ಬೆಂಬಲ ಬೆಲೆ: ಭತ್ತ ಖರೀದಿ ಶೂನ್ಯ, ಕೇಂದ್ರದತ್ತ ಬಾರದ ರೈತ

7
ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ

ಬೆಂಬಲ ಬೆಲೆ: ಭತ್ತ ಖರೀದಿ ಶೂನ್ಯ, ಕೇಂದ್ರದತ್ತ ಬಾರದ ರೈತ

Published:
Updated:
Deccan Herald

ಚಾಮರಾಜನಗರ: 2017–18ನೇ ಸಾಲಿನ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಜ್ಯ ಸರ್ಕಾರ ರೈತರಿಂದ ನೇರವಾಗಿ ಭತ್ತ ಖರೀದಿಸಲು ಜಿಲ್ಲೆಯಲ್ಲಿ ತೆರೆದಿದ್ದ ಎರಡು ಕೇಂದ್ರಗಳತ್ತ ಜಿಲ್ಲೆಯ ಒಬ್ಬನೇ ಒಬ್ಬ ಬೆಳೆಗಾರ ಸುಳಿದಿಲ್ಲ. ಹಾಗಾಗಿ, ಒಂದೇ ಒಂದು ಕೆ.ಜಿ ಭತ್ತದ ಖರೀದಿಯೂ ನಡೆದಿಲ್ಲ.

2017–18ನೇ ಸಾಲಿನಲ್ಲಿ ರೈತರಿಂದ ಬೇಸಿಗೆ ಭತ್ತವನ್ನು ಬೆಂಬಲ ಬೆಲೆ ನೀಡಿ ಖರೀದಿಸುವುದಕ್ಕಾಗಿ ಸರ್ಕಾರವು ಯಳಂದೂರು ತಾಲ್ಲೂಕಿನ ಸಂತೇಮರಹಳ್ಳಿಯ ಎಪಿಎಂಸಿ ಆವರಣ ಮತ್ತು ಕೊಳ್ಳೇಗಾಲದ ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರಗಳನ್ನು ತೆರೆದಿತ್ತು. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಖರೀದಿ ಏಜೆನ್ಸಿಯನ್ನಾಗಿ ನೇಮಿಸಲಾಗಿತ್ತು. ಪ್ರತಿ ಕ್ವಿಂಟಲ್‌ ಸಾಮಾನ್ಯ ಭತ್ತಕ್ಕೆ ₹1,550 ಬೆಂಬಲ ಬೆಲೆ ನಿಗದಿ ಮಾಡಲಾಗಿತ್ತು.

ಒಂದು ತಿಂಗಳ ಯೋಜನೆ: ಜುಲೈ 31ರಿಂದ ಆಗಸ್ಟ್‌ 30ರವರೆಗೆ ಬೆಂಬಲ ಬೆಲೆ ಯೋಜನೆ ಜಾರಿಯಲ್ಲಿತ್ತು. ಆಗಸ್ಟ್‌ 15ರವರೆಗೆ ರೈತರ ನೋಂದಣಿಗೆ ಅವಕಾಶ ನೀಡಲಾಗಿತ್ತು. ಆ ಬಳಿಕ ನೋಂದಣಿ ಮಾಡಿದ ರೈತರಿಂದ ಖರೀದಿಸಲು ತೀರ್ಮಾನಿಸಲಾಗಿತ್ತು. ಸಣ್ಣ ರೈತರ ಬಳಿಯಿಂದ ಗರಿಷ್ಠ 75 ಕ್ವಿಂಟಲ್‌ವರೆಗೆ ಭತ್ತ ಖರೀದಿಸಲು ನಿಗಮ ನಿರ್ಧಾರ ಮಾಡಿತ್ತು. 

ನಡೆಯದ ಖರೀದಿ: ಆದರೆ, ಯಾವ ರೈತ ಕೂಡ ಬೆಂಬಲ ಬೆಲೆಗೆ ಭತ್ತವನ್ನು ಮಾರಾಟ ಮಾಡಿಲ್ಲ. ಈ ಅವಧಿಯಲ್ಲಿ ಮಾರುಕಟ್ಟೆಯಲ್ಲಿದ್ದ ಬೆಲೆಯು ಬೆಂಬಲ ಬೆಲೆಗಿಂತ  ₹100–₹150 ಹೆಚ್ಚಿದ್ದರಿಂದ ಸರ್ಕಾರದ ಖರೀದಿ ಕೇಂದ್ರಗಳತ್ತ ಯಾರೂ ಬಂದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿ ನಡೆಯದ ಉದಾಹರಣೆಯೇ ಇಲ್ಲ ಎಂದು ಹೇಳುತ್ತಾರೆ ಅಧಿಕಾರಿಗಳು.

ಸ್ವಲ್ಪ ಅನುಕೂಲ: ಸರ್ಕಾರ ಖರೀದಿ ಕೇಂದ್ರ ತೆರೆಯುವುದಕ್ಕೂ ಮುನ್ನ, ಅಂದರೆ ಆಗಸ್ಟ್‌ಗೂ ಮೊದಲು ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಭತ್ತದ ದರ ನಿಗದಿತ ಬೆಂಬಲ ಬೆಲೆಗಿಂತ ಕಡಿಮೆ ಇತ್ತು. ಆಗ ₹1,350ರಿಂದ ₹1,400ರವರೆಗೆ ಬೆಲೆ ಇತ್ತು. ಹಲವು ರೈತರು ಈ ಬೆಲೆಗೇ ಭತ್ತ ಮಾರಾಟ ಮಾಡಿದ್ದರು. ಸರ್ಕಾರ ಖರೀದಿ ಕೇಂದ್ರ ತೆರೆದ ತಕ್ಷಣ ಮಾರುಕಟ್ಟೆಯಲ್ಲಿ ಬೆಲೆ ಏಕಾಏಕಿ ಹೆಚ್ಚಾಯಿತು.

‘ಅದುವರೆಗೂ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಆದರೆ, ಸರ್ಕಾರ ಯೋಜನೆ ಅನುಷ್ಠಾನ ಮಾಡಿದ ನಂತರ ರೈತರ ಭತ್ತಕ್ಕೆ ಹೆಚ್ಚು ಬೆಲೆ ಸಿಗಲು ಆರಂಭವಾಯಿತು. ಇದರಿಂದ ರೈತರಿಗೆ ಅನುಕೂಲವೇ ಆಗಿದೆ’ ಎಂದು ಹೇಳುತ್ತಾರೆ ಅಧಿಕಾರಿಗಳು.

ಖರೀದಿ ಕೇಂದ್ರ ಸದಾ ತೆರೆದಿರಲಿ:
ಬೆಂಬಲ ಬೆಲೆ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದ ನಿಲುವೇ ಸರಿ ಇಲ್ಲ. ಭತ್ತ ಮಾತ್ರವಲ್ಲ ರೈತರ ಎಲ್ಲ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವ ಕೇಂದ್ರಗಳು ಯಾವತ್ತೂ ತೆರೆದಿರಬೇಕು. ಮಾರುಕಟ್ಟೆಯಲ್ಲಿ ಯಾವಾಗ ಬೆಲೆ ಕುಸಿಯುತ್ತದೆಯೋ ಆಗ ಈ ಕೇಂದ್ರಗಳು ಹೆಚ್ಚು ಸಕ್ರಿಯವಾಗಬೇಕು. ಹಾಗಾದರೆ ಮಾತ್ರ ರೈತರಿಗೆ ಅನುಕೂಲವಾಗುತ್ತದೆ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಲೆ ಬಿದ್ದು ಹೋದಾಗ ರೈತರ ನೆರವಿಗೆ ಬರಲು ಸರ್ಕಾರ ತುಂಬ ಸಮಯ ತೆಗೆದುಕೊಳ್ಳುತ್ತದೆ. ಅಷ್ಟು ಹೊತ್ತಿಗಾಗಲೇ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿರುತ್ತಾರೆ. ಒಂದು ವಾರದಿಂದ ಒಂದು ತಿಂಗಳ ಒಳಗಾಗಿ ಭತ್ತದ ಕಟಾವು ಮುಗಿದಿರುತ್ತದೆ. ಯಾವ ರೈತರು ಕೂಡ ಅದನ್ನು ಸಂಗ್ರಹಿಸಿಟ್ಟುಕೊಳ್ಳುವುದಿಲ್ಲ. ಅದಕ್ಕೆ ಅವರಲ್ಲಿ ಜಾಗವೂ ಇರುವುದಿಲ್ಲ. ಬೇಗ ಮಾರಾಟ ಮಾಡುತ್ತಾರೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !