ಭೂತಾನ್ ಬೈಕ್ ರೈಡ್

ಸೋಮವಾರ, ಏಪ್ರಿಲ್ 22, 2019
31 °C
ದೇಶದ ಗಡಿಯಲ್ಲಿ ಸಾಹಸಮಯ ಪಯಣ

ಭೂತಾನ್ ಬೈಕ್ ರೈಡ್

Published:
Updated:

ಭೂತಾನ್‌ ರಾಜ್ಯಕ್ಕೆ ಬೈಕ್‌ ನಲ್ಲಿ ಪ್ರವಾಸ ಹೊರಟಿದ್ದೆವು. ಬೆಂಗಳೂರಿನಿಂದ ಸಿಕ್ಕಿಂ ತಲುಪಿದ್ದಾಗಿತ್ತು. ಸಿಕ್ಕಿಂನಿಂದ ಜೈಗಾನ್‌(Jaigaon) ಎಂಬ ದೇಶದ ಗಡಿ ಭಾಗದ ನಗರ ತಲುಪಿದಾಗ ಸುಮಾರು ರಾತ್ರಿ 10 ಗಂಟೆ. ಅಂದು ಜೋರು ಮಳೆ.

ಮಾರನೆಯ ದಿನ ಜೈಗಾನ್‌ ಪಕ್ಕದಲ್ಲೇ ಇದ್ದ ಭೂತಾನ್ ಗಡಿ ಹ್ಯುಯೆನ್‌ಷಾಲಿಂಗ್‌(PHUENTSHOLING)ಗೆ ಹೋಗಿ ನಮ್ಮ ವೀಸಾ ಮತ್ತು ಬೈಕ್ ಪರವಾನಗಿಗೆ ಅನುಮತಿ ಪಡೆಯಬೇಕಿತ್ತು. ನಾವು ಭಾರತ ಗಡಿ ರೇಖೆಯ ಒಂದು ಗೇಟ್ ದಾಟಿ ಒಳಗೆ ಹೋದೆವು. ಅಬ್ಬಾ! ಆ ಭೂತಾನ್‌ನ ಹ್ಯುಯೆನ್‌ಷಾಲಿಂಗ್‌ ನಗರದ ಸ್ವಚ್ಛತೆ ಕಂಡು ನಿಜಕ್ಕೂ ಬೆರಗಾದೆವು. ಅಲ್ಲಿನ ಜನರೊಟ್ಟಿಗೆ ಮಾತ ನಾಡಿದಾಗ ಗೊತ್ತಾಗಿದ್ದು, ಆ ನಗರದ ಸ್ವಚ್ಛತೆ ಕಾಪಾಡಲು ತನ್ನದೇ ಆದ ನಿಯಮ ಮತ್ತು ನಿಬಂಧನೆಗಳನ್ನು ಭೂತಾನ್ ಜಾರಿಗೊಳಿಸಿದೆಯಂತೆ. ಹಾಗೆಯೇ ಅಲ್ಲಿ ಜನ ಸಂಖ್ಯೆ ಕೂಡ ಕಡಿಮೆ, ಜನರು ಕೂಡ ಅಷ್ಟೇ ಜವಾಬ್ದಾರಿಯಿಂದ ನಿಯಮ ನಿಬಂಧನೆಗಳನ್ನು ಅನುಸರಿಸುತ್ತಾರೆ. ಹೀಗಾಗಿಯೇ ಆ ನಗರ ಅಷ್ಟು ಸ್ವಚ್ಛವಾಗಿದೆ.

150 ಕಿ.ಮೀ ಬಾಕಿ...

ನಾವು ಅಲ್ಲಿ ಸ್ಥಳೀಯ ಏಜೆಂಟ್ ಸಂಪರ್ಕಿಸಿ ನಮ್ಮ ವೀಸಾ, ಬೈಕ್ ಪರವಾನಗಿಗೆ ಅನುಮತಿ ಪಡೆದವು. ಅಷ್ಟರಲ್ಲಿ ಸಂಜೆ 4 ಗಂಟೆಯಾಗಿತ್ತು. ನಾವು ಹ್ಯುಯೆನ್‌ಷಾಲಿಂಗ್‌ನಿಂದ ಹೊರಟು 150 ಕಿ ಮೀ ದೂರವಿರುವ ಪರೊ ಎಂಬ ಭೂತಾನ್‌ನ ಮತ್ತೊಂದು ಮುಖ್ಯ ನಗರವನ್ನು ತಲುಪಬೇಕಿತ್ತು. ಸೂರ್ಯ ಪಶ್ಚಿಮದತ್ತ ಇಳಿಯಲು ಹೊರಟಾಗ, ನಮ್ಮ ಭೂತಾನ್ ಬೈಕ್ ಪಯಣ ಶುರುವಾಯಿತು.

ಬೈಕ್‌ ಎಕ್ಸಲೇಟರ್‌ ರೈಸ್‌ ಮಾಡಿಕೊಂಡು ಮುಗಿಲೆತ್ತರದ ಹಿಮಬೆಟ್ಟಗಳನ್ನು ಏರುತ್ತಾ ಸಾಗುತ್ತಿದ್ದವು. ಆರಂಭದಲ್ಲಿ ಸಿಕ್ಕಾಪಟ್ಟೆ ಸೆಕೆ ಇತ್ತು. ಆದರೆ, ಬೆಟ್ಟ ಹತ್ತುತ್ತಿದ್ದಂತೆ ಸೆಕೆ ಮಾಯವಾಗಿ ತಣ್ಣನೆ ಗಾಳಿ ಬೀಸಲಾರಂಭಿಸಿತು.  ಮುಂದೆ ಸಾಗುತ್ತಾ ಜಡಿ ಮಳೆಯೂ ಶುರುವಾಯಿತು.

ದಾರಿ ಉದ್ದಕ್ಕೂ ಬೆಟ್ಟಗಳನ್ನು ಆವರಿಸುತ್ತಿದ್ದ ಮೋಡಗಳ ಕಂಡೆವು. ಸಂಜೆಯ ರಂಗಿನ ನಡುವೆ ಹಸುರಿನ ಗಿರಿಗಳ ಸಾಲು. ಒಂದು ಕಡೆ ಭೂತಾನ್ ಕಂಡರೆ, ಇನ್ನೊಂದೆಡೆ ಭಾರತದಲ್ಲಿ ಹರಿಯುವ ನದಿ, ಊರುಗಳು ಕಾಣುತ್ತಿದ್ದವು. ಹೀಗೆ ಪ್ರಕೃತಿ ಸೊಬಗು ಸವಿಯುತ್ತಾ ಗೇಡ್‌ ಯೂನಿವರ್ಸಿಟಿ ಆಫ್ ಭೂತಾನ್ ತಲುಪುವ ಹೊತ್ತಿಗೆ ಸಂಜೆ 6 ಗಂಟೆಯಾಯಿತು.

ಜಾನಪದ ನೃತ್ಯದ ಸೊಬಗು

ನಾವು ಹೋಗಿದ್ದು ಸೆಪ್ಟೆಂಬರ್‌ ತಿಂಗಳ 3ನೇ ತಾರೀಕು. ಶಿಕ್ಷಕರ ದಿನಾಚರಣೆಗೆ ಎರಡು ದಿನ ಬಾಕಿ ಇತ್ತು. ವಿದ್ಯಾರ್ಥಿಗಳು ಆ ದಿನಾಚರಣೆಯ ಸಿದ್ಧತೆಯಲ್ಲಿದ್ದರು. ಇನ್ನೊಂದೆಡೆ ಒಂದು ತಂಡ ಭೂತಾನ್ ದೇಶದ ಜಾನಪದೀಯ ನೃತ್ಯ ಮಾಡುತ್ತಿತ್ತು. ಮಧುರವಾದ ಸಂಗೀತಕ್ಕೆ ಅವರು ಹೆಜ್ಜೆ ಹಾಕುತ್ತಿದ್ದರು. ಇಂಥದ್ದನ್ನು ನೋಡುವ ಅವಕಾಶ ಸಿಕ್ಕಿದ್ದೇ ನಮಗೊಂದು ಖುಷಿ.

ವಿಚಿತ್ರ ಏನೆಂದರೆ, ಆ ಭೂತಾನ್‌ನಲ್ಲಿನ ಶಾಲೆಯಲ್ಲಿದ್ದ ಬಹುತೇಕ ಶಿಕ್ಷಕರು ಭಾರತದವರೇ. ನಾವು ಅವರನ್ನೆಲ್ಲ ಮಾತನಾಡಿಸಿ, ಅಲ್ಲಿನ ಶಿಕ್ಷಕರ ದಿನವನ್ನು ಆಚರಿಸುವ ಬಗ್ಗೆ ಕೇಳಿ ತಿಳಿದುಕೊಂಡೆವು. ಎಲ್ಲರೂ ಸೇರಿ ಒಂದು ಗ್ರೂಫ್‌ ಪೋಟೊ ತೆಗೆಸಿಕೊಂಡೆವು. ಮುಂದಕ್ಕೆ ಸಾಗುವಷ್ಟರಲ್ಲಿ ಕತ್ತಲು ಆವರಿಸಿತು, ಮಳೆಯೂ ಶುರುವಾಯಿತು. ನಮ್ಮ ಬೈಕರ್ಸ್ ಎಲ್ಲರೂ ರೈನ್ ಕೋಟ್ ಧರಿಸಿ ರೈಡ್‌ಗೆ ಸಿದ್ದರಾದೆವು. ಹೇಗಾದರೂ ಮಾಡಿ ನಾವು ರಾತ್ರಿ ಒಳಗೆ ಪರೊ ನಗರವನ್ನು ತಲುಪಲೇ ಬೇಕಿತ್ತು. ಏಕೆಂದರೆ ವೀಸಾ ಪಡೆಯುವಾಗ, ನಾವು ಇದೇ ನಗರದಲ್ಲಿ ಕೊಠಡಿಯನ್ನು ಕಾಯ್ದಿರಿಸಿದ್ದೆವು.

100 ಕಿ.ಮೀ ಸಾಹಸ ಯಾನ

ಪರೊ ತಲುಪಲು 100 ಕಿ.ಮೀ ಬಾಕಿ ಇತ್ತು. ಅಷ್ಟು ಹೊತ್ತಿಗೆ ರಸ್ತೆ ಕಾಣಿಸಲಾರದಷ್ಟು ಜೋರು ಮಳೆ ಶುರುವಾಯಿತು. ಕೊರೆಯುವ ಚಳಿ, ಭಯಾನಕ ತಿರುವುಗಳ ರಸ್ತೆ. ನಾವು ಸಾಗುತ್ತಿದ್ದ ರಸ್ತೆಯಲ್ಲಿ ಒಂದೇ ಒಂದು ಮನೆಯೂ ಕಾಣಲಿಲ್ಲ. ಜನರ ಓಡಾಟವೂ ಇರಲಿಲ್ಲ. ಅಷ್ಟು ದಟ್ಟ ಕಾಡಿನ ನಡುವೆ ಸವಾಲುಗಳನ್ನು ದಾಟಿಕೊಂಡು ಪರೋ ನಗರ ತಲುಪಿದಾಗ ರಾತ್ರಿ 11.30. ಅಂಥ ಸರಿ ರಾತ್ರಿಯಲ್ಲಿ ಬೆಟ್ಟದ ಮೇಲಿನ ಮನೆಗಳು, ಹೋಟೆಲ್‌ಗಳು ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದ್ದವು. ಪರೊ ಅಡ್ಮಿನಿಸ್ಟ್ರೇಟಿವ್ ಆಫೀಸ್ ಬಣ್ಣದ ಬೆಳಕಿನಲ್ಲಿ ಅರಮನೆಯಂತೆ ಜಗಮಗಿಸುತಿತ್ತು.

ನಾವು ಬುಕ್ ಮಾಡಿದ ಹೋಟೆಲ್ ಹುಡುಕಲು ಶುರು ಮಾಡಿದೆವು. ಅದೇ ಒಂದು ಸಾಹಸದ ಕಥೆ. ಕೊನೆಗೆ ಒಬ್ಬ ಹುಡುಗ ಮಧ್ಯರಾತ್ರಿಯಲ್ಲಿ ನಮ್ಮೊಟ್ಟಿಗೆ ಬಂದು ಹೋಟೆಲ್ ದಾರಿ ತೋರಿಸಿದ. ಆನಂತರ ನಾವು ಆತನನ್ನು ಅವನ ಮನೆಗೆ ತಲುಪಿಸಿ, ಹೋಟೆಲ್ ಸೇರಿಕೊಂಡೆವು.

ಹೋಟೆಲ್‌ನವರು ನಮಗಾಗಿ ದಾರಿ ಎದುರು ನೋಡುತ್ತಿದ್ದರು. ಜೋರು ಮಳೆಯಲಿ ಚಳಿಯಲ್ಲಿ ನೆನದು ನಮ್ಮ ಕೈ ಕಾಲುಗಳು ಮರಗಟ್ಟಿದ್ದವು. ಸಾಮಾನ್ಯವಾಗಿ ಪ್ರತಿ ನಿತ್ಯ ಹೋಟೆಲ್‌ ಊಟದ ಹಾಲ್ ರಾತ್ರಿ 10ಕ್ಕೆ ಮುಚ್ಚುತ್ತಾರೆ. ಹೋಟೆಲ್‌ನ ಕೆಲಸಗಾರರು ಅದೇ ಸಮಯಕ್ಕೆ ಹೊರಟು ಹೋಗುತ್ತಾರೆ.

ಆದರೆ, ನಮ್ಮ ಅದೃಷ್ಟ, ಹೋಟೆಲ್‌ನಲ್ಲಿ ಕೆಲಸ ಮಾಡುವ ಇಬ್ಬರು ನಮಗೆ ಕೊಠಡಿ ವ್ಯವಸ್ಥೆ ಮಾಡಿ, ನಾವು ಫ್ರೆಶ್ ಆಗಿ ಬರುವ ತನಕ ಕಾದು, ಊಟದ ವ್ಯವಸ್ಥೆ ಮಾಡಿ, ನೆರವಾದರು.

ಭೂತಾನ್‌ ಬೈಕ್‌ ರೈಡ್‌ ಮರೆಯಲಾರದ ನೆನಪನ್ನು ಮನಸ್ಸಿನಲ್ಲಿ ಉಳಿಸಿತು. Some experience in life cannot be explained as good as we have felt or spent that time.


ಬೈಕರ್ಸ್‌ ರಾಕಿಗೌಡ, ವಿಜೇತ್ ಶೆಟ್ಟಿ, ಮಲ್ಲಿಕಾರ್ಜುನ ಭಾಸ್ಕರ್ ಮತ್ತು ಸ್ಕಂದ ಪ್ರಸಾದ್

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !