ಟೆಸ್ಟ್ ರೈಡ್ ಸೋಗಿನಲ್ಲಿ ಬೈಕ್‌ ಕದಿಯುತ್ತಿದ್ದವನ ಸೆರೆ

7

ಟೆಸ್ಟ್ ರೈಡ್ ಸೋಗಿನಲ್ಲಿ ಬೈಕ್‌ ಕದಿಯುತ್ತಿದ್ದವನ ಸೆರೆ

Published:
Updated:
ಆರೋಪಿ ಭರತ್ ಹಾಗೂ ಆತ ಕಳವು ಮಾಡಿದ್ದ ಬೈಕ್‌ಗಳು

ಬೆಂಗಳೂರು: ಟೆಸ್ಟ್ ರೈಡ್ ನೆಪದಲ್ಲಿ ಬೈಕ್‌ಗಳನ್ನು ಕದ್ದೊಯ್ಯುತ್ತಿದ್ದ ಭರತ್ ಎಂಬಾತನನ್ನು ಬಂಧಿಸಿರುವ ಯಲಹಂಕ ಪೊಲೀಸರು, ₹2.50 ಲಕ್ಷ ಮೌಲ್ಯದ ಮೂರು ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ಕೆಂಗೇರಿ ಉಪನಗರ ಸಮೀಪದ ಶಾಂತಿನಿವಾಸ ಲೇಔಟ್ ನಿವಾಸಿ ಭರತ್, 2017ರ ಮೇ 13ರಂದು ಪ್ರೀತಮ್ ಎಂಬ ಡಿಪ್ಲೊಮಾ ವಿದ್ಯಾರ್ಥಿಯ ಬೈಕ್ ಕಳವು ಮಾಡಿದ್ದ. ಈ ಸಂಬಂಧ ಅವರು ಠಾಣೆಗೆ ದೂರು ಕೊಟ್ಟಿದ್ದರು.

ಮೊಬೈಲ್ ಕರೆ ವಿವರ (ಸಿಡಿಆರ್) ನೀಡಿದ ಸುಳಿವು ಆಧರಿಸಿ ಆತನನ್ನು ಪತ್ತೆ ಮಾಡಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ದೇವನಹಳ್ಳಿ ನಿವಾಸಿಯಾದ ಪ್ರೀತಮ್, ತಮ್ಮ ಪಲ್ಸರ್ ಬೈಕನ್ನು ಮಾರಾಟ ಮಾಡುವುದಾಗಿ ಒಎಲ್‌ಎಕ್ಸ್‌ನಲ್ಲಿ ಜಾಹೀರಾತು ಪ್ರಕಟಿಸಿದ್ದರು. ಅದನ್ನು ನೋಡಿ ಅವರಿಗೆ ಕರೆ ಮಾಡಿದ್ದ ಆರೋಪಿ, ‘ನಿಮ್ ಬೈಕ್ ಚೆನ್ನಾಗಿದೆ. ನಾನು ಖರೀದಿಸುತ್ತೇನೆ. ಯಲಹಂಕದ ಸರ್ಕಾರಿ ಆಸ್ಪತ್ರೆ ಬಳಿ ಬನ್ನಿ. ಅಲ್ಲೇ ಮಾತನಾಡೋಣ’ ಎಂದಿದ್ದ. ಅಂತೆಯೇ ಪ್ರೀತಮ್ ಬೈಕ್ ತೆಗೆದುಕೊಂಡು ಬೆಳಿಗ್ಗೆ 11.30ರ ಸುಮಾರಿಗೆ ಅಲ್ಲಿಗೆ ಹೋಗಿದ್ದರು.

ಟೆಸ್ಟ್ ರೈಡ್ ಮಾಡಬೇಕೆಂದು ಬೈಕ್ ತೆಗೆದುಕೊಂಡು ಹೊರಟ ಭರತ್, ಒಂದು ತಾಸು ಕಳೆದರೂ ವಾಪಸಾಗಿರಲಿಲ್ಲ. ಆತನ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿತ್ತು. ಇದರಿಂದ ಅನುಮಾನಗೊಂಡ ಪ್ರೀತಮ್, ಯಲಹಂಕ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.

‘ಬೈಕ್ ಕದ್ದೊಯ್ದ ಕೂಡಲೇ ಆರೋಪಿ ಮೊಬೈಲ್‌ನಿಂದ ಸಿಮ್‌ ತೆಗೆದಿದ್ದ. ಆ ಸಂಖ್ಯೆ ಮೇಲೆ ನಿಗಾ ಇಟ್ಟಿದ್ದೆವು. ಇತ್ತೀಚೆಗೆ ಪುನಃ ಆ ಸಿಮ್ ಬಳಸಲು ಪ್ರಾರಂಭಿಸಿದ್ದ. ಆ ಸುಳಿವಿನ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಇನ್ನೂ ಇಬ್ಬರಿಗೆ ವಂಚಿಸಿ ಪಲ್ಸರ್ ಹಾಗೂ ಯಮಹಾ–ಎಫ್‌ಝೆಡ್ ಬೈಕ್‌ಗಳನ್ನು ಕಳವು ಮಾಡಿರುವುದಾಗಿಯೂ ತಪ್ಪೊಪ್ಪಿಕೊಂಡ’ ಎಂದು ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !