ಮಾನವೀಯತೆ ಅರಿಯುವ ಬೈಕ್ ಪಯಣ...

7

ಮಾನವೀಯತೆ ಅರಿಯುವ ಬೈಕ್ ಪಯಣ...

Published:
Updated:
ಬೈಕರ್ಸ್ 

ನನಗೆ ಸೋಲೊ ಬೈಕ್ ರೈಡ್ ಇಷ್ಟ. ಆದರೆ ಈ ಬಾರಿ ಸ್ನೇಹಿತರು ಜೊತೆಗೂಡಿದ್ದು ವಿಶೇಷ. ‘ರೈಡ್ ಫಾರ್ ಹ್ಯುಮಾನಿಟಿ’ ಎಂಬ ಧ್ಯೇಯದಡಿ ದೇಶದ ಬೇರೆ ಬೇರೆ ಪ್ರದೇಶಗಳಲ್ಲಿರುವ ಮಾನವೀಯತೆ ಅರಿಯುವ ಯತ್ನ ನನ್ನದು. ನನ್ನ ಪಯಣಕ್ಕೆ ವೀಣಾ ಶೆಟ್ಟಿ ‘ಚೇಸ್ ಫಾರ್ ಡ್ರೀಮ್ಸ್’ ಎನ್ನುತ್ತಾ ಜತೆಯಾದರು.

ಯೋಗೇಶ್ ‘ಸಪೋರ್ಟ್ ಫಾರ್ ವಿಮೆನ್’ ಅಂತಾ ಹೊರಟೇಬಿಟ್ಟರು. ಹೋಗೋದು ಎಲ್ಲಿಗೆ? ನನ್ನ ಪ್ಲಾನ್ ಇದ್ದಿದ್ದು ಉತ್ತರಾಖಂಡದ ಕಡೆಗೆ. ಆದರೆ ಕನ್ಯಾಕುಮಾರಿಯಿಂದ ಕಾಶ್ಮೀರದ ಕಡೆಗೆ (ಕೆ ಟು ಕೆ) ಹೋದರೆ ಚೆನ್ನ ಎಂಬ ಸಲಹೆ ಬಂತು. ಪ್ಲಾನ್ ಬದಲಿಸಿದೆವು. ಕನ್ಯಾಕುಮಾರಿಯಿಂದ ಕಾಶ್ಮೀರದತ್ತ ಹೊರಟೆವು. 11 ದಿನಗಳ ನಮ್ಮ ಬೈಕ್ ಪಯಣಕ್ಕೆ ನೆರವಾಗಿದ್ದು ಬೆಂಗಳೂರಿನ ರೋರಿಂಗ್ ರೈಡರ್ಸ್ ಕ್ಲಬ್.

ಮೇ 7ರಂದು ನಾವು ಮೂವರು ಬೆಂಗಳೂರಿನಿಂದ ಕನ್ಯಾಕುಮಾರಿಗೆ ಬೆಳಿಗ್ಗೆ 5ಕ್ಕೆ ಪ್ರಯಾಣ ಆರಂಭಿಸಿದೆವು. ಬೈಕ್ ಸ್ವಲ್ಪ ತೊಂದರೆ ಕೊಟ್ಟಿದ್ದರಿಂದ ಸಂಜೆ ಹೊತ್ತಿಗೆ /ಮಧುರೈ/ ತಲುಪಿ ವಿಶ್ರಾಂತಿ ಪಡೆದು, ಮರುದಿನ ಕನ್ಯಾಕುಮಾರಿ ತಲುಪಿದೆವು.

ಮೇ 9ರಂದು ನಮ್ಮ ಪ್ರಯಾಣ ಅಧಿಕೃತವಾಗಿ ಆರಂಭವಾಯಿತು. ಭಾರತದ ಒಂದು ತುದಿಯಿಂದ ಮತ್ತೊಂದು ತುದಿ ಮುಟ್ಟುವುದು ಬೈಕ್ ರೈಡಿಂಗ್‍ನಲ್ಲಿ ಒಂದು ಮಹತ್ವದ ಸಾಧನೆ ಎನ್ನುವ ಮಾತಿದೆ. ಅದರಂತೆ ಉತ್ತರ ಭಾರತೀಯರು ಕಾಶ್ಮೀರದಿಂದ ಕನ್ಯಾಕುಮಾರಿಯತ್ತ, ದಕ್ಷಿಣದವರು ಕನ್ಯಾಕುಮಾರಿಯಿಂದ ಕಾಶ್ಮೀರದತ್ತ ಪ್ರವಾಸ ಮಾಡುತ್ತಾರೆ.

ಕನ್ಯಾಕುಮಾರಿಯಿಂದ ಪಯಣ ಆರಂಭಿಸಿದ ನಾವು ಸಂಜೆ ಹೊತ್ತಿಗೆ ವಿಪರೀತ ಮಳೆ–ಗಾಳಿಯ ನಡುವೆಯೂ ಬೆಂಗಳೂರು ತಲುಪಿದೆವು. ಈ ಹೊತ್ತಿಗೆ ನನ್ನ ಗಾಡಿ ಕೊಂಚ ಮುನಿಸಿಗೊಂಡಿತ್ತು. ಚಂದ್ರಾ ಲೇಔಟ್‍ನಲ್ಲಿ ಎಸ್‍ಎಸ್ ಮೋಟಾರ್ಸ್‌ನ ಅಲಿ ಬಕ್ಷ್ ಅವರು ಅರ್ಧ ಗಂಟೆಯಲ್ಲಿ ರಿಪೇರಿ ಮಾಡಿಕೊಟ್ಟರು. ಮರುದಿನ ನಾವು ಹುಬ್ಬಳ್ಳಿಯ­ಲ್ಲಿದ್ದೆವು.

ಅಲ್ಲಿಗಾಗಲೇ ಸಾವಿರ ಕಿಲೋಮೀಟರ್ ಕ್ರಮಿಸಿದ್ದರಿಂದ ಬೈಕ್ ಸರ್ವೀಸ್‍ಗೆ ಬಿಟ್ಟೆವು. ಈ ವೇಳೆ ಬೈಕ್ ತಯಾರಿಕ ಕಂಪನಿಗಳಾದ ಬಜಾಜ್, ರಾಯಲ್ ಎನ್‍ಫೀಲ್ಡ್‌ನವರು ನೀಡಿದ ಬೆಂಬಲ ಅನನ್ಯ. ಅಲ್ಲಿಂದ ನಾವು ಪುಣೆಯತ್ತ ಹೊರಟೆವು. ಸಂಚಾರಿ ನಿಯಮಗಳನ್ನೇ ಸರಿಯಾಗಿ ಪಾಲಿಸದ ಪುಣೆಯ ಟ್ರಾಫಿಕ್‍ಗೆ ಬಳಲಿ ಹೋದೆವು. ನಮ್ಮ ನಿತ್ಯದ ಪ್ರಯಾಣದ ಗುರಿ 200 ಕಿ.ಮೀಗೆ ಇಳಿಯಿತು.

ಠಾಣೆ ಮೂಲಕ ಗುಜರಾತ್‍ ಪ್ರವೇಶಿಸಿದೆವು. ವಡೋದರಾದಲ್ಲೂ ಇದೇ ಟ್ರಾಫಿಕ್ ಕಿರಿಕಿರಿ. ಸೀರೆ, ಪ್ಲಾಸ್ಟಿಕ್ ಉತ್ಪಾದನೆಯ ಬೃಹತ್ ಕಾರ್ಖಾನೆಗಳಿರುವ ಕಾರಣ ಇಲ್ಲಿ ದಾರಿಯುದ್ದಕ್ಕೂ ಲಾರಿಗಳ ಸಾಲು ಸಾಲು. ಸಂಜೆ ನಗರ ಪ್ರವೇಶಿಸಿಸುವ ವೇಳೆಗೆ ಟ್ರಾಫಿಕ್‍ಗೆ ಸುಸ್ತಾಗಿದ್ದೆವು. ಸೂರ್ಯ ಮುಳುಗುತ್ತಿರುವ ಹಾಗೆ ನನ್ನ ತಾಳ್ಮೆಯೂ ಕುಂದುತ್ತಿತ್ತು.

ಈ ವೇಳೆ ಬೈಕೊಂದು ಬಂದು ಗುದ್ದಿದ್ದರಿಂದ ಬೈಕ್ ಸಮೇತ ಕೆಳಗೆ ಬಿದ್ದೆ. ತುಂಬಾ ನೋವಾಯಿತು. ಅಲ್ಲಿದ್ದ ಬೈಕರ್ಸ್‌ ಸಹಾಯ ಮಾಡಿದರು. ಆಸ್ಪತ್ರೆ, ಇಂಜೆಕ್ಷನ್, ವಿಶ್ರಾಂತಿ ಎಲ್ಲವೂ ಆಯಿತು. ಮರುದಿನ ಪುನಃ ಪ್ರಯಾಣಕ್ಕೆ ಸಿದ್ಧಳಾದೆ. ಜೊತೆಗಾರರ ಮೊಗದಲ್ಲಿ ಉತ್ಸಾಹ ಮೂಡಿತು!

ರಾಜಸ್ಥಾನದ ಜೋಧಪುರದಲ್ಲಿ ಟ್ರಾಫಿಕ್‍ನಷ್ಟೇ ಹೊಡೆತ ಕೊಟ್ಟಿದ್ದು ಕೆಂಡದಂತಹ ಬಿಸಿಲು. 47 ಡಿಗ್ರಿಯಷ್ಟು ತಾಪಮಾನವಿದ್ದ ಕಾರಣ ಪ್ರಯಾಣದ ವೇಗ ಮತ್ತಷ್ಟು ಕುಂಠಿತಗೊಂಡಿತು. ಇಂಥ ಬಿಸಿಲಲ್ಲೂ ಥಾರ್ ಮರುಭೂಮಿಯ ಗಡಿ ಆರಂಭವಾಗುವ ಬಿಕಾನೇರ್‌ಗೆ ಪ್ರಯಾಸದಿಂದಲೇ ತೆರಳಿದೆವು.

ಮರುಭೂಮಿಯ ದೂಳಿನ ಬಿರುಗಾಳಿ ಕಣ್ಣಾರೆ ಕಂಡೆವು. ಒಂದಿಷ್ಟು ಉಸಿರಾಡುವಂತಹ ವಾತಾವರಣ ಸಿಕ್ಕಿದ್ದು ಪಂಜಾಬ್ ಪ್ರವೇಶಿಸಿದ ಬಳಿಕ. ಅಲ್ಲಿನ ಅಮೃತಸರದ ಹಸಿರು ಹಿಂದಿನ ದಿನದ ಪಯಣದ ಆಯಾಸವನ್ನು ನಿವಾರಿಸಿತು. ಅಲ್ಲಿನ ಬೈಕ್ ರೈಡರ್ಸ್ ಕ್ಲಬ್ ಜೊತೆ ಅಂದು ಆಪ್ತ ಸಂವಾದ ನಡೆಯಿತು.

ಅಂತಿಮ ಹಾಗೂ ಮಹತ್ವದ ಘಟ್ಟವೇ ಜಮ್ಮು ಪ್ರವೇಶ. ಜಮ್ಮು ದಾಟಿದರೆ ಮೊಬೈಲ್ ನೆಟ್‍ವರ್ಕ್ ಸಿಗಲ್ಲ. ಸೌಲಭ್ಯಗಳು ಅಷ್ಟಕ್ಕಷ್ಟೇ. ಜಮ್ಮುವಿನಿಂದ ಕಾಶ್ಮೀರಕ್ಕೆ 300 ಕಿ.ಮೀ. ದೂರ. ಇದರಲ್ಲಿ ಅರ್ಧದಾರಿ ಮಾತ್ರ ಉತ್ತಮ ರಸ್ತೆ ಇದೆ. ಉಧಮ್‌ಪುರದಿಂದ ಬರೀ ಆಫ್‍ರೋಡ್. ಇಲ್ಲಿ ಮೈನಿಂಗ್ ವಾಹನಗಳದ್ದೇ ದೊಡ್ಡ ಸಮಸ್ಯೆ.

‘ಕಾಶ್ಮೀರ ಸಂಘರ್ಷ’ದ ಅನಾವರಣ: ಕಾಶ್ಮೀರದಲ್ಲಿ ಪ್ರವಾಸಿಗರನ್ನು ಹೊರತುಪಡಿಸಿದರೆ, ಸ್ಥಳೀಯರು ಹೊರಗಡೆ ಕಾಣಿಸಿಕೊಂಡಿದ್ದು ವಿರಳ. ಟಿ.ವಿಗಳಲ್ಲಿ ನೋಡುತ್ತಿದ್ದ ಕಲ್ಲು ತೂರಾಟವನ್ನು ನೇರವಾಗಿ ನೋಡಿದ್ದು, ಮನದಲ್ಲಿ ಆತಂಕ ಸೃಷ್ಟಿಸಿತು. ಗಡಿ ಕಾಯುವ ಬಿಎಸ್‍ಎಫ್‍ ಯೋಧರಿಗೆ ಅಲ್ಲಿನ ಜನ ಕಿಂಚಿತ್ತೂ ಗೌರವ ಕೊಡುವುದಿಲ್ಲ.

ಭಾರತದ ಧ್ವಜವನ್ನು ತೆಗೆದುಕೊಂಡು ಹೋಗುವುದೇ ಅಪಾಯಕಾರಿ ಎಂಬಂತಹ ಸ್ಥಿತಿ ಇದೆ. ಇಂಥ ಪರಿಸ್ಥಿತಿಯಲ್ಲಿ ಜಮ್ಮುವಿನಲ್ಲಿರುವ ಕಾಶ್ಮೀರ ಮೋಜೊ ಬೈಕ್ ಕ್ಲಬ್ ಸದಸ್ಯ ಇಮ್ರಾನ್ ಜತೆಯಾದರು.

‘ಕಾಶ್ಮೀರಕ್ಕೆ ನೀವಷ್ಟೇ ಹೋಗುವುದು ಸುರಕ್ಷಿತವಲ್ಲ’ ಎನ್ನುತ್ತಾ ನಮ್ಮನ್ನು ಎಸ್ಕಾರ್ಟ್ ಮಾಡಿದ್ರು. ಅಲ್ಲಿನ ವಸ್ತುಸ್ಥಿತಿ ವಿವರಿಸುತ್ತಲೇ ಧ್ವಜವನ್ನು ಬೈಕ್‍ನಲ್ಲಿಟ್ಟುಕೊಳ್ಳುವಂತೆ ಸಲಹೆ ನೀಡಿದರು.

ಗಮ್ಯ ತಲುಪಿದ ಸಂಭ್ರಮ: ಮೇ 20, ನಮ್ಮ ತಂಡ ಕಾಶ್ಮೀರ ತಲುಪಿದ ದಿನ. ಜಮ್ಮುವಿನಿಂದ ಹೊರಟು ಕಾಶ್ಮೀರಕ್ಕೆ ಹತ್ತಿರವಾಗುತ್ತಿದ್ದಂತೆ ಹೆದ್ದಾರಿ ಸಿಕ್ಕಿತು. ಹಿಮಪಾತವೂ ಹಿತವಾಗಿತ್ತು. ಮೇ ತಿಂಗಳ ಆಸುಪಾಸು ಕಾಶ್ಮೀರದಲ್ಲಿ ಬೇಸಿಗೆ ಕಾಲ. ನೋಡಲೂ ಆಕರ್ಷಕ.

ಹೀಗಾಗಿ ಬೈಕರ್‌ಗಳಿಗೆ ಇದು ಹೇಳಿಮಾಡಿಸಿದ ಸಮಯ. ಸಮುದ್ರ ಮಟ್ಟದಿಂದ 13,800 ಅಡಿ ಎತ್ತರದಲ್ಲಿರುವ ಪ್ರಸಿದ್ಧ ಪ್ರವಾಸಿತಾಣ ಸೋನ್‍ಮಾರ್ಗ್‍ನಲ್ಲಿ ನಮ್ಮ ಪ್ರಯಾಣ ಕೊನೆಗೊಳಿಸಬೇಕಿತ್ತು. ಆದರೆ ಕಾಶ್ಮೀರದಿಂದ ಲಡಾಕ್‍ಗೆ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಗೆ ಪ್ರಧಾನಿ ಚಾಲನೆ ನೀಡುವ ಕಾರ್ಯಕ್ರಮ ಇದ್ದಿದ್ದರಿಂದ ಸೋನ್‍ಮಾರ್ಗ ದಾರಿ ಬಂದ್ ಆಗಿತ್ತು.

ಹೀಗಾಗಿ ಶ್ರೀನಗರದ ದಾಲ್ ಸರೋವರದ ಎದುರು ನಮ್ಮ ಪಯಣ ಅಂತಿಮಗೊಂಡಿತು. 11ನೇ ದಿನ ಸಂಜೆ ಗುರಿ ಮುಟ್ಟಿದ ಸಂಭ್ರಮವನ್ನು ಆಚರಿಸಿದೆವು. ತಂಪು ಹವೆಯೂ ನಮ್ಮೊಂದಿಗೆ ಖುಷಿ ಹಂಚಿಕೊಂಡಿತು. ಬಳಿಕ ಸ್ವರ್ಗದಂತಿರುವ ಗುಲ್ಮಾರ್ಗ್‍ನ ದರ್ಶನವೂ ಆಯಿತು.

ಗುರಿ ಸಾಧಿಸಿದ ನೆಮ್ಮದಿ ಹೊತ್ತು ಊರಿಗೆ ವಾಪಸಾಗುವ ಸಮಯ ಬಂತು. ಬಂದಿದ್ದ ಮಾರ್ಗದಲ್ಲೇ ವೀಣಾ ಅಮೃತಸರದತ್ತ ನಡೆದಳು. ಜಮ್ಮುಗೆ ತೆರಳಲು ಎರಡು ಮಾರ್ಗಗಳಿವೆ. ಅದರಲ್ಲಿ ಒಂದು ಮಾರ್ಗ ಪಾಕಿಸ್ತಾನ ಗಡಿ ಹಾದುಹೋಗುವಂತಹದ್ದು. ಇದರ ಹೆಸರು ಶೋಪಿಯಾನ್ ಪಾಸ್. ಮೊಘಲರು ವ್ಯಾಪಾರಕ್ಕಾಗಿ ಕಾಶ್ಮೀರಕ್ಕೆ ಬರಲು ಈ ಮಾರ್ಗ ಬಳಸುತ್ತಿದ್ದರಂತೆ. ನಮ್ಮ ಬೆಂಗಾವಲಾಗಿ ಬಂದಿದ್ದ ಇಮ್ರಾನ್ ಜೊತೆ ಯೋಗೇಶ್ ಮತ್ತು ನಾನು ಶೋಪಿಯಾನ್‌ ಮಾರ್ಗ ಆಯ್ದುಕೊಳ್ಳಲು ನಿರ್ಧರಿಸಿದೆವು.

ಜಮ್ಮುನಲ್ಲಿದೆ ಮತ್ತೊಂದು ಬಾರ್ಡರ್: ಪಾಕಿಸ್ತಾನ-ಭಾರತದ ನಡುವಿನ ವಾಘಾ ಗಡಿಯಂತೆ ಜಮ್ಮುವಿನ ಸುಚೇತ್‍ಗಡ್ ಎಂಬ ಗಡಿಭಾಗವಿದೆ. ಅದರೆ ಇದು ವಾಘಾದಷ್ಟು ಪ್ರಸಿದ್ಧವಲ್ಲ. ನಾವು ಅಲ್ಲಿಗೆ ತಲುಪಿದಾಗ ಮೂರು ದಿನಗಳಿಂದ ಪಾಕಿಸ್ತಾನದ ಕಡೆಯಿಂದ ಗುಂಡಿನ ದಾಳಿ ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕಿತು. ಗುಂಡಿನ ದಾಳಿ ಎದುರಿಸಲು ಯೋಧರು ಸಜ್ಜಾಗಿದ್ದರು.

ಪಾಕ್ ಕಡೆಯಿಂದ ಬಂದ ಷೆಲ್‍ಗಳನ್ನು ಅಲ್ಲಿ ಪೇರಿಸಿಡಲಾಗಿತ್ತು. ಅಚ್ಚರಿಯ ಅಂಶವೆಂದರೆ, ಈ ಗಡಿಯಲ್ಲಿ ಗುಂಡಿನ ದಾಳಿ ನಡೆಸಿದ ಬಳಿಕ ಆ ಕಡೆಯವರಿಗೆ ಸಾಕೆನಿಸಿದರೆ ಬಿಳಿಧ್ವಜ ಪ್ರದರ್ಶಿಸುತ್ತಾರೆ. ಆಗ ಎರಡೂ ಕಡೆಯವರು ಗಡಿಯಲ್ಲಿ ಬಂದು ಪರಸ್ಪರ ಕೈಕುಲುಕುತ್ತಾರೆ. ಉಭಯ ದೇಶದ ಜನರು ಪರಸ್ಪರ ಬಂದು ಮಾತನಾಡಬಹುದು, ಆದರೆ ಗಡಿ ದಾಟಲು ಅವಕಾಶವಿಲ್ಲ. ಬಿಗಿಯಾದ ಭದ್ರತಾ ವ್ಯವಸ್ಥೆಯಿದೆ.

ಜಮ್ಮುವಿನಿಂದ ಬೈಕ್ ಪಾರ್ಸೆಲ್ ಮಾಡಿ ವಿಮಾನ ಹತ್ತಿ ಬೆಂಗಳೂರಿಗೆ ಬಂದಾಯ್ತು. ಇಲ್ಲಿ ಕುಳಿತರು ಸಾವಿರಾರು ಕಿ.ಮೀ ಪ್ರಯಾಣ ನೀಡಿದ ಅನುಭವವನ್ನೇ ಮನಸ್ಸು ಮೆಲುಕು ಹಾಕುತ್ತಿತ್ತು. ದಾರಿಯುದ್ದಕ್ಕೂ ವಿವಿಧ ಸಂಸ್ಕೃತಿಯ ಜನರನ್ನು ಭೇಟಿ ಮಾಡಿದ ಸನ್ನಿವೇಶಗಳು ನೆನಪಿನ ಅಲೆಯಲ್ಲಿ ತೇಲಿ ಬರುತ್ತಿದ್ದವು.

ಒಂದು ಕಡೆ ದೇಶದ ಬೇರೆ ಬೇರೆ ಭಾಗಗಳಲ್ಲಿರುವ ಮಾನವೀಯತೆ ಅರಿಯುವ ಪ್ರಯತ್ನ ಯಶಸ್ವಿಯಾದ ಖುಷಿ, ಇನ್ನೊಂದೆಡೆ ಕಾಶ್ಮೀರದಂತಹ ಕಡೆಗಳಲ್ಲಿ ಜೀವಗಳಿಗೆ ಬೆಲೆ ಇಲ್ಲವೆಂಬ ಅಂಶ ನನ್ನನ್ನು ಕಾಡಿತು.

ಏಕಾಂಗಿ ಪ್ರಯಾಣ ನನ್ನಿಷ್ಟ. ಈಶಾನ್ಯ ಭಾರತದ ಗುಡ್ಡುಗಾಡುಗಳಲ್ಲಿ ಬೈಕ್ ಓಡಿಸುವುದು ನನ್ನ ಕನಸು. ಅದು ಕೂಡಾ ಉಗ್ರರು ಮತ್ತು ನಕ್ಸಲರ ಭೀತಿಯಿರುವ ಜಾಗದಲ್ಲೇ ಸಂಚರಿಸಬೇಕೆಂಬ ಗುರಿ. ಇದೇ ವರ್ಷ ಅದನ್ನೂ ಪೂರ್ಣಗೊಳಿಸುವ ಹಂಬಲ ನನ್ನದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !