ಗುರುವಾರ , ಸೆಪ್ಟೆಂಬರ್ 19, 2019
21 °C

ಭೋಪಾಲ ಅನಿಲ ಸೋರಿಕೆ ಪ್ರಕರಣ: 20ನೇ ಶತಮಾನದ ಕೈಗಾರಿಕಾ ದುರಂತ

Published:
Updated:
Prajavani

ವಿಶ್ವಸಂಸ್ಥೆ: ಭೋಪಾಲ ಅನಿಲ ದುರಂತ 20ನೇ ಶತಮಾನದ ‘ಪ್ರಮುಖ ಕೈಗಾರಿಕಾ ದುರಂತಗಳಲ್ಲಿ’ ಒಂದಾಗಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. 

ವಿಶ್ವಸಂಸ್ಥೆಯ ಕಾರ್ಮಿಕ ಸಂಸ್ಥೆ ‘ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ’ (ಐಎಲ್‌ಒ) ‘ದಿ ಸೇಫ್ಟಿ ಆ್ಯಂಡ್ ಹೆಲ್ತ್ ಎಟ್ ದಿ ಹಾರ್ಟ್ ಆಫ್ ದಿ ಫ್ಯೂಚರ್ ಆಫ್ ವರ್ಕ್–ಬಿಲ್ಡಿಂಗ್ ಆನ್ 100 ಯಿಯರ್ಸ್ ಆಫ್ ಎಕ್ಸ್‌ಪೀರಿಯನ್ಸ್’ ಎನ್ನುವ ವರದಿ ಬಿಡುಗಡೆಗೊಳಿಸಿದೆ. 

1919ರ ನಂತರದಲ್ಲಿ ಸಂಭವಿಸಿದ ಪ್ರಮುಖ 10 ಕೈಗಾರಿಕಾ ದುರಂತಗಳ ಪಟ್ಟಿಯನ್ನು ಈ ವರದಿಯಲ್ಲಿ ನೀಡಲಾಗಿದೆ. 1986ರಲ್ಲಿ ಉಕ್ರೇನ್‌ನ ಚೆರ್ನೋಬಿಲ್ ಪರಮಾಣು ಘಟಕದಲ್ಲಿ ಸಂಭವಿಸಿದ ಸ್ಫೋಟ, 2011ರಲ್ಲಿ ಜಪಾನ್‌ನಲ್ಲಿ ಉಂಟಾದ ಸುನಾಮಿಯಿಂದ ಫುಕುಶಿಮಾ ಪರಮಾಣು ಘಟಕದಲ್ಲಿ ಕಾರ್ಯನಿರ್ವಹಣೆ ವ್ಯತ್ಯಯವಾಗಿ ಸಂಭವಿಸಿದ ಅಗ್ನಿ ಆಕಸ್ಮಿಕ, ಸರಣಿ ಸ್ಫೋಟ ಹಾಗೂ ವಿಷಾನಿಲ ಸೋರಿಕೆ, ಢಾಕಾದ ರಾಣಾ ಪ್ಲಾಜಾ ಕಟ್ಟಡ ಕುಸಿತ ಸಹ ಪ್ರಮುಖ ದುರಂತಗಳ ಸಾಲಿನಲ್ಲಿವೆ. 

‘1984ರ ಡಿಸೆಂಬರ್ 3ರಂದು ಭೋಪಾಲದ ಯುನಿಯನ್ ಕಾರ್ಬೈಡ್ ಕಂಪನಿಯ ಕಾರ್ಖಾನೆಯಲ್ಲಿ ಕನಿಷ್ಠ 30 ಟನ್ ಮಿಥೇಲ್‌ ಐಸೊಸೈನೇಟ್‌ ಅನಿಲ ಸೋರಿಕೆಯಾಯಿತು. ಇದರಿಂದಾಗಿ ಕಾರ್ಮಿಕರು ಮತ್ತು ಸ್ಥಳೀಯ ನಿವಾಸಿಗಳು ಸೇರಿದಂತೆ 6 ಲಕ್ಷಕ್ಕೂ ಹೆಚ್ಚು ಜನರು ಹಾನಿಗೊಳಗಾಗಿದ್ದಾರೆ. ದುರಂತಕ್ಕೆ ಸಂಬಂಧಿಸಿ ಈ ತನಕ ಅಂದಾಜು 15 ಸಾವಿರ ಜನರು ಮೃತಪಟ್ಟಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡುತ್ತದೆ’ ಎಂದು ವರದಿ ಹೇಳಿದೆ. 

‘ಕಾರ್ಯನಿರ್ವಹಣೆ ವೇಳೆ ಸಂಭವಿಸುವ ಅಪಘಾತ ಹಾಗೂ ವೃತ್ತಿ ಸಂಬಂಧಿ ಅನಾರೋಗ್ಯಗಳಿಂದ ಪ್ರತಿ ವರ್ಷ 27 ಕೋಟಿ ಉದ್ಯೋಗಿಗಳು ಮೃತಪಡುತ್ತಿದ್ದಾರೆ’ ಎಂದು ಈ ವರದಿಯಲ್ಲಿ ಎಚ್ಚರಿಸಲಾಗಿದೆ.

Post Comments (+)