಠ ವೇತನ ನಿಗದಿ ಪಡಿಸಬೇಕು. ತಿಂಗಳಿಗೆ ಕನಿಷ್ಠ ₹ 6000 ಪಿಂಚಣಿ ನೀಡಬೇಕು. ರಾಜ್ಯ, ರಾಷ್ಟ್ರೀಯ ಸಾರ್ವಜನಿಕ ವಲಯ ಉದ್ಯಮಗಳ ಷೇರು ಮಾರಾಟ ಮತ್ತು ಬಂಡವಾಳ ಹಿಂಪಡೆತ ನಿಲ್ಲಿಸಬೇಕು. ಅರ್ಜಿ ಸಲ್ಲಿಸಿದ 45 ದಿನದೊಳಗಾಗಿ ಕಾರ್ಮಿಕ ಸಂಘಟನೆಗಳ ನೋಂದಣಿ ಮಾಡಬೇಕು. ರೈಲ್ವೆ, ವಿಮೆ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡಬಾರದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಭೀಮಸಿ ಕಲಾದಗಿ, ಪ್ರಕಾಶ ಹಿಟ್ನಳ್ಳಿ, ಸುನೀಲ ಸಿದ್ರಾಮಶೆಟ್ಟಿ, ಜಿ.ಜಿ.ಗಾಂಧಿ, ಎಸ್‌.ಆರ್‌.ನಾಯಕ, ಲಕ್ಷ್ಮಣ ಹಂದ್ರಾಳ, ಪ್ರಭುಗೌಡ ಪಾಟೀಲ, ಚಂದ್ರಶೇಖರ ಲೆಂಡಿ, ಐ.ಐ.ಮುಶ್ರೀಫ್‌, ಅರವಿಂದ ಕುಲಕರ್ಣಿ, ರವೀಂದ್ರ ಬಿಜ್ಜರಗಿ, ಅಜಯ ಚವ್ಹಾಣ, ಸುರೇಖಾ ರಜಪೂತ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಅಕ್ಷರ ದಾಸೋಹ ಸಿಬ್ಬಂದಿ, ಅಂಚೆ ಕಚೇರಿ ಸಿಬ್ಬಂದಿ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !