ಗುರುವಾರ , ಏಪ್ರಿಲ್ 9, 2020
19 °C

ಭೀಮರಥ ಸನ್ಮಾನ; ಹಿಂದೂಸ್ತಾನಿ ಗಾಯನ

ಉಮಾ ಅನಂತ್‌ Updated:

ಅಕ್ಷರ ಗಾತ್ರ : | |

Deccan Herald

ಇದು ಸುಮಾರು ನಾಲ್ಕು ದಶಕಗಳಷ್ಟು ಹಿಂದಿನ ಮಾತು. ಬೆಂಗಳೂರಿನಲ್ಲಿ ಹಿಂದೂಸ್ತಾನಿ ಸಂಗೀತ ಅಷ್ಟಾಗಿ ಪ್ರಚಾರದಲ್ಲಿ ಇಲ್ಲದ ಕಾಲ. ಆ ಸಮಯದಲ್ಲಿ ನಗರಕ್ಕೆ ಬಂದು ಹಿಂದೂಸ್ತಾನಿ ಸಂಗೀತವನ್ನು ಕಟ್ಟಿ ಬೆಳೆಸಿ ನೂರಾರು ಕಲಾವಿದರನ್ನೂ ತಯಾರು ಮಾಡಿದವರು ಪಂ. ವಿನಾಯಕ ತೊರವಿ.

ಉತ್ತರಾದಿ ಸಂಗೀತವನ್ನು ಕೇಳುವವರೇ ಇರದಿದ್ದ ಕಾಲದಲ್ಲಿ ಮನೆ ಮನೆಗೆ ಹೋಗಿ ಸಂಗೀತ ಕಛೇರಿ ಕೊಟ್ಟು ಅಪಾರ ಶ್ರಮದಿಂದ ಇಂದು ಬೆಂಗಳೂರಿನಲ್ಲಿ ಹಿಂದೂಸ್ತಾನಿ ಸಂಗೀತವನ್ನು ಅತ್ಯಂತ ಜನಪ್ರಿಯಗೊಳಿಸಿದ ಕೀರ್ತಿ ಪಂ. ತೊರವಿ ಅವರಿಗೆ ಸಲ್ಲಬೇಕು.
ಸಂಗೀತ ಹಾಡಿ, ಕಲಿಸಿ, ಕಛೇರಿ ಏರ್ಪಡಿಸಿ, ಶಿಷ್ಯಂದಿರನ್ನು ತಯಾರು ಮಾಡಿ, ಬೋಧಿಸಿ, ಸಂಗೀತ ಶಿಬಿರ, ಪ್ರಾತ್ಯಕ್ಷಿಕೆ ನಡೆಸಿ, ಸೀಡಿಗಳಲ್ಲಿ ದಾಖಲಿಸಿ, ರಾಗ, ಬಂದೀಶ್‌, ತರಾನಗಳನ್ನು ರಚಿಸಿ, ಸಂಗೀತದಲ್ಲೇ ಅಧ್ಯಾತ್ಮವನ್ನು ಕಾಣುತ್ತಿರುವ ಅಪರೂಪದ ಗಾಯಕ ಪಂ. ವಿನಾಯಕ ತೊರವಿ. ಈಗ 70ರ ಹೊಸ್ತಿಲಲ್ಲಿರುವ ತೊರವಿ ಅವರಿಗೆ ಅವರ ಶಿಷ್ಯಂದಿರೆಲ್ಲ ಸೇರಿ ಪಂ. ವಿನಾಯಕ ತೊರವಿ ಮ್ಯೂಸಿಕ್‌ ಫೌಂಡೇಶನ್‌ ವತಿಯಿಂದ ‘ಭೀಮರಥ ಸನ್ಮಾನ’ ಏರ್ಪಡಿಸಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ ಅಹೋರಾತ್ರಿ ಸಂಗೀತೋತ್ಸವವನ್ನು ಪರಿಚಯಿಸಿ ಅದನ್ನು ಕಳೆದ 40 ವರ್ಷಗಳಿಂದ ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದವರು ತೊರವಿ. ಗ್ವಾಲಿಯರ್‌ ಘರಾಣೆಯ ಈ ಮೇರು ಗಾಯಕ ತಮ್ಮ ಗುರು ಪಂ. ಗುರುರಾವ್‌ ದೇಶಪಾಂಡೆ ಹೆಸರಿನಲ್ಲಿ ‘ಗುರು ಗಂಧರ್ವ’ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ಥಾಪಿಸಿ ಸಂಗೀತ ಪ್ರತೀ ವರ್ಷ ಸಾಧಕರಿಗೆ ಈ ಪುರಸ್ಕಾರ ನೀಡಿ ಸತ್ಕರಿಸುತ್ತಿದ್ದಾರೆ. ಇನ್ನೊಬ್ಬ ಮಹಾನ್‌ಚೇತನ ಪಂ. ಭೀಮಸೇನ ಜೋಶಿ ಅವರ ಹೆಸರಿನಲ್ಲಿ ಪ್ರತೀವರ್ಷ ‘ಮಲ್ಹಾರ್‌ ಸಂಗೀತೋತ್ಸವ’ವನ್ನೂ
ಆಯೋಜಿಸುತ್ತಾರೆ.

‘ಅಹೋರಾತ್ರಿ ಸಂಗೀತೋತ್ಸವದಿಂದ ಕೇಳುಗರಿಗೆ ಪ್ರಹರ ರಾಗಗಳನ್ನು ಕೇಳುವ ಅವಕಾಶ ಸಿಗುತ್ತದೆ. ರಾತ್ರಿಯಿಂದ ಬೆಳಗಿನವರೆಗೂ ನಿರಂತರವಾಗಿ ವಿವಿಧ ಕಛೇರಿಗಳನ್ನು ಏರ್ಪಡಿಸುವುದು. ನಸುಕಿನ ರಾಗ, ಬೆಳಗಿನ ರಾಗ, ಮಧ್ಯಾಹ್ನ ರಾಗ, ಸಂಜೆಯ ರಾಗ, ರಾತ್ರಿ ರಾಗ, ಇಳಿರಾತ್ರಿ ರಾಗ.. ಹೀಗೆ. ಸಾಮಾನ್ಯವಾಗಿ ಕಛೇರಿಗಳು ಸಂಜೆ ಮಾತ್ರ ನಡೆಯುತ್ತದೆ. ಆಗ ಮುಂಜಾನೆಯ, ರಾತ್ರಿಯ, ತಡರಾತ್ರಿಯ ರಾಗಗಳನ್ನು ಕೇಳುವ ಅವಕಾಶ ಕಡಿಮೆ. ಆದರೆ ಅಹೋರಾತ್ರಿ ಸಂಗೀತೋತ್ಸವದಲ್ಲಿ ಎಲ್ಲ ಪ್ರಹರದ ರಾಗಗಳನ್ನು ಕೇಳಿ ಆನಂದಿಸಬಹುದು. ಹಿಂದೂಸ್ತಾನಿ ಸಂಗೀತದ ಜತೆಗೆ ಕರ್ನಾಟಕ ಸಂಗೀತ ಕಛೇರಿಗಳನ್ನೂ ಏರ್ಪಡಿಸುವ ಕಾರಣ ಒಂದೇ ವೇದಿಕೆಯಲ್ಲಿ ಎರಡೂ ಪ್ರಕಾರಗಳ ಸಂಗೀತ ಸವಿಯುವ ಸುಯೋಗ ಕೇಳುಗರಿಗೆ ಸಿಗುತ್ತದೆ’ ಎನ್ನುತ್ತಾರೆ ಪಂ. ತೊರವಿ.

ಸಂಗೀತದಲ್ಲಿ ಬೈಠಕ್‌ಗೆ ವಿಶೇಷ ಮಹತ್ವ ಇದೆ. ಬೈಠಕ್‌ ಎಂದರೆ ಅದು ಉದಯೋನ್ಮುಖ ಕಲಾವಿದರಿಗೆ ಅವಕಾಶ ನೀಡುವ ಸಲುವಾಗಿಯೇ ಇರುವುದು, ಸಂಗೀತವನ್ನು ಸದಾ ಪ್ರಚಾರದಲ್ಲಿಟ್ಟು ಕೇಳುಗರಿಗೆ ನೀಡುವುದು ಇನ್ನೊಂದು ಉದ್ದೇಶ. ತೊರವಿ ಅವರ ಸಂಗೀತ ಸಂಸ್ಥೆ ತಿಂಗಳಿಗೊಂದು ಬೈಠಕ್‌ ನಡೆಸುವ ಮೂಲಕ ಕಲಾಕಾರರನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಹೊಸ ಪ್ರತಿಭೆಗಳಿಗೆ ಅವಕಾಶ, ಯುವ ಕಲಾವಿದರಿಗೆ ಸಾಧನೆಯ ಅನಾವರಣಕ್ಕೆ ವೇದಿಕೆ ಒದಗಿಸುವುದು ಕೂಡ ಬೈಠಕ್‌ನ ಗುರಿ.

ಸಣ್ಣ ವೇದಿಕೆಯಲ್ಲಿ ಕಛೇರಿ ನೀಡಿ ಅಭ್ಯಾಸವಾದರೆ ದೊಡ್ಡ, ಪ್ರತಿಷ್ಠಿತ ವೇದಿಕೆಗಳಲ್ಲಿ ಯಾವುದೇ ಅಳುಕಿಲ್ಲದೆ ಧೈರ್ಯವಾಗಿ ಕಛೇರಿ ನೀಡುವ ಸಾಮರ್ಥ್ಯವೂ ಬರುತ್ತದೆ ಎಂಬ ಮಹತ್ವಾಕಾಂಕ್ಷೆ ಇವರದು.

ಭೀಮರಥ ಸನ್ಮಾನದಲ್ಲಿ ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌. ರಾವ್‌ ಹಾಗೂ ಸಂಸದ ಪ್ರಹ್ಲಾದ ಜೋಶಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ರುದ್ರೇಶ್‌ ಭಜಂತ್ರಿ ಅವರ ಶೆಹನಾಯ್‌ ವಾದನವಿದೆ. ಪಂ. ತೊರವಿ ಅವರ ಶಿಷ್ಯಂದಿರಿಂದ ಗಾಯನ ಕಾರ್ಯಕ್ರಮವಿದೆ. ಗುರುಮೂರ್ತಿ ವೈದ್ಯ ತಬಲಾ ಹಾಗೂ ಮಧುಸೂದನ ಭಟ್‌ ಹಾರ್ಮೋನಿಯಂನಲ್ಲಿ ಸಹಕರಿಸಲಿದ್ದಾರೆ. ಸನ್ಮಾನದ ಬಳಿಕ ಪುಣೆಯ ಮಂಜೂಷಾ ಪಾಟೀಲ್‌ ಗಾಯನವಿದೆ. ಪಂ.ರವೀಂದ್ರ ಯಾವಗಲ್‌ ತಬಲಾ ಹಾಗೂ ವ್ಯಾಸಮೂರ್ತಿ ಕಟ್ಟಿ ಹಾರ್ಮೋನಿಯಂನಲ್ಲಿ ಸಹಕರಿಸುವರು.

ಸ್ಥಳ: ಎನ್‌.ಆರ್‌. ಕಾಲೊನಿಯಲ್ಲಿರುವ ರಾಮ ಮಂದಿರ ಸಭಾಂಗಣ. ಶನಿವಾರ (ಡಿ.15) ಸಂಜೆ 5.00ಕ್ಕೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)